ನೆತ್ತಿಗೇರುವ ಪಿತ್ತಕ್ಕಿಂತ ಭಾರಿ ಅಪಾಯ!
ರಾತ್ರಿ ಮಲಗುವಾಗ ಚೆನ್ನಾಗಿಯೇ ಇರುತ್ತೇವೆ. ಮಧ್ಯದಲ್ಲಿ ಮೂತ್ರಕ್ಕೆ ಎದ್ದಾಗಲೂ ಏನೂ ಆಗಿರುವುದಿಲ್ಲ. ಆದರೆ ಬೆಳ್ಳಂಬೆಳಗ್ಗೆ ಏಳುವಾಗ ಮಾತ್ರ ಹಾಸಿಗೆ ಬಿಟ್ಟೇಳಲು ಮನಸ್ಸೇ ಬಾರದು. ಕಣ್ಣು ಬಿಡುತ್ತಿದ್ದಂತೆ ಏನೋ ಒಂದು ರೀತಿಯ ಆಲಸ್ಯ. ಎದ್ದು ಕುಳಿತಾಕ್ಷಣ ತಲೆಯಲ್ಲಿ ನೋವಿನ ಅನುಭವ. ಹೊಟ್ಟೆಯಲ್ಲಿ ಕಲಕಿದ ಅನುಭವ. ಪದೆಪದೆ ಬರುವ ಹುಳಿತೇಗು. ವಾಂತಿ ಮಾಡಬೇಕು ಅನ್ನಿಸುತ್ತದೆ, ಬರುವುದಿಲ್ಲ. ಇನ್ನು ಕೆಲವರಿಗೆ ಮೇಮೇಲೆಲ್ಲ ಸಣ್ಣಸಣ್ಣ ಹುಗುಳು (ಗಂಧೆ) ಏಳಬಹುದು. ಇದೆಲ್ಲ ಪಿತ್ತದ ಲಕ್ಷಣಗಳು ಎನ್ನುವುದರಲ್ಲಿ ಯಾವ ಸಂಶಯವೂ ಬೇಡ. ಅಧಿಕ ಪ್ರಸಂಗತನ ಮಾಡಿದಾಗ 'ಪಿತ್ತ ನೆತ್ತಿಗೇರಿದೆ ನಿನಗೆ' ಎಂದು ಬೈಯ್ಯುವುದನ್ನು ಕೇಳಿರಬಹುದು. ಆದರೆ ಪಿತ್ತ ನೆತ್ತಿಗೇರಿದರೆ ಅಂಥವರ ಸ್ಥಿತಿ ಯಾರಿಗೂ ಬೇಡ. ಅಷ್ಟು ತಾಪತ್ರಯ ಕೊಡುತ್ತದೆ ಪಿತ್ತ. ಪಿತ್ತ ಜಾಸ್ತಿಯಾದದ್ದು ಅನುಭವಕ್ಕೆ ಬರುತ್ತಿದ್ದಂತೆ ಅದನ್ನು ಹೊರಹಾಕುವುದು ಕಷ್ಟವೇನಲ್ಲ. ತೀರಾ ಸುಲಭದ ಉಪಾಯ ಎಂದರೆ ಎಷ್ಟು ಸಾಧ್ಯವೊ ಅಷ್ಟು ನೀರು ಕುಡಿದುಬಿಡಿ. ಹೊಟ್ಟೆ ಭಾರವಾದರೂ ಪರವಾಗಿಲ್ಲ, ಇನ್ನಷ್ಟು ಕುಡಿಯಿರಿ. ಆಗ ಹಸಿರು, ಹಳದಿ ಮಿಶ್ರಿತ ಬಣ್ಣದ ಪಿತ್ತ ಒದ್ದುಕೊಂಡು ಹೊರಗೆ ಬರುತ್ತದೆ. ಕೆಲವರು ಉಗುರು ಬೆಚ್ಚಗಿನ ನೀರಿಗೆ ಉಪ್ಪು ಸೇರಿಸಿಕೊಂಡು ಕುಡಿಯುತ್ತಾರೆ. ಅದಕ್ಕಿಂತ ಬರೀ ತಣ್ಣೀರನ್ನು ಕುಡಿಯುವುದು ಸೂಕ್ತ.
ಪಿತ್ತಕ್ಕಿಂತ ಅಪಾಯಕಾರಿ ಇನ್ನೊಂದಿದೆ. ಅದು ಪಿತ್ತದ ಹರಳು ಅಥವಾ ಪಿತ್ತಗಲ್ಲು. ಸುಲಭದಲ್ಲಿ ವ್ಯಾಖ್ಯಾನಿಸುವುದಾದರೆ ಪಿತ್ತಗಲ್ಲು ಎಂದರೆ ಪಿತ್ತಕೋಶದಲ್ಲಿ ಉಂಟಾಗುವ ಗಟ್ಟಿ ಪದಾರ್ಥಗಳ ರಚನೆ. ಈ ಹರಳು ಹೇಗೆ ಉಂಟಾಗುತ್ತದೆ ಎನ್ನುವುದನ್ನು ತಿಳಿಯುವುದಕ್ಕಿಂತ ಮುಂಚೆ ಸ್ವಲ್ಪ ತಾಂತ್ರಿಕವಾಗಿ ಚರ್ಚೆ ಮಾಡೋಣ. ಯಕೃತ್ತಿನ ಕೆಳಭಾಗದಲ್ಲಿ ಪಿತ್ತಕೋಶ ಇರುತ್ತದೆ. ಇದೊಂದು ಸಣ್ಣ ಅಂಗ. ಜೀರ್ಣಕ್ರಿಯೆಯಲ್ಲಿ ನೆರವಾಗುವುದು ಇದರ ಜವಾಬ್ದಾರಿ. ನಾವು ಏನಾದರೂ ತಿನ್ನುವುದು, ಕುಡಿಯುವುದು ಮಾಡುತ್ತೇವಲ್ಲ, ಅವನ್ನು ಸಣ್ಣಕರುಳಿಗೆ ದೂಡುವುದು ಇದರ ಪ್ರಮುಖ ಕೆಲಸ. ಇದಕ್ಕಾಗಿ ಪಿತ್ತಕೋಶ ಬೈಲ್ ಎನ್ನುವ ದ್ರಾವಣದ ನೆರವು ಪಡೆದುಕೊಳ್ಳುತ್ತದೆ. ಬೈಲ್ ಕೂಡ ಯಕೃತ್ತು ಉತ್ಪಾದಿಸುವ ಮತ್ತು ಕೊಲೆಸ್ಟರಾಲ್, ಬಿಲಿರುಬಿನ್, ಬೈಲ್ ಲವಣಗಳನ್ನು ಹೊಂದಿರುವ ದ್ರಾವಣ. ಬೈಲ್‌ನಲ್ಲಿರುವ ಕೊಲೆಸ್ಟರಾಲ್, ಕೆಲವು ಬಗೆಯ ವರ್ಣದ್ರವ್ಯಗಳಿಂದ ಪಿತ್ತಕೋಶದಲ್ಲಿ ಪಿತ್ತಗಲ್ಲುಗಳು ರಚನೆಯಾಗುತ್ತವೆ. ಶೇ 80ರಷ್ಟು ಮಂದಿಯಲ್ಲಿ ಪಿತ್ತಗಲ್ಲುಗಳ ರಚನೆಗೆ ಕೊಲೆಸ್ಟರಾಲ್ ಕಾರಣ. ಉಳಿದ ಶೇ 20ರಷ್ಟು ಜನರಲ್ಲಿ ಪಿಗಮೆಂಟ್‌ಗಳಿಂದ ಹರಳುಗಳು ಸೃಷ್ಟಿಯಾಗುತ್ತವೆ. ಹೀಗಾಗಿ ಪಿತ್ತಗಲ್ಲುಗಳನ್ನು ಕೊಲೆಸ್ಟರಾಲ್ ಪಿತ್ತಗಲ್ಲು ಮತ್ತು ವರ್ಣದ್ರವ್ಯ (ಪಿಗಮೆಂಟ್) ಪಿತ್ತಗಲ್ಲು ಎಂದು ಎರಡು ರೀತಿಯಲ್ಲಿ ವಿಂಗಡಿಸಲಾಗಿದೆ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)