ಕುಡಿದು ವಾಹನ ಚಾಲನೆ ಬೇಡ
ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರ ವಿರುದ್ಧ ಸಂಚಾರ ಪೊಲೀಸರು ದೂರು ದಾಖಲಿಸುವುದು ಸಹಜ. ಅಂತಹವರ ವಿರುದ್ಧ ಪ್ರತಿನಿತ್ಯ ದೂರು ದಾಖಲಿಸುವುದಿಲ್ಲ. ಬದಲಾಗಿ ಪ್ರತಿವಾರದ ಕೊನೆಯ ಎರಡು ದಿನ(ಶನಿವಾರ ಮತ್ತು ಭಾನುವಾರ)ವಾಹನಗಳನ್ನು ತಡೆದು ತಪಾಸಣೆ ನಡೆಸಲಾಗುತ್ತದೆ.
ಚಾಲಕ ಮದ್ಯ ಸೇವಿಸಿ ವಾಹನ ಚಾಲನೆ ಮಾಡಲಾಗುತ್ತಿದೆ ಎಂಬ ಅನುಮಾನ ಬಂದರೆ ಅಂತಹ ಚಾಲಕನನ್ನು ತಡೆದು ಪರೀಕ್ಷಿಸುತ್ತಾರೆ. ಒಂದು ವೇಳೆ ಚಾಲಕ ಮದ್ಯ ಸೇವಿಸಿದ್ದರೆ ಎಷ್ಟು ಪ್ರಮಾಣದಲ್ಲಿ ಮದ್ಯಸೇವಿಸಿದ್ದಾನೆ ಎಂಬುದನ್ನು ಪರಿಶೀಲಿಸಿ ದಂಡ ಹಾಕಿ ಕಳುಹಿಸಲಾಗುತ್ತದೆ.
ಅತಿಯಾದ ಮದ್ಯಸೇವಿಸಿದ್ದರೆ ವಾಹನವನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಚಾಲಕನನ್ನು ಸ್ನೇಹಿತ/ಸಂಬಂಧಿಕರ ಜತೆ ಕಳುಹಿಸಲಾಗುತ್ತದೆ.
ಅಷ್ಟೇ ಆಗಿದ್ದರೆ ತೊಂದರೆಯಿಲ್ಲ. ಮಾಡಿದ ತಪ್ಪನ್ನೇ ಪದೇಪದೆ ಮಾಡಿದರೆ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ. ಇಂತಹ ಹೊಸ ಪದ್ಧತಿಯನ್ನು ಬೆಂಗಳೂರಿನಲ್ಲಿ ಸದ್ಯ ಜಾರಿಗೆ ತರಲಾಗಿದೆ. ಮೂರು ಬಾರಿ ದಂಡ ಕಟ್ಟಿ ನಾಲ್ಕನೇ ಬಾರಿ ಸಿಕ್ಕಿಬಿದ್ದರೆ ಅಂತಹ ವ್ಯಕ್ತಿಯ ಚಾಲನಾ ಪರವಾನಗಿಯನ್ನು ಪ್ರಾದೇಶಿಕ ಸಾರಿಗೆ ಇಲಾಖೆಗೆ ಕಳುಹಿಸಿಕೊಡಲಾಗುತ್ತದೆ.
ಪರವಾನಗಿ ಪರಿಶೀಲಿಸುವ ಅಧಿಕಾರಿಗಳು ಅದನ್ನು ರದ್ದುಗೊಳಿಸುತ್ತಾರೆ. ಆಗ ವಾಹನ ಚಾಲಕರು ಮತ್ತೆ ಹೊಸದಾಗಿ ಚಾಲನಾ ಪರವಾನಗಿಯನ್ನು ಪಡೆಯಬೇಕಾಗುತ್ತದೆ.
ಈ ಹೊಸ ಪದ್ಧತಿ ಜಾರಿಗೆ ಬಂದ ನಂತರ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವ ಸಾಕಷ್ಟು ಮಂದಿ ವಿರುದ್ಧ ಪೊಲೀಸರು ದೂರು ದಾಖಲಿಸಿ ಪರವಾನಗಿ ರದ್ದು ಮಾಡಲು ಕಳುಹಿಸಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲೂ ಇಂತಹುದೇ ಪದ್ಧತಿ ಜಾರಿಗೆ ಬಂದರೆ ಅಪಘಾತ ಸಂಖ್ಯೆ ನಿಯಂತ್ರಿಸಬಹುದು ಎಂಬುದು ಸಂಚಾರ ಪೊಲೀಸರ ಅಭಿಪ್ರಾಯ.
-ಶಾಂತ ತಮ್ಮಯ್ಯ