ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕಾಫಿ With ಕಾರ್ಟೂನ್

Vishwanath S
Updated On : 27 Jan 2014, 3:43 am

ನೀವು ಬೆಳಗಿನ ಐದು ಗಂಟೆಗೆ ಬೆಂಗಳೂರಿನ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಎದುರು ಬಂದರೆ ಖಂಡಿತವಾಗಿಯೂ ಘಮಘಮಿಸುವ ಬಿಸಿ ಬಿಸಿ ಫಿಲ್ಟರ್ ಕಾಫಿ, ಟೀ, ಬಾದಾಮಿ ಹಾಲು ಜತೆಗೆ ಕಾರ್ಟೂನ್ ಕೂಡ ನಿಮಗೆ ಸಿಗುವುದು ಗ್ಯಾರಂಟಿ!
ಶಂಕರ್ ಕಾಫಿ-ಟೀ ವ್ಯಾಪಾರ ಪ್ರಾರಂಭಿಸುವುದು ಬೆಳಗಿನ 5 ಗಂಟೆಗೆ! 5ರಿಂದ 7 ಗಂಟೆವರೆಗೆ ಬಿಡಿಎ ಕಾಂಪ್ಲೆಕ್ಸ್, 7ರ ನಂತರ ಬೇರೆ ಬೇರೆ ಆಫೀಸ್, ಬ್ಯಾಂಕ್, ಫ್ಯಾಕ್ಟರಿ, ಆಸ್ಪತ್ರೆ, ಗ್ಯಾರೇಜ್, ಸಲೂನ್, ಸಣ್ಣಪುಟ್ಟ ಅಂಗಡಿಗಳು. ಶಂಕರ್ ಅವರ ದಿನ ಆರಂಭವಾಗುವುದು ಬೆಳಗ್ಗೆ 3 ಗಂಟೆಗೆ, ಮುಕ್ತಾಯ ರಾತ್ರಿ 8 ಗಂಟೆಗೆ! ಕಾಫಿ-ಟೀ ಜತೆಗೆ ಕಾರ್ಟೂನೇ ಸ್ನ್ಯಾಕ್ಸ್! ಜತೆಗೆ ದಿನಪತ್ರಿಕೆ ಕೂಡ ಓದಬಹುದು. ಹಿರಿಯ ನಾಗರಿಕರಿಗೆ 5 ರು.ಗೆ ಕಾಫಿ ಕೊಡುತ್ತಾರೆ ಎಂಬುದು ವಿಶೇಷ. ಕಾಫಿ ಹಬೆಯಾಡುತ್ತಿದ್ದಾಗಲೇ ಎರಡು ನಿಮಿಷದ ಬಿಡುವಿನಲ್ಲಿ ವ್ಯಂಗ್ಯಚಿತ್ರ ಬಿಡಿಸಿಡುತ್ತಾರೆ. ಪತ್ರಿಕೆಯ ಸುದ್ದಿಗಳು, ಶೀರ್ಷಿಕೆಗಳು, ಗ್ರಾಹಕರ ಸಂಭಾಷಣೆಗಳು ಇವೆಲ್ಲ ಶಂಕರ್ ವ್ಯಂಗ್ಯಚಿತ್ರಕ್ಕೆ ವಸ್ತು.
ಶಂಕರ್‌ಗೆ ಚಿಕ್ಕಂದಿನಿಂದಲೇ ವ್ಯಂಗ್ಯಚಿತ್ರದಲ್ಲಿ ಆಸಕ್ತಿ. ಮಾಲ್ಗುಡಿ ಡೇಸ್‌ನ 'ಟೈಟಲ್ ಕಾರ್ಡ್‌'ನಲ್ಲಿ ಮೂಡಿಬರುವ ಆರ್.ಕೆ. ಲಕ್ಷ್ಮಣ್ ಅವರ ಕಾರ್ಟೂನ್ ಅವರನ್ನು ಆಕರ್ಷಿಸಿತ್ತು. ತಂದೆಯಲ್ಲಿ ಆಸೆ ಹೇಳಿಕೊಂಡಾಗ ಅವರು ಒಂದು ಹಾಳೆಯಲ್ಲಿ ಎರಡು ಮುಖ ಬರೆದು, 'ಇದೇ ಕಾರ್ಟೂನ್, ತಗೋ' ಎಂದು ಕೊಟ್ಟರಂತೆ. ಅದರಲ್ಲಿ ಒಂದು ನಗುಮುಖ, ಇನ್ನೊಂದು ಅಳುಮುಖ. 'ನನ್ನ ತಂದೆ ಜೀವನದ ಸಾರವನ್ನೇ ಈ ಎರಡು ಚಿತ್ರಗಳಲ್ಲಿ ತುಂಬಿದ್ದರು' ಎನ್ನುತ್ತಾರೆ ಶಂಕರ್. ಹವ್ಯಾಸಕ್ಕೆ ನೀರೆರೆದವರು ಗುರುಗಳಾದ ಸು.ವಿ. ಮೂರ್ತಿ.
ಶಂಕರ್‌ದು ಒಂಬತ್ತು ಜನರ ದೊಡ್ಡ ಕುಟುಂಬ. ಕುಟುಂಬ ನಿರ್ವಹಣೆಗೆ ಗಾರೆ ಕೆಲಸದಿಂದ ಹಿಡಿದು ಆಫೀಸ್ ಬಾಯ್, ಹೆಲ್ಪರ್, ಗಾರ್ಮೆಂಟ್, ಸೆಕ್ಯುರಿಟಿ ಗಾರ್ಡ್, ಎಲೆಕ್ಟ್ರಿಶಿಯನ್, ಬ್ಯಾಂಕ್ ಎಕ್ಸಿಕ್ಯೂಟಿವ್ ಕೆಲಸ ಕೂಡ ನಿರ್ವಹಿಸಿದ್ದಾರೆ. ಕೊನೆಗೆ ಕೈ ಹಿಡಿದದ್ದು 'ಮೊಬೈಲ್ ಕಾಫಿ ಕೆಫೆ'. ಕಳೆದ ಎಂಟು ವರ್ಷಗಳಿಂದ ಈ ಉದ್ಯೋಗ. ಯಶಸ್ಸಿಗೆ ನಂಬಿಕೆ-ಶ್ರದ್ಧೆ-ಕೆಲಸದ ವ್ಯಾಮೋಹ ಜತೆಗೆ ಧರ್ಮಪತ್ನಿಯ ಸಹಕಾರ ಕಾರಣ ಎನ್ನುತ್ತಾರೆ. ವೃತ್ತಿಯೊಂದಿಗೆ ಪ್ರವೃತ್ತಿಯನ್ನೂ ಜತೆಯಾಗಿ ಕೊಂಡೊಯ್ಯುತ್ತಿರುವ ಶಂಕರ್ ಇದುವರೆಗೆ ಸಾವಿರಕ್ಕೂ ಅಧಿಕ ವ್ಯಂಗ್ಯಚಿತ್ರ ರಚಿಸಿದ್ದಾರೆ. ಏಳು ಏಕವ್ಯಕ್ತಿ ಪ್ರದರ್ಶನ ಏರ್ಪಡಿಸಿದ್ದಾರೆ. 'ಶಂಕರ್ಸ್ ಕಾಫಿ ಕಾರ್ಟೂನ್ಸ್‌' ಎಂಬ ವ್ಯಂಗ್ಯಚಿತ್ರಗಳ ಸಂಕಲನ ಕೂಡ ಹೊರತಂದಿದ್ದಾರೆ. ಅನೇಕ ಪ್ರಶಸ್ತಿ ಕೂಡ ಪಡೆದಿದ್ದಾರೆ.
ಗಾಂಧಿ ಫೋಟೊ ಸಂಗ್ರಹ
ಶಂಕರ್ ಬಳಿ ಗಾಂಧೀಜಿಯವರ ಅಪರೂಪದ ಬಹುದೊಡ್ಡ ಫೋಟೊ ಸಂಗ್ರಹವಿದೆ. ಪ್ರತಿವರ್ಷ ಅಕ್ಟೋಬರ್ ಎರಡರಂದು ಮಹಾತ್ಮರ ಫೋಟೊ ಎಕ್ಸಿಬಿಷನ್ ಏರ್ಪಡಿಸುತ್ತಾರೆ. ಶಂಕರ್ ಶಾಲಾ ದಿನಗಳಲ್ಲೇ ಕನ್ನಡಪ್ರಭ ಪತ್ರಿಕೆಯ ಅಭಿಮಾನಿ. ಅಂದಿನಿಂದ ಇಂದಿನವರೆಗೂ ಪ್ರಕಟವಾದ ಕಾರ್ಟೂನ್‌ಗಳು, ಸುಭಾಷಿತಗಳು, ಪ್ರಮುಖ ಅಂಕಣಗಳ ದೊಡ್ಡ ಸಂಗ್ರಹ ಇವರಲ್ಲಿದೆ!
(ಸಂಪರ್ಕ: 9591778231).ಟಿ


-ಶಶಿರೇಖಾ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments