ಕೊಡಗೆಂದರೆ... ಈ ಹತ್ತು
ಅದು ವರ್ಷದ ಬಹುಭಾಗ ಮಂಜಿನಲ್ಲೇ ಒದ್ದೆಯಾಗುವ ಭಾಗ. ಕರ್ನಾಟಕದ ಕೆಳಗಿನ 'ಕಾಶ್ಮೀರ'. ಕೊಡಗು ಅಂದರೆ ಜನರಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ, ರಾಜಾಸೀಟ್, ಕೊಡವರ ಅಡ್ಡಸೀರೆ ಶೈಲಿ- ಥಟ್ಟನೆ ನೆನಪಾಗುವ ಸಂಗತಿಗಳು. ಇದರ ಹೊರತಾಗಿಯೂ ಸದಾ ಕಾಡುವ ಸಂಗತಿಗಳಿಗೆ ಕೊಡಗು ತವರು ನೆಲ. ಅಂಥ ಸಂಗತಿಗಳು ಇಲ್ಲೊಂದಿಷ್ಟು...
ಕಾವೇರಿ
ದಕ್ಷಿಣಭಾರತಕ್ಕೆ ಏಕೈಕ ಜೀವನದಿ ಇದ್ದರೆ ಅದು ಕಾವೇರಿ. ಅದರ ಹುಟ್ಟೂ ಕೊಡಗಿನಲ್ಲೇ. ಇದರ ಹನಿ ನೀರಿಗಾಗಿ ವರ್ಷಪೂರ್ತಿ ನೂರಾರು ಪ್ರತಿಭಟನೆಗಳನ್ನು ನಡೆಸುವ ನಮಗೆ ಕಾವೇರಿ ಇನ್ನೊಂದು ಗಂಗೆಯೇ ಆಗಿಹೋಗಿದ್ದಾಳೆ. ಕರ್ನಾಟಕ ಅಂದಾಕ್ಷಣವೂ ನೆನಪಾಗುವುದು ಕಾವೇರಿ. ಕೊಡಗು ಅಂದಾಕ್ಷಣವೂ ನೆನಪಾಗುವುದು ಕಾವೇರಿ.
ಭಾರತಿಸುತ
ವಿರಹವನ್ನು ನೂರಾರು ಥರ ಉಣಬಡಿಸಿದ ಚಿತ್ರ 'ಎಡಕಲ್ಲು ಗುಡ್ಡದ ಮೇಲೆ'. ಕ್ಲಾಸಿಕ್ ಬೈಕಿನಲ್ಲಿ ಬುರ್ರೆನ್ನುತ್ತಾ ಬರುವ ರಂಗ, ಜಯಂತಿ- ಆರತಿಯರ ಪ್ರೀತಿಯ ಮುಳುಗಡೆ... ಇವೆಲ್ಲವನ್ನೂ ಪುಟ್ಟಣ್ಣ ಕಣಗಾಲರು ಚಿತ್ರದ ಮೂಲಕ ಕಟ್ಟಿಕೊಟ್ಟರೂ ಆ ಕಥೆಗೆ ಜನ್ಮ ಕೊಟ್ಟಿದ್ದು ಭಾರತಿಸುತ. ಇವರೂ ಕೊಡಗಿನವರೇ.
ಮುತ್ತಿನಹಾರ
ಈ ಚಿತ್ರದ ಬಳಿಕವೇ ಕನ್ನಡಿಗರಿಗೆ ಕೊಡಗಿನ ಸೌಂದರ್ಯ ಅತಿಯಾಗಿ ಕಾಡಿಸತೊಡಗಿತು. ವಿಷ್ಣುವರ್ಧನ್- ಸುಹಾಸಿನಿ ನಟಿಸಿದ ಈ ಚಿತ್ರ ಬೆಳ್ಳಿತೆರೆಗೆ 'ಕೆಚ್ಚೆದೆಯ ಕಾಣಿಕೆ'. ಕೊಡಗನ್ನು ಸಿಪಾಯಿಗಳ ಕಾರ್ಖಾನೆಯಂತೆ ತೋರಿಸಿ, ಅವರ ಶೌರ್ಯವನ್ನು ದೇಶದೆಲ್ಲೆಡೆ ಪಸರಿಸಿದಖ್ಯಾತಿ ಈ ಚಿತ್ರದ್ದು.
ಪ್ರೇಮಾ
'ನಮ್ಮೂರ ಮಂದಾರ ಹೂವೇ'ಯಿಂದ ಗಮನ ಸೆಳೆದ ಈ ನಟಿ, ಕನ್ನಡ ಸೂಪರ್ ಹೀರೋಯಿನ್ ಪರಂಪರೆಯ ಕೊನೆ ಕೊಂಡಿ. ಸುಹಾಸಿನಿ, ಮಾಲಾಶ್ರೀ, ಸುಧಾರಾಣಿ ನಂತರ ನಮ್ಮೊಳಗೆ 'ನಮ್ಮ ನಟಿ' ಎಂಬ ಫೀಲ್ ಹುಟ್ಟಿಸಿದ್ದು ಪ್ರೇಮಾ. ಅವರ ಹುಟ್ಟೂರು ಕೂಡ ಕೊಡಗು ಜಿಲ್ಲೆಯೇ.
ರಾಬಿನ್ ಉತ್ತಪ್ಪ
ಆಡಿದ್ದು ಕೆಲವೇ ಕ್ರಿಕೆಟ್ ಪಂದ್ಯಗಳಾದರೂ ಉತ್ತಪ್ಪನ ಚುರುಕು ಆಟ ಎಂದಿಗೂ ನೆನಪಿರುವಂಥದ್ದು. ರಾಹುಲ್ ದ್ರಾವಿಡ್ ನಿವೃತ್ತಿಯ ನಂತರ ಕರ್ನಾಟಕದ ಭರವಸೆಯ ಬ್ಯಾಟಿಂಗ್ ತಾರೆಯಾಗಿ ಹೊಮ್ಮಿದವರು ರಾಬಿನ್. ರಣಜಿ ಪಂದ್ಯಗಳಲ್ಲೂ ರಾಜ್ಯದ ಕೀರ್ತಿಯನ್ನು ಎತ್ತಿಹಿಡಿದವರು.
ಚಳಿ
ಕೊಡಗಿನ ಚಳಿ ಕನ್ನಡದ 'ನಾಸಿಕ ಕವಿ' ಜಿ.ಪಿ. ರಾಜರತ್ನಂಗೂ ಅತಿ ಉಲ್ಲಾಸ ಕೊಟ್ಟಿದೆ. 'ಭೂಮಿನ್ ತಬ್ಬಿದ್ ಮೋಡ ಇದ್ಹಂಗೆ/ ಮಡಿಕೇರಿ ಮೇಲ್ ಮಂಜು' ಎಂಬ ಅವರ ವರ್ಣನೆ ಇವತ್ತಿಗೂ ಅಲ್ಲಿನ ಕಾಡಿನಷ್ಟೇ ಹಸಿರು. ಆ ಚುಮುಚುಮು ಚಳಿ ಇಂದಿಗೂ ಸಹಸ್ರ ಪ್ರೇಮಿಗಳನ್ನು ಆಕರ್ಷಿಸುವ ಕೇಂದ್ರ. ಕರ್ನಾಟಕದ ಟಾಪ್ 1 ಫೋಟೋಗ್ರಫಿ ತಾಣವೂ ಕೊಡಗು.
ಚಿಕವೀರ ರಾಜೇಂದ್ರ
ಕನ್ನಡದ 'ಸಣ್ಣಕಥೆಗಳ ಚಕ್ರವರ್ತಿ' ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೆ ಜ್ಞಾನಪೀಠ ತಂದುಕೊಟ್ಟ ಕೃತಿ ಇದು. ಕನ್ನಡ ಸಾಹಿತ್ಯಲೋಕಕ್ಕೆ ಶಿಖರಪ್ರಾಯ ಕಾದಂಬರಿಯೂ ಹೌದು. ಇದು ಕೊಡಗಿನ ವೀರನಿಗೆ ಸಂಬಂಧಿಸಿದ ಕಥೆ.
ಶೌರ್ಯ
ಇಡೀ ಭಾರತದ ಗಡಿಯಲ್ಲಿ ಸೈನಿಕರ ಗಣತಿ ಮಾಡಿದರೆ ಕರ್ನಾಟಕದ ಪಾಲು ಶೇಕಡಾ ಐದೋ ಹತ್ತೋ ಇರಬಹುದು. ಅನುಮಾನವೇ ಇಲ್ಲ, ಆ ಸಂಖ್ಯೆಯಲ್ಲಿ ಕೊಡಗಿನವರ ಪಾಲು ಶೇ.60. ಇಲ್ಲಿನವರು ಸೈನ್ಯದಲ್ಲಿ ಸಾಮಾನ್ಯ ಹುದ್ದೆಯನ್ನೂ ದಾಟಿ, ಕರ್ನಲ್, ಜನರಲ್ ತನಕ ಸಾಗಿದವರು. ಇಲ್ಲಿನ ಪುರುಷರ ಉಡುಪು, ಕೈಯಲ್ಲಿನ ಕತ್ತಿಯೂ ಶೌರ್ಯದ ಸಂಕೇತವೇ.
ಕಾಫಿ
'ಕೂರ್ಗ್ ಕಾಫಿ'ಯ ಸವಿ ಜಾಗತಿಕವಾದುದ್ದು. ಇಲ್ಲಿನ 'ರೊಬುಸ್ಟಾ' ತಳಿಯ ವಿಶೇಷತೆ ಬೇರೆಲ್ಲೂ ಕಾಣಸಿಗಲ್ಲ. ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿ ಪರ್ವತ ಶ್ರೇಣಿ ಬಿಟ್ಟರೆ ರಾಜ್ಯದಲ್ಲಿ ಅತಿಹೆಚ್ಚು ಕಾಫಿ ಬೆಳೆಯುವ ಪ್ರದೇಶ ಕೊಡಗು. ಕೊಡವ ಸಮುದಾಯದ ಲವಲವಿಕೆಯ ಗುಟ್ಟು ಕೂಡ ಕೂರ್ಗ್ ಕಾಫಿಯೇ.
ಹಾಕಿ
ಕ್ರಿಕೆಟ್ ಬಿಟ್ಟರೆ ಬೇರೇನೂ ಗೊತ್ತಿಲ್ಲ ಎನ್ನುತ್ತಿದ್ದ ಕರ್ನಾಟಕದಲ್ಲಿ, ಮೂಲೆಯಿಂದಲೇ ಹಾಕಿ ಟೂರ್ನಿಯನ್ನು ಆರಂಭಿಸಿದವರು ಕೊಡಗಿನವರು. 'ಕೊಡವ ಹಾಕಿ ಹಬ್ಬ' ವಿಶ್ವದಲ್ಲೇ ವಿಭಿನ್ನ ಕ್ರೀಡೋತ್ಸವ. ಬಿ.ಪಿ. ಗೋವಿಂದ, ಎಂ.ಪಿ. ಗಣೇಶ್, ಎಂ.ಎಂ. ಸೋಮಯ್ಯ ಸೇರಿದಂತೆ ಭಾರತ ಹಾಕಿತಂಡಕ್ಕೆ ಹಲವು ಮೇರು ಪ್ರತಿಭೆಗಳನ್ನು ಕಾಣಿಕೆಯಾಗಿ ಕೊಟ್ಟ ಕೊಡಗು, ಇಂದಿಗೂ ಸಹಭಾಗಿತ್ವವನ್ನು ಉಳಿಸಿಕೊಂಡಿದೆ.