ಹೆಚ್ಚು ಸಿಬ್ಬಂದಿ ಒದಗಿಸಲಿ
ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹಲವು ವರ್ಷಗಳಿಂದ ಕಾಡುತ್ತಿದೆ. ಅದೇ ರೀತಿ ಸಂಚಾರ ಪೊಲೀಸ್ ಠಾಣೆಗಳಲ್ಲೂ ಇದಕ್ಕೆ ಹೊರತಲ್ಲ. ಹಾಗಾಗಿ ಸಂಚಾರ ಠಾಣೆಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸುವ ಅಗತ್ಯವಿದೆ. ಸಿಬ್ಬಂದಿ ಕಡಿಮೆ ಇರುವುದರಿಂದ ಇರುವ ಸಿಬ್ಬಂದಿ ಬೆಳಗಿನಿಂದ ಸಂಜೆವರೆಗೂ ಕೆಲಸ ನಿರ್ವಹಿಸಿ ಹೈರಾಣಾಗುತ್ತಾರೆ ಎಂಬ ಆರೋಪ ಸಿಬ್ಬಂದಿಯಿಂದಲೇ ಕೇಳಿಬರುತ್ತಿದೆ.
ಅತಿವೇಗವಾಗಿ ವಾಹನ ಚಾಲನೆ ಮಾಡುವ ವಾಹನ ಪತ್ತೆ, ಮದ್ಯಸೇವನೆ ಮಾಡಿರುವ ಚಾಲಕರ ಪತ್ತೆ, ವಾಹನಗಳ ಹೊಗೆ ಪತ್ತೆ ಮಾಡಬಹುದಾದ ಯಾಂತ್ರಿಕ ಉಪಕರಣಗಳನ್ನು ಎಲ್ಲಾ ಸಂಚಾರ ಪೊಲೀಸ್ ಠಾಣೆಗಳಿಗೆ ಒದಗಿಸಲಾಗಿದೆ. ಇದು ನಗರ ಪ್ರದೇಶದ ಪಟ್ಟಣಗಳಿಗೆ ಸೀಮಿತವಾದರೆ ಸಾಲದು ಪಟ್ಟಣ, ತಾಲೂಕು ಹಾಗೂ ಗ್ರಾಮಗಳ ಪೊಲೀಸ್ ಠಾಣೆಗಳಿಗೂ ವಿಸ್ತರಣೆ ಆಗಬೇಕು.
ಅಪಘಾತಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಂಚಾರ ನಿಯಮಗಳ ಪ್ರಚಾರಕ್ಕಾಗಿ ವಿಶೇಷ ಮೊಬೈಲ್‌ನ್ನು ಎಲ್ಲಾ ಸಂಚಾರ ಪೊಲೀಸ್ ಠಾಣೆಗಳಿಗೆ ಒದಗಿಸಬೇಕು.
ರಸ್ತೆ ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸುಸಜ್ಜಿತ ಆಂಬುಲೆನ್ಸ್ ಅನ್ನು ಪ್ರತಿ ಪೊಲೀಸ್ ವೃತ್ತಗಳ ನಿಯಂತ್ರಣದಲ್ಲಿರುವಂತೆ ಒದಗಿಸಬೇಕು.
ರಸ್ತೆ ಅಪಘಾತ ತಡೆಯಲು ಪುರಸಭೆ ಅಥವಾ ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ ಅಥವಾ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳು ಸಂಪೂರ್ಣ ಸಮನ್ವಯತೆಯಿಂದ ರಸ್ತೆ ಅಪಘಾತ ತಡೆಗೆ ಸಮಾಲೋಚನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು.
- ಶಾಂತ ತಮ್ಮಯ್ಯ