ಬೇಕರಿ ಗೃಹ
ಕಾರಾಗೃಹ ಅಂದರೆ ಮಾಡಿದ ಅಪರಾಧಕ್ಕೆ ಯಾತನೆ ಪಡುವ ಸ್ಥಳವೆಂದೇ ನಂಬಿಕೆ. ಆದರೆ ಅದು ಕೈದಿಗಳ ಮನ ಪರಿವರ್ತನೆಗೆ ಪ್ರೇರಣೆ...
ಕಾರಾಗೃಹ ಅಂದರೆ ಮಾಡಿದ ಅಪರಾಧಕ್ಕೆ ಯಾತನೆ ಪಡುವ ಸ್ಥಳವೆಂದೇ ನಂಬಿಕೆ. ಆದರೆ ಅದು ಕೈದಿಗಳ ಮನ ಪರಿವರ್ತನೆಗೆ ಪ್ರೇರಣೆ ನೀಡುವ ಸ್ಥಳವೂ ಹೌದು. ಇಲ್ಲೊಂದು ಕಾರಾಗೃಹ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕೈದಿಗಳನ್ನು ಸ್ವಾವಲಂಬಿಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ದಾಪುಗಾಲಿಟ್ಟಿದೆ.
ಅದು ಮಂಡ್ಯ ಜಿಲ್ಲಾ ಕೇಂದ್ರ ಉಪಕಾರಾಗೃಹದ ಕೆಲ ವಿಚಾರಣಾಧೀನ ಕೈದಿಗಳು ಬೇಕರಿ ಉತ್ಪನ್ನ ತಯಾರಿಕೆ ತರಬೇತಿ ಪಡೆದಿದ್ದಾರೆ. ಈಗ ಅವರೆಲ್ಲ ಕಾರಾಗೃಹದಲ್ಲಿಯೇ ಬೇಕರಿ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಅವು 'ಪರಿವರ್ತನ' ಬ್ರಾಂಡಿನ ಹೆಸರಿನಲ್ಲಿ ಮಾರಾಟವಾಗುತ್ತಿವೆ.
ಈ ಜೈಲಿನಲ್ಲಿ 360 ಮಂದಿ ವಿಚಾರಣಾಧೀನ ಕೈದಿಗಳಿದ್ದಾರೆ. ಇವರಲ್ಲಿ ಕೆಲವರು ಮೋಟಾರ್ ವೈಂಡಿಂಗ್, ಎಲೆಕ್ಟ್ರಿಕಲ್ ಹೀಗೆ ಆಸಕ್ತಿಗನುಗುಣವಾಗಿ ವೃತ್ತಿಪರ ತರಬೇತಿ ಹೊಂದಿದ್ದಾರೆ. ಇವರಂತೆ ಬೇಕರಿ ಉತ್ಪನ್ನಗಳ ತಯಾರಿಕೆ ತರಬೇತಿ ಪಡೆದ ಕೈದಿಗಳು ಶುಚಿ ರುಚಿಯಾದ ತಿನಿಸುಗಳನ್ನು ತಯಾರಿಸಿ ಗಮನ ಸೆಳೆದಿದ್ದಾರೆ. ಇಲ್ಲಿನ ಕೈದಿಗಳಿಗೆ ಬೇಕರಿ ಉತ್ಪನ್ನ ತಯಾರಿಸುವ ತರಬೇತಿ ನೀಡಿದವರೂ ಮೈಸೂರು ಕಾರಾಗೃಹದ ಐದು ಸಜಾಬಂಧಿಗಳೇ.
ಮಂಡ್ಯ ಕಾರಾಗೃಹದ ಉತ್ಪನ್ನಗಳಲ್ಲಿ ವೆಜ್- ನಾನ್ವೆಜ್ ಪಫ್, ಬ್ರೆಡ್, ದಿಲ್ಪಸಂದ್, ಹನಿ ಚಾಕೋಲೆಟ್, ಪ್ಲಮ್ ಕೇಕ್, ಕೊಬ್ಬರಿ, ಬೆಣ್ಣೆ, ಖಾರಾ ಬಿಸ್ಕೆಟ್ ಸೇರಿವೆ. ಪರಿವರ್ತನ ಬ್ರಾಂಡಿನ ಹೆಸರಿನಲ್ಲಿ ಜೈಲಿನ ಮುಂಭಾಗ ಕೈದಿಗಳಿಂದಲೇ ಮಾರಾಟಕ್ಕೆ ಅನುಕೂಲವಿದೆ.
ಬೇಕರಿ ಉತ್ಪನ್ನ ತಯಾರಿಕೆಗಾಗಿ ಯಂತ್ರಗಳನ್ನು ಖರೀದಿಸಲಾಗಿದೆ. ಅಡುಗೆ ಕೋಣೆ ನವೀಕರಣ ಮಾಡಲಾಗಿದೆ. ಇದಕ್ಕೆ ಎರಡು ಲಕ್ಷ ರು. ವೆಚ್ಚ ತಗುಲಿದೆ. ಶೀಘ್ರವೇ ಕಾರಾಗೃಹದ ಹೊರಭಾಗದಲ್ಲಿ ಪರಿವರ್ತನ ಬೇಕರಿ ಅಸ್ತಿತ್ವಕ್ಕೆ ಬರಲಿದೆ ಎನ್ನುತ್ತಾರೆ ಜೈಲಿನ ಅಧೀಕ್ಷಕ ಸುಂದರ್.
ಕೆಲ ಕೈದಿಗಳು ಸೈಕಲ್ ಬ್ರಾಂಡಿನ ಅಗರಬತ್ತಿ ಪ್ಯಾಕಿಂಗ್ ಮಾಡಿ ಹಣ ಸಂಪಾದಿಸುತ್ತಿದ್ದಾರೆ. ಸ್ವಯಂ ಉದ್ಯೋಗ ತರಬೇತಿ ಕೂಡ ನೀಡಲಾಗುತ್ತಿದೆ. ಕೈದಿಗಳು ಜೈಲಿನಿಂದ ಬಿಡುಗಡೆಯಾದಾಗ ಉದ್ಯೋಗ ಹುಡುಕಿ ನಿರಾಶರಾಗದಿರಲಿ ಎಂಬ ಉದ್ದೇಶ ಇದೆಲ್ಲದರ ಹಿಂದಿದೆ.
ಹತ್ತಾರು ಬಗೆಯ ಹಣ್ಣು ತರಕಾರಿ
ಬಂದೀಖಾನೆ ವಿಸ್ತೀರ್ಣ 9.5 ಎಕರೆ. ಎರಡು ಎಕರೆ ಸಾಗುವಳಿ ಭೂಮಿಯನ್ನು ಒಂದಿಷ್ಟೂ ವ್ಯರ್ಥವಾಗದಂತೆ ಬಳಸಿಕೊಳ್ಳಲಾಗಿದೆ. ಹತ್ತಾರು ಬಗೆಯ ಹಣ್ಣು ತರಕಾರಿ ಬೆಳೆಯಲಾಗುತ್ತಿದೆ. ತೊಗರಿ, ಅಲಸಂದೆ, ಬೀನ್ಸ್, ಸೋರೇಕಾಯಿ, ತೆಂಗು, ಹಲಸು, ಮಾವು, ಸೀಬೆ, ಸಪೋಟಾ, ನೇರಳೆ, ಟೊಮೆಟೊ, ಕುಂಬಳಕಾಯಿ, ಬೆಂಡೇ ಕಾಯಿ, ಹೀರೇಕಾಯಿ, ನುಗ್ಗೆ ಹೀಗೆ. ಎಲ್ಲ ರೀತಿಯ ಸೊಪ್ಪುಗಳೂ ಇವೆ. ಇಲ್ಲಿಯ ತರಕಾರಿ ಮತ್ತು ಸೊಪ್ಪಿಗೆ ಬೇಡಿಕೆ ಹೆಚ್ಚಲು ಒಂದು ಕಾರಣ ನೈಸರ್ಗಿಕ ಗೊಬ್ಬರ ಹಾಕಿ ಬೆಳೆಯುವುದು. ಅದಕ್ಕಾಗಿಯೇ ಗೊಬ್ಬರ ತಯಾರಿಕಾ ಘಟಕವಿದೆ.
-ಎಂ.ಅಫ್ರೋಜ್ ಖಾನ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.