ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬ್ರಾಹ್ಮಣತ್ವಕ್ಕೆ ಚಾಲನೆ

Mainashree
Updated On : 10 Jan 2014, 3:54 am

ಶಿವರಾತ್ರಿ ಮಹೋತ್ಸವ ಮತ್ತು ಶ್ರೀರಾಮಕೃಷ್ಣರ ಜಯಂತ್ಯುತ್ಸವ ಇವೆರಡೂ ರಾಮಕೃಷ್ಣಮಠದಲ್ಲಿ ಅತ್ಯಂತ ಸಂಭ್ರಮದಿಂದ ನಡೆಯುವ ಉತ್ಸವಗಳು. ಇವೆರಡೂ ಜತೆಯಾಗಿ ಬರುವುದರಿಂದ ಮಠದಲ್ಲಿ ವಿಶೇಷ ಉತ್ಸಾಹದ ವಾತಾವರಣ ದಟ್ಟವಾಗಿತ್ತು.
ಶ್ರೀರಾಮಕೃಷ್ಣರ ಜಯಂತಿಯ ದಿನ ಬೆಳಗ್ಗೆ ಸ್ವಾಮೀಜಿ ಸುಮಾರು ನೂರು ಯಜ್ಞೋಪವೀತಗಳನ್ನು ತರಿಸಿದರು. ಸ್ವಾಮೀಜಿ ಅಂದು ರಾಮಕೃಷ್ಣರ ಗೃಹಸ್ಥ ಶಿಷ್ಯರಲ್ಲಿದ್ದ ಕ್ಷತ್ರಿಯರಿಗೂ, ವೈಶ್ಯರಿಗೂ ಯಜ್ಞೋಪವೀತ ಧಾರಣೆ ಮಾಡಿಸಿ, ಗಾಯಿತ್ರಿ ಮಂತ್ರೋಪದೇಶ ನೀಡುವ ಯೋಜನೆ ಹಾಕಿಕೊಂಡಿದ್ದರು. ಈ ಕಾರ್ಯದ ಜವಾಬ್ದಾರಿಯನ್ನು ಶಿಷ್ಯ ಶರಶ್ಚಂದ್ರನಿಗೆ ಒಪ್ಪಿಸುತ್ತಾ ಹೇಳಿದರು, 'ನೋಡು, ಶ್ರೀರಾಮಕೃಷ್ಣ ದೇವರ ಮಕ್ಕಳೆಲ್ಲರೂ ನಿಜಕ್ಕೂ ಬ್ರಾಹ್ಮಣರೇ ಸರಿ. ಅಲ್ಲದೆ ಕ್ಷತ್ರಿಯ ಹಾಗೂ ವೈಶ್ಯರಿಗೆ ಬ್ರಹ್ಮೋಪದೇಶವಾಗ ಬೇಕೆಂದು ಶಾಸ್ತ್ರಗಳು ಹೇಳುತ್ತವೆ. ಇಂದು ಶ್ರೀರಾಮಕೃಷ್ಣರ ಜನ್ಮದಿನ. ಅವರ ನಾಮೋಪದೇಶವನ್ನು ಪಡೆದ ಪ್ರತಿಯೊಬ್ಬರೂ ಪವಿತ್ರರಾಗುತ್ತಾರೆ. ಆದ್ದರಿಂದ ಕ್ಷತ್ರಿಯ-ವೈಶ್ಯ ಶಿಷ್ಯರಿಗೆ ಇಂದು ಗಾಯಿತ್ರಿ ಮಂತ್ರೋಪದೇಶ ಮಾಡು, ಯಜ್ಞೋಪವೀತವನ್ನು ಧಾರಣೆ ಮಾಡಿಸು, ಇವರೆಲ್ಲರನ್ನೂ ಕ್ರಮೇಣ ಬ್ರಾಹ್ಮಣತ್ವಕ್ಕೆ ಏರಿಸಬೇಕು.'
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಇವು ಮೂಲತಃ ಹುಟ್ಟಿನಿಂದ ಪಡೆಯುವಂತಹುದಲ್ಲ. ವ್ಯಕ್ತಿ ಗುಣದಿಂದ, ಸತ್ಕಾರ್ಯಗಳಿಂದ ಗಳಿಸುವಂಥವು. ಸ್ವಾಮೀಜಿ ತಾವು ಯಾವ ನೂತನ ಆದರ್ಶವನ್ನು ಸರ್ವರೂ ಅನುಷ್ಠಾನಕ್ಕೆ ತರುವಂತೆ ಮಾಡಬೇಕೆಂದುಕೊಂಡಿದ್ದರೋ ಅದನ್ನು ಧೀರತೆಯಿಂದ ಮಾಡಿಯೇ ತೋರಿಸುವರು. ಪ್ರತಿಯೊಬ್ಬ ಭಾರತೀಯನನ್ನು ಬ್ರಾಹ್ಮಣತ್ವಕ್ಕೆ ಏರಿಸಬೇಕೆಂಬ ಸ್ವಾಮೀಜಿಯ ಸಂಕಲ್ಪ ನಿಜಕ್ಕೂ ಕ್ರಾಂತಿಕಾರಿಯಾದುದು!

ಆನಂದ ಎಸ್.ಎನ್.
anandsn193@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement