ಪದೇಪದೇ ತಿನ್ನಬೇಡಿ, ತೊಂದರೆ ಹೆಚ್ಚೀತು
ಅಲ್ಸರ್ ವಿಚಾರದಲ್ಲಂತೂ ನಾವು ಬಹು ಹಿಂದಿನಿಂದಿಲೂ ತಪ್ಪು ಆಹಾರ ಪದ್ಧತಿಯನ್ನೇ ರೂಢಿಸಿಕೊಂಡು ಬಂದಿದ್ದೇವೆ. ಕೆಲವು ವೈದ್ಯರು ಈಗಲೂ ...
ಅಲ್ಸರ್ ವಿಚಾರದಲ್ಲಂತೂ ನಾವು ಬಹು ಹಿಂದಿನಿಂದಿಲೂ ತಪ್ಪು ಆಹಾರ ಪದ್ಧತಿಯನ್ನೇ ರೂಢಿಸಿಕೊಂಡು ಬಂದಿದ್ದೇವೆ. ಕೆಲವು ವೈದ್ಯರು ಈಗಲೂ ಅಲ್ಸರ್ ಆದವರಿಗೆ 'ಮೂರು ಹೊತ್ತು ಊಟ ಮಾಡುವುದಕ್ಕಿಂತ ಆಗಾಗ ಸ್ವಲ್ಪಸ್ವಲ್ಪ ತಿನ್ನುತ್ತಿರಿ' ಎಂದು ಸಲಹೆ ಮಾಡುತ್ತಾರೆ ಎಂದು ಕೇಳಿದ್ದೇನೆ. ಹೀಗೆ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಅಲ್ಸರ್ ಗುಣವಾಗುವುದಿರಲಿ, ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯೇ ಹೆಚ್ಚು ಎನ್ನುವುದು ಡಯಟಿಶಿಯನ್‌ಗಳ ಅಭಿಪ್ರಾಯ. ಏಕೆಂದರೆ ಪದೇಪದೇ ತಿನ್ನುವುದರಿಂದ ಉದರದಲ್ಲಿ ವಿಚ್ಛಿದ್ರಕಾರಿ ಆ್ಯಸಿಡ್ ಮತ್ತು ಅಪಾಯಕಾರಿ ಕಿಣ್ವಗಳ ಸ್ರಾವ ಹೆಚ್ಚುತ್ತದೆ. ಅದು ವೃಣವನ್ನು ಇನ್ನಷ್ಟು ಕೆರಳಿಸುತ್ತದೆ.
ಹಾಲಿನ ಬಗ್ಗೆಯಂತೂ ಈಗಾಗಲೇ ಹೇಳಿಯಾಗಿದೆ. ಅಲ್ಸರ್ ಆದವರು ಹಾಲು ಮುಟ್ಟದಿದ್ದರೇ ಕ್ಷೇಮ. ಗುಣಮುಖರಾದ ಬಳಿಕವೂ ಹಾಲು ಸೇವನೆ ಬಿಡಬೇಕು ಅಂತಲ್ಲ. ಸಂಪೂರ್ಣವಾಗಿ ಗುಣಮುಖರಾಗುವವರೆಗೆ ಹಾಲು ತ್ಯಜಿಸುವುದು ಉತ್ತಮ. ಹಾಲಿನಿಂದ ದೂರ ಇದ್ದಷ್ಟೂ ಬೇಗನೇ ವೃಣ ವಾಸಿಯಾಗುತ್ತದೆ. ಇನ್ನು ಬೆಳ್ಳುಳ್ಳಿ, ಕೆಂಪುಮೆಣಸಿನ ವಿಚಾರದಲ್ಲಿಯೂ ಅದೇ ತಪ್ಪು ಭಾವನೆ ಬೆಳೆಸಿಕೊಂಡು ಬಂದಿದ್ದೇವೆ. ಅಲ್ಸರ್ ಆದಾಗ ಇವನ್ನು ತಿನ್ನುವುದರಿಂದ ಯಾವುದೇ ಅಪಾಯವಿಲ್ಲ. ಆದರೆ ಬೆಳ್ಳುಳ್ಳಿ, ಕೆಂಪುಮೆಣಸನ್ನು ಹೊಂದಿರುವ ಮಸಾಲೆ ಪದಾರ್ಥಗಳನ್ನು ಸೇವಿಸಿದಾಗ ಉದರದಲ್ಲಿ ನೋವು ಅಥವಾ ಕಿರಿಕಿರಿಯ ಅನುಭವ ಆದರೆ ಅದನ್ನು ನಿಲ್ಲಿಸುವುದು ಉತ್ತಮ. ಅಲ್ಸರ್ ಪ್ರತಿರೋಧಕ ಚಟುವಟಿಕೆಗಳನ್ನು ಉತ್ತೇಜಿಸುವ ಕ್ಯಾಬೇಜ್ ರಸ, ಬಾಳೆಕಾಯಿ ಅಥವಾ ಬಾಳೆಹಣ್ಣು, ಗ್ರೀನ್ ಟೀ, ನಾರಿನ ಅಂಶ ಅಧಿಕವಿರುವ ಆಹಾರಗಳನ್ನು ಜಾಸ್ತಿ ಸೇವಿಸುವುದು ಒಳಿತು.
ಇನ್ನೊಂದು ವಿಚಾರ ಎಂದರೆ ಅಲ್ಸರ್ ಆದಾಗ 'ಪಾನ'ದಿಂದ ಬಹುದೂರ ಇರಬೇಕು (ಪ್ರತಿಯೊಬ್ಬರೂ ಇದನ್ನು ಪಾಲಿಸುವುದು ಸೂಕ್ತ). ಕೆಲವು ವೈದ್ಯರು 'ಕುಡಿಯಬಹುದು' ಎಂದು ಹೇಳಬಹುದು. ಏಕೆಂದರೆ 'ಕುಡಿದಾಗ' ನೋವು ಕಡಿಮೆ ಆಗುತ್ತದೆ ಎಂದು ರೋಗಿಗಳು ಹೇಳಿರುತ್ತಾರೆ. ವಾಸ್ತವವಾಗಿ ಅದರಿಂದ ಕರುಳಿಗೆ ಹಾನಿ ಎನ್ನುವುದು ನಮಗೆ ಗೊತ್ತಿರದ ವಿಚಾರವೇನಲ್ಲ. ಅವು ಗ್ಯಾಸ್ಟ್ರಿಕ್‌ಗೆ ಕಾರಣವಾಗುವ ಕೆಲವು ಆ್ಯಸಿಡ್‌ಗಳ ಸ್ರಾವಕ್ಕೆ ಉತ್ತೇಜನ ನೀಡುತ್ತವೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಆ ಕ್ಷಣದಲ್ಲಿ ನೋವು ಕಡಿಮೆಯಾದಂತೆಅನ್ನಿಸಿದರೂ, ಪರಿಣಾಮ ಬೇರೆಯದೇ ಆಗಿರುತ್ತದೆ. ಕೆಲವು ಬಗೆಯ ಬೆವರೇಜಸ್‌ಗಳಲ್ಲೂ (ಪೆಪ್ಸಿ, ಕೋಲಾ, 7ಅಪ್‌ನಂಥ ತಂಪುಪಾನೀಯಗಳು) ಅಪಾಯಕಾರಿ ಆ್ಯಸಿಡ್‌ಗಳ ಸ್ರಾವಕ್ಕೆ ಉತ್ತೇಜನ ನೀಡುವ ಗುಣ ಇರುತ್ತದೆ. ಹೀಗಾಗಿ ಅವುಗಳನ್ನೂ ಸೇವಿಸದೇ ಇರುವುದು ಒಳಿತು.
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.