ಜೀವನಶೈಲಿಯೇ ಅರ್ಬುದಕ್ಕೆ ಕಾರಣವಾ?
ಇತ್ತೀಚೆಗೆ ಬಹಳ ಸುದ್ದಿಯಲ್ಲಿರುವ ಕಾಯಿಲೆ ಎಂದರೆ ಕ್ಯಾನ್ಸರ್ ಅಥವಾ ಅರ್ಬುದ. ಕ್ರಿಕೆಟಿಗ ಯುವರಾಜ್ ಸಿಂಗ್ ಕ್ಯಾನ್ಸರ್‌ನಿಂದ ಚೇತರಿಸಿಕೊಂಡು ಮತ್ತೆ ಅಂಗಳದಲ್ಲಿ ಕಾಣಿಸಿಕೊಂಡಿದ್ದು, ಅವನಿಂದ ಸ್ಫೂರ್ತಿ ಪಡೆದು ಒಂಟಿಗಾಲಿನ ವಿಕಲಚೇತನ ಯುವತಿ ಅರುಣಿಮಾ ಮೌಂಟ್‌ಎವರೆಸ್ಟ್ ಏರಿದ್ದು, ಸಿನಿಮಾ ತಾರೆಯರಾದ ಲೀಸಾ ರೆ, ಮೊನಿಶಾ ಕೊಯಿರಾಲಾ ಇವರೆಲ್ಲ ಕ್ಯಾನ್ಸರ್ ಅನ್ನೇ ಸೋಲಿಸಿ ಮತ್ತೆ ಜೀವನೋತ್ಸಾಹದಿಂದ ಮುನ್ನುಗ್ಗುತ್ತಿರುವುದು... ಕೇವಲ ಸೆಲೆಬ್ರಿಟಿಗಳ ಕಾರಣದಿಂದ ಅಂತಲೇ ಅಲ್ಲ. ಕ್ಯಾನ್ಸರ್‌ಗೆ ತುತ್ತಾಗುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಏರುತ್ತಿರುವುದು ಕೂಡ ಆಗಾಗ ಕ್ಯಾನ್ಸರ್ ಸುದ್ದಿಯ ಆಹಾರವಾಗಲು ಕಾರಣ.
ಮೊನ್ನೆ ಇಂತಹುದೇ ಸುದ್ದಿಯೊಂದು ಗಮನ ಸೆಳೆಯಿತು. ಅದು ಬಿಬಿಸಿ ಬಿತ್ತರಿಸಿದ ಸಮಾಚಾರ. ಅಮೆರಿಕದಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ, ಸ್ಟೆಮ್‌ಸೆಲ್ ಟ್ರಾನ್ಸ್‌ಪ್ಲಾಂಟೇಶನ್‌ನಂಥ ಕಠಿಣ ಚಿಕಿತ್ಸೆಗೂ ಒಳಗಾಗಿದ್ದ ಯುವಜನರ ಮೇಲೆ ನಡೆಸಿದ ಸಂಶೋಧನೆಯ ಸಾರಾಂಶ ಅದು. ಚೇತರಿಕೆಯ ಹಂತದಲ್ಲಿರುವ ಯುವ ಕ್ಯಾನ್ಸರ್ ರೋಗಿಗಳನ್ನು ಮ್ಯೂಸಿಕ್ ಆಲ್ಬಮ್ ಸಿದ್ಧಪಡಿಸುವ ಚಟುವಟಿಕೆಗಳಲ್ಲಿ ತೊಡಗಿಸಲಾಯಿತಂತೆ. ಸ್ವತಂತ್ರವಾಗಿ ಅಥವಾ ಹಲವರು ಒಟ್ಟಾಗಿ ಆಲ್ಬಮ್ ಮಾಡಲು ಅವಕಾಶವಿತ್ತು. ಕೆಲವರು ಗೀತೆ ಬರೆದರು. ಕೆಲವರು ಸಂಗೀತ ಸಂಯೋಜಿಸಿದರು. ಕೆಲವರು ಛಾಯಾಗ್ರಹಣದ ಹೊಣೆ ಹೊತ್ತರು. ಕೆಲವರು ಸಂಕಲನದ ಜವಾಬ್ದಾರಿ ನಿರ್ವಹಿಸಿದರು. ಒಟ್ಟಾರೆ ಆಲ್ಬಮ್‌ಗೆ ಸಂಬಂಧಿಸಿದ ಹಲವು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ನೂರು ದಿನಗಳ ಬಳಿಕ ಪರೀಕ್ಷಿಸಿದಾಗ ಅವರ ಚೇತರಿಕೆಯ ವೇಗ ಬಹಳಷ್ಟು ವೃದ್ಧಿಸಿತ್ತು. ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಜತೆಗಿನ ಒಡನಾಟ ಸುಧಾರಿಸಿತ್ತು. ಸಂವಹನಾಕೌಶಲ ಸುಧಾರಿಸಿತ್ತು. ಮುಖ್ಯವಾಗಿ ಆತ್ಮವಿಶ್ವಾಸ ವೃದ್ಧಿಸಿತ್ತು.
ಮ್ಯೂಸಿಕ್ ಥೆರಪಿ ಬಗ್ಗೆ ಹಿಂದಿನಿಂದಲೂ ಸಾಕಷ್ಟು ಸಂಶೋಧನೆಗಳು ನಡೆದಿವೆ. ಕ್ಯಾನ್ಸರ್ ಮಾತ್ರವಲ್ಲ, ಹಲವು ಗಂಭೀರ ಕಾಯಿಲೆಗಳನ್ನು ಗುಣಪಡಿಸುವಲ್ಲಿ ಸಂಗೀತ ಮುಖ್ಯಪಾತ್ರ ವಹಿಸುತ್ತದೆ ಎನ್ನುವುದು ಪ್ರತಿ ಸಂದರ್ಭದಲ್ಲೂ ಸಾಬೀತಾಗಿದೆ. ಕ್ಯಾನ್ಸರ್ ವಿಚಾರದಲ್ಲಿ ಮ್ಯೂಸಿಕ್ ಥೆರಪಿ ಹೇಗೆ ಕೆಲಸ ಮಾಡುತ್ತದೆ ಎನ್ನುವ ಕುರಿತು ಹಲವು ತಜ್ಞರು ತಮ್ಮ ಅಭಿಪ್ರಾಯ, ವಿಶ್ಲೇಷಣೆಗಳನ್ನು ಮಂಡಿಸುತ್ತಲೇ ಇದ್ದಾರೆ. ಅದರಲ್ಲಿ ಮುಖ್ಯವಾದ ಒಂದು ಅಂಶದ ಬಗ್ಗೆ ಹೇಳಬೇಕು. ಆ ಅಭಿಪ್ರಾಯ ಎಂದರೆ, 'ಮ್ಯೂಸಿಕ್ ಥೆರಪಿ ಒತ್ತಡವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ, ಜೀವನಶೈಲಿಯನ್ನು ಬದಲಿಸಿಕೊಳ್ಳಲು ಮತ್ತು ಸುಧಾರಿಸಿಕೊಳ್ಳಲು ಸಹ ನೆರವಾಗುತ್ತದೆ' ಎನ್ನುವುದು. ಅಂದರೆ ಕ್ಯಾನ್ಸರ್‌ಗೂ, ಜೀವನಶೈಲಿಗೂ ಸಂಬಂಧ ಇದೆ ಎನ್ನುವುದಂತೂ ಇದರಿಂದ ಸ್ಪಷ್ಟವಾಗುತ್ತದೆ ಅಲ್ಲವೆ? ಲೈಫ್‌ಸ್ಟೈಲ್ ಎಂದಮೇಲೆ ಅದು ಡಯಟ್ ಅನ್ನೂ ಒಳಗೊಂಡಿರಲೇಬೇಕಲ್ಲವೆ?
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com