ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಹಳ್ಳಿಗಳಲ್ಲಿ ಸೌಲಭ್ಯಗಳ ಕೊರತೆ

ಹೌದು, ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ನನ್ನ ಹಳ್ಳಿ ಮುಳಬಾಗಿಲು ತಾಲೂಕಿನ ಒಂದು ಸಣ್ಣ ಹಳ್ಳಿ. ಹಾಗಂತ ಬಹಳ ಹಿಂದುಳಿದ ಹಳ್ಳಿ....

Rashmi Kasaragodu
Updated On : 12 Jan 2014, 4:07 am

ಹೌದು, ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ನನ್ನ ಹಳ್ಳಿ ಮುಳಬಾಗಿಲು ತಾಲೂಕಿನ ಒಂದು ಸಣ್ಣ ಹಳ್ಳಿ. ಹಾಗಂತ ಬಹಳ ಹಿಂದುಳಿದ ಹಳ್ಳಿ ಏನಲ್ಲ. ಇಂದು ನನ್ನ ಹಳ್ಳಿಯ ಜನಸಂಖ್ಯೆಯಲ್ಲಿ ಸರಿಸುಮಾರು ಶೇ.60 ನಗರಗಳಿಗೆ ವಲಸೆ ಹೋಗಿದೆ. ಹಳ್ಳಿಯಲ್ಲಿರುವವರನ್ನು ಲೆಕ್ಕ ಹಾಕಿದರೆ ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧರೇ ಇದ್ದಾರೆ. ಅವರ ಮಕ್ಕಳು ಮೊಮ್ಮಕ್ಕಳು ಎಲ್ಲರದೂ ಬೆಂಗಳೂರು ವಾಸ. ಆ ವೃದ್ಧರನ್ನು ಮಾತನಾಡಿಸಿದರೆ, ಒಬ್ಬರದು ಒಂದೊಂದು ಕಥೆ. 'ಏನು ಮಾಡೋದು ಅಲ್ಪ ಸ್ವಲ್ಪ ಜಮೀನಿದೆಯಲ್ಲ ಬಿಟ್ಟು ಹೋದರೆ ಇದು ಹೋಗಿಬಿಡುತ್ತದೆ. ಮಕ್ಕಳೇನೊ ಸ್ವಲ್ಪ ಹಣ ಕಳಿಸ್ತಾರೆ. ಆದರೆ, ನಮಗೂ ವಯಸ್ಸಾಗಿದೆ ಅಂತ ಮಕ್ಕಳಿಗೆ ತಿಳಿಯೋದೆ ಇಲ್ಲ.' ಇನ್ನು ಕೆಲವು ತಂದೆ ತಾಯಿಯವರು ಅವರ ಮಗನಿಗೆ ಬೇಕಾದರೂ ಆ ಮಗನ ಹೆಂಡತಿಗೆ ಬೇಡ ಎಂಬ ಭಾವನೆ. ಪ್ರಪಂಚ ಬಹಳ ಸಂಕೀರ್ಣವಾಗುತ್ತಿದೆ. ಯುವ ಶಕ್ತಿಯ ಅನಿಸಿಕೆಗಳು ವೃದ್ಧರ ಭಾವನೆಗಳು ಮೇಳೈಸುತ್ತಿಲ್ಲ.
-ಎಸ್. ವೆಂಕಟೇಶ ಮುಡಿಯನೂರು, ಬೆಂಗಳೂರು.

ಜನ ಪ್ರತಿನಿಧಿಗಳ ಕೃಪಾಕಟಾಕ್ಷ
ಹಳ್ಳಿಯ ಜೀವನ ಎಲ್ಲರಿಗೂ ಇಷ್ಟ. ಆದರೆ, ಇತ್ತೀಚಿನ ಪರಿಸ್ಥಿತಿಯಲ್ಲಿ ಜೀವನ ನಿರ್ವಹಣೆ ಕಷ್ಟ ಏಕೆಂದರೆ ದಿನವಹಿ ಖರ್ಚುಗಳು ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಬದುಕು ಕಟ್ಟಿಕೊಳ್ಳಲು ನಗರಕ್ಕೆ ಹೋಗದೆ ವಿಧಿಯಿಲ್ಲ. ಅಲ್ಲಿ ಹೋದ ಮೇಲೆ ಅಲ್ಲಿನ ವ್ಯವಸ್ಥೆ ಯಾಂತ್ರಿಕ ಜೀವಶೈಲಿಗೆ ಒಗ್ಗಿಕೊಂಡು ಬಿಡುತ್ತಾರೆ. ಹಳ್ಳಿಯಲ್ಲಾದರೆ ಕಷ್ಟಪಟ್ಟು ದುಡಿಯಬೇಕು. ನಗರದಲ್ಲಾದರೆ ಸುಖಮಯ ಜೀವನ ನಡೆಸಬಹುದು. ಇಂತಹ ಪರಿಸ್ಥಿತಿಯಲ್ಲಿ ಹಳ್ಳಿಯಲ್ಲಿ ಹಿರಿಯರನ್ನು ಬಿಟ್ಟು ಯಾರು ವಾಸಿಸಲು ಬಯಸುವುದಿಲ್ಲ. ಈ ಕಾರಣದಿಂದಾಗಿ ಸುಂದರ ಪರಿಸರದ ಹಳ್ಳಿಗಳು ಇಂದು ವೃದ್ಧಾಶ್ರಮದ ತರಹ ಕಾಣಿಸುತ್ತಿವೆ. ಸರ್ಕಾರ ರೈತರು ಬೆಳೆದ ಬೆಳೆಗೆ ಒಳ್ಳೆಯ ಬೆಲೆ ನೀಡಿ, ಮೂಲಭೂತ ಸೌಕರ್ಯಗಳನ್ನು ನೀಡಿದರೆ ಹಳ್ಳಿಗಳು ವೃದ್ಧಾಶ್ರಮವಾಗುವುದಿಲ್ಲ.
- ನಾಗೇಶ್.ಎಸ್, ವಿ.ಜಿ.ದೊಡ್ಡಿ

ಕೃಷಿ ಜೀವನ ಮುಗಿಯಿತು
ಆರ್ಥಿಕ ಸುಧಾರಣೆ ಮತ್ತು ಜಾಗತೀಕರಣದ ಬಲಿ ಪಶುಗಳು ಹಳ್ಳಿಗಳು ತೊಂಬತ್ತರ ದಶಕದ, ಎಲ್ಲರೂ ಹಾಡಿ ಹೊಗಳಿದ ಆರ್ಥಿಕ ಸುಧಾರಣೆ ಮತ್ತು ಜಾಗತೀರಣದ ಮೊದಲ ಬಲಿ ಹಳ್ಳಿಗಳು. ಕೃಷಿ ಕಾರ್ಮಿಕರ ಅಭಾವ, ಗಗನಕ್ಕೇರಿದ ಕೃಷಿ ಕಾರ್ಮಿಕರ ಕೂಲಿ, ಅದಕ್ಕನುಗುಣವಾಗಿ ಏರದ ಕೃಷಿ ಉತ್ಪನ್ನಗಳ ದರ, ಸಿಇಟಿ ಪರೀಕ್ಷೆ ಮತ್ತು ಬ್ಯಾಂಕ್ ಸಾಲವನ್ನು ಬಳಸಿಕೊಂಡು ನಗರದ ಕಾಲೇಜು ಸೇರಿ, ತನ್ಮೂಲಕ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರದತ್ತ ದಾಪುಗಾಲು ಹಾಕಿದ ಯುವಕರು.ಹಾಗೆಯೇ ಮೂಲ ಸೌಕರ್ಯಗಳ ಕೊರತೆ ಮತ್ತು ನಾಗರಿಕ ಸೌಲಭ್ಯಗಳ ಅಭಾವದಿಂದಾಗಿ ಅಳಿದುಳಿದವರೂ ಹತ್ತಿರದ ನಗರ-ಪಟ್ಟಣಗಳಿಗೆ ಉದ್ಯೋಗ ಅರಸಿ ಲಗ್ಗೆ ಇಟ್ಟಿದ್ದಾರೆ. ಕೃಷಿ ನಂಬಿ ಜೀವನ ಸಾಗಿಸುವ ಕಾಲ ಕ್ರಮೇಣ ಮುಗಿಯುತ್ತಾ ಬಂದಿದೆ.
- ರಮಾನಂದ ಶರ್ಮ, ಬೆಂಗಳೂರು


'ಜಗುಲಿ'ಯಲ್ಲಿ ಈ ಸಲದ ವಿಷಯ 'ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆಯೇ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement