ಈ ದಿನ ಸುದಿನ
ಬೆಳಗ್ಗೆ ಎದ್ದು ಹಾಗೊಂದು ನಿರ್ಧಾರ ಮಾಡಿ. ಇವತ್ತಿಡೀ ಎಲ್ಲವೂ ಒಳ್ಳೆಯದೇ ಆಗುತ್ತದೆ, ಕೆಟ್ಟದಾಗಲು ಸಾಧ್ಯವೇ ಇಲ್ಲ. ಅಷ್ಟಕ್ಕೂ ನನಗೆ ..
ಬೆಳಗ್ಗೆ ಎದ್ದು ಹಾಗೊಂದು ನಿರ್ಧಾರ ಮಾಡಿ. ಇವತ್ತಿಡೀ ಎಲ್ಲವೂ ಒಳ್ಳೆಯದೇ ಆಗುತ್ತದೆ, ಕೆಟ್ಟದಾಗಲು ಸಾಧ್ಯವೇ ಇಲ್ಲ. ಅಷ್ಟಕ್ಕೂ ನನಗೆ ಕೆಡುಕಾಗಲು ಕಾರಣವಾದರೂ ಏನು? ನಾನು ಯಾವತ್ತಿಗೂ, ಯಾರಿಗೂ ಕೆಡುಕನ್ನು ಬಯಸಿಲ್ಲ. ಜಗತ್ತು ಇಷ್ಟೊಂದು ಸುಂದರವಾಗಿರುವಾಗ, ನನ್ನೊಬ್ಬನ ಮನಸ್ಸು ಕುರೂಪಗೊಳ್ಳಲು ಸಾಧ್ಯವೇ ಇಲ್ಲ. ಇಂಥ ಸುಂದರ ಜಗತ್ತಿನ ಅತಿ ಸುಂದರ ದಿನವೊಂದು ಮುನ್ನುಡಿ ಬರೆಯುತ್ತಿರುವಾಗ ಅದು ನನ್ನ ಪಾಲಿಗೂ ಖಂಡಿತಾ ಅತಿ ಸುಂದರವಾಗಿಯೇ ಒಲಿಯುತ್ತದೆ. ನಿನ್ನೆ ಏನೆಲ್ಲ ಸಿಹಿ ಸಂಗತಿಗಳು ನಡೆದಿದ್ದವೋ ಅದೆಲ್ಲವೂ ಇಂದೂ ಮುಂದುವರಿಯುತ್ತವೆ. ಕಹಿಗಳು ಇಂದಿನ ಸಿಹಿಯಲ್ಲಿ ಕಳೆದು ಹೋಗುತ್ತವೆ. ಏನೇ ಆದರೂ ಅದನ್ನು ಸಂಪೂರ್ಣ ನನ್ನದನ್ನಾಗಿ ಪರಿವರ್ತಿಸಿಕೊಳ್ಳುವ ಸಾಮರ್ಥ್ಯ ನನ್ನಲ್ಲಿದೆ. ಈ ಬೆಳಗು ನನ್ನಲ್ಲಿ ಇನ್ನಷ್ಟು ಬಲವನ್ನು ತುಂಬುತ್ತದೆ. ಮತ್ತೆ ಈ ಹಾಸಿಗೆಗೆ ನಾನು ಬರುವವರೆಗೂ ಉಲ್ಲಸಿತನಾಗಿಯೇ ಇರುತ್ತೇನೆ. ಈ ನಡುವಿನ ಅವಧಿಯಲ್ಲಿ ಏನೇ ಆದರೂ ನಾನು ತಾಳ್ಮೆ ಕಳಕೊಳ್ಳುವುದಿಲ್ಲ. ಯಾವುದೇ ಕಾರಣಕ್ಕೂ ನಾನು ಯಾರೊಂದಿಗೂ ಜಗಳಕ್ಕಿಳಿಯುವುದಿಲ್ಲ. ಬಂದದ್ದನ್ನೆಲ್ಲಾ ನಗುನಗುತ್ತಲೇ ಸ್ವೀಕರಿಸುತ್ತೇನೆ. ದಿನದ ಎಲ್ಲ ಕಾರ್ಯಗಳನ್ನೂ ಸಮರ್ಥವಾಗಿ ಮುಗಿಸಿದ ಸಂಪೂರ್ಣ ತೃಪ್ತಿಯೊಂದಿಗೆ ಮತ್ತೆ ನಾನು ಹಾಸಿಗೆಗೆ ಮರುಳುತ್ತೇನೆ...
ಇಷ್ಟು ನಿರ್ಧಾರಗಳೊಂದಿಗೆ ನೀವು ಹಾಸಿಗೆ ಬಿಟ್ಟೇಳಿ. ಯಾವುದೇ ಕಾರಣಕ್ಕೂ ಏಳುವಾಗ ಅನಗತ್ಯ ಹರಿಬರಿ ಬೇಡ. ಉದ್ವೇಗಕ್ಕೆ ಆ ಕ್ಷಣದಲ್ಲಿ ಅವಕಾಶವಿಲ್ಲ. ಯಾವತ್ತಿಗೂ ಏಳುತ್ತಲೇ ನಿರಾಸೆ, ಬೇಸರಗಳು ನಿಮ್ಮನ್ನು ಕಾಡದಿರಲಿ. ಎದ್ದ ಗಳಿಗೆಯಲ್ಲಿ ಯಾರದ್ದೇ ಮುಖವನ್ನೇ ನೋಡಿರಿ, ಯಾವುದೇ ವಸ್ತು, ಪ್ರಾಣಿ ಏನನ್ನೇ ನೋಡಿ ಅದರ ಬಗ್ಗೆ ಅನಗತ್ಯ ಪೂರ್ವಗ್ರಹಗಳು ಸುಳಿಯದಿರಲಿ. ಈ ಜಗತ್ತಿನಲ್ಲಿ ಎಲ್ಲವೂ ಒಳ್ಳೆಯದೇ, ಎಲ್ಲರೂ ಒಳ್ಳೆಯವರೇ. ಹೀಗಾಗಿ ಅವರನ್ನು ನೋಡುವುದರಿಂದ ಕೆಟ್ಟದ್ದಾಗುತ್ತದೆ ಎಂಬುದು ಇರಲಿಕ್ಕೆ ಸಾಧ್ಯವೇ ಇಲ್ಲ. ಒಂದೊಮ್ಮೆ ಕೆಟ್ಟದ್ದಾಗುತ್ತದೆ ಎಂದಾದರೆ ಅದು ನಮ್ಮ ಮೂರ್ಖತನದಿಂದ, ವಿವೇಚನಾರಹಿತ ನಡೆಯಿಂದ, ಅಸಾಮರ್ಥ್ಯದಿಂದ, ಹಿಂಜರಿಕೆ, ವಿಶ್ವಾಸದ ಕೊರತೆಯಿಂದಲೇ ಹೊರತೂ ಬೆಳಗ್ಗೆ ಎದ್ದು ಯಾರನ್ನೋ ನೋಡಿದ್ದರಿಂದ ಅಲ್ಲವೇ ಅಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಹಾಸಿಗೆಯಿಂದ ಏಳುವಾಗ ಕಾಡುವ ಸೋಮಾರಿತನವೇ ದಿನದ ವೈರಿ. ಅದನ್ನು ಬಿಟ್ಟು ಜಿಗಿದಾಡುತ್ತಾ ಹೊಸ ಉಲ್ಲಾಸದೊಂದಿಗೆ ದಿನ ಆರಂಭಿಸಿ. ಯಶಸ್ಸು ತನ್ನಿಂದ ತಾನೇ ನಮಗೆ ದಕ್ಕುತ್ತದೆ.
-ಸಹನೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.