ಮತ್ತೆ ರಾಮಾಯಣ
ಎಂಬತ್ತರ ದಶಕದ ಮಾತು. ಟೀವಿ ನಮ್ಮ ದೇಶಕ್ಕೆ ಆಗಿನ್ನೂ ಹೊಸತು. ಇದ್ದದ್ದು ಒಂದೇ ಚಾನೆಲ್. ದೂರದರ್ಶನ ರಾಷ್ಟ್ರೀಯ ವಾಹಿನಿ. ಒಂದು ಧಾರಾವಾಹಿ ಇಡೀ ದೇಶವನ್ನೇ ಟೀವಿ ಮುಂದೆ ಎಳೆದು ತಂದು ಕೂರಿಸಬಲ್ಲುದು ಅನ್ನೋದು ಪ್ರೂವ್ ಆದ ಸಮಯವದು. ಆ ಧಾರಾವಾಹಿಯೇ ರಾಮಾಯಣ. ಟೀವಿಗಳು ದೇವಸ್ಥಾನದ ರೇಂಜಿಗೆ ಪೂಜಿಸಲ್ಪಟ್ಟವು. ಪ್ರತಿ ಭಾನುವಾರ ಬೆಳಿಗ್ಗೆ ಒಂಬತ್ತರಿಂದ ಹತ್ತು, ವೀಕ್ಷಕರು ಸ್ನಾನ ಮಾಡಿ ಮಡಿಯುಟ್ಟು ಟೀವಿ ಮುಂದೆ ಕೈ ಮುಗಿದು ಕೂತರು. ಕೇರಿಗೊಂದು ರಸ್ತೆಗೊಂದು ಎಂಬಂತೆ ಟೀವಿಗಳಿದ್ದ ಆ ಸಮಯದಲ್ಲಿ ಟೀವಿ ಇರುವ ಮನೆಗಳು ಹೌಸ್ಫುಲ್ ಆಗಿ ಹೋದವು. ಒಂದುಗಂಟೆಯ ಮಟ್ಟಿಗೆ ರಸ್ತೆಗಳು ಅಘೋಷಿತ ಕರ್ಫ್ಯೂವಿನಂತೆ ಬಿಕೋ ಅನ್ನತೊಡಗಿದವು. ರಾಮ-ಸೀತಾ ಪಾತ್ರಧಾರಿ ಅರುಣ್ ಗೋವಿಲ್ ಮತ್ತು ದೀಪಿಕಾ ದೇವರೇ ಆಗಿಹೋದರು. ಈಗ ಚಾನೆಲ್ಗಳು ಸಾವಿರ. ಕಾರ್ಯಕ್ರಮಗಳು ಲಕ್ಷ. ಹಾಗಂತ ಭಕ್ತಿ ಮತ್ತು ಪೌರಾಣಿಕ ಕಾರ್ಯಕ್ರಮಗಳು ಈಗಲೂ ಸಾಕಷ್ಟಿವೆ. ಆದರೆ, ರಾಮಾಯಣ ಮತ್ತು ಮಹಾಭಾರತದ ಜನಪ್ರಿಯತೆಯ ಹತ್ತಿರಕ್ಕೂ ಬರಲಾಗಿಲ್ಲ.
ಇಷ್ಟೆಲ್ಲಾ ಪೀಠಿಕೆ ಯಾಕಂದ್ರೆ, ಈ ತಿಂಗಳಿಂದ ವೀಕ್ಷಕರ ಮುಂದೆ ಮತ್ತೆ ರಾಮ- ಸೀತೆ ಪ್ರತ್ಯಕ್ಷರಾಗಲಿದ್ದಾರೆ. ಹೌದು, ಭಕ್ತಿಪ್ರಿಯರನ್ನು ತಣಿಸಲು ಪ್ರತಿ ಭಾನುವಾರ ಬೆಳಿಗ್ಗೆ 8 ರಿಂದ 10ಗಂಟೆಯ ತನಕ ರಾಮಾಯಣ ಪ್ರಸಾರವಾಗಲಿದೆ. ಬೆಳಿಗ್ಗೆ ಮಿಸ್ ಮಾಡಿಕೊಂಡವರು ನಿರಾಶರಾಗಬೇಕಿಲ್ಲ. ಅದೇ ದಿನ ಮಧ್ಯಾಹ್ನ ಎರಡರಿಂದ ನಾಲ್ಕರವರೆಗೆ ಹಾಗೂ ಸಂಜೆ ಆರರಿಂದ ಎಂಟರವರೆಗೆ ಮರುಪ್ರಸಾರವಿದೆ. ಹೊಸತೇನಿದೆ.. ಅದೇ ರಾಮಾಯಣ ಅಲ್ವಾ ಅಂತ ಮೂಗು ಮುರಿಯೋರಿಗೆ ಇಲ್ಲೊಂದಿಷ್ಟು ವಿವರಗಳಿವೆ. ಧಾರಾವಾಹಿಯ ಜೊತೆಗೆ ಜನಪ್ರಿಯ ನಟರಾದ ನಾಸಿರುದ್ದೀನ್ ಷಾ, ಅನುಪಮ್ ಖೇರ್, ಜಾವೇದ್ ಜಾಫ್ರಿ , ಓಂ ಪುರಿ ಮುಂತಾದವರ ವ್ಯಾಖ್ಯಾನಗಳೂ, ಮಾತುಕತೆಗಳೂ ಇರುತ್ತವೆ. ಇದು ಟಾಟಾಸ್ಕೈನ ವಿಶೇಷ ಬಿಡುಗಡೆಯಾಗಿದ್ದು, ಟಾಟಾ ಸ್ಕೈ ಡಿಟಿಹೆಚ್ ಆ್ಯಕ್ಟಿವ್ಮ್ಯೂಸಿಕ್ನ ಬಳಕೆದಾರರು ಮಾತ್ರ ರಾಮಾಯಣದರ್ಶನದ ಪುಣ್ಯ ಪಡೆಯಲು ಸಾಧ್ಯ. ಭಕ್ತಿ ಸಾಗರ್ ಚಾನೆಲ್ನಲ್ಲಿ ಹತ್ತು ನಿಮಿಷದ ನೂರಿಪ್ಪತ್ತು ಕಂತುಗಳಾಗಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಇಂದಿನ ಪೀಳಿಗೆಗೂ ನಮ್ಮ ಧಾರ್ಮಿಕ ಗ್ರಂಥಗಳ ಬಗ್ಗೆ ಪರಿಚಯ ಮಾಡಿಸುವ ಉದ್ದೇಶದಿಂದ ಟಾಟಾಸ್ಕೈ ಈ ವಿನೂತನ ಶೈಲಿಯ ರಾಮಾಯಣದ ಇತಿಹಾಸವನ್ನು ತೆರೆದಿಡುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.