ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ತರಕಾರಿ ತಿಂದರೆ ಕಲ್ಲು ಕರಗುತ್ತೆ!

Lingaraj Badiger
Updated On : 8 Jan 2014, 5:41 am

ಪಿತ್ತಗಲ್ಲು ಸಣ್ಣ ಪ್ರಮಾಣದಲ್ಲಿದ್ದರೆ ಅಪಾಯಕಾರಿಯಲ್ಲ. ಹೀಗಾಗಿ ಆರಂಭದಲ್ಲೇ ಅದನ್ನು ಪತ್ತೆ ಮಾಡುವುದು ಬಹಳ ಕಷ್ಟ. ಅದು ದೊಡ್ಡದಾದಾಗ ಏನಾಗುತ್ತದೆ ಅಂದರೆ ಯಕೃತ್ತು ಅಥವಾ ಪಿತ್ತಕೋಶಗಳ ದ್ವಾರವನ್ನು ಬಂದ್ ಮಾಡುತ್ತದೆ. ಆಗ ಶುರುವಾಗುತ್ತದೆ ನೋಡಿ ನೋವು. ನಿಜಕ್ಕೂ ಅದು ಯಮ ಯಾತನೆ. ಒಮ್ಮೊಮ್ಮೆ ಕೆಲವು ಗಂಟೆಗಳವರೆಗೂ ನೋವು ಕಾಡಬಹುದು. ಬಲಗಡೆ ಕಿಬ್ಬೊಟ್ಟೆಗಿಂತ ಸ್ವಲ್ಪ ಮೇಲ್ಭಾಗದಲ್ಲಿ ನಿಧಾನಕ್ಕೆ ಶುರುವಾಗುವ ನೋವು ನಿಧಾನಕ್ಕೆ ಎದೆ ಕೆಳಭಾಗಕ್ಕೆ ವ್ಯಾಪಿಸುತ್ತದೆ. ಅಲ್ಲಿಂದ ಭುಜದವರೆಗೂ ತಲುಪಿ ಪುನಃ ಕೆಳಕ್ಕೆ ಇಳಿಯುತ್ತದೆ. ಈ ಚಲನೆಯ ಕಾರಣದಿಂದಾಗಿ ನೋವು ಎಲ್ಲಿ ಆರಂಭವಾಗಿದೆ? ಎಲ್ಲಿ ನೋವಾಗುತ್ತಿದೆ? ಸದ್ಯ ನೋವು ಯಾವ ಭಾಗದಲ್ಲಿ ತೀವ್ರವಾಗಿದೆ ಎನ್ನುವುದೇ ನಿಮಗೆ ಗೊತ್ತಾಗದೇ ಇರಬಹುದು. ಒಮ್ಮೊಮ್ಮೆ ಹರಳು ಎಷ್ಟು ದೊಡ್ಡದಾಗಿರುತ್ತದೆ ಎಂದರೆ ಪಿತ್ತಗಲ್ಲಿನ ಜತೆಗೆ ಪಿತ್ತಕೋಶವನ್ನೂ ತೆಗೆಯಬೇಕಾಗಿ ಬರಬಹುದು! ಇದು ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದ ವಂಶಪಾರಂಪರ್ಯವಾಗಿ ಮುಂದುವರಿಯುವ ಸಾಧ್ಯತೆಯೂ ಹೆಚ್ಚು.
ಆಹಾರವೇ ಔಷಧ ಎನ್ನುವುದು ನಾನು ಮೊದಲಿನಿಂದಲೂ ಪ್ರತಿಪಾದಿಸಿಕೊಂಡು ಬಂದವರು. ಆಹಾರೋದ್ಯಮಿಯಾಗಿದ್ದರೂ ನನ್ನ ಚಿಂತನೆಯಲ್ಲಿ ಏನೂ ಬದಲಾಗಿಲ್ಲ. ಪಿತ್ತದ ವಿಚಾರದಲ್ಲಿಯೂ ಹೇಳುವುದು ಅದನ್ನೇ. ನಾನು ಹೇಳುವುದು ಎನ್ನುವುದಕ್ಕಿಂತ ವೈಜ್ಞಾನಿಕವಾಗಿ ನಿರೂಪಿತವಾಗಿರುವ ಸತ್ಯ ಇದು. ಪಿತ್ತಗಲ್ಲು ಆಗದಂತೆ, ಆಗಿದ್ದರೂ ಅದು ಕರಗುವಂತೆ ಮಾಡುವ ತಾಕತ್ತು ಆಹಾರದಲ್ಲಿಯೇ ಇದೆ. ಕೊಲೆಸ್ಟರಾಲ್ ನಿಯಂತ್ರಣದ ಬಗ್ಗೆ ನಾವು ಸಾಕಷ್ಟು ಎಚ್ಚರವಹಿಸಿದರೆ ಪಿತ್ತಗಲ್ಲಿನ ಸಾಧ್ಯತೆಯಿಂದಲೂ ದೂರ ಉಳಿದ ಹಾಗೆಯೇ! ಕೊಲೆಸ್ಟರಾಲ್ ಬಗ್ಗೆ ಈ ಸರಣಿಯ ಆರಂಭದಲ್ಲಿಯೇ ವಿವರವಾಗಿ ಚರ್ಚಿಸಿದ್ದೆವು. ಆದರೂ ಇನ್ನೊಮ್ಮೆ ನೆನಪಿಸಬೇಕು ಅಂತಾದರೆ ಹಣ್ಣು, ತರಕಾರಿ, ಓಟ್ಸ್‌ನಂತಹ ಸುಲಭವಾಗಿ ಕರಗಬಲ್ಲ ನಾರು, ದ್ವಿದಳ ಧಾನ್ಯ ಮೊದಲಾದವುಗಳಲ್ಲಿ ದೇಹಕ್ಕೆ ಅಗತ್ಯವಿರುವ ಒಳ್ಳೆಯ ಕೊಲೆಸ್ಟರಾಲ್ ಹೆಚ್ಚಿಸಿ, ಕೆಟ್ಟ ಕೊಲೆಸ್ಟರಾಲ್ ಕಡಿಮೆ ಮಾಡುವ ಗುಣ ಇರುತ್ತದೆ. ಕೊಬ್ಬಿನ ಪದಾರ್ಥಗಳನ್ನು ಅತಿಯಾಗಿ ತಿನ್ನದೇ ಇರುವುದು ವಾಸಿ. ಕೆನೆರಹಿತ ಹಾಲು ಕುಡಿದರೆ ತೊಂದರೆ ಏನಿಲ್ಲ. ಮೊನೊಸ್ಯಾಚುರೇಟೆಡ್ ಫ್ಯಾಟ್ ಇರುವ ಎಣ್ಣೆಗಳನ್ನು ಅಡುಗೆಗೆ ಬಳಸುವುದು ಉತ್ತಮ.
ಕೊಲೆಸ್ಟರಾಲ್ ಬಗ್ಗೆ ಕೊಂಚ ಗಮನ ಹರಿಸಿದರೆ ಆರೋಗ್ಯದ ವಿಚಾರದಲ್ಲಿ ದುಪ್ಪಟ್ಟು ಲಾಭ ಮಾಡಿಕೊಳ್ಳಬಹುದು ಅಲ್ಲವೆ?

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement