ನೆನಪಿನ ನೆರಳು
ಹುಟ್ಟಿನಿಂದ ಇಂದಿನವರೆಗೆ ನಮ್ಮ ಬಾಳಿನಲ್ಲಿ ನಡೆದದ್ದೆಲ್ಲವೆನ್ನೂ ನೆನಪಿಟ್ಟುಕೊಳ್ಳುವುದು ಅಸಾಧ್ಯ. ಹಾಗೇ ಅವುಗಳನ್ನೆಲ್ಲ ಮರೆಯುವುದೂ ಅಸಾಧ್ಯ. ಘಟನೆಗಳನ್ನು ನಮ್ಮ ನೆನಪಿನ ಖಾನೆಗಳಲ್ಲಿ ಅನುಕ್ರಮವಾಗಿ ಜೋಡಿಸುವುದಾಗಲೀ, ಬೇಕೆಂದಾಗ ಬೇಕೆಂದ ನೆನಪುಗಳನ್ನು ಹೆಕ್ಕಿಕೊಳ್ಳುವುದಾಗಲೀ ನಮ್ಮಿಂದ ಸಾಧ್ಯವಿಲ್ಲ. ಮರೆಯಬೇಕು ಎಂದುಕೊಂಡ ನೆನಪುಗಳೆಲ್ಲ ಎದುರಿಗೆ ಬರುತ್ತ ಜೀವ ತಿನ್ನುತ್ತವೆ; ನೆನಪು ಮಾಡಿಕೊಳ್ಳಬೇಕು ಎಂದುಕೊಳ್ಳುತ್ತಿರುವ ಸಂಗತಿಗಳು ಸರಿಯಾದ ಹೊತ್ತಿನಲ್ಲಿ ಕೈಕೊಟ್ಟು ಬಿಡುತ್ತವೆ. ನೆನಪು ಮರೆವುಗಳ ಆಟ ವಿಚಿತ್ರವಾದುದು, ಅಸಂಗತವಾದುದು. ಎಲ್ಲ ವಿವರಗಳೂ ಮರೆತುಹೋದ ಸ್ಥಿತಿ ಒಂದು ಮನೋರೋಗ. ಎಲ್ಲವೂ ನೆನಪಿನಲ್ಲಿರುವುದೂ ಒಂದು ಬಗೆಯ ಮನೋರೋಗವೇ. ಪ್ರಕೃತಿ ನಮಗೆ ಕೊಟ್ಟಿರುವ ಈ ಶಕ್ತಿ ವಿಶಿಷ್ಟವಾದುದು. ಸಾಮಾನ್ಯಕ್ಕಿಂತ ಹೆಚ್ಚು ಮಟ್ಟದ ನೆನಪಿನ ಶಕ್ತಿ ಹೊಂದಿದವನು ಜೀನಿಯಸ್ ಎನಿಸಿಕೊಳ್ಳುತ್ತಾನೆ. ಆದರೆ ಈ ನೆನಪಿಗೂ ಮನಸ್ಸಿನ ಆರ್ದ್ರತೆಗೂ ಯಾವುದೇ ಸಂಬಂಧವಿಲ್ಲ. ವ್ಯಕ್ತಿ, ವಸ್ತು ಅಥವಾ ಘಟನೆಗಳನ್ನು ಹಲವಾರು ರೀತಿಯಲ್ಲಿ ಇನ್ನೊಂದಕ್ಕೆ ಕೊಂಡಿ ಹಾಕಿ ನೆನಪಿನಲ್ಲಿಟ್ಟುಕೊಳ್ಳುವುದು ಸಾಧ್ಯವಿದೆ. ಅದು ನಮ್ಮ ಬುದ್ಧಿಶಕ್ತಿಗೆ ಸಂಬಂಧಿಸಿದ್ದು. ಆದರೆ ಮನುಷ್ಯ ಮನುಷ್ಯರ ನಡುವಿನ ಸಂಬಂಧ ಅಂಥದ್ದಲ್ಲ. ಬಾಲ್ಯದಲ್ಲಿ ಜತೆಯಾಗಿ ಆಡಿ ಬೆಳೆದ ಅಣ್ಣ- ತಂಗಿ, ವೃದ್ಧಾಪ್ಯದಲ್ಲಿ ಜೀವನದ ಉಳಿದೆಲ್ಲ ವಿವರಗಳನ್ನು ಮರೆತರೂ ಚಿಕ್ಕಂದಿನ ಆಟದ ವಿವರಗಳನ್ನು ಮೆಲುಕು ಹಾಕುವುದನ್ನು ನೀವು ನೋಡಿರುತ್ತೀರಿ. ಇದು ಹೇಗೆ ಸಾಧ್ಯವಾಯಿತು? ಅದು ಅವರ ಅಪ್ಪಟ ಜೀವನ ಪ್ರೇಮ, ಸಹಜೀವಿಯ ಮೇಲೆ ಹೊಂದಿದ್ದ ತೀವ್ರ ಅಕ್ಕರೆಯಿಂದ. ಇದು ಮನಸ್ಸಿನ ಹಸಿತನ, ಆರ್ದ್ರತೆ, ಪ್ರೀತಿಗಳಿಗೆ ಸಂಬಂಧಿಸಿದ್ದು. ನೆನಪಿನ ಜೀವ ಎಲ್ಲಿದೆ ಎಂದು ಅರ್ಥವಾಯಿತೇ?
ಸಹನೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.