ಬೆಚ್ಚಗಿರಲಿ ಹಸುಗೂಸು
'ಹೊಸ್ತಲ ಹುಣ್ಣಿಮೆ ಮುಂದ ಹೊಸಲಿ ಸತೇಕ ನಡಗತ್ತಂತ. ಅಂಥ ಚಳಿಗಾಲ್ದಾಗ ಹನುಮವ್ವ ಹಡದ್ಲು. ದಿನಾ ತುಂಬಿದ್ದಿಲ್ಲ. ಕೂಸ ಬಟ್ಟಿನ ಗಾತ್ರ ಇತ್ತು. ಅಂಗೈಯಾಗ ಜೀವಾ ಹಿಡಕೊಂಡ ಜ್ವಾಪಾನ ಮಾಡಿದ್ಲು. ಸಂಜೀನ್ಯಾಗ ಕುಳ್ಳಬೆಂಕಿ ಕುಪ್ಪಡ್ಗಿ ಕಾಸ್ಗೊಂತಿದ್ಲು, ನಡರಾತ್ರಿಗೆ ಗದಗುಟ್ಟ ನಡುಗುವಂತ ಥಂಡಿ. ಒಂದೆರಡ ದಿನಾ ಕಿರಿಕಿರಿ ಹಚ್ತು. ನೆದರಾಗಿರಬೇಕಂತ ದೃಷ್ಟಿ ತಗದ ಒಗದ್ಲು. ಹೊಟ್ಟೆನೂಸಿ ಹಿಂಗಾಗತಿರಬೇಕು.....ಕಾಲ್ದುಳಿ ಆಗಿರಬೇಕು ಅಂತೆಲ್ಲಾ ತಿಳ್ಕಂಡು ಮಂದಿ ಹೇಳಿದ್ದನ್ನೆಲ್ಲಾ ಮಾಡಿದ್ಲು. ಕೂಸು ಅಳುದನ್ನ ನಿಲ್ಲಿಸ್ತು. ಆದರ ಬೆಳಗ್ಗೆ ಎದ್ದ ಹಾಲ ಕುಡಸಾಕ ಹನುಮವ್ವ ಹಾತೊರ್ದರ ಕೂಸ ಸುಂದಾಗಿ ಮಲೀನ ಹಿಡೀಲಿಲ್ಲ. ಗಾಬರಾದ್ಲು. ಇದ್ದುರನ್ನ ಡಾಕ್ಟರ ಹತ್ರ ಅಡರಾಸಿ ತಗೊಂಡ ಹೋದ್ಲು. ಡಾಕ್ಟರ ತಪಾಸಣೆ ಮಾಡಿ ದೊಡ್ಡ ದವಾಖಾನೆಗೆ ಹೋಗ್ರಿ ಅಂದ್ರು. ಅಲ್ಲಿ ಡಾಕ್ಟರೆಲ್ಲಾ ಹಣಿಕೋದ ಮಿಣಿ ಹರದ್ರೂ ಕೂಸ ಉಳಿಲಿಲ್ಲ. ಎಲ್ಲ ಮಿಕ್ಕಿದ ಮ್ಯಾಗ ಇಲ್ಲಿಗೆ ಬಂದ್ರ ನಾವರ, ಏನ್ಮಾಡುನ್ಬೇ ಅಂದ್ರು...'
ಹೀಗೆ ಸದ್ದಿಲ್ಲದೇ ಸಾಯುವ ಮಕ್ಕಳೇ ಹೈಪೋಥರ್ಮಿಯಾ (ಕಡಿಮೆ ಉಷ್ಣಾಂಶ)ಕ್ಕೆ ತುತ್ತಾದ ನಿರ್ಭಾಗ್ಯರು.
ಪರಿಸರದಲ್ಲಿಯ ಉಷ್ಣಾಂಶದ ಏರುಪೇರುಗಳಿಗೆ ಮಗು ಸದಾ ಹೊಂದಿಕೊಳ್ಳುವುದು, ಉಷ್ಣಾಂಶ ನಿಯಂತ್ರಣ ಕೇಂದ್ರದ ಶ್ರಮವು ಕಡಿಮೆ ತೂಕದ ಮಕ್ಕಳಲ್ಲಿ ಸಾರ್ಥಕತೆ ಪಡೆಯುವಲ್ಲಿ ವಿಫಲವಾಗುವುದರಿಂದ ಕಡಿಮೆ ಉಷ್ಣಾಂಶ (ಹೈಪೋಥರ್ಮಿಯಾ) ಸೃಷ್ಟಿಸುವ ತೊಡಕು ತೊಂದರೆಗಳ ಸುಳಿಯಲ್ಲಿ ಗಿರಕಿ ಹೊಡೆಯುವವರು ಹೊರಬರಲು ಹವಣಿಸಿ ಹೆಣವಾಗುವರು.
ಹುಟ್ಟುವ ಮೊದಲು
ಹವಾನಿಯಂತ್ರಕ ಕೋಣೆಯಂತಿರುವ ಗರ್ಭಕೋಶದಲ್ಲಿ ಕೂಸು ಬೆಚ್ಚಗಿರುತ್ತದೆ. ಇಂಥ ಬೆಚ್ಚಗಿನ, ಐಷಾರಾಮಿನ ಪರಿಸರದಲ್ಲಿದ್ದರೂ, ಕೂಸು ಸದಾ ಹೊರಬರಲು ಹವಣಿಸುತ್ತಿರುತ್ತದೆ. ಹೊರಗೆ ಬಂದಾಗ ತಣ್ಣನೆಯ ವಾತಾವರಣದಿಂದ ತಲ್ಲಣಗೊಳ್ಳುತ್ತದೆ.
ಮಗು ತಣ್ಣನೆ ಪರಿಸರಕ್ಕೆ ಬಂದಾಕ್ಷಣ ವಿಲಿವಿಲಿ ಒದ್ದಾಡುತ್ತದೆ. ಬಿಟ್ಟೂ ಬಿಡದೆ ಅಳಲು ಪ್ರಾರಂಭಿಸುತ್ತದೆ. ಮೈ ಗುಗ್ಗರಿಗಟ್ಟುತ್ತದೆ. ಈ ಎಲ್ಲ ಚಟುವಟಿಕೆಗಳಿಂದ ಶರೀರದಲ್ಲಿ ಶಾಖೋತ್ಪಾದನೆ ಹೆಚ್ಚುತ್ತಾದರೂ, ಇದೇ ಶಾಖೋತ್ಪಾದನೆಯ ಮೂಲ ಎಂದು ಭಾವಿಸಬಾರದು. ಕಾರಣ ಮಗು ಕಿರಿಕಿರಿ ಮಾಡುತ್ತಿದ್ದರೆ, ಅದಕ್ಕೆ ಕಾಯಿಲೆ ಆಗಿದೆ ಎಂದು ಭಾವಿಸದೇ, ಅದನ್ನು ಬೆಚ್ಚಗಿಡಲು ತಾಯಂದಿರು ಯತ್ನಿಸಬೇಕು. ಬೆಚ್ಚನೆಯ ಹಿತಕರ ವಾತಾವರಣದಿಂದ ಮಗು ಶಾಂತವಾಗಿ ನಿದ್ರಿಸುತ್ತದೆ.
ಉಷ್ಣ ಉತ್ಪಾದನೆ
ಹಸುಗೂಸಿನ ಕಂದುಕೊಬ್ಬು ಉಷ್ಣ ಉತ್ಪಾದನೆಯ ಮುಖ್ಯ ಮೂಲವಾಗಿರುತ್ತದೆ. ಗರ್ಭಾವಧಿಯ ಕೊನೆಯ ಮೂರು ತಿಂಗಳಲ್ಲಿ ಕಂದುಕೊಬ್ಬು ಶೇಖರಗೊಳ್ಳುತ್ತದೆ. ಇದು ಕತ್ತಿನ ಹಿಂಭಾಗ, ಮುಂದೆ ಎಲುಬುಗಳ ಮಧ್ಯದಲ್ಲಿ, ಕಂಕುಳು, ಸೊಂಟದ ಸುತ್ತ, ಮೂತ್ರಪಿಂಡಗಳ ಹೊರಮೈಯಲ್ಲಿ ಹೇರಳವಾಗಿರುತ್ತದೆ. ಸಂಗ್ರಹಗೊಂಡ ಕಂದುಕೊಬ್ಬಿನ ಪ್ರಮಾಣ ಹುಟ್ಟಿದಾಗಿನ ತೂಕದೊಡನೆ ಸಂಬಂಧ ಹೊಂದಿರುತ್ತದೆ. ತೂಕ ಹೆಚ್ಚಿದ ಮಕ್ಕಳಲ್ಲಿ ಇದು ಹೇರಳವಾಗಿರುತ್ತದೆ. ಅದಕ್ಕೆ ಕಡಿಮೆ ತೂಕದ ಮಕ್ಕಳು ಉಷ್ಣಾಂಶ ಸಂಬಂಧಿಸಿದ ಏರುಪೇರುಗಳಿಗೆ ಬಲಿಯಾಗುವುದು ಸಾಮಾನ್ಯ.
ಮಗುವಿನ ಚರ್ಮದಡಿಯಲ್ಲಿ ನರತಂತುಗಳ ಜಾಲ ಹರಡಿರುತ್ತದೆ. ಚರ್ಮ ತಂಪಿಗೆ ಒಡ್ಡಿದಾಗ ಗುಗ್ಗರಗಟ್ಟುತ್ತದೆ. ನರತಂತುಗಳು ಚುರುಕುಗೊಳ್ಳುತ್ತವೆ. ತಂಪಿನ ಅರಿವನ್ನು ಹೊತ್ತ ನರಗಳ ಮೂಲಕ ವೇಗವಾಗಿ ಸಾಗಿ ಉಷ್ಣ ನಿಯಂತ್ರಣ ಕೇಂದ್ರಕ್ಕೆ ಸಂದೇಶ ತಲುಪಿಸುತ್ತವೆ. ಉಷ್ಣ ನಿಯಂತ್ರಣ ಕೇಂದ್ರ ಮಿದುಳಿನ ಮೂರನೇ ವೆಂಟ್ರಿಕಲ್ ಗೋಡೆಗಳ ಸಮೀಪದಲ್ಲಿ ಹೈಪೋಥಲಮಸ್ದ ಮುಂಭಾಗದಲ್ಲಿ ನೆಲೆಸಿರುತ್ತವೆ. ಈ ಕೇಂದ್ರ ಹೊತ್ತು ತಂದ ಸಂದೇಶವನ್ನು ತಕ್ಷಣ ವಿಶ್ಲೇಷಿಸುತ್ತವೆ. ತುರ್ತು ಕ್ರಮ ತೆಗೆದುಕೊಳ್ಳಲು ನಿಶ್ಚಯಿಸುತ್ತದೆ. ಆ ಕುರಿತು ಆಜ್ಞೆಯನ್ನು ನರಗಳ ಮುಲಕ ರವಾನಿಸುತ್ತದೆ.
ಸ್ಥಳೀಯವಾಗಿ ನಾರ್ ಎಡ್ರಿನಾಲಿನ್ ಬಿಡುಗಡೆಯಾಗುತ್ತದೆ. ಇದು ಕಂದುಕೊಬ್ಬಿನ ಮೇಲೆ ದಾಳಿ ಮಾಡುತ್ತದೆ. ಉತ್ಕರ್ಷಣೆಗೆ ನಾಂದಿ ಹಾಡುತ್ತದೆ. ಪರಿಣಾಮವಾಗಿ ಟ್ರೈಗ್ಲಿಸರೈಡುಗಳು, ಗ್ಲಿಸರಾಲ್ ಮತ್ತು ಕೊಬ್ಬಿನಾಮ್ಲ ಮಾರ್ಪಾಡಾಗುವುವು. ಇದರಿಂದ ರಕ್ತದಲ್ಲಿ ಗ್ಲಿಸರಾಲ್ ಪ್ರಮಾಣ ಹೆಚ್ಚುತ್ತದೆ. ಕೊಬ್ಬಿನಾಮ್ಲಗಳು ಉಷ್ಣ ಉತ್ಪಾದನೆಯಲ್ಲಿ ಉಪಯೋಗಿಸಲ್ಪಡುತ್ತವೆ. ಉತ್ಪಾದನೆಗೊಂಡ ಶಾಖ ರಕ್ತ ಸಂಚಾರದ ದೇಹದ ವಿವಿಧ ಭಾಗಗಳಿಗೆ ಸರಬರಾಜುಗೊಳ್ಳುತ್ತದೆ. ಹೀಗಾಗಿ ಮಗುವಿನ ದೇಹ ಬೆಚ್ಚಗಾಗುತ್ತದೆ. ಈ ಪ್ರಕ್ರಿಯೆ ಸಾಂಗವಾಗಿ ಸಾಗಲು ಹೆಚ್ಚಿನ ಆಮ್ಲಜನಕ ಪೂರೈಕೆ ಅಗತ್ಯ.
ಪರಿಣಾಮಕಾರಿಯಾಗಿ ಚಯಾಪಚಯ ಶಾಖೋತ್ಪಾದನೆಯ ಸಮರ್ಪಕ ಕಾರ್ಯ ನಿರ್ವಹಣೆಗೆ ಕೇಂದ್ರ ನರಮಂಡಲ, ಅದಕ್ಕೆ ಹೋಗುವ ಮತ್ತು ಅಲ್ಲಿಂದ ಹೊರಡುವ ನರಗಳ, ನರತಂತುಗಳ ಹೊಂದಾಣಿಕೆ, ಕಂದುಕೊಬ್ಬಿನ ಶೇಖರಣೆ, ಉತ್ಕರ್ಷಣಾ ಕ್ರಿಯೆಗೆ ಬೇಕಾಗುವ ಆಮ್ಲಜನಕ, ಗ್ಲೂಕೋಸ್ ಹೇರಳವಾಗಿ ಲಭ್ಯವಿರಬೇಕು. ಎಲ್ಲ ಕ್ರಿಯೆಗಳೂ ಒಂದಕ್ಕೊಂದು ಪೂರಕವಾಗಿ, ಪೋಷಕವಾಗಿ, ಪರಿಪೂರಕವಾಗಿ ಕಾರ್ಯ ನಿರ್ವಹಿಸಬೇಕು.
ಲಕ್ಷಣಗಳೇನು?
ತಂಪಿಗೆ ತುತ್ತಾದ ಮಗು ಕಿರಿಕಿರಿ ಮಾಡುತ್ತದೆ., ಹಾಲು ಕುಡಿಯುವುದಿಲ್ಲ.
ಕೈಕಾಲು ಚಡಪಡಿಸುತ್ತಾ ಅಳುತ್ತಿರುತ್ತದೆ. ಈ ಕ್ರಿಯೆಯಿಂದ ಶಾಖೋತ್ಪಾದನೆ ಹೆಚ್ಚುತ್ತದೆ. ಈ ಹಂತದಲ್ಲಿ ಗಮನ ಹರಿಸದಿದ್ದರೆ ಮಗು ಚಟುವಟಿಕೆ ರಹಿತವಾಗುವುದು.
ಪ್ರಮುಖ ಕೇಂದ್ರಗಳ ಕಾರ್ಯಕ್ಷಮತೆ ಕುಗ್ಗುವುದು.
ಹೃದಯದ ಬಡಿತ, ಉಸಿರಾಟದ ಪ್ರಮಾಣದಲ್ಲಿ ಇಳಿಮುಖ ಕಂಡುಬರುವುದು.
ತೂಕ ಹೆಚ್ಚುವುದಿಲ್ಲ. ಬೌದ್ಧಿಕ ಬೆಳವಣಿಗೆಯೂ ಕುಂಠಿತಗೊಳ್ಳುವುದು.
ಮಗುವಿನಲ್ಲಿ ರೋಗ ಪ್ರತಿರೋಧಕ ಶಕ್ತಿ ಕಡಿಮೆಯಾಗಿ, ನಂಜಿನ ನೆರಳಲ್ಲಿಯೇ ನರಳುತ್ತದೆ.
ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಬಹುದು. ತಂಪಿನಿಂದ ತತ್ತರಿಸುವ ಮಗುವಿನ ಸುತ್ತ ಸೋಂಕುಗಳು ಗಸ್ತು ಹೊಡೆಯುವುವು.
ಮಗು ತಂಪಿಗೆ ಮೈಯೊಡ್ಡಿದಾಗ ಹೆಚ್ಚು ಆಮ್ಲಜನಕ ಮತ್ತು ದೇಹದಲ್ಲಿಯ ಗ್ಲೂಕೋಸ್ ಬಳಸಲ್ಪಡುವುದು. ಪರಿಣಾಮವಾಗಿ ಇವುಗಳ ಕುಗ್ಗುವಿಕೆಯ ಕರಿನೆರಳು ದಟ್ಟವಾಗುವುದು. ಕಂದುಕೊಬ್ಬಿನ ಕರಗುವಿಕೆಯಿಂದ ರಕ್ತದಲ್ಲಿ ಗ್ಲಿಸರಾಲ್ ಮತ್ತು ಕೊಬ್ಬಿನಾಮ್ಲಗಳ ಪ್ರಮಾಣ ಗಮನಾರ್ಹವಾಗಿ ಏರುವುದು.
ವಾತಾವರಣದಲ್ಲಿ ಅಲ್ಪಸ್ವಲ್ಪ ಉಷ್ಣಾಂಶದ ವೈಪರೀತ್ಯಗಳು ತಲೆದೋರಿದಾಗ, ಕಡಿಮೆ ಆಮ್ಲಜನಕವನ್ನು ಬಳಸಿಕೊಂಡು ದೇಹದ ಉಷ್ಣಾಂಶವನ್ನು ಸಾಮಾನ್ಯ ಸ್ಥಿತಿಯಲ್ಲಿ ಮಗು ಇಟ್ಟುಕೊಳ್ಳುವುದು. ಈ ಪರಿಮಿತಿಯ ವಲಯಕ್ಕೆ ಅಹ್ಲಾದಕರ ಉಷ್ಣಾಂಶ ವಲಯ ಎನ್ನುವರು. ಈ ಉಷ್ಣಾಂಶ ಮಗುವಿನ ದೈಹಿಕ ಬೆಳವಣಿಗೆಗೆ ಅತ್ಯಂತ ಸೂಕ್ತ. ಈ ಪರಿಮಿತಿಯ ಮಿತಿಗಿಂತ ಉಷ್ಣಾಂಶ ತಗ್ಗಿದಾಗ ಮಗು ಹೆಚ್ಚು ಆಮ್ಲಜನಕವನ್ನು ಉಪಯೋಗಿಸಿ, ಹೆಚ್ಚು ಶಾಖೋತ್ಪತ್ತಿ ಮಾಡುವುದು. ವಾತಾವರಣದ ಉಷ್ಣಾಂಶ 2 ಡಿಗ್ರಿ ಸೆಂ.ಕಡಿಮೆಯಾದರೂ, ಮಗು ಸಾಮಾನ್ಯಕ್ಕಿಂತ ಶೇ.25ರಷ್ಟು ಹೆಚ್ಚಿನ ಶಾಖ ಉತ್ಪತ್ತಿ ಮಾಡಬೇಕಾಗುತ್ತದೆ. ಆಗ ವಾತಾವರಣದಲ್ಲಿಯ ತಂಪು ಮಗುವಿನ ಪ್ರಕ್ರಿಯೆಗಳ ಮೇಲೆ ಎಂಥ ಹೊರೆಯನ್ನು ಹೇರುವುದು ಎಂಬುದು ಯಾರಿಗಾದರೂ ಅರ್ಥವಾದೀತು.
ದೇಹದ ಉಷ್ಣಾಂಶ ಕಡಿಮೆಯಾದಲ್ಲಿ
ಮಗುವಿನ ದೇಹದ ಉಷ್ಣಾಂಶ 35 ಡಿಗ್ರಿ ಸೆಂ.ಗಿಂತ ಕಡಿಮೆಯಾದಲ್ಲಿ ಅದಕ್ಕೆ ಹೈಪೋಥರ್ಮಿಯಾ ಎನ್ನುತ್ತಾರೆ. ತಣ್ಣನೆಯ ಪರಿಸರ, ಹಸಿಮೈ ಹಸುಗೂಸು, ಬೆತ್ತಲ ಮೈ ಮಗು, ಮಗುವಿಗೆ ಹಾಸಲು, ಹೊದಿಸಲು ಬಳಸುವ ಹಸಿ ಹಾಸಿಗೆ, ಹೊದಿಕೆಗಳು, ಕೆಲವು ಚಿಕಿತ್ಸೆ, ಶಸ್ತ್ರಕ್ರಿಯೆಗಳು ಹೈಪೋಥರ್ಮಿಯಾಕ್ಕೆ ಎಡೆ ಮಾಡಿಕೊಡುತ್ತದೆ.
ಶಾರೀರಿಕ ವಿಸ್ತೀರ್ಣ (ಬಾಡಿ ಸರ್ಫೇಸ್ ಏರಿಯಾ)ದ ಹೆಚ್ಚಳ, ಕಡಿಮೆ ಕೊಬ್ಬಿನ ಪ್ರಮಾಣ, ಮುದ್ದೆಯಾಗಿ ಮಲಗದೇ ಇರುವುದು, ಶಕ್ತಿರಹಿತ ಮಾಂಸ ಖಂಡಗಳು, ಕಡಿಮೆ ತೂಕದ ಮಕ್ಕಳಲ್ಲಿ ಕಂಡುಬರುತ್ತವೆ. ಇವು ದೇಹದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ.
ದಿನ ತುಂಬಿದ ಮಕ್ಕಳಲ್ಲಿ ಕಾಣುವ ಕಂದುಕೊಬ್ಬಿನ ಕೊರತೆ, ಕೇಂದ್ರ ನರಮಂಡಲಕ್ಕೆ ಆದ ಪೆಟ್ಟು ಅಥವಾ ಹಾನಿ, ನರತಂತು, ನರ, ನರಮಂಡಲಗಳ ನಡುವಿನ ಹದಗೆಟ್ಟ ಹೊಂದಾಣಿಕೆ, ಉಸಿರುಗಟ್ಟಿ ಹುಟ್ಟುವಿಕೆ (ಬರ್ತ್ ಆಸಫಿಕ್ಸಿಯಾ) ರಕ್ತದಲ್ಲಿಯ ಕುಗ್ಗಿದ ಸಕ್ಕರೆ ಪ್ರಮಾಣಗಳು ಮಗುವಿನ ಅಂತರಾಳದಲ್ಲಿ ನಡೆಯುವ ಶಾಖೋತ್ಪಾದನೆ ಕ್ರಿಯೆಗೆ ಅಡ್ಡಿ ಉಂಟು ಮಾಡುತ್ತದೆ. ಹೀಗಾಗಿ ಹೈಪೊಥರ್ಮಿಯಾದಿಂದ ಮಗು ತತ್ತರಿಸುತ್ತದೆ.
ಕಂದನನ್ನು ಬೆಚ್ಚಗಿಡೋದು ಹೇಗೆ?
ಉಷ್ಣ ವಿಕಿರಣ ವ್ಯವಸ್ಥೆ ಹೊಂದಿದ ತಟ್ಟೆಯಲ್ಲಿ ಅಥವಾ ಪೂರ್ವಭಾವಿಯಾಗಿ ಬೆಚ್ಚಗೆ ಮಾಡಿದ ತಟ್ಟೆಯಲ್ಲಿ ಹೆರಿಗೆಯಾದ ತಕ್ಷಣ ಮಗುವನ್ನು ಮಲಗಿಸಬೇಕು. ಮಗುವಿನ ಮೈಯನ್ನು ಬೇಗ ಒರೆಸಬೇಕು. ಬೆಚ್ಚಗಿನ ಹೊದಿಕೆ ಹೊದಿಸಬೇಕು. ಮಗುವಿನ ದೇಹದ ಉಷ್ಣಾಂಶ ಸ್ಥಿಮಿತಗೊಂಡ ಮೇಲೆ 12 ರಿಂದ 24 ಗಂಟೆಗಳ ನಂತರ ಮಗುವಿಗೆ ಮೊದಲ ಸ್ನಾನ ಮಾಡಿಸಬೇಕು. ಕಡಿಮೆ ತೂಕದ ಮಕ್ಕಳನ್ನು ಬೇಗನೆ ಬೆಚ್ಚಗಿನ ವಾತಾವರಣ ಸೃಷ್ಟಿಸುವ ಇನ್ಕ್ಯೂಬೆಟರ್ಗೆ ಸ್ಥಳಾಂತರಿಸಬೇಕು.
ಬಾಂಧವ್ಯದ ಬಂಧನ
ಮನೆಯಲ್ಲಿ ಅಥವಾ ವಾರ್ಡ್ನಲ್ಲಿರುವಾಗ ಮಗು ಯಾವಾಗಲೂ ತಾಯಿಯ ಮಗ್ಗುಲಲ್ಲೇ ಮಲಗಿರಬೇಕು. ತಾಯಿಯ ಬೆಚ್ಚನೆಯ ದೇಹ ನೈಸರ್ಗಿಕ ಇನ್ಕ್ಯೂಬೆಟರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಮಗುವಿಗೆ ಉಲ್ಲನ್ ಬಟ್ಟೆಯನ್ನು ತೊಡಿಸಬೇಕು. ತಲೆಗೆ ಕುಂಚಿಗೆ, ಕುಲಾಯಿ ಕಟ್ಟಬೇಕು. ಪಾದಗಳನ್ನು ಬೆಚ್ಚಗಿಡಲು ಕಾಲುಚೀಲಗಳನ್ನು ಹಾಕಬೇಕು. ಪರಿಸರದ ತಂಪು ಹೆಚ್ಚಿದಾಗ, ಸ್ನಾನ ಮಾಡಿಸದೇ ಬಿಸಿನೀರಿನಲ್ಲಿ ಅದ್ದಿದ ಅರಿವೆಯಿಂದ ಮೈ ಒರೆಸಬೇಕು. ಚಳಿಗಾಲ ತೀವ್ರವಾಗಿದ್ದಾಗ, ಹವೆಯನ್ನು ಬೆಚ್ಚಗಿಡಲು ಹೀಟರ್ಗಳನ್ನು ಬಳಸಬೇಕು.
ಶಿಶುಗಳನ್ನು ಜೋಪಾನ ಮಾಡುವ ಸ್ಥಳದ ಉಷ್ಣಾಂಶ 30 ಡಿಗ್ರಿ ಸೆಂ. ಮಟ್ಟದಲ್ಲಿರಬೇಕು. ಮಗು ಚಿಕಿತ್ಸೆಗೆಂದು ಆಸ್ಪತ್ರೆಗೆ ಸೇರಿಕೊಂಡ ತಕ್ಷಣ ಮಗುವಿನ ಉಷ್ಣಾಂಶವನ್ನು ಉಷ್ಣತಾಮಾಪಕದ ಮೂಲಕ ನೋಡಿ ದಾಖಲಿಸಬೇಕು. 1800 ಗ್ರಾಂ.ಗಿಂತ ಕಡಿಮೆ ತೂಕದ ಹಸುಗೂಸುಗಳನ್ನು ಹೆಚ್ಚು ಮುತುವರ್ಜಿಯಿಂದ ನೋಡಿಕೊಳ್ಳಬೇಕು. ಇಂಥ ಮಕ್ಕಳಿಗೆ ಸ್ನಾನ ಮಾಡಿಸಬಾರದು.
ನಾವು ಆಚರಿಸುವ ಸಂಪ್ರದಾಯಗಳು ಮಗುವಿನ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರದಂತೆ ನೋಡಿಕೊಳ್ಳುವುದು ಅತ್ಯಂತ ಅವಶ್ಯಕ.
= ಡಾ. ಕರವೀರಪ್ರಭು ಕ್ಯಾಲಕೊಂಡ