ಹಳ್ಳಿಗಳು ನೆಮ್ಮದಿಯ ತವರು!
ಭಾರತ ದೇಶ ಹಳ್ಳಿಗಳ ನಾಡು. ಹಳ್ಳಿಗಳು ಹಿಂದಿಗಿಂತಲೂ ಇಂದು ಬಹಳಷ್ಟು ಅಭಿವೃದ್ಧಿಸಾಧಿಸಿವೆ. ಆದರೆ, ಇಂದಿನ...
ಭಾರತ ದೇಶ ಹಳ್ಳಿಗಳ ನಾಡು. ಹಳ್ಳಿಗಳು ಹಿಂದಿಗಿಂತಲೂ ಇಂದು ಬಹಳಷ್ಟು ಅಭಿವೃದ್ಧಿಸಾಧಿಸಿವೆ. ಆದರೆ, ಇಂದಿನ ಯುವ ಪೀಳಿಗೆ ಆರ್ಥಿಕ ಅವಲಂಬನೆ, ನಗರಜೀವನದ ಆಕರ್ಷಣೆ, ಮತ್ತು ಸ್ವಾವಲಂಬನೆಯ ದೃಷ್ಟಿಯಿಂದ ನಗರದ ಕಡೆ ವಲಸೆ ಬರುತ್ತಿದ್ದಾರೆ. ಸದಾ ಗುಜು ಗುಜು ಎನ್ನುವ ಶಬ್ಧದ ನಡುವೆ ಒತ್ತಡದ ಬದುಕಿನಲ್ಲಿ ಊಟಕ್ಕೂ ಸಮಯವಿಲ್ಲದೆ ಕಷ್ಟಪಟ್ಟು ದುಡಿಯುತ್ತಿದ್ದಾರೆ. ಆದರೆ, ತಂದೆ-ತಾಯಂದಿರು ಹಳ್ಳಿಗಳಲ್ಲಿಯೇ ನೆಲೆಸಿ ವ್ಯವಸಾಯ ಮಾಡಿಕೊಂಡು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಅಲ್ಲಿನ ತಾಜಾ ಗಾಳಿ, ಶುದ್ಧ ನೀರು, ಸ್ವಚ್ಚತೆಯ ಪರಿಸರದ ನಡುವೆ ಹಾಯಾಗಿ ಜೀವನ ಸಾಗಿಸುತ್ತಿದ್ದಾರೆ. ಹಳ್ಳಿಯ ವೃದ್ಧರ ಮುಂದೆ ನಗರದ ವ್ಯಕ್ತಿಗಳು ಏನೂ ಮಾಡಲು ಸಾಧ್ಯವಿಲ್ಲ. ಗಟ್ಟಿಮುಟ್ಟಾದ ಮೈಕಟ್ಟನ್ನು ಹೊಂದಿದ್ದು ಆರೋಗ್ಯಯುತಜೀವನ ಸಾಗಿಸುತ್ತಿರುತ್ತಾರೆ. ಹಾಗಾಗಿ ವೃದ್ಧರೂ ನಗರದ ಜಂಜಾಟದಿಂದ ದೂರವಾಗಲು ತಮ್ಮ ತಮ್ಮ ಹಳ್ಳಿಗಳ ಕಡೆ ಹೋಗುತ್ತಿದ್ದಾರೆ. ಹಾಗಾಗಿ ಹಳ್ಳಿಗಳು ವೃದ್ಧಾಶ್ರಮಗಳಾಗಿ ಮಾರ್ಪಾಡಾಗುತ್ತಿವೆ.
= ಲತಾ.ಟಿ, ಮಲ್ಲಿಗುಂಟೆ
ಊರುಗೋಲಾಗಬೇಕು
ಇಂದಿನ ಆಧುನಿಕ ಸಮಾಜದಲ್ಲಿ ಒತ್ತಡದ ಬದುಕಿನಲ್ಲಿ ಜನರು ತಮ್ಮ-ತಮ್ಮ ಜೀವನದಲ್ಲಿ ಕೆಲವು ಜವಾಬ್ದಾರಿಗಳನ್ನು ಮರೆಯುತ್ತಿದ್ದಾರೆ. ಪ್ರತಿಯೊಬ್ಬರಿಗೂ ಬದುಕನ್ನು ರೂಪಿಸಿಕೊಳ್ಳುವ ಭರದಲ್ಲಿ ತಮ್ಮ ಬದುಕನ್ನು ಇಲ್ಲಿಯವರೆಗೆ ರೂಪಿಸಿ ಕೊಟ್ಟವರನ್ನು ಮರೆಯುತ್ತಿರುವುದು ತುಂಬಾ ಆಘಾತಕಾರಿ ವಿಷಯ. ಅದರಲ್ಲಿಯೂ ಹಳ್ಳಿಗಾಡಿನಲ್ಲಿ ಈ ಸಮಸ್ಯೆ ಸಾಂಕ್ರಾಮಿಕ ಕಾಯಿಲೆಯಂತೆ ಹಬ್ಬುತ್ತಿದೆ. ಉದ್ಯೋಗ ಅರಸುತ್ತಾ ನಗರ ಪ್ರದೇಶಗಳತ್ತ ವಲಸೆ ಬಂದು ಇಲ್ಲಿಯೇ ನೆಲೆ ನಿಲ್ಲುವ ಪ್ರಯತ್ನದಲ್ಲಿದ್ದಾರೆ. ಈ ಮೂಲಕ ತಮ್ಮ ಸ್ವ-ಸ್ಥಳ, ಹೆತ್ತವರು ಮತ್ತು ತಮ್ಮೊಂದಿಗೆ ಒಡನಾಡಿದವರನ್ನು ಮರೆಯುತ್ತಿದ್ದಾರೆ. ತಮಗೆ ವಯಸ್ಸಾದ ಕಾಲಕ್ಕೆ ಊರುಗೋಲಾಗುತ್ತಾರೆ ಎಂಬ ನಂಬಿಕೆಗೆ ಮಕ್ಕಳು ದ್ರೋಹ ಮಾಡುತ್ತಿದ್ದಾರೆ. ನಮ್ಮನ್ನು ಈ ಭೂಮಿಗೆ ಪರಿಚಯಿಸಿ ಕೊಟ್ಟ ತಂದೆ-ತಾಯಿಯರನ್ನು ಗೌರವಿಸುವುದು ಪ್ರತಿಯೊಬ್ಬ ಮಕ್ಕಳ ಆದ್ಯ ಕರ್ತವ್ಯ.
= ವಿಶಾಲಾಕ್ಷಿ.ಎಲ್, ಬೆಂಗಳೂರು
ಹಳ್ಳಿಗಳನ್ನು ಸ್ಮಶಾನಗಳನ್ನಾಗಿಸದಿರಿ
ಹಳ್ಳಿಗಳು ಈಗಾಗಲೆ ವೃದ್ಧಾಶ್ರಮಗಳಾಗುತ್ತಿವೆ ಇದು ಹೀಗೆ ಮುಂದುವರೆದರೆ ಜನ ತಿನ್ನುವ ಆಹಾರಕ್ಕಾಗಿ ಹೋರಾಟ ಮಾಡಬೇಕಾದ ಕಾಲ ದೂರವಿಲ್ಲ. ಕಾರಣ ವಿದ್ಯಾವಂತ ಯುವಕರಿಗೆ ಹಳ್ಳಿಯಲ್ಲಿ ದುಡಿದು ತಿನ್ನಲು ಯಾವುದೇ ಆರ್ಥಿಕ ಭದ್ರತೆ ಇಲ್ಲದ್ದರಿಂದ ನಗರಕ್ಕೆ ಗುಳೆ ಹೋಗುತ್ತಿದ್ದಾರೆ. ಇದನ್ನು ತಡೆಗಟ್ಟಿ ವೈಜ್ಞಾನಿಕ ಕೃಷಿಗೆ ಒತ್ತುಕೊಡಬೇಕಾದ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಸಮಾಜದ ಬಗ್ಗೆ ಕಳಕಳಿಯ ಕೊರತೆಯಿಂದ ಇಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಕೆಲವೇ ದಿನಗಳಲ್ಲಿ ಹಳ್ಳಿಗಳು ಕೇವಲ ಸ್ಮಶಾನಗಳಾಗುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ನಗರ ಪ್ರದೇಶದಲ್ಲಿ ಹೂಳಲೂ ಜಾಗವಿಲ್ಲ. ಅನ್ನ ನೀಡುವ ಸೆಲೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಸರ್ಕಾರಗಳು ಮಾಡಬೇಕಿದೆ.
= ಚಿನ್ನೇನಹಳ್ಳಿ ಸ್ವಾಮಿ, ಹಾಸನ
'ಜಗುಲಿ'ಯಲ್ಲಿ ಈ ಸಲದ ವಿಷಯ 'ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆಯೇ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com