ಬೈಟುಕಾಫಿ

ಬಿಂಗ್ ಲಾಂಗ್

ಚೀನಾದಲ್ಲಿ ಬರೀ ಅನ್ನ ನುಂಗುತ್ತ, ನಾಲ್ಕು ದಿನವಾಗಿತ್ತು. ಪೋಷಕಾಂಶದ ಕೊರತೆಯಿಂದ ಬಾಯಿ ಒಡೆಯಲು ಶುರುವಾಗಿತ್ತು. 'ಸ್ಪಿರುಲಿನಾ...

ಚೀನಾದಲ್ಲಿ ಬರೀ ಅನ್ನ ನುಂಗುತ್ತ, ನಾಲ್ಕು ದಿನವಾಗಿತ್ತು. ಪೋಷಕಾಂಶದ ಕೊರತೆಯಿಂದ ಬಾಯಿ ಒಡೆಯಲು ಶುರುವಾಗಿತ್ತು. 'ಸ್ಪಿರುಲಿನಾ ಗುಳಿಗೆಯಲ್ಲಿ ಬಿ ವಿಟಮಿನ್ ಇರುತ್ತೆ, ತಿನ್ನು' ಎಂದು ಮೈಕೆಲ್ ಒತ್ತಾಯಿಸಿದ. ಅದಕ್ಕಾಗಿ ಹುಡುಕಾಟ ಶುರುವಾಯಿತು.
ನಾಲ್ಕಾರು ಅಂಗಡಿ ಹೊಕ್ಕು ಸ್ಪಿರುಲಿನಾ ಕೇಳಿದರೆ ಸಿಗಲಿಲ್ಲ. ಇಬ್ಬರೂ ಚೀನಾಕ್ಕೆ ಹೊಸಬರೇ. ಮೈಕೆಲ್ ಪುಸ್ತಕ ಓದಿ ಕಲಿಯುತ್ತಿದ್ದ ಚೈನೀಸ್ ಭಾಷೆ ಪ್ರಯೋಗ ಮಾಡುತ್ತಿದ್ದ. ಎಲ್ಲೂ ಸ್ಪಿರುಲಿನಾ ಗುಳಿಗೆ ಕೇಳಿದರೆ ಅವರಿಗೆ ಗೊತ್ತೇ ಆಗಲಿಲ್ಲ. ಕೊನೆಗೆ ಬಿ ವಿಟಾಮಿನ್ ಗುಳಿಗೆ ಇದೆಯೋ ಅಂತ ಕೇಳಿದೆವು. ಔಷಧಿ ಅಂಗಡಿ ಹುಡುಗಿ  ಪಟಪಟನೆ ಹತ್ತಾರು ಗುಳಿಗೆ ಆರಿಸಿ ತಂದೇ ಬಿಟ್ಟಳು.
ಅಡಕೆಯಿಂದಲೂ ವಿಟಾಮಿನ್ ಮಾತ್ರೆ!
'ಸ್ಪಿರುಲಿನಾ' ಹುಡುಕುತ್ತಿದ್ದವನಿಗೆ ಕಂಡಿದ್ದು ನನಗೆ ಪರಿಚಿತವಾಗಿದ್ದ 'ಬಿಂಗ್‌ಲಾಂಗ್‌' ಎನ್ನುವ ಚೈನೀಸ್ ಅಕ್ಷರ! ಅಡಿಕೆಯಿಂದಲೂ ಬಿ1 ವಿಟಾಮಿನ್ ಗುಳಿಗೆಗಳೇ?! ನನ್ನ ಪೋಷಕಾಂಶ ಕೊರತೆ ಮರೆತು ಕುತೂಹಲ ಕೆರಳಿತು. ಮೈಕೆಲ್ ಅಚ್ಚರಿಪಟ್ಟು ನೋಡುತ್ತಿದ್ದಂತೆಯೇ ಸ್ಪಿರುಲಿನಾ ಗುಳಿಗೆ ಪಕ್ಕಕ್ಕೆ ಸರಿಸಿ 'ಇದೇ ಇರಲಿ' ಎಂದು 150ಕ್ಕೆ ಎರಡು ಪ್ಯಾಕ್ ಬಿಂಗ್‌ಲಾಂಗ್ ಔಷಧಿ ಖರೀದಿಸಿಯೇ ಬಿಟ್ಟೆ. ಅಡಕೆ ಕವಳದ ಬಗ್ಗೆ ಇನ್ನಿಲ್ಲದ ಅಭಿಮಾನ ಶುರುವಾಗಿತ್ತು. ಈ ವರೆಗೆ ಗೊತ್ತೇ ಇಲ್ಲದಿದ್ದ ನಮ್ಮ 'ಅನ್ನ' ಅಡಿಕೆಯ ಉಪಯೋಗ ಕಂಡು ಹುಮ್ಮಸ್ಸು   ಏರಿತ್ತು.
ಹಿಂತಿರುಗಿ ಬರುವಾಗ ನನ್ನ ಧ್ವನಿ ದೊಡ್ಡದಾಗಿತ್ತು. 'ನೀವು ಏಷ್ಯದ ಪರಂಪರೆಯನ್ನು ಲಘುವಾಗಿ ನೋಡುತ್ತೀರಿ. ಅಡಕೆಯಿಂದ ಬಿ1 ವಿಟಾಮಿನ್ ಗುಳಿಗೆ ತಯಾರಿಸುತ್ತಿದ್ದಾರೆ ಎಂದಾದರೆ, ಸಾವಿರಾರು ವರ್ಷಗಳಿಂದ ನಾವು ಇದನ್ನು ಉಪಯೋಗಿಸುತ್ತಲೇ ಇದ್ದೇವೆ. ಅದರಲ್ಲಿ ಕ್ಯಾಲ್ಸಿಯಂ ಸೇರಿಸುತ್ತೇವೆ, ವಿಟಾಮಿನ್ 'ಬಿ'ಯೂ ಇದೆ ಅಂತಾಯಿತು ' ಅಂತೆಲ್ಲಾ ಕವಳದ ಗುಣಗಾನ ಶುರು ಮಾಡಿದ್ದೆ.
ಮೈಕೆಲ್‌ನ ಮುಖದಲ್ಲಿ ಅಪನಂಬಿಕೆಯೇ ಹೆಚ್ಚಾಗಿತ್ತು. 'ಯಾವುದಕ್ಕೂ ನನ್ನ ಡಿಜಿಟಲ್ ಶಬ್ದಕೋಶ ತರುತ್ತೇನೆ ' ಎಂದು ರೂಮಿಗೆ ಹೋದ. ನಾನು ಭಾರೀ ಖುಷಿಯಲ್ಲಿ, ಊರಲ್ಲಿದ್ದಿದ್ದರೆ, ಒಂದು ಭರ್ಜರಿ ಕವಳ ಹಾಕುತ್ತಿದ್ದೆ ಎಂದುಕೊಂಡೆ. ರೂಮಿಗೆ ಹೋದವನೇ ಎರಡು ಗುಳಿಗೆ ನುಂಗಿದೆ. 'ಅಡಿಕೆಯ ಔಷಧೀಯ ಉಪಯೋಗ ನಮಗೇ ಗೊತ್ತಿಲ್ಲವಲ್ಲ' ಎಂದುಕೊಂಡು ಬೇಸರಿಸಿದೆ. ಅಷ್ಟುಹೊತ್ತಿಗೆ ಮೈಕೆಲ್ ಮರಳಿ ಬಂದ. ಕೈಯಲ್ಲಿ ಡಿಜಿಟಲ್ ಶಬ್ದಕೋಶವಿತ್ತು. ಗುಳಿಗೆಯ ಪ್ಯಾಕೆಟ್ ಎದುರು ಹಿಡಿದು ಒಂದೊಂದಾಗಿ ಓದತೊಡಗಿದೆವು.
400 ಮಿ.ಗ್ರಾಂ. ಗುಳಿಗೆಯಲ್ಲಿ ಅಡಕೆ 4 ಮಿ.ಗ್ರಾಂ. ಹಂದಿಯ ಯಕೃತ್ತಿನ ಭಾಗ 350 ಮಿ.ಗ್ರಾಂ.! ಮೈಕೆಲ್ ಗಹಗಹಿಸಿ ನಗತೊಡಗಿದ. ನನ್ನ ರು. 150 ಕಸದ ಬುಟ್ಟಿಗೆ ಸೇರಿತ್ತು.
ಅದೆಷ್ಟು ಔಷಧಗಳು!
ಆದರೆ ಒಂದು ಹೊಸ ವಿಷಯ ಸ್ಪಷ್ಟವಾಗಿತ್ತು. ಚೀನೀಯರು ಅಡಕೆಯಿಂದ ಸಾಕಷ್ಟು ಔಷಧ ತಯಾರಿಸುತ್ತಾರೆ. ಮರುದಿನದಿಂದ ಚೀನೀ ಅಡಕೆ ಔಷಧ ಬೇಟೆ ಶುರುವಾಯಿತು. ಗೆಳೆಯರಿಂದ ಖಾಲಿ ಕಾಗದದಲ್ಲಿ 'ಬಿಂಗ್‌ಲಾಂಗ್ ಇರುವ ಔಷಧಗಳು' ಎಂದು ಬರೆಸಿಕೊಂಡು ಕೈಯಲ್ಲಿ ಹಿಡಿದು ಹೊರಟೆ.
ಒಂದು ಔಷಧ ಅಂಗಡಿಯವಳಂತೂ ಒಂದು ಬುಟ್ಟಿ ಪ್ಯಾಕೆಟುಗಳನ್ನು ತಂದು ಎದುರು ಸುರಿದಳು. ಬೆಲೆ ಕೇಳಿದೆ. ಆಕೆ ಲೆಕ್ಕ ಮಾಡಿ ಹೇಳಿದ್ದೆಷ್ಟು ಗೊತ್ತೆ? 3200 ಯವಾನ್! ಅಂದರೆ ಇಪ್ಪತ್ತೊಂದು ಸಾವಿರ ರೂಪಾಯಿಗಳು! ಅಷ್ಟು ಹಣ ಸುರಿದರೆ ನಾನು ಊರಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ!
ಏನೇನು ಉಪಯೋಗ?
ವಿಟಾಮಿನ್ ಬಿ1 ಪೂರೈಸುವ ಬಿಂಗ್‌ಲಾಂಗ್ ಸೇರಿಸಿದ ಏಳೆಂಟು ಔಷಧ ನೋಡಿದೆ. ಗುಳಿಗೆಗಳು ಸಾಕಷ್ಟು ಇವೆ. ಇನ್ನುಳಿದ ಅಡಕೆಯುಕ್ತ ಔಷಧಿಗಳು ಹೊಟ್ಟೆಯ ಹುಳು, ಮಲಬದ್ಧತೆ, ಕರುಳು ಸಂಬಂಧಿ ಕಾಯಿಲೆಗಳಿಗೆ ಉಪಯೋಗವಾಗುತ್ತವೆ.
ಚೀನೀ ಭಾಷೆಯಲ್ಲಿ ಗುಳಿಗೆಗೆ ಪಿಯಾನ್, ಕ್ಯಾಪ್ಸೂಲಿಗೆ ವಾಂನ್ ಎಂದು ಹೆಸರು. ರಕ್ತಸಂಚಾರಕ್ಕೆ ಒಂದು ಕಷಾಯ ಇದೆ. ಹೆಸರು 'ಟಾಂಗ್ ಶು'. ಅಡಕೆ ತಿಂದಾಗ ಕೆಲವೊಮ್ಮೆ ಮೈ ಬಿಸಿಯಾಗುವುದಿದೆಯಲ್ಲ. ಬಹುಶಃ ಅದೇ ಗುಣ ಉಪಯೋಗಿಸಿರಬೇಕು! ಆದರೆ ಉಸಿರು ಬಿಗಿ ಹಿಡಿದುಕೊಳ್ಳಿ, ಅದರಲ್ಲಿ ಅಡಕೆಯ ಅರಶಿನ, ಎರೆಹುಳು, ಚಿಪ್ಪುಹಂದಿ ಎಲ್ಲಾ ಸೇರಿರುತ್ತದಂತೆ!
'ಇನ್ನೊಂದು ಪ್ರಮುಖ ಉಪಯೋಗ ಸಿಗರೇಟ್ ಸೇದುವುದನ್ನು ಬಿಡಿಸುವುದಂತೆ. ಇದಕ್ಕೆ ಬೇರೆಯದೇ ವ್ಯವಸ್ಥೆ ಇದೆ. ನೆಗಡಿಯಾದಾಗ ಮೂಗಿನ ಮೂಲಕ ಬಳಸುವ ಇನ್‌ಹೇಲರ್ ಇದೆಯಲ್ಲಾ. ಅಂಥದೇ ಇನ್‌ಹೇಲರ್ ಮೂಲಕ ಅಡಕೆ ಮತ್ತಿತರ ವನಸ್ಪತಿ ಹಾಕಿ, ಸಿಗರೇಟು ಸೇದಬೇಕು ಅನಿಸಿದಾಗಲೆಲ್ಲಾ ಇದರ ಪರಿಮಳ ಸೇದಬೇಕಂತೆ. ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ಸಿಗರೇಟಿನತ್ತ ತಿರುಗಿಯೂ ನೋಡುವುದಿಲ್ಲವಂತೆ! ಹೇಗಿದೆ ಚಿಕಿತ್ಸೆ?
ಇದೇನೂ ಹೊಸತಲ್ಲ ಬಿಡಿ. ನಮ್ಮಲ್ಲೂ ಸಾಕಷ್ಟು ಜನ ಸೇದುವ ಬೀಡಿ ಚಟ ಬಿಡಲು ಕವಳ, ಕವಳ ಬಿಡಲು ಬೇಡಿ ಅಂತ ಕೊಟ್ಟಕೊನೆಗೆ ಎರಡನ್ನೂ ಹಚ್ಚಿಕೊಂಡವರು ಬೇಕಾದಷ್ಟಿದ್ದಾರೆ ಅನ್ನಿ!
ಹೀಗೆ ಸಿಕ್ಕ ಇನ್ನೊಂದು ಉಪಯೋಗ, ಸೊಳ್ಳೆ ಓಡಿಸುವ ಬತ್ತಿಗಳು. ಅದರಲ್ಲಿ ಇರೋದು, ಬರೀ ಅಡಕೆಯ ಸಿಪ್ಪೆಯ ಹುಡಿ. ಅಗರಬತ್ತಿ ಹಾಗೆ ಮಾಡಿ ಒಂದಿಷ್ಟು ಪರಿಮಳವನ್ನೂ ಸೇರಿಸಿದ್ದಾರೆ. ಸೊಳ್ಳೆ ಓಡಿಸಲು ಚಾಲಿ ಸಿಪ್ಪೆಯ ಹೊಗೆಯ ಉಪಯೋಗ ನಮ್ಮಲ್ಲೂ ಇದೆ. ಆದರೆ, ಅದರ ಒಂದು ಉತ್ಪನ್ನ ಮಾಡಲು ನಾವೇಕೆ ಮುಂದಾಗಲಿಲ್ಲ?
ಹದಿಮೂರು ಮೂಲಿಕೆಗಳ ಇನ್ನೊಂದು ಔಷಧವಿದೆ. ಅದರಲ್ಲಿ ಅಡಕೆಯೇ ಮುಖ್ಯ ವಸ್ತು. ಸಂಗಡ ಲವಂಗ, ಶುಂಠಿ, ಕಾಳುಮೆಣಸು, ಜಾಯಿಕಾಯಿ, ಕಾಡು ಖರ್ಜೂರ ಮೊದಲಾದ ಹದಿಮೂರು ವಸ್ತುಗಳಿವೆ. ಇದನ್ನು ನಿದ್ರಾಹೀನತೆಗೆ, ದೇಹ ತಂಪಾಗಿಡಲು, ನರಗಳನ್ನು ಶಾಂತವಾಗಿಸಲು, ಅಜೀರ್ಣ ಸಮಸ್ಯೆಗೆ, ಲಿವರ್ ಸಮಸ್ಯೆಗೆ ಉಪಯೋಗಿಸುತ್ತಾರೆ.
ಟಿಬೆಟಿನ ಒಂದು ಕಂಪನಿಯ ಮತ್ತೊಂದು ಔಷಧದಲ್ಲಿ ಅಡಕೆ ಇದೆ. ಒಟ್ಟು ಇಪ್ಪತ್ತಾರು ಮೂಲಿಕೆಗಳನ್ನು ಸೇರಿಸಿದ ಈ ಔಷಧ ಕಾಮೋತ್ತೇಜಕವಂತೆ. ಅಡಕೆ ಹೂವಿನ ಜೇನು ಇನ್ನೊಂದು ಉತ್ಪನ್ನ. ಇದು ಅಡಕೆ ಹೂ ಬಿಡುವ ಕಾಲದಲ್ಲಿ ಸಂಗ್ರಹಿಸಿದ ಜೇನು. ಅದಕ್ಕೇ ವಿಶೇಷ ಔಷಧ ಗುಣಗಳಿವೆ ಎನ್ನುತ್ತದೆ ಜಾಲಮೂಲದ ಮಾಹಿತಿ.
ಚೀನಾದ ಪ್ರಮುಖ ಕಂಪನಿಗಳೂ ಅಡಕೆಯಿಂದ ಮಾಡಿದ ಔಷಧಗಳನ್ನು ಮಾಡುತ್ತಾರೆ. ಜಾಂಗ್ ಝಿ, ಸೋನ್ ಚಿನ್ ಸಿಂಗ್ ಮೊದಲಾದ ಪ್ರಸಿದ್ಧ ಇಂಗ್ಲಿಷ್ ಔಷಧ ತಯಾರಕ ಕಂಪನಿಗಳೂ ಬಿಂಗ್‌ಲಾಂಗ್ ಔಷಧ ತಯಾರಿಸುವುದು ವಿಶೇಷ.
ಎಲ್ಲ ಔಷಧಗಳಿಗೂ ಹಳೆಯ ಗ್ರಂಥಗಳೇ ಆಧಾರ ಎಂದು ಎಲ್ಲರೂ ಹೇಳುತ್ತಾರೆ. ಅಂದ ಮೇಲೆ ಈ ಹಳೆಯ ಗ್ರಂಥಗಳಲ್ಲೇನಿದೆ? ಏನಾದರೂ ಹೊಸ ತಿಳುವಳಿಕೆ ಸಿಕ್ಕೀತೇ ಎಂದು ಹುಡುಕಾಡತೊಡಗಿದೆ.



ಹಳೆ ಗ್ರಂಥಗಳ ಹುಡುಕಾಟ
ವಿಚಾರಿಸುತ್ತಾ ಹೋದಾಗ ಅಂಥ ಒಂದು ಹಳೆಯ ಗ್ರಂಥಾಲಯ ಮತ್ತು ಔಷಧೀಯ ವನ ಹಂಗ್‌ಜೌ ಪಟ್ಟಣದಲ್ಲೇ ಇದೆ ಎಂದು ಗೊತ್ತಾಯಿತು. ಮತ್ತಷ್ಟು ಖುಷಿ ಆಯಿತು. ಆದರೆ ಹೋಗಿ ಓದಿ ನೋಡಲು ಭಾಷೆ ಬರುವವರ ಸಹಾಯ ಬೇಕೇ ಬೇಕಾಗಿತ್ತು.
ಸಹಾಯಕ್ಕೆ ಬಂದವಳು ಇಂಡೋನೇಶ್ಯಾದ ಹುಡುಗಿ ನೆಲ್ಲಿ ಇಂದ್ರಿಯಾನ. ಜಪಾನಿನಲ್ಲಿ ಸ್ನಾತಕೋತ್ತರ ಓದುತ್ತಿರುವಾಕೆ. ನಗರದ ಹೊರಗಡೆ 'ಸಾಂಸ್ಕೃತಿಕ ಸುಧಾರಣೆ'ಯ ಕಾಲದಲ್ಲಿ ಜೈಲಿನಲ್ಲಿದ್ದ ಸಸ್ಯಪ್ರೇಮಿಗಳು ಮಾಡಿದ ತೋಟವಿದೆ. ಪುಸ್ತಕಗಳೂ ಸಹ. ಆದರೆ ಅವೆಲ್ಲ ಇದ್ದುದು ಚೈನೀಸ್ ಭಾಷೆಯಲ್ಲಿ. ಪುಸ್ತಕದಂಗಡಿಯಲ್ಲಿ ಇಂಗ್ಲಿಷ್ ಆವೃತ್ತಿ ಸಿಗಬಹುದು ಎಂಬ ಮಾಹಿತಿ. 'ಬಂಕಾವೋ ಗಂಗ್ಮು' ಎಂಬ ಪುಸ್ತಕ, ಇಂಗ್ಲಿಷ್ ಅವತರಣಿಕೆ ಸಿಕ್ಕಿತು. ಭಾರಿ ಗಾತ್ರದ ಐದು ಸಂಪುಟ. ಎರಡರಲ್ಲಿ ಅಡಕೆಯ ವಿವರವಿತ್ತು. ಬೆಳೆಗಾರರಿಗಿದು ಅಮೂಲ್ಯ ಮಾಹಿತಿ. ಪ್ರತಿ ಸಂಪುಟದ ಬೆಲೆ 500 ಯುವಾನ್! ತೂಕ 12 ಕಿಲೋ, ಬಿಟ್ಟು ಬರಲೇ ಬೇಕಾಯ್ತು.
ಚೀನಾದ ಸಾಂಸ್ಕೃತಿಕ ಸುಧಾರಣೆಯ ಕಾಲದಲ್ಲಿ ಹಳೆಯ ಜ್ಞಾನವನ್ನೆಲ್ಲ ತಿರಸ್ಕರಿಸಿ, ಹಳೆಯ ಪುಸ್ತಕಗಳನ್ನೆಲ್ಲ ಸುಡಲಾಯಿತು. ಅಳಿದುಳಿದ ಜ್ಞಾನವನ್ನು ಈಗ ಕ್ರೋಢೀಕರಿಸಿ ಅಭಿವೃದ್ಧಿಪಡಿಸುತ್ತಿದ್ದಾರೆ. ಅಡಕೆ ಬಗ್ಗೆ ಜ್ಞಾನ ಉಳಿಯಲು ಕಾರಣ ಮಾವೋ. ಹಳೆಯದನ್ನೆಲ್ಲ ವಿರೋಧಿಸುತ್ತಿದ್ದ ಈತನಿಗೆ ಒಮ್ಮೆ ಹುಷಾರು ತಪ್ಪಿದಾಗ, ಆತನನ್ನು ಗುಣಪಡಿಸಿದ್ದು ಅಡಕೆ ಬಳಸುತ್ತಿದ್ದ ಪರಂಪರೆಯ ವೈದ್ಯ. ಹೀಗಾಗಿ ಅದು ಉಳಿದುಕೊಂಡಿತು.
ಕೆಲವು ಔಷಧ ತಯಾರಿ ಕಂಪನಿಗಳಿಗೂ ಭೇಟಿ ನೀಡಿದೆವು. ಇವುಗಳಲ್ಲಿ ಒಂದು ಕಂಪನಿ ಬಿದಿರಿನಿಂದ ಹದಿನಾರು ಔಷಧ, ಅಡಕೆಯಿಂದ ನಾಲ್ಕು ಔಷಧ ತಯಾರಿಸುತ್ತದೆ. ಅಡಕೆಯಿಂದ ಮಾಡುವ ಒಂದು ಔಷಧ ಮಲಬದ್ಧತೆಗೆ, ಇನ್ನೊಂದು ಕರುಳಿಗೆ ಸಂಬಂಧಿಸಿದ್ದು.
ಔಷಧ ಅಂಗಡಿಯಲ್ಲಿ ಬಿಂಗ್‌ಲಾಂಗ್ ಬಗ್ಗೆ ಕೇಳಿದಾಗ ಎಲ್ಲರೂ ಕೊಡುತ್ತಿದ್ದದ್ದು ಚಾಲಿ ಅಡಕೆಯ ಚಿಪ್ಸ್. ಬಾಳೆಕಾಯಿಯ ಚಿಪ್ಸಿನಂತೆ ಅಡ್ಡಕ್ಕೆ ಕತ್ತರಿಸಿದ ಈ ತುಂಡುಗಳನ್ನೇ ಹೆಚ್ಚಾಗಿ ಉಪಯೋಗಿಸುತ್ತಾರೆ. ಕಷಾಯದ ಪುಡಿಯ ಹಾಗೆ ಪ್ಯಾಕ್ ಮಾಡಿದ ಪೌಡರುಗಳೂ ಲಭ್ಯ. ಗೋಟಡಿಕೆ ಚಿಪ್ಸನ್ನು ಜಂತುಹುಳುವಿನಂತಹ ಹೊಟ್ಟೆಯ ಹುಳುಗಳಿಗೆ ಔಷಧವಾಗಿ ಉಪಯೋಗಿಸುತ್ತಾರೆ. ಚಿಪ್ಸನ್ನು ಸಿರಪ್ಪಿನ ಹಾಗೆ ಮಾಡಿ ಮನೆಗಳಲ್ಲಿ ಬಳಸುತ್ತಾರೆ, ಹಾಗೇ ತಿನ್ನಲು ಕೊಡುವುದೂ ಇದೆ.
ನನ್ನ ವಿನಂತಿ ಮೇರೆಗೆ ಕೆಲವು ಮಿತ್ರರು ಅಡಕೆ ಉಪಯೋಗದ ಉತ್ಪನ್ನಗಳನ್ನು ತಂದಿದ್ದರು. ಜರ್ಮನಿಯಿಂದ ಕಷಾಯ ಪುಡಿ ಮತ್ತು ಕ್ಯಾಂಡಿಯನ್ನು ಬೋ ತಂದಿದ್ದಳು. ಕಷಾಯ ಪುಡಿ, ಪಾನೀಯ ಪುಡಿಯಲ್ಲಿ ಪರಿಮಳದ ವಸ್ತು ಸೇರಿಸಿದ್ದಾರೆ. ಬೋ ಪ್ರಕಾರ ಇದು ಹೊಟ್ಟೆಗೆ ಒಳ್ಳೆಯದು. ರುಚಿ ನೋಡಿದೆ. ಅಡಕೆ, ಮೆಂಥಾಲ್, ಲವಂಗ ಇವನ್ನೆಲ್ಲ ಸೇರಿಸಿ ಕುಡಿದ ಹಾಗೆ ಆಯಿತು.
ದುರ್ದೈವ ಎಂದರೆ, ಅಡಕೆಯ ದುಷ್ಪರಿಣಾಮಗಳ ಬಗ್ಗೆ ಅಧ್ಯಯನವಾದಷ್ಟು, ಅದರ ಔಷಧೀಯ ಗುಣಗಳ ಬಗ್ಗೆ ಆಗಿಲ್ಲ. 'ಅಡಕೆ ಕ್ಯಾನ್ಸರ್‌ಕಾರಕ' ಎನ್ನುವ ಅಧ್ಯಯನಗಳು ತಂಬಾಕು ಮತ್ತು ಅಡಕೆಯನ್ನು ಸೇರಿಸಿ ಜಗಿಯುವುದರ ಕುರಿತು ನಡೆದಂಥವು. ಎರಡನ್ನೂ ಬೇರೆ ಬೇರೆಯಾಗಿ ಉಪಯೋಗಿಸಿ ನೋಡಿಲ್ಲ.
ತೈವಾನ್‌ನ ವಿಜ್ಞಾನಿಗಳು ಮೊಲ ಹಾಗೂ ಇಲಿಯ ಮೇಲೆ, ಇತ್ತೀಚೆಗೆ ಮನುಷ್ಯನ ಮೇಲೂ ಅಧ್ಯಯನ ನಡೆಸಿ ಅಡಕೆ ತಿನ್ನುವುದರಿಂದ ಮಲಬದ್ಧತೆ ಕಡಿಮೆಯಾಗುವ ಬಗ್ಗೆ ನಿರೂಪಿಸಿದ್ದಾರೆ. ಅದು ಬ್ಯಾಕ್ಟೀರಿಯಾ ನಿವಾರಕ ಅನ್ನುವ ಬಗ್ಗೆಯೂ ಅಧ್ಯಯನಗಳು ಸಿಗುತ್ತವೆ.
ಅಡಕೆಯ ಇತರ ಉಪಯೋಗಗಳ ಬಗ್ಗೆ ಅಧ್ಯಯನ ನಡೆಸಬೇಕಾದದ್ದು ಇಂದಿನ ಅನಿವಾರ್ಯತೆ. ಪಾರಂಪರಿಕ ಜ್ಞಾನದ ತಳಹದಿ ಮೇಲೆ ವೈಜ್ಞಾನಿಕ ಸಂಶೋಧನೆ ಆಗಬೇಕು. ಇಲ್ಲವಾದರೆ ಅಡಕೆ ಬೆಳೆಗಾರರ ಭವಿಷ್ಯ ಕತ್ತಲೆಯತ್ತ ಸಾಗುವುದರಲ್ಲಿ ಸಂಶಯವಿಲ್ಲ. ಚೀನಾದ ಬಿಂಗ್‌ಲಾಂಗ್ ಔಷಧಗಳ ಸಮಗ್ರ ಅಧ್ಯಯನ ಈ ನಿಟ್ಟಿನಲ್ಲಿ ಪ್ರೇರಣೆ ಆಗಬಹುದು.
(ಮೂಲ: ಅಡಿಕೆ ಪತ್ರಿಕೆ)


- ಬಾಲಚಂದ್ರ ಹೆಗಡೆ ಸಾಯಿಮನೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್