ಅಕ್ಷರಶಃ ವೃದ್ಧಾಶ್ರಮಗಳು
ನಗರ, ಪಟ್ಟಣಗಳಿಂದ ದೂರವಿರುವ, ಸರಿಯಾದ ವಿದ್ಯುತ್ ಸೌಲಭ್ಯವಿರದ, ವ್ಯವಸಾಯಕ್ಕೆ ನೀರಾವರಿ ಸೌಲಭ್ಯವಿರದ ಹಳ್ಳಿಗಳಲ್ಲಿ ಯುವ ಜನತೆ ಉಳಿಯಾಗದೇ ತಮ್ಮ ...
ನಗರ, ಪಟ್ಟಣಗಳಿಂದ ದೂರವಿರುವ, ಸರಿಯಾದ ವಿದ್ಯುತ್ ಸೌಲಭ್ಯವಿರದ, ವ್ಯವಸಾಯಕ್ಕೆ ನೀರಾವರಿ ಸೌಲಭ್ಯವಿರದ ಹಳ್ಳಿಗಳಲ್ಲಿ ಯುವ ಜನತೆ ಉಳಿಯಾಗದೇ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿ ನಗರದಲ್ಲೇ ಉಳಿದುಬಿಡುತ್ತಾರೆ. ಹಾಗಾಗಿ ಹಳ್ಳಿಗಳು ಇಂದು ಅಕ್ಷರಶಃ ವೃದ್ಧಾಶ್ರಮಗಳಾಗಿವೆ. ಉನ್ನತ ಶಿಕ್ಷಣ, ಉದ್ಯೋಗ ಹಾಗೂ ಕೂಲಿ ಕೆಲಸಕ್ಕೆಂದು ನಗರದತ್ತ ಮುಖ ಮಾಡಿದವರು ಹಳ್ಳಿಗಳತ್ತ ಪುನಃ ತಿರುಗಿ ನೋಡುತ್ತಿಲ್ಲ. ಬಹುಶಃ ನಗರದ ಜೀವನ ಶೈಲಿ ಅವರನ್ನು ಆಕರ್ಷಿಸಿರಬಹುದು. ಅಲ್ಲದೆ ಮತ್ತೆ ಹಳ್ಳಿಗೆ ಬಂದು ಏನು ಮಾಡಬಹುದು ಎಂಬ ಆಲೋಚನೆಯೂ ಇರಬಹುದು. ಆದರೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿರುವ, ನಗರಕ್ಕೆ ಹತ್ತಿರವಿರುವ, ನೀರಾವರಿ ಸೌಲಭ್ಯವಿರುವ ಹಳ್ಳಿಗಳಲ್ಲಿ ಯುವಕರು ಈಗಲೂ ವಾಸಿಸುತ್ತಿದ್ದಾರೆ. ಅಲ್ಲಿ ಇದ್ದುಕೊಂಡೇ ಅವರು ಉನ್ನತ ಶಿಕ್ಷಣ, ಉದ್ಯೋಗವೆಂದು ನಗರಕ್ಕೆ ಹೋಗಿ ಬಂದು ನಗರಕ್ಕೂ ಹಳ್ಳಿಗಳಿಗೂ ಸೇತುವೆಯಾಗಿದ್ದಾರೆ. ಇದಕ್ಕೆ ಸಾರಿಗೆ ಸೌಲಭ್ಯವೇ ಕಾರಣ.
- ಕೆ.ಎಂ. ಮಂಜುನಾಥಸ್ವಾಮಿ, ಬೈಲೂರು, ಬಳ್ಳಾರಿ ತಾಲೂಕು
ಹಳ್ಳಿಗೆ ಆರ್ಥಿಕ ಸಹಕಾರ ನೀಡಿ
ನಮಗೆ ಬೇಕಾಗಿರುವುದು ಕೇವಲ ಮುಂದುವರಿದ ಆಧುನಿಕ ಭಾರತವೇ ಅಥವಾ ಸ್ವಾವಲಂಭಿತನವನ್ನು ಸಾಧಿಸಿದ ಭಾರತವೇ ಎರಡನೇ ಆಯ್ಕೆ ನಮ್ಮದಾದರೆ ನಿಸ್ಸಂಶಯವಾಗಿ ಭಾರತದ ಹಳ್ಳಿ ಉಳಿಯುತ್ತದೆ. ಭಾರತೀಯ ವಿದ್ಯಾಭ್ಯಾಸ ಪಡೆದ ಹಳ್ಳಿಯ ಯುವ ಜನತೆ ಇಂದು ಉದ್ಯೋಗಕ್ಕಾಗಿ ಮಾತ್ರವಲ್ಲ ನಗರದ ಮೋಹಕತೆಗೂ ಮನಸೋತು ಹಳ್ಳಿಯಿಂದ ದೂರಾಗುತ್ತಿದೆ. ತಮ್ಮ ಮಕ್ಕಳು ನಗರ ಸೇರಿದ ಮೇಲೆ ತಾಯ್ತಂದೆಯರು ತಮ್ಮ ಮೈಯಲ್ಲಿ ಕಸುವಿರುವ ತನಕ ಕೃಷಿ ಜಮೀನಿನಲ್ಲಿ ದುಡಿಯಬಹುದು ಆ ಮೇಲೆ ಕೃಷಿ ಭೂಮಿ ಪಾಳು ಬೀಳುವುದು ನಿಶ್ಚಿತ. ನಗರಕ್ಕೆ ನಡೆದ ಹಳ್ಳಿಯ ಹೈದ ಅಲ್ಲೆ ನೆಲೆ ಕಂಡುಕೊಂಡ ಮೇಲೆ ಹಳ್ಳಿಯಲ್ಲಿ ಉಳಿಯುವವರು ವೃದ್ಧರು ಮಾತ್ರವೇ. ಆದುದರಿಂದ ಸರ್ಕಾರ ಗ್ರಾಮೋದ್ಯೋಗಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಹಳ್ಳಿಯ ಜನರಿಗೆ ಔದ್ಯೋಗಿಕ ತರಬೇತಿ, ಆರ್ಥಿಕ ಸಹಕಾರ ನೀಡಿ ಹಳ್ಳಿಯ ಜನರ ಬದುಕನ್ನು ಸುಧಾರಿಸಬೇಕು. ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡಬೇಕು. ಆಗ ಯುವ ಪೀಳಿಗೆಯ ವಲಸೆ ಕಡಿಮೆಯಾಗಿ ವೃದ್ಧಾಶ್ರಮಗಳಾಗುವುದನ್ನು ತಪ್ಪಿಸಬಹುದು.
- ಅಣ್ಣಪ್ಪ ಮಂಜುನಾಥ ಶಿರೂರ್, ಬಿಜಾಪುರ
ಮಮತೆಯ ಗೂಡಾಗಬೇಕು!
ಉನ್ನತ ಶಿಕ್ಷಣಕ್ಕೆಂದು ಹಳ್ಳಿಯಿಂದ ನಗರಕ್ಕೆ ಹೋಗುವ ವಿದ್ಯಾರ್ಥಿಗಳು ತಮ್ಮ ಹಳ್ಳಿಯ ಜನರೆಡೆಗೆ, ತಮ್ಮ ಪೋಷಕರೆಡೆಗೆ ಆಗಾಗ ಇಣುಕಿ ನೋಡುತ್ತಿರಬೇಕು. ಆಗ ಹಳ್ಳಿಯು ಒಂದು ವಾತ್ಸಲ್ಯದ ತಾಣವಾಗುತ್ತದೆ. ಉಚ್ಚ ಶಿಕ್ಷಣ ಪಡೆದ ನಂತರ ಹಳ್ಳಿಯೆಂದರೆ ಮೂಗು ಮುರಿಯದೆ ಯುವಕರು ಶಿಕ್ಷಣ ಮುಗಿದೊಡನೆ ಸ್ವಾಭಿಮಾನದಿಂದ ತನ್ನ ಹಳ್ಳಿಗೆ ಬಂದು, ಹಳ್ಳಿಯ ಅಭಿವೃದ್ಧಿ, ಪೋಷಕರ ಕ್ಷೇಮ, ಜನರ ಆಗು-ಹೋಗುಗಳ ಬಗ್ಗೆ ಶ್ರಮಿಸಬೇಕು. ಪ್ರಾಮಾಣಿಕತೆ, ಮಮತೆಯಿಂದ ಕಾರ್ಯ ನಿರ್ವಹಿಸಿದರೆ ಹಳ್ಳಿಗಳು ಮಮತೆಯ ಗೂಡಾಗುತ್ತವೆ.
- ವಿದ್ಯಾ ಉಪೇಂದ್ರ ಜೋಶಿ, ಬೆಳಗಾವಿ
'ಜಗುಲಿ'ಯಲ್ಲಿ ಈ ಸಲದ ವಿಷಯ 'ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆಯೇ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: : anekaby2@gmail.com