ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಇಮ್ರಾ ಆನ್ಯಾ ಇಖ್ರಾ!

Mainashree
Updated On : 13 Jul 2014, 12:57 pm

ಆ ಮುದ್ದು ಮಗುವಿನ ಹೆಸರು 'ಇಮ್ರಾ' ಅಂತ. ಸ್ವಾಹಿಲಿ ಭಾಷೆಯಲ್ಲಿ ಅದರ ಅರ್ಥ: ತಾಳ್ಮೆಯಿಂದ ದೃಢವಾಗಿ ನಿಲ್ಲುವ. ತಂದೆಯ ಹೆಸರು ಇಮ್ರಾನ್ ಖಾನ್, ತಾಯಿ ಅವಂತಿಕಾ.
ಆ ದಂಪತಿ ತಮ್ಮ ಮಗುವಿಗೆ ಇಟ್ಟ ಹೆಸರು 'ವಿಯಾನ್‌'. ಹಾಗೆಂದರೆ ಜೀವಂತಿಕೆ ಮತ್ತು ಸ್ಫೂರ್ತಿಯಿಂದ ಪುಟಿಯುವ ಎಂದರ್ಥವಂತೆ. ಅಂದಹಾಗೆ ತಂದೆ ತಾಯಿಗಳ ಹೆಸರು ಶಿಲ್ಪಾ ಶೆಟ್ಟಿ- ರಾಜ್ ಕುಂದ್ರಾ.
ನಿಮಗೀಗಾಗಲೇ ಅರ್ಥವಾಗಿರಬೇಕು, ಇವು ಸಾಮಾನ್ಯ ಮಕ್ಕಳಲ್ಲ ಅಂತ. ಇವರೆಲ್ಲ ಬಾಲಿವುಡ್ ಸೆಲೆಬ್ರಿಟಿಗಳ ಮಕ್ಕಳು. ತಮ್ಮ ಹೆಸರಿನ ಬಗ್ಗೇ ಸಾಕಷ್ಟು ತಲೆ ಕೆಡಿಸಿಕೊಳ್ಳುವ ಇವರು ತಮ್ಮ ಮಕ್ಕಳಿಗೆ ನಾಮಧೇಯವನ್ನಿಡುವಾಗ ಆಕಾಶ ಭೂಮಿ ಒಂದು ಮಾಡದೆ ಬಿಟ್ಟಾರೆ? ಹುಡುಕೀ ಹುಡುಕೀ ಅನನ್ಯವೆನಿಸುವಂಥ ಹೆಸರನ್ನೇ ಇಡುತ್ತಾರೆ. ಇದಕ್ಕೆ ಯಾವ ಸೆಲೆಬ್ರಿಟಿ ಜೋಡಿಯೂ ಹೊರತಲ್ಲ.
ಪ್ರತಿಯೊಬ್ಬನಿಗೂ ತಮ್ಮ ಮಗು ಗುಂಪಿನಿಂದ ಬೇರೆಯಾಗಿ ನಿಲ್ಲಬೇಕು, ಎದ್ದು ಕಾಣಿಸಬೇಕು ಎಂಬ ಹಂಬಲ. ಅದಕ್ಕಾಗಿ ಮಾಡುವ ಪ್ರಯತ್ನ, ಮಗುವಿಗೆ ಹೆಸರಿಡುವಲ್ಲಿಂದಲೇ ಆರಂಭವಾಗುತ್ತದೆ. ಹರೀಶ ಗಿರೀಶರ ಕಾಲ ಮುಗಿದಾಯ್ತು. ನೀತಾ ವಿವಾ ಓಂಗಳೆಲ್ಲ ಬಂದು ಹೋದರು. ಇನ್ನಷ್ಟು ಹೊಸ ಹೆಸರುಗಳಿಗಾಗಿ ಹುಡುಕಾಟ ನಡೆದಿದೆ. ಪ್ರತಿ ಜೋಡಿಯೂ ನಾವು ಊಹಿಸಲಾಗದಂಥ ಇನ್ಯಾವುದೋ ಹೊಸ ಹೆಸರಿನೊಂದಿಗೆ ಅಪ್ಪಳಿಸುತ್ತದೆ!
ಹಾಗೆ ನೋಡಿದರೆ ಐಶ್ವರಯ ರೈ- ಅಭಿಷೇಕ್ ಮಗುವಿನ ಹೆಸರೇ ಕೊಂಚ ಹಳೆಯದೆನ್ನಬೇಕು- ಆರಾಧ್ಯ. ಆದರೂ 'ಪೂಜಿಸಲ್ಪಡುವ' ಎಂಬ ಅರ್ಥದ ಈ ಹೆಸರನ್ನು ನಿಮ್ಮ ಸುತ್ತಮುತ್ತ ಎಲ್ಲಾದರೂ ಕೇಳಿದ್ದೀರಾ? ಹೃತಿಕ್ ರೋಶನ್- ಸುಸಾನ್ನೆ ದಂಪತಿಯ ಮಕ್ಕಳ ಹೆಸರು ಹೃದಾನ್- ಹ್ರೆಹಾನ್. ಹೃದಾನ್ ಅಂದರೆ ಸಂಸ್ಕೃತದಲ್ಲಿ 'ವಿಶಾಲ ಹೃದಯಿ'. 'ದೇವರಿಗೆ ಪ್ರೀತಿಯ' ಎಂಬರ್ಥದ ಅರೇಬಿಕ್ ಪದ 'ರೆಹಾನ್‌', ಇಲ್ಲಿ ಹ್ರೆಹಾನ್ ಆಗಿದೆ.
ಶಾರುಖ್- ಗೌರಿಯರ ಮುದ್ದಿನ ಮಕ್ಕಳು- ಆರ್ಯನ್, ಸುಹಾನಾ, ಅಬ್ರಾಮ್. ಆರ್ಯ ಅಂದರೆ ಯೋಧ, ಹಿರಿಯ. ಸುಹಾನಾ ಅಂದರೆ ಆಕರ್ಷಕ. ಕೊನೆಯ ಮಗನ ಹೆಸರಿನಲ್ಲಿ ಮುಸ್ಲಿಮರ ಪ್ರವಾದಿ 'ಅಬ್ರಹಾಂ' ಮತ್ತು ಹಿಂದುಗಳ ದೇವತೆ 'ರಾಮ' ಒಂದಾಗಿದ್ದಾರೆ!
ಅಮೀರ್ ಖಾನ್- ಕಿರಣ್‌ರ ಮಗನ ಹೆಸರು ಅಝಾದ್ ರಾವ್ ಖಾನ್. ಅಮೀರ್‌ನ ಹಿರಿಯಜ್ಜ ಮೌಲಾನಾ ಅಝಾದ್ ದೊಡ್ಡ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂಬುದು ನಿಮಗೆ ಗೊತ್ತಿರಬೇಕು. ಸಂಜಯ್ ದತ್- ಮಾನ್ಯತಾರ ಅವಳಿ ಮಕ್ಕಳು- ಶಹ್ರಾನ್ ಮತ್ತು ಇಖ್ರಾ. ಪರ್ಷಿಯನ್ ಭಾಷೆಯಲ್ಲಿ ಶಹ್ರಾನ್ ಅಂದರೆ ರಾಜವಂಶದ ಕುಡಿ. ಇಖ್ರಾ ಅಂದರೆ ಹೀಬ್ರೂ ಭಾಷೆಯಲ್ಲಿ 'ಜ್ಞಾನ ನೀಡುವ'.
ಫರ್ಹಾ ಖಾನ್ ಮತ್ತು ಶಿರೀಶ್ ಕುಂದರ್‌ಗೆ ತ್ರಿವಳಿ ಮಕ್ಕಳು. ಅವರ ಹೆಸರು ಆನ್ಯಾ, ದಿವಾ ಮತ್ತು ಝಾರ್. ರಷ್ಯನ್‌ನಲ್ಲಿ 'ಆನ್ಯಾ' ಅಂದರೆ ಕೃಪೆ, ಲ್ಯಾಟಿನ್‌ನಲ್ಲಿ 'ದಿವಾ' ಅಂದರೆ ದಿವ್ಯ, 'ಝಾರ್‌' ಅಂದರೆ ಚಕ್ರವರ್ತಿ. ಅಕ್ಷಯ್ ಕುಮಾರ್ ಮತ್ತು ಡಿಂಪಲ್ ಖನ್ನಾರ ಮಕ್ಕಳ ಹೆಸರು ಭಾರತದ್ದೇ ಆದರೂ ವಿದೇಶಿಯಂತೆ ಧ್ವನಿಸುತ್ತವೆ. 'ಆರವ್‌' ಅಂದರೆ 'ಹೆಚ್ಚಿನ ಗೌರವವಿರುವ', 'ನಿತಾರಾ' ಅಂದರೆ 'ಆಳವಾಗಿ ಬೇರುಬಿಟ್ಟ' ಎಂಬರ್ಥವಂತೆ.  
ಅಜಯ್ ದೇವಗನ್ ಮತ್ತು ಕಾಜೋಲ್ ಜೋಡಿಯ ಮೊದಲ ಮಗುವಿನ ಹೆಸರಿಗೆ ಪ್ರೇರಣೆ ಗ್ರೀಕ್ ಭಾಷೆ. ಎರಡನೇ ಮಗುವಿಗೆ ಸಂಸ್ಕೃತ. 'ನೈಸಾ' ಅಂದರೆ ಗ್ರೀಸ್‌ನಲ್ಲಿ ನೂತನ ಆರಂಭ, 'ಯುಗ್‌' ಅಂದರೆ ನಿಮಗೆ ಗೊತ್ತಲ್ಲ? ಮಾಧುರಿ ದೀಕ್ಷಿತ್ ಮತ್ತು ಶ್ರೀರಾಮ್ ನೇನೆ ದಂಪತಿ ತಮ್ಮ ಮಕ್ಕಳಿಗೆ ಹುಡುಕಿ ಹುಡುಕಿ ಐರಿಷ್ ಹೆಸರುಗಳನ್ನಿಟ್ಟಿದ್ದಾರೆ. ಅವರ ಪ್ರಕಾರ 'ರಾಯನ್‌' ಅಂದರೆ 'ಸ್ವರ್ಗದ ಬಾಗಿಲು' ಮತ್ತು 'ಆರಿನ್‌' ಅಂದರೆ 'ಪರ್ವತಸಮ ಶಕ್ತಿ.'
ಫರ್ಹಾನ್ ಅಖ್ತರ್ ಮತ್ತು ಅಧುನಾ ಅಖ್ತರ್ ಜಪಾನಿ ಭಾಷೆಯ ಮೊರೆ ಹೋಗಿದ್ದಾರೆ. ಅವರ ಮಗಳ ಹೆಸರು ಅಕಿರಾ- ಹಾಗೆಂದರೆ ಜಾಣೆ, ಬುದ್ಧಿವಂತೆ. ಅಕಿರಾ ಕುರಸೋವಾ, ಫರ್ಹಾನ್‌ನ ಫೇವರಿಟ್ ನಿರ್ದೇಶಕ ಕೂಡ. 'ಶಾಖ್ಯ' ಅಂದರೆ 'ಶಕ್ತಿಯ ವೃತ್ತ.' ಬುದ್ಧನಿಗೂ 'ಶಾಖ್ಯಮುನಿ' ಎನ್ನುತ್ತಿದ್ದರು.
ಅರ್ಜುನ್ ರಾಂಪಾಲ್ ಮತ್ತು ಮೆಹರ್ ಜೆಸ್ಸಿಕಾ ತಮ್ಮ ಮಕ್ಕಳ ಹೆಸರಿಗೆ ಹಿಂದೂ ಪುರಾಣ ಮತ್ತು ಖುರಾನ್‌ಗಳೆರಡರಿಂದಲೂ ಪಾಲು ಪಡೆದಿದ್ದಾರೆ. 'ಮಹಿಕಾ' ಅಂದರೆ ಸಂಸ್ಕೃತದಲ್ಲಿ ಭೂಮಿ. 'ಮೈರಾ' ಅಂದರೆ ಕುರಾನ್‌ನಲ್ಲಿ ಹಗುರ, ತೀವ್ರಗತಿಯ ಎಂದರ್ಥ. ಸುಶ್ಮಿತಾ ಸೇನ್ ಮಕ್ಕಳು ರೆನೀ ಮತ್ತು ಅಲಿಸಿಯಾ. ಜರ್ಮನ್ ಅರ್ಥವುಳ್ಳ ರೆನೀ ಅಂದರೆ ಮತ್ತೆ ಹುಟ್ಟಲಿರುವ, ಅಲಿಸಿಯಾ ಅಂದರೆ ಬುದ್ಧಿವಂತ.  ಕರಿಶ್ಮಾ ಕಪೂರ್ ಮಕ್ಕಳು ಸಮೈರಾ (ಲ್ಯಾಟಿನ್, ಸೌಂದರ್ಯದೇವತೆ) ಮತ್ತು ಕಿಯಾನ್ (ಲ್ಯಾಟಿನ್, ದೇವಕರುಣೆ). ಕೊಂಕಣಾ ಸೇನ್ ಮಗ ಹರೂನ್ (ಅರೇಬಿಕ್‌ನಲ್ಲಿ ರಾಜರಕ್ಷಕ, ಸಂಸ್ಕೃತದಲ್ಲಿ ಭರವಸೆ). ಇಮ್ರಾನ್ ಹಶ್ಮಿಯ ಮಗ ಅಯಾನ್ (ಅರೇಬಿಕ್, ದೇವರ ಕೊಡುಗೆ). ಮಲೈಕಾ ಅರೋರಾ ಖಾನ್ ಮಗ ಅರ್ಹಾನ್ (ಅರೇಬಿಕ್, ರಾಜ). ಸೆಲಿನಾ ಜೇಟ್ಲಿಯ ಅವಳಿ ಮಕ್ಕಳಲ್ಲೊಬ್ಬ ವಿರಾಜ್, ಇನ್ನೊಬ್ಬ ವಿನ್‌ಸ್ಟನ್. ಸೋನು ನಿಗಮ್ ಮಗ ನೀವಾನ್ (ಸಂಸ್ಕೃತ, ಪವಿತ್ರಾತ್ಮ). ಲಾರಾ ದತ್ತಾ- ಮಹೇಶ್ ಭೂಪತಿ ಮಗಳು ಸೈರಾ (ಹೀಬ್ರೂ, ರಾಜಕುಮಾರಿ).
ನಿಮ್ಮ ಮಗುವಿಗೆ ಇದರಲ್ಲಿ ಯಾವುದಾದರೂ ಹಿಡಿಸ್ತಾ?

= ವನಮಾಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement