ನಗರದೆಡೆಗೆ ಯುವ ಜನರು ಗೂಳೆ
ಪ್ರಾಚೀನ ಕಾಲದಿಂದಲೂ ಹಳ್ಳಿಗಳಿಗೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗಿದ್ದು, ಕಲೆ, ಸಂಸ್ಕೃತಿ, ನಾಗರೀಕತೆಯ ಆಗರ ಎಂಬುದಾಗಿ ಬಿಂಬಿಸಲಾಗಿತ್ತು. ಆದರೆ, ಇಂದು ಹಳ್ಳಿಗಳಲ್ಲಿ ಸಾಂಸ್ಕೃತಿಕ ಸೊಗಡು ಮಾಯವಾಗಿದೆ. ಕಾರಣ ಜಾಗತೀಕರಣಗಳಿಂದ ವಿಶ್ವಗ್ರಾಮ ಪರಿಕಲ್ಪನೆಗಳು ಹಳ್ಳಿಗಳನ್ನು ಅವನತಿಯ ಕಡೆಗೆ ತಳ್ಳಿದೆ. ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿನ ಪಾರಂಪರಿಕ ಕಸುಬುಗಳು, ಬರಗಾಲ, ಕ್ಷಾಮ ಆಧುನಿಕತೆಯ ಪೈಪೋಟಿಗಳಿಂದ ನಾಶವಾಗಿ ಅಲ್ಲಿನ ಜನರ ಬದುಕು ನಗರಗಳ ಕಡೆಗೆ ವಾಲಿದೆ. ಅವರ ತುತ್ತಿನ ಚೀಲ ತುಂಬಿಸಿಕೊಳ್ಳಲು ದೂರದ ನಗರಗಳಿಗೆ ಯುವ ಜನರು ಗೂಳೆ ಹೋಗುತ್ತಿದ್ದಾರೆ. ಅಲ್ಲದೆ ಉನ್ನತ ಶಿಕ್ಷಣ ಬಯಸಿ, ಹಳ್ಳಿಗಳನ್ನು ತೊರೆದು ನಗರಗಳತ್ತ ಮುಖ ಮಾಡುತ್ತಿದ್ದಾರೆ. ಹಾಗಾಗಿ ಇಂದು ಹಳ್ಳಿಗಳಲ್ಲಿ ಅವರ ವಯಸ್ಸಾದ ತಂದೆ-ತಾಯಿಗಳು, ಅಜ್ಜ-ಅಜ್ಜಂದಿರು ಮಾತ್ರವೇ ಇದ್ದಾರೆ. ಹಬ್ಬ-ಹರಿದಿನಗಳಿಗೆ ಬಂದು ಒಂದಿಷ್ಟು ಹಣಕಾಸು ಕೊಟ್ಟು ಹೋಗುತ್ತಿದ್ದಾರೆ. ಹೀಗಾಗಿ ಹಳ್ಳಿಗಳು ನಿಜಕ್ಕೂ ವೃದ್ಧಾಶ್ರಮಗಳಾಗಿ ಪರಿವರ್ತನೆಯಾಗುತ್ತಿರುವುದು ನಮ್ಮೆಲ್ಲರ ದುರ್ದೈವ.
-ರವಿಕುಮಾರ್.ವಿ, ಹೊಸದುರ್ಗ
ಸ್ವಯಂಕೃತ ಅಪರಾಧ
ಹಳ್ಳಿಗಳು ಖಂಡಿತ ಇಂದು ವೃದ್ಧಾಶ್ರಮಗಳಾಗುತ್ತಿವೆ. ಜನ ಪೇಟೆಯ ಥಳುಕು ಬಳುಕಿನ ಜೀವನವನ್ನೇ ಬಹಳವಾಗಿ ಇಷ್ಟ ಪಡುತ್ತಿದ್ದಾರೆ. ಹಾಗೆಯೇ ಪೋಷಕರು ಕೂಡ ತಮ್ಮ ಮಕ್ಕಳಿಗೆ ತಾವಂತೂ ಹಳ್ಳಿಯಲ್ಲಿ ಇದ್ದು ಕಷ್ಟಪಟ್ಟಿದ್ದು ಸಾಕು ಮಕ್ಕಳಾದರೂ ಆರಾಮಾಗಿರಲಿ ಎಂದು ಅವರನ್ನು ಓದಿಸಿ ನಗರದ ಐ.ಟಿ ಬಿ.ಟಿ ಕಂಪನಿಗಳಲ್ಲಿ ಕೆಲಸ ಸಿಕ್ಕರೆ ಸಾಕೆಂದು ಕಳುಹಿಸಿಕೊಡುತ್ತಿದ್ದಾರೆ. ಒಮ್ಮೆ ನಗರದ ಜೀವನಕ್ಕೆ ಹೊಂದಿಕೊಂಡ ಮಕ್ಕಳು ಮತ್ತೆಂದೂ ಹಳ್ಳಿಯ ಕಡೆ ಮುಖ ಮಾಡುವುದಿಲ್ಲ. ಇದರ ಪರಿಣಾಮ ಇಂದು ಅನೇಕ ಹಳ್ಳಿಗಳಲ್ಲಿ ಬರೀ ವೃದ್ಧರೇ ತುಂಬಿದ್ದಾರೆ. ಇಂದಿನ ಯುವಜನರಲ್ಲಿ ಯಾರೊಬ್ಬರೂ ನಗರ ಜೀವನ ಬಿಟ್ಟು ಹಳ್ಳಿಗಳಲ್ಲಿ ಜೀವನ ನಡೆಸುವುದನ್ನು ಬಯಸುತ್ತಿಲ್ಲ. ಇವೆಲ್ಲದರ ಪರಿಣಾಮವೇ ಈ ವೃದ್ಧಾಶ್ರಮಗಳು. ಇದು ನಿಜಕ್ಕೂ ಕಳವಳಕಾರಿ ಸಂಗತಿ.
-ವಿದ್ಯಾ ನಾಡಿಗ, ವಿಜಾಪುರ
ವ್ಯಕ್ತಿಗತ ವಿಭಿನ್ನತೆಯಷ್ಟೆ
ಆಧುನಿಕ ಜೀವನಶೈಲಿಯಲ್ಲಿ ಕೇವಲ ಗ್ರಾಮೀಣ ಜೀವನದಿಂದ ಸಕಲ ಸೌಕರ್ಯಗಳನ್ನು ಒದಗಿಸಿಕೊಳ್ಳಲು ಅಸಾಧ್ಯ. ಹಾಗಾಗಿ ಹಳ್ಳಿಯಿಂದ ನಗರಕ್ಕೆ ಉದೋಗ್ಯದ ನಿಮಿತ್ತ ಕುಟುಂಬತೊರೆದು ಹೋಗಿ ಅಲ್ಲಿಯೇ ನೆಲಸಿದರೆ ಹಳ್ಳಿಯು ವೃದ್ಧಾಶ್ರಮಗಳಾಗುವುದು ಖಚಿತ. ಇದು ವ್ಯಕ್ತಿಗತ ವಿಭಿನ್ನತೆಯ ಕೊರತೆ ಎಂದರೆ ತಪ್ಪಾಗಲಾರದು. ಹಬ್ಬ- ಹರಿದಿನಗಳಿಗೆ ಎಲ್ಲರೂ ಸೇರುವರು. ತಮ್ಮ ಬೇರನ್ನು ಮರ ಹೇಗೆ ಮರೆಯಲು ಸಾಧ್ಯವಿಲ್ಲವೋ ಹಾಗೇ ಯಾರು ತಮ್ಮ ಮೂಲಸ್ಥಾನವನ್ನು ಮರೆಯಲು ಇಚ್ಛಿಸುವುದಿಲ್ಲ. ಯಾವುದೇ ವ್ಯಕ್ತಿ ತನ್ನ ಅಂತರಾಳದಿಂದ ತಂದೆ-ತಾಯಿ, ಅಕ್ಕ-ತಂಗಿ, ಕೌಟುಂಬಿಕ ಬಾಂಧವ್ಯವನ್ನು ಮರೆಯುವುದಿಲ್ಲ. ಅದು ಅಷ್ಟು ಸುಲಭದ ಮಾತಲ್ಲ. ಸಮಯದ ಅಭಾವ ಹಾಗೂ ಉದೋಗ್ಯದ ಒತ್ತಡದಿಂದ ಕುಟುಂಬದಿಂದ ದೂರವಿರಬಹುದು. ಆದರೆ ವೃದ್ಧಾಶ್ರಮ ಮಾಡುವ ಉದ್ದೇಶದಿಂದ ಅಲ್ಲ.
-ನರೇಶ.ಎಸ್.ಬಿ, ಹೂವಿನ ಹಡಗಲಿ
'ಜಗುಲಿ'ಯಲ್ಲಿ ಈ ಸಲದ ವಿಷಯ 'ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆಯೇ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com