ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಭರ್ತೃಹರಿಯ ವಿಚಿತ್ರ ಚರಿತ್ರ

Mainashree
Updated On : 10 Jan 2014, 3:55 am

ಸಂಸ್ಕೃತ ಸಾಹಿತ್ಯವನ್ನು ತುಸುಮಟ್ಟಿಗೆ ಅರಿತವರಿಗೂ ಭರ್ತೃಹರಿಯ ಹೆಸರು ಚಿರಪರಿಚಿತ. ಆತನ ತ್ರಿಶತಕಗಳು- ಶೃಂಗಾರಶತಕ, ನೀತಿಶತಕ, ವೈರಾಗ್ಯಶತಕ- ಪ್ರಸಿದ್ಧ. ಈತ ರಾಜನೂ ಆಗಿದ್ದ. ಈತನ ಕತೆ, ಮನುಷ್ಯನ ಬದುಕಿನಲ್ಲಿ ಒದಗುವ ಅವಸ್ಥಾಂತರಗಳಿಗೆ ರೂಪಕದಂತಿದೆ.
ಈತ ಉಜ್ಜಯಿನಿಯ ರಾಜನಾಗಿದ್ದ. ಈತನ ತಮ್ಮನೇ ವಿಕ್ರಮಾದಿತ್ಯ. ಭರ್ತೃಹರಿಯ ಯವ್ವನ, ಸುಖಸಂತೋಷಗಳ ಸೂರೆಯಂತಿತ್ತು. ಆತನ ಭೋಗಪ್ರಿಯತೆ ಜನಜನಿತವಾಗಿತ್ತು. ಈತ ಬೇಟೆಗೆ ಹೋದಾಗ, ಹೊಳೆಯ ಪ್ರವಾಹದಲ್ಲಿ ಬಿದ್ದು ಕೊಚ್ಚಿಹೋಗುತ್ತಿದ್ದ ತರುಣಿಯೊಬ್ಬಳನ್ನು ನೋಡಿದ. ಈತನ ಅಪ್ಪಣೆಯಂತೆ, ಈತನ ಸೇನಾಪತಿ ಆಕೆಯನ್ನು ರಕ್ಷಿಸಿದ. ಆಕೆಯ ಹೆಸರು ಪಿಂಗಳ. ಪಿಂಗಳೆಯ ರೂಪಕ್ಕೆ ಮಾರುಹೋದ ಭರ್ತೃಹರಿ, ಆಕೆಯನ್ನೇ ಎರಡನೇ ಮಡದಿಯಾಗಿ ವರಿಸಿದ.
ಆಕೆಯ ರೂಪಲಾವಣ್ಯಗಳಿಂದ ಸಮ್ಮೋಹನಕ್ಕೊಳಗಾಗಿದ್ದ ಭರ್ತೃಹರಿ, ಸದಾ ಪಿಂಗಳೆಯ ಕಾಲಬುಡದಲ್ಲಿರುತ್ತಿದ್ದ. ಆಕೆಗಾಗಿ ಪ್ರತಿದಿನ ಒಂದರಂತೆ ಚಾಟುಕವಿತೆಯೊಂದನ್ನು ರಚಿಸಿ ತಂದು ಕೊಡುತ್ತಿದ್ದನಂತೆ. ಮುಂದೆ ಇದೇ ಶೃಂಗಾರಶತಕ ಎಂದು ಪ್ರಸಿದ್ಧವಾಯಿತು. ಅದರ ಮೊದಲಿನ ಸೂಕ್ತಿ ಹೀಗಿದೆ:
ಶಂಭುಸ್ವಯಂಭುಹರಯೋ ಹರಿಣೇಕ್ಷಣಾನಾಂ
ಯೇನಾಕ್ರಿಯಂತಸತತಂ ಗೃಹಕುಂಭದಾಸಾಃ
ವಾಚಾಮಗೋಚರಚರಿತ್ರವಿಚಿತ್ರಿತಾಯ
ತಸ್ಮೈ ನಮೋ ಭಗವತೇ ಮಕರಧ್ವಜಾಯ
ಮನ್ಮಥನು ಮಾಡುವ ಕೆಲಸಕ್ಕೂ ಆತನ ಮಕರಧ್ವಜಕ್ಕೂ ಸಂಬಂಧವಿದೆ. ಮೊಸಳೆಯಂತೆಯೇ ಆತನೂ ಹಿಡಿದರೆ ಯಾರನ್ನೂ ಬಿಡುವುದಿಲ್ಲ. ಈತನಿಂದಾಗಿ ಬ್ರಹ್ಮನು ತನ್ನ ಮಗಳನ್ನೇ ಮದುವೆಯಾಗಬೇಕಾಯ್ತು. ಈತನಿಂದಾಗಿ ವಿಷ್ಣುವು ಹದಿನಾರು ಸಾವಿರ ಕನ್ನೆಯರನ್ನ ವರಿಸಬೇಕಾಯ್ತು. ಈತನಿಂದಾಗಿ ಶಿವನು ಅರ್ಧನಾರೀಶ್ವರನಾಗಬೇಕಾಯ್ತು. ಇಂಥ ವಿಚಿತ್ರಚರಿತ್ರನಿಗೆ ನಮೋನ್ನಮಃ!
ಮುಂದೆ ಈ ರಾಣಿ ಪಿಂಗಳೆಯೇ ಆತನ ಸಂಪೂರ್ಣ ಪರಿವರ್ತನೆಗೆ ಕಾರಣವಾದದ್ದು ಮಾತ್ರ ಚೋದ್ಯ.

= ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement