ತ್ರಿದೋಷಹರೆ
ವಾರಕ್ಕೆರಡು ಬಾರಿ ಮಿಲನಮಹೋತ್ಸವದಿಂದ ದಾಂಪತ್ಯ ಭದ್ರ. ಪ್ರತಿದಿನ ಪ್ರಣಯದಿಂದ ಅದೆಷ್ಟೋ ಕ್ಯಾಲೊರಿ ಸುಟ್ಟು ಜೀರ್ಣಶಕ್ತಿ ಸುರಕ್ಷಿತ. ಕೆಲವು ಬಗೆಯ ತಲೆನೋವುಗಳು ಸುರತಸುಖದಿಂದ ಮಂಗಮಾಯ. ಇವು ಆಗಾಗ ನಡೆಯುತ್ತಲೇ ಇರುವ ಕೆಲವು ಸಮೀಕ್ಷೆಗಳ ಫಲಿತಾಂಶ.
ಸುರತಸುಖಕ್ಕೆ ವೈದ್ಯಕೀಯ ಮುಖ ಕೂಡ ಇರುವುದು ಹೊಸ ಸಂಗತಿಯೇನಲ್ಲ. ಕಾಡುವ ಕೆಲವು ಮನೋದೈಹಿಕ ಬೇನೆಗಳು ಇದರಿಂದ ಮಾಯವಾಗುತ್ತವೆ ಎಂದು ಮಹಾಮಹಾವೈದ್ಯರೇ ಭಾಷ್ಯ ಬರೆಯುತ್ತಾರೆ. ಅದಕ್ಕೆ ತಕ್ಕಂತೆ ಈ ಶ್ಲೋಕವಿದೆ.
ಕ್ವಭ್ರಾತಶ್ಚಲಿತೋಸಿ? ವೈದ್ಯಕಗೃಹೇ ಕಿಂತದ್ರುಜಾಂ ಶಾಂತಯೇ
ಕಿಂತೇ ನಾಸ್ತಿ ಸಖೇ ಗೃಹೇ ಪ್ರಿಯತಮಾ ಸರ್ವಂ ಗದಂ ಹಂತಿ ಯಾ
ವಾತಂ ತತ್ಕುಚಕುಂಭಮರ್ದನವಶಾತ್ ಪಿತ್ತಂ ತು ವಕ್ತ್ರಾಮೃತಾತ್
ಶ್ಲೇಷ್ಮಾಣಂ ವಿನಿಹಂತಿ ಹಂತ ಸುರತವ್ಯಾಪಾರಕೇಲಿಶ್ರಮಾತ್
ಇಬ್ಬರು ಗೆಳೆಯರು. ಅವರಲ್ಲೊಬ್ಬ ತುಸು ಅಸೌಖ್ಯವೆಂದು ಮದ್ದು ತರಲು ವೈದ್ಯರಲ್ಲಿಗೆ ಹೊರಟಿದ್ದಾನೆ. ಇನ್ನೊಬ್ಬ ಗೆಳೆಯನಿಗೆ ತುಸು 'ನಾಟಿ'ವೈದ್ಯವೂ ಗೊತ್ತು. ಇವರಿಬ್ಬರ ನಡುವೆ ನಡೆದ ಮಾತುಕತೆ ಹೀಗೆ:
ಸಹೋದರ, ಎಲ್ಲಿಗೆ ಹೋಗುತ್ತಿರುವೆ?
ವೈದ್ಯರಲ್ಲಿಗೆ.
ಅದರಿಂದ ಅಸ್ವಾಸ್ಥ್ಯ ಉಪಶಾಂತವಾಗುವುದೇ? ನಿನ್ನ ಮನೆಯಲ್ಲಿ ಪ್ರಿಯತಮೆ ಇದ್ದಾಳಲ್ಲವೆ? ಅವಳ ಬಳಿಗೆ ಹೋಗು. ನಿನ್ನ ಈ ರೋಗವನ್ನು ಅವಳೇ ಗುಣಪಡಿಸಬಲ್ಲಳು.
ಹೇಗೆ ಮಾರಾಯ?
ಅವಳನ್ನು ಆಲಂಗಿಸಿಕೊಂಡರೆ ಅವಳ ಕುಚಕುಂಭಗಳ ಮರ್ದನದಿಂದ ನಿನ್ನ ವಾತ ಶಮನವಾಗುತ್ತದೆ. ಅವಳ ಅಧರಾಮೃತ ಸೇವಿಸುವುದರಿಂದ ಪಿತ್ತ ಇಳಿಯುತ್ತದೆ. ರತಿಕ್ರೀಡೆಯ ಪರಿಶ್ರಮದಿಂದ ನಿನ್ನ ಕಫವೂ ಕರಗಿ ನೀನು ಗುಣಮುಖನಾಗುವೆ!ಟಿ
-ಹರಿಹರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.