ಅಲ್ಲಿ ಸಂಚರಿಸಬೇಡ
ಭರ್ತೃಹರಿಯ ಹೆಸರು ಸಂಸ್ಕೃತ ಸಾಹಿತ್ಯದಲ್ಲಿ ಅಜರಾಮರ. ಈತ ನೀತಿಶತಕ, ವೈರಾಗ್ಯಶತಕ, ಶೃಂಗಾರಶತಕಗಳನ್ನು ರಚಿಸಿದವನು. ಒಂದೊಂದು ಪ್ರಾಯದಲ್ಲಿ ಈತನ ಒಂದೊಂದು ಕಾವ್ಯ ರುಚಿಸುತ್ತದೆ ಎನ್ನುವುದು ನಿಜ. ಕಾವ್ಯಸೃಷ್ಟಿಗೆ ಕಾರಣವಾದ ಈತನ ಜೀವನದ ಬಗೆಗೂ ಕತೆಗಳಿವೆ. ಅದನ್ನು ಮುಂದೆ ನೋಡೋಣ. ಶೃಂಗಾರ ಶತಕದ ಉಕ್ತಿಗಳೆಲ್ಲಾ ಪ್ರಣಯಲೀಲಾವಿಲಾಸಗಳಲ್ಲ. ಅವುಗಳಲ್ಲಿ ನೀತಿಯೂ ಇದೆ. ಸರಿಯಾಗಿ ಕೇಳಿಸಿಕೊಳ್ಳದೆ ಹೋದರೆ, ನೀತಿ ನೇತಿಯಾಗುತ್ತದೆ.
ಇಂಥ ಭರ್ತೃಹರಿಯ ಶಿಷ್ಯನೊಬ್ಬ ತುಸು ದಾರಿ ತಪ್ಪಿದ್ದ. ಗುರುಕುಲದಿಂದ ಅತ್ತಿತ್ತ ಅಡ್ಡಾಡುತ್ತಿದ್ದವನು ಊರಿನ ತರುಣಿಯೊಬ್ಬಳನ್ನು ನೋಡಿಬಿಟ್ಟಿದ್ದ. ಆತನ ಮನಸ್ಸೆಂಬ ಹಸು ವಿವೇಕದ ಹಗ್ಗ ಕಡಿದು ಬೇಲಿ ಹಾರಲು ಹೊರಟಿತ್ತು. ಇದನ್ನು ತಿಳಿದ ಭರ್ತೃಹರಿ, ಶಿಷ್ಯನನ್ನು
ನವಿರಾಗಿ ಎಚ್ಚರಿಸಿದ:
ಕಾಮಿನೀಕಾಯಕಾಂತಾರೇ ಕುಚಪರ್ವತ ದುರ್ಗಮೇ
ಮಾ ಸಂಚರ ಮನಃಪಂಥಾಃ ತತ್ರಸ್ತೇ ಸ್ಮರ ಸರ್ವದಾ
ಕಾಮಿನಿಯ ಶರೀರವೆಂಬುದೊಂದು ಗೂಢವಾದ ಪರ್ವತ. ಅಲ್ಲಿ ದುರ್ಗಮವಾದ, ಅಷ್ಟು ಸುಲಭವಾಗಿ ಏರಲಾಗದ ಕುಚಗಳೆಂಬ ಪರ್ವತಗಳಿವೆ. ಮನಸ್ಸೆಂಬ ಪ್ರವಾಸಿಯೇ, ಅಲ್ಲಿ ಸಂಚರಿಸಬೇಡ. ಅಲ್ಲಿ ದರೋಡೆಕೋರನಿದ್ದಾನೆ. ಅವನ ಹೆಸರು ಮನ್ಮಥ! ಈ ಸ್ಮರನ ಕೈಗೆ ಸಿಕ್ಕಿಹಾಕಿಕೊಂಡರೆ ನಿನ್ನ ಸರ್ವಸ್ವವೂ ದೋಚಲ್ಪಟ್ಟಂತೆ ಎಂದು ತಿಳಿ!
ಗುರುವಿನ ಉಪದೇಶಕ್ಕೆ ಕಿವಿಗೊಟ್ಟ ಶಿಷ್ಯ ಕಾಡು ನುಗ್ಗುವ ಅಭಿಲಾಷೆಯನ್ನು ಕೈಬಿಟ್ಟನೋ, ಅಥವಾ ಒಮ್ಮೆ ಅದೇನೇನಿದೆ ಎಂದು ನೋಡಿಯೇಬಿಡುತ್ತೇನೆ ಎಂದು ಹೊರಟನೋ ನಮಗೆ ತಿಳಿಯದು.
- ಹರಿಹರ