ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಆತ್ಮಸ್ಥೈರ್ಯವೇ ಅಸ್ತ್ರ

Lingaraj Badiger
Updated On : 7 Jan 2014, 4:31 am

ಪ್ರತಿಯೊಬ್ಬರ ಜೀವನದಲ್ಲೂ ಹಾಗಾಗುವುದುಂಟು. ಮಾಡಿರದ ತಪ್ಪಿನ ಆರೋಪ ಎದುರಿಸುವುದು, ಮತ್ತಾರದೋ ಪಾಪ ನಮ್ಮ ತಲೆಗೆ ಸುತ್ತಿಕೊಳ್ಳುವುದು. ಇವೆಲ್ಲವೂ ಬದುಕಿನಲ್ಲಿ ಮಾಮೂಲು. ನಮ್ಮ ವಿರುದ್ಧ ಬೊಟ್ಟು ಮಾಡುವವರು ಎಷ್ಟು ಪ್ರಬಲರಾಗಿರುತ್ತಾರೆ ಎಂದರೆ ಮೇಲ್ನೋಟಕ್ಕೆ ನಾವು ತಪ್ಪಿತಸ್ಥರೆಂದು ಎಂತಹವರಿಗೂ ಅನ್ನಿಸಿಬಿಡುವಂತಹ ರೀತಿಯಲ್ಲಿ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿರುತ್ತಾರೆ. ನಮಗೆ ಅಹವಾಲು ಹೇಳಿಕೊಳ್ಳಲೂ ಆಗದಂತಹ ಸ್ಥಿತಿ. ಅಂತಹ ಸಂದರ್ಭ ಬಂದೆರಗಿದಾಗ ದೇವರು ನನಗೇ ಏಕೆ ಇಂತಹ ಶಿಕ್ಷೆ ಕೊಡುತ್ತಾನೆ ಎಂದು ಪರಿತಪಿಸುತ್ತೇವೆ. ತೀರಾ ಹತಾಶರಾಗಿ ಯಾರನ್ನೂ ನಂಬದ, ಕೊನೆಗೂ ಸ್ವತಃ ನಮ್ಮನ್ನೂ ನಾವು ನಂಬದ ಸ್ಥಿತಿ ತಲುಪುತ್ತೇವೆ. ಇಂಥ ಸಂದರ್ಭದಲ್ಲಿ ನಾವು ಮಾಡಿಕೊಳ್ಳುವ ಇನ್ನೊಂದು ಯಡವಟ್ಟು ಎಂದರೆ ಹಿಂದೆಮುಂದೆ ಯೋಚಿಸದೇ ದುಡುಕಿ ಒಂದು ತೀರ್ಮಾನ ಅಥವಾ ನಿಲುವಿಗೆ ಬಂದುಬಿಡುವುದು. ಇದರಿಂದ ಆಗುವುದೇನು? ಇಕ್ಕಟ್ಟಿನಿಂದ ಹೊರಬರುವ ದಾರಿ ಕಾಣದೇ ಇನ್ನಷ್ಟು ಕಂಗಾಲಾಗುತ್ತೇವೆ. ನಮ್ಮ ಮೇಲಿನ ಎಲ್ಲ ಆಪಾದನೆಗಳೂ ಸುಳ್ಳು ಎಂಬುದನ್ನು ನಿರೂಪಿಸಿ ಸತ್ಯ ಏನೆಂಬುದನ್ನು ಸಾಬೀತುಪಡಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂಬುದನ್ನು ಮರೆತುಬಿಡುತ್ತೇವೆ. ಯೋಚನೆ ಮಾಡಿ. ಆ ಶ್ರೀಕೃಷ್ಣ ಪರಮಾತ್ಮ ಕೂಡ ಶಮಂತಕ ಮಣಿ ಪ್ರಸಂಗದಲ್ಲಿ ಸುಳ್ಳು ಆರೋಪ ಎದುರಿಸಿರಲಿಲ್ಲವೇ? ಆಮೇಲೆ ಶಮಂತಕ ಮಣಿ ಅಪಹರಿಸಿದವ ತಾನಲ್ಲ ಎಂಬುದನ್ನು ಲೋಕಕ್ಕೆ ತೋರಿಸಿ ಆರೋಪ ಮುಕ್ತನಾದ. ಭಗವಂತನ ಮೇಲೆಯೇ ಆಪಾದನೆ ಬಂದಿತ್ತು ಎಂದರೆ ಹುಲು ಮಾನವರ ಪಾಡೇನು? ಎಂತಹ ಸನ್ನಿವೇಶ ಬಂದರೂ ಆತ್ಮಸ್ಥೈರ್ಯ ಕಳೆದುಕೊಳ್ಳದೇ, ತಾಳ್ಮೆಗೆಡದೇ ನಿಭಾಯಿಸುವುದರಲ್ಲಿಯೇ ಜಾಣತನವಿದೆ.

-ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement