ಆಟೋಟೋಪ
ಆಟೋಗಳ ಸಾಮ್ರಾಜ್ಯವೆನಿಸಿರುವ ಬೆಂಗಳೂರು ಸಿಟಿಗೆ ಇಂಧನ ರಹಿತ ಆಟೋ ರಿಕ್ಷಾ ಪರಿಚಯವಾಗಿದೆ. ಅರೆರೆ ಇದೇನಪ್ಪಾ ಇಂಧನ ರಹಿತ ರಿಕ್ಷಾ! ...
ಆಟೋಗಳ ಸಾಮ್ರಾಜ್ಯವೆನಿಸಿರುವ ಬೆಂಗಳೂರು ಸಿಟಿಗೆ ಇಂಧನ ರಹಿತ ಆಟೋ ರಿಕ್ಷಾ ಪರಿಚಯವಾಗಿದೆ.
ಅರೆರೆ ಇದೇನಪ್ಪಾ ಇಂಧನ ರಹಿತ ರಿಕ್ಷಾ! ಅಂತ ಕುತೂಹಲ ಮೂಡುವುದು ಸಹಜ. ರಿಕ್ಷಾ ಚಾಲನೆಗೆ ಪೆಟ್ರೋಲ್, ಡೀಸೆಲ್, ಅಥವಾ ಗ್ಯಾಸ್ ಬಳಕೆ ಇಲ್ಲ. ಕೇವಲ ಬ್ಯಾಟರಿ ಮೂಲಕ ಓಡಬಲ್ಲ ನೈಸರ್ಗಿಕ ರಿಕ್ಷಾ. ಪರಿಸರ ಮಾಲಿನ್ಯದ ಚಿಂತೆಯಿಲ್ಲ. ಆಟೋ ನಂಬಿರುವ ಸಿಟಿ ಪ್ರಯಾಣಿಕರಿಗೆ ಇದೊಂದು ಸಿಹಿ ಸುದ್ದಿ. ದರದ ವಿಚಾರದಲ್ಲಿ ಸಾಕಷ್ಟು ಸುಧಾರಿಸಿದೆ. ಎಲ್‌ಪಿಜಿ ದರ ಏರಿದಂತೇ ಅಟೋ ದರದಲ್ಲೂ ಏರಿಕೆಯಾಗಿ ಸಾಮಾನ್ಯರ ಪ್ರಯಾಣ ದುಸ್ತರ ಎನಿಸಿರುವಾಗ ಇಂತಹ ಸುಧಾರಿತ ದರ ಪ್ರಯಾಣಿಕರಿಗೆ ಸಂತಸ ಮೂಡಿಸಿದೆ.
ಆಟೋ ಕಥೆ
ಬೆಂಗಳೂರಿನ ಪದವೀಧರ ವರುಣ್ ಗೋಯಲ್ ಬ್ಯಾಟರಿ ಚಾಲಿತ ಆಟೋವನ್ನು ಚೀನಾ ದೇಶದಿಂದ ಖರೀದಿಸಿದ್ದರು. ಇದೀಗ ಬೆಂಗಳೂರಿನ ಕೆ.ಆರ್.ಮಾರ್ಕೆಟ್, ಕೋರಮಂಗಲ, ಬೇಗೂರ್ ರಸ್ತೆ ಮತ್ತು ಬನ್ನೇರುಘಟ್ಟದಲ್ಲಿ ಚಲಾಯಿಸುತ್ತಿದ್ದಾರೆ. ಪ್ರಯಾಣಿಕರಿಗೂ ಕೊರತೆಯಿಲ್ಲ. ಪ್ರತಿ ಕಿಲೋಮೀಟರ್ ಪ್ರಯಾಣ ದರ ಕೇವಲ ಹತ್ತು ರುಪಾಯಿ.
ಹಿತ-ಮಿತ ವೇಗಿ
ಗಂಟೆಗೆ 20 ಕಿ.ಮೀ. ವೇಗದಲ್ಲಿ ಓಡುತ್ತದೆ. ಹತ್ತಿರದ ಪ್ರದೇಶಕ್ಕೆ ಹೋಗಲು ತುಂಬಾ ಅನುಕೂಲ. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಉತ್ಸುಕರಾಗಿರುವ ವರುಣ್ ಶೀಘ್ರದಲ್ಲೇ 50ಕ್ಕೂ ಅಧಿಕ ಆಟೋ ಖರೀದಿಸುವ ಯೋಜನೆಯಲ್ಲಿದ್ದಾರೆ. ಇಂಧನ ಚಾಲಿತ ಆಟೋಗಳಂತೆ ಇದರಲ್ಲಿ ಕಾರ್ಬನ್ ಮೊನಾಕ್ಷೈಡ್ ಹೊರಸೂಸುವುದಿಲ್ಲ. ಶಬ್ಧ ಮಾಲಿನ್ಯ ರಹಿತವಾಗಿದೆ. ತೈಲೋತ್ಪನ್ನ, ಇಂಧನಗಳ ಬೆಲೆಯೊಂದಿಗೆ ಆಟೋ ದರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂತಹ ಆಟೋ ಆಗಮನವಾದರೆ ಪ್ರಯಾಣಿಕರು ಕೊಂಚ ಸುಧಾರಿಸಬಹುದು.
ಇಂತಹ ಆಟೋ ರಿಕ್ಷಾವನ್ನು ನಾನು ದೆಹಲಿ, ರಾಜಸ್ಥಾನ, ಕೋಲ್ಕತ್ತಾ, ಪುಣೆ, ಅಹ್ಮದಾಬಾದ್ ಮತ್ತು ಬಿಹಾರದಲ್ಲಿ ಇಂತಹ ರಿಕ್ಷಾಗಳೇ ಅಧಿಕ ಓಡಾಡುವುದನ್ನು ಗಮನಿಸಿದೆ. ಇಂದು ನಮ್ಮಲ್ಲಿ ಪೆಟ್ರೋಲ್, ಡೀಸೆಲ್ ಬಳಕೆಯ ಆಟೋ ರಿಕ್ಷಾಗಳೇ ಹೆಚ್ಚಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯವೂ ಜಾಸ್ತಿ. ಪ್ರಯಾಣ ದರವೂ ಅಧಿಕ. ಇದನ್ನೆಲ್ಲಾ ಪರಿಹರಿಸೋಣವೆಂದು ಬೆಂಗಳೂರಿಗೆ ಪರಿಚಯಿಸಿದೆ
- ವರುಣ್ ಗೋಯಲ್
-ಗಣೇಶ್ ಉಕ್ಕಿನಡ್ಕ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.