ನಾದನರಸಿಂಹನಿಗೆ ನಮನ
ಚಿಕ್ಕವಯಸ್ಸಿನಲ್ಲೇ ತಂದೆತಾಯಿ ಅಸ್ತಂಗತ. ಅಜ್ಜ ಓಬಾಳಪ್ಪನ ಶಹನಾಯಿ, ಅಪ್ಪನ ತಬಲ, ತಾಯಿಯ ಗಾಯನ ರಕ್ತಗತ. ಸಿನೆಮಾ ಪ್ರಚಾರಕ್ಕೆ ಬರುತ್ತಿದ್ದ ಗಾಡಿಯಲ್ಲಿ ಮೊಳಗುತ್ತಿದ್ದ ಕ್ಲಾರಿಯೋನೆಟ್ ವಾದನದ ನಾದಕ್ಕೆ ಆಕರ್ಷಿತ. ಮದುವೆ ಬ್ಯಾಂಡ್ಸೆಟ್ನಲ್ಲಿ ಸರಿಗಮ. ಮದುವೆ ಮನೆಯ ಊಟವನ್ನು ಚಪ್ಪಲಿ ಬಳಿ ಇಟ್ಟಾಗ ಆಕ್ರೋಶ. ಇದು ನಿನ್ನ ಜಾಗವಲ್ಲದಿದ್ದರೆ, ನಿನ್ನದೇ ಹಾದಿ ಹುಡುಕಿಕೊಳ್ಳಬಹುದಲ್ಲ ಎಂಬ ವೃದ್ಧರ ಸಲಹೆ.
ಆ ಬಾಲಕನೇ ಇಂದು ವಿಶ್ವಖ್ಯಾತಿ ಹೊಂದಿರುವ ಡಾ.ಪಂ. ನರಸಿಂಹಲು ವಡವಾಟಿ. 1942ರ ಜ21ರಂದು ರಾಯಚೂರಿನ ವಡವಾಟಿಯಲ್ಲಿ ಜನಿಸಿದ ಅವರಿಗೀಗ 72 ವರ್ಷ.
ಪ್ರಸಿದ್ಧ ಹಿಂದುಸ್ಥಾನಿ ಹಾಗೂ ವಚನ ಸಂಗೀತ ಗಾಯಕ ಸಿದ್ಧರಾಮ ಜಂಬಲದಿನ್ನಿಯವರ ಬಳಿ ಹಗಲು ಗಾಯನ ರಿಯಾಜ್. ರಾತ್ರಿ ಅದನ್ನೇ ಕ್ಲಾರಿಯೊನೆಟ್ನಲ್ಲಿ ಅಭ್ಯಾಸ. ವಿದೇಶಿವಾದ್ಯದ ಕೀಗಳಲ್ಲಿ ಸ್ವರಗಳ ಹುಡುಕಾಟ. ಮೀಂಡ್ಗಳೇ ಹೊರಡದ ಕರಿಕೊಳವೆಯಲ್ಲಿ ತಮ್ಮದೇ ಸಂಶೋಧನೆ. ತುಂಬುಗರ್ಭಿಣಿ, ಸಹಧರ್ಮಿಣಿ ಶಿವಮ್ಮನವರ ತಾನ್ಪುರದ ಸಾಥ್.
ಇಂದು ವಡವಾಟಿ ವಿಶ್ವದ ನಾನಾ ಸಂಗೀತ ವಿಶ್ವವಿದ್ಯಾಲಯಗಳ ವಿಸಿಟಿಂಗ್ ಪ್ರೊಫೆಸರ್. ಅಮೆರಿಕದ ಇಂಟರ್ನ್ಯಾಷನಲ್ ಕ್ಲಾರಿಯೊನೆಟ್ ಅಸೋಸಿಯೇಷನ್ಗೆ ಭಾರತದ ಅಧ್ಯಕ್ಷ. ಕಳೆದ ವರ್ಷ ಲಾಸ್ ಏಂಜಲೀಸ್ನಲ್ಲಿ ನಡೆದ ಇಂಟರ್ನ್ಯಾಷನಲ್ ಕ್ಲಾರಿಯೋನೆಟ್ ಫೆಸ್ಟ್ ಉದ್ಘಾಟನೆಗೊಂಡಿದ್ದೇ ಇವರ ವಾದನದಿಂದ. ತಾನು ಹುಟ್ಟಿದ ನೆಲಕ್ಕೆ ಸಂಗೀತ ಧಾರೆ ಎರೆಯಬೇಕೆಂದು ರಾಯಚೂರಿನಲ್ಲಿ ಸಿದ್ಧರಾಮ ಜಂಬಲದಿನ್ನಿ ಸ್ಮರಣಾರ್ಥ ಸ್ವರ ಸಂಗಮ ಸಂಗೀತ ವಿದ್ಯಾಲಯ ತೆರೆದು ಅನೇಕರಿಗೆ ಸಂಗೀತ ದೀಕ್ಷೆ ನೀಡುತ್ತಿದ್ದಾರೆ.
= ಕೆ. ಯೋಗ ರವೀಶ್ ಭರತ್