ಜಪಾನ್ ಅನುಭವ ನಮಗೂ ಪಾಠವಾಗಲಿ
ನಿಮಗೊಂದು ಸ್ವಾರಸ್ಯದ ಸಂಗತಿ ಹೇಳಬೇಕು. ಕೇವಲ ಸ್ವಾರಸ್ಯ ಅಲ್ಲ, ಅಮೆರಿಕ ಹೇಗೆ ಎಲ್ಲ ದೇಶಗಳನ್ನೂ ತನ್ನ ಪ್ರಭಾವಳಿಯಲ್ಲಿ ಸಿಲುಕಿಸಿಕೊಳ್ಳುತ್ತದೆ ಎನ್ನುವುದಕ್ಕೂ ಇದು ಉದಾಹರಣೆ ಆದೀತು.
ಎರಡನೇ ಮಹಾಯುದ್ಧ ನಡೆಯುವವರೆಗೆ ಜಪಾನ್ನಲ್ಲಿ ಮೂತ್ರಪಿಂಡ ಕಲ್ಲಿನ ತೊಂದರೆ ಅಷ್ಟಾಗಿ ಇರಲಿಲ್ಲ. ಆ ತರುವಾಯ ಅಲ್ಲಿ ನಿಧಾನಕ್ಕೆ ಈ ಸಮಸ್ಯೆ ಕಾಣಿಸಿಕೊಳ್ಳಲು ಆರಂಭಿಸಿತು. 1945ರ ಬಳಿಕದಿಂದ ಅಂದರೆ ಎರಡನೇ ವಿಶ್ವಯುದ್ಧದ ನಂತರದಿಂದ ಐದು ದಶಕಗಳಲ್ಲಿ ಮೂತ್ರಪಿಂಡ ಕಲ್ಲಿನ ತೊಂದರೆಯಿಂದ ಬಳಲುವವರ ಪ್ರಮಾಣ ಮೂರು ಪಟ್ಟು ಏರಿತು. ಇದೇಕೆ ಹೀಗೆ ಎನ್ನುವುದು ಎಲ್ಲರ ಮಂಡೆಬಿಸಿಗೆ ಕಾರಣವಾಯಿತು. ಸಾಕಷ್ಟು ಸಂಶೋಧನೆಗಳು, ಚರ್ಚೆಗಳೂ ಶುರುವಾದವು. ಕೊನೆಗೆ ಒಸಾಕಾದ ಕಿಂಕಿ ವಿಶ್ವವಿದ್ಯಾಲಯದ ಸಂಶೋಧಕರು ಕಾರಣ ಪತ್ತೆ ಮಾಡಿದಾಗ ಎಲ್ಲರೂ ಅಚ್ಚರಿಗೆ ಒಳಗಾದರು. ಆಹಾರ ಪದ್ಧತಿಯಲ್ಲಿ ಆದ ಬದಲಾವಣೆಯೇ ಇದಕ್ಕೆ ಕಾರಣವಾಗಿತ್ತು. ಅಮೆರಿಕವು ಜಪಾನ್ನ ವಿರೋಧಿ ಬಣದಲ್ಲಿದ್ದರೂ ಅಮೆರಿಕನ್ನರ ಆಹಾರ ಪದ್ಧತಿ ಜಪಾನೀಯರನ್ನು ಬಹುವಾಗಿ ಆಕರ್ಷಿಸಿತ್ತು. ಯುದ್ಧದ ಬಳಿಕ ಜಪಾನೀಯರು ತಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ನಿಧಾನಕ್ಕೆ ಕಡೆಗಣಿಸುತ್ತ ಅಮೆರಿಕನ್ ಆಹಾರ ಶೈಲಿಗೆ ಮಾರು ಹೋಗಿದ್ದರು. ಇದರ ಪ್ರಭಾವ ಅವರಿಗೆ ಮೂತ್ರಪಿಂಡ ಕಲ್ಲಿನ ರೂಪದಲ್ಲಿ ಕಾಣಿಸಿಕೊಂಡಿತ್ತು!
ಇದೇ ಒಸಾಕಾ ವಿಶ್ವವಿದ್ಯಾಲಯದ ಸಂಶೋಧಕರು ಇನ್ನೊಂದು ಸಂಗತಿಯನ್ನೂ ದೃಢಪಡಿಸಿದ್ದಾರೆ. ಅದೆಂದರೆ ಅಧಿಕ ನೀರು ಕುಡಿಯುವುದು ಮತ್ತು ಸಸ್ಯಾಹಾರ ಸೇವನೆ ಮೂತ್ರಪಿಂಡ ಕಲ್ಲಿನ ತೊಂದರೆಯನ್ನು ದೂರ ಇಡಬಹುದು ಎಂದು. ಇಂಥ ತೊಂದರೆಯಿಂದ ಬಳಲುತ್ತಿದ್ದ 370 ಪುರುಷರನ್ನು ಆರಿಸಿಕೊಂಡ ಸಂಶೋಧಕರು, ಅವರಲ್ಲಿ ಕೆಲವರಿಗೆ ನೀರನ್ನು ಜಾಸ್ತಿ ಕುಡಿಯುವಂತೆ ಸಲಹೆ ಮಾಡಿದರೆ, ಉಳಿದವರಿಗೆ ಕಟ್ಟುನಿಟ್ಟಾಗಿ ಸಸ್ಯಾಹಾರ ಪಾಲಿಸುವಂತೆ ಹಾಗೂ ನಾರಿನ ಅಂಶ ಅಧಿಕವಿರುವ ಪದಾರ್ಥಗಳನ್ನು ಸೇವಿಸುವಂತೆ ಶಿಫಾರಸ್ಸು ಮಾಡಿದರು. ನಾಲ್ಕು ವರ್ಷದ ನಂತರ ಪರಿಶೀಲಿಸಿದಾಗ ಸಸ್ಯಾಹಾರಿಗಳಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿತ್ತು. ಅವರಲ್ಲಿ ಕಲ್ಲಿನ ಸಮಸ್ಯೆ ಮತ್ತೆ ಮರುಕಳಿಸಿರಲಿಲ್ಲ. ಪ್ರಾಣಿಜನ್ಯ ಆಹಾರಗಳನ್ನು ಸೇವಿಸುತ್ತಲೇ ಜಾಸ್ತಿ ನೀರು ಕುಡಿಯುವುದನ್ನೂ ರೂಢಿಸಿಕೊಂಡಿದ್ದವರಲ್ಲಿ ಆಗಾಗ ತೊಂದರೆ ಮರುಕಳಿಸುತ್ತಲೇ ಇತ್ತು. ಬ್ರಿಟನ್ನಲ್ಲಿ ನಡೆದ ಸಂಶೋಧನೆಯೂ ಸಸ್ಯಾಹಾರದಿಂದ ಮೂತ್ರಪಿಂಡ ಕಲ್ಲಿನ ಸಮಸ್ಯೆ ದೂರ ಮಾಡಬಹುದು ಎನ್ನುವುದು ಋಜುವಾತಾಗಿದೆ. ಸಸ್ಯಾಹಾರಿಗಳಲ್ಲಿ ಮೂತ್ರದ ಕ್ಯಾಲ್ಶಿಯಂ ಗಣನೀಯ ಪ್ರಮಾಣದಲ್ಲಿ ಕಡಿಮೆ ಇರುತ್ತದೆ ಎನ್ನುವುದು ಸಂಶೋಧಕರ ಅಭಿಪ್ರಾಯ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com