ಧಾರಾಳವಾಗಿ ಚಹಾ ಕುಡಿಯಿರಿ
ಪಿತ್ತಗಲ್ಲು ಇರುವುದು ಪತ್ತೆಯಾದ ಬಳಿಕ ಚಹಾ, ಕಾಫಿ ಸೇವಿಸಬೇಕೆ ಬೇಡವೆ? ಆರೋಗ್ಯವಂತರಲ್ಲಿ ಇಂಥ ಪೇಯಗಳಿಂದ ಪಿತ್ತಗಲ್ಲು...
ಪಿತ್ತಗಲ್ಲು ಇರುವುದು ಪತ್ತೆಯಾದ ಬಳಿಕ ಚಹಾ, ಕಾಫಿ ಸೇವಿಸಬೇಕೆ ಬೇಡವೆ? ಆರೋಗ್ಯವಂತರಲ್ಲಿ ಇಂಥ ಪೇಯಗಳಿಂದ ಪಿತ್ತಗಲ್ಲುಗಳ ರಚನೆಗೆ ಕಾರಣ ಆಗುತ್ತವೆಯೆ?
ಈ ಸಂದೇಹವನ್ನು ಬಹಳಷ್ಟು ಓದುಗರು ವ್ಯಕ್ತಪಡಿಸಿದ್ದಾರೆ. ಇದನ್ನು ನಾನು ನಿರೀಕ್ಷಿಸಿದ್ದೆ ಕೂಡ. ಏಕೆಂದರೆ ನಾವು ನಿತ್ಯ ಸೇವಿಸುವ ಪೇಯಗಳಿವು. ಹೀಗಾಗಿ ಇವುಗಳ ವಿಚಾರದಲ್ಲಿ ಕುತೂಹಲ ಸಹಜವೇ.
ಚಹಾ ಸೇವನೆ ವಿಚಾರದಲ್ಲಿ ಯಾವುದೇ ದ್ವಂದ್ವಗಳಿಲ್ಲ. ಚಹಾ ಪಿತ್ತಗಲ್ಲಿನ ರಚನೆಯಾಗುವುದನ್ನು ತಪ್ಪಿಸುತ್ತದೆ. ಅಧಿಕ ಕೊಬ್ಬು ಮತ್ತು ಕೊಲೆಸ್ಟರಾಲ್ನಿಂದ ಪಿತ್ತಗಲ್ಲುಗಳು ರಚನೆಯಾಗುತ್ತವೆ ಎನ್ನುವುದು ನಮಗೆ ಗೊತ್ತಿರುವಂಥದ್ದೇ. ನೀರನ್ನು ಕಡಿಮೆ ಕುಡಿಯುವುದರಿಂದಲೂ ಪಿತ್ತಗಲ್ಲಿನ ಸಾಧ್ಯತೆ ಇರುತ್ತದೆ. ಚಹಾ ಮತ್ತು ನೀರು ಪಿತ್ತಕೋಶದಲ್ಲಿನ ಹೆಚ್ಚುವರಿ ಬೈಲ್ ಅನ್ನು ಹೊರದಬ್ಬುತ್ತವೆ. ಜತೆಗೆ ಪಿತ್ತಕೋಶದಲ್ಲಿ ಯಾವುದೇ ತ್ಯಾಜ್ಯಗಳು ಉಳಿಯದಂತೆಯೂ ನೋಡಿಕೊಳ್ಳುತ್ತವೆ. ಆದ್ದರಿಂದ ಚಹಾ ಸೇವನೆ ಪಿತ್ತಗಲ್ಲಿನ ವಿಷಯದಲ್ಲಿ ಯಾವುದೇ ರೀತಿಯ ತೊಂದರೆ ಉಂಟುಮಾಡುವುದಿಲ್ಲ. ಆದರೆ ದಿನಕ್ಕೆ ಐದಾರು ಸಲ ಚಹಾ ಕುಡಿದರೆ, ತಾಜಾ ಹಾಲು ಬಳಸದೇ ಇದ್ದರೆ ಉದರ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎನ್ನುವುದು ಮನದಲ್ಲಿರಲಿ.
ಕಾಫಿ ವಿಚಾರವಾಗಿ ದ್ವಂದ್ವಗಳಿವೆ. ಎರಡೂ ರೀತಿಯ ವಾದಗಳು ಇರುವುದು ಇದಕ್ಕೆ ಕಾರಣ. 1999ರಲ್ಲಿ 'ದಿ ಜರ್ನಲ್ ಆಫ್ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್' ಪ್ರಕಟಿಸಿದ ವರದಿ ಕೆಫಿನೇಟೆಡ್ ಕಾಫಿಯಿಂದ ಪಿತ್ತಗಲ್ಲಿನ ರಚನೆಯಾಗುವುದಿಲ್ಲ ಎಂದು ಘೋಷಿಸಿತು. ಸಂಶೋಧಕರು 10 ವರ್ಷಗಳಲ್ಲಿ, ದಿನಕ್ಕೆ ನಾಲ್ಕು ಕಪ್ನಷ್ಟು ಕಾಫಿ ಕುಡಿಯುವ 46 ಸಾವಿರ ಜನರ ಪಿತ್ತಕೋಶದ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದರು. ಅಂತಿಮಾವಾ ಅವರು ನೀಡಿದ ಶಿಫಾರಸು ಎಂದರೆ ಕಾಫಿಗೂ, ಪಿತ್ತಗಲ್ಲಿಗೂ ಸಂಬಂಧವಿಲ್ಲ ಎನ್ನುವುದು. 'ಗ್ಯಾಸ್ಟ್ರೊಎಂಟೆರಾಲಜಿ'ಯಲ್ಲಿ 2002ರಲ್ಲಿ ಪ್ರಕಟವಾದ ಸಂಶೋಧನಾ ವರದಿ ಕೂಡ ಇದೇ ಅಭಿಪ್ರಾಯ ನೀಡಿತು. ಆದರೆ, ಡಚ್ಚರು ಇತ್ತೀಚೆಗೆ ನಡೆಸಿದ ಸಂಶೋಧನೆ ಪ್ರಕಾರ ಪಿತ್ತಕೋಶಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ಕಾಫಿಯಿಂದ ದೂರ ಇರುವುದು ಒಳಿತು! ಕಾಫಿಯು ಕೊಲೆಕ್ಟೊಕೆನಿನ್ ಎನ್ನುವ ಹಾರ್ಮೋನ್ನ ಅಧಿಕ ಸ್ರಾವಣಕ್ಕೆ ಉತ್ತೇಜನ ನೀಡುವ ಮೂಲಕ ತೊಂದರೆ ಉಂಟುಮಾಡುತ್ತದೆ. ಕಾಫಿ ವಿಚಾರದಲ್ಲಿನ ಒಮ್ಮತದ ಅಭಿಪ್ರಾಯ ಎಂದರೆ ಕೆಫೀನ್ ಇಲ್ಲದ ಕಾಫಿ ಪಿತ್ತಕೋಶಕ್ಕೆ ತೊಂದರೆ ಉಂಟು ಮಾಡುವುದು ನಿಜ. ನಿಮ್ಮ ದೇಹ ಪ್ರಕೃತಿ ನೋಡಿಕೊಂಡು, ಅಂದರೆ ಪಿತ್ತಗಲ್ಲಿನ ಸಮಸ್ಯೆ ಇರುವುದು ಗೊತ್ತಾದ ಬಳಿಕ ಕಾಫಿಯಿಂದ ಏನೂ ತೊಂದರೆ ಆಗುತ್ತಿಲ್ಲ ಅಂತ ನಿಮಗೆ ಅನ್ನಿಸಿದರೆ ಕಾಫಿ ಕುಡಿಯಬಹುದು. ಆದರೆ ಅತಿಯಾದ ಕಾಫಿ ಸೇವನೆಯಿಂದ ದೂರ ಇರುವುದು ಉತ್ತಮ.
(ಮುಂದುವರಿಯುವುದು)
ಮೊ.9900113699 (ಎಸ್ಎಂಎಸ್ಗೆ ಮಾತ್ರ)
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com