ನಾವು ಸಕ್ಕರೆಗೆ ಯಾವತ್ತೂ ಭಯಪಟ್ಟಿಲ್ಲ!
ಸಕ್ಕರೆ ಕುರಿತ ಭೀತಿ ಎಷ್ಟು ತೀವ್ರವಾಗಿತ್ತು ಎಂದರೆ ಜನ ಸಕ್ಕರೆ ಮಾತ್ರವಲ್ಲ, ಸಿಹಿಯನ್ನೇ ಬಹಿಷ್ಕರಿಸುವ ಹಂತ ತಲುಪಿದ್ದರು. ಪಾಶ್ಚಾತ್ಯರು ಸಣ್ಣಪುಟ್ಟ ಸಮಾಚಾರಗಳಿಗೂ ಎಷ್ಟು ಹೆದರಿಕೊಳ್ಳುತ್ತಾರೆ ಎನ್ನುವುದಕ್ಕೆ ಇದು ಒಳ್ಳೆಯ ಉದಾಹರಣೆ. ನಮ್ಮಲ್ಲಿ ಹಿಸಿ ಮೊದಲಿನಿಂದಲೂ ಆಹಾರದ ಭಾಗವಾಗಿದೆ. ಈಗಲೂ ಅಷ್ಟೆ. ಮಲೆನಾಡಿನಲ್ಲಿ ನಿತ್ಯ ಅಡುಗೆಗೆ ಬೆಲ್ಲ, ಸಕ್ಕರೆ ಬೇಕೇಬೇಕು. ಕರಾವಳಿಯಲ್ಲಿ ಈ ಪ್ರವೃತ್ತಿ ತುಸು ಕಡಿಮೆ ಆಗಿದೆ. ಬಯಲು ಸೀಮೆ, ಹಳೆ ಮೈಸೂರು ಪ್ರಾಂತ್ಯದಲ್ಲಿ ಮೊದಲಿನಿಂದಲೂ ಖಾರ ಬಳಕೆ ಹೆಚ್ಚು. ಆದರೆ ಸಿಹಿಯನ್ನು ಎಂದೂ ಕಡೆಗಣಿಸಿಲ್ಲ. ಕರ್ನಾಟಕದ ಕತೆ ಹೀಗಾದರೆ, ಇಡೀ ಭಾರತವನ್ನು ಪರಿಗಣನೆಗೆ ತೆಗೆದುಕೊಂಡರೂ ಆಹಾರದಲ್ಲಿ ಸಿಹಿ ಬೇಕೇಬೇಕು. ರಾಜಸ್ಥಾನ, ಗುಜರಾತ್ಗಳಿಗೆ ಹೋದರಂತೂ ದಿನ ಆರಂಭವಾಗುವುದೇ ಸಿಹಿ ತಿನ್ನುವುದರಿಂದ. ಭಾರತೀಯರಿಗೆ ಸಿಹಿ ಕುರಿತು ಭಾವನಾತ್ಮಕ ನಂಟೂ ಇದೆ. ನಾವು ಖುಷಿ ಹಂಚಿಕೊಳ್ಳುವುದು ಎಲ್ಲರಿಗೂ ಸಿಹಿ ವಿತರಿಸುವ ಮೂಲಕವೇ ಅಲ್ಲವೆ?
ಸಿಹಿ ಜಾಸ್ತಿ ತಿಂದರೆ ಆಕ್ರಮಣಕಾರಿ ಮನೋಭಾವ ಹೆಚ್ಚುತ್ತದೆ, ಸಿಹಿ ವ್ಯಕ್ತಿಯನ್ನು ಅಗತ್ಯಕ್ಕಿಂತ ಹೆಚ್ಚು ಕ್ರಿಯಾಶೀಲಗೊಳಿಸುತ್ತದೆ ಎನ್ನುವ ನಂಬಿಕೆ ಪಾಶ್ಚಾತ್ಯರಲ್ಲಿ ಆಳವಾಗಿ ಬೇರೂರಿತ್ತು. ಕೆಲವು ಸಂಶೋಧಕರು ಅದರ ಸತ್ಯಾಸತ್ಯತೆ ತಿಳಿದೇಬೀಡೋಣ ಎನ್ನುವ ನಿರ್ಧಾರಕ್ಕೂ ಬಂದರು. ಶುರುವಿನಲ್ಲಿ ಕೆಲವು ಫಲಿತಾಂಶಗಳು ಆಘಾತಕಾರಿಯಾಗಿಯೇ ಇದ್ದವು. ಆದರೆ ಆ ಪ್ರಯೋಗಗಳೆಲ್ಲ ಪರಿಪೂರ್ಣ ನಿಯಂತ್ರಿತವಾಗಿದ್ದವು. ಅಂದರೆ ಪ್ರಯೋಗಕ್ಕೆ ಒಳಗಾದವರಿಗೆ ತಮ್ಮನ್ನು ಯಾರೋ ಗಮನಿಸುತ್ತಾರೆ ಎನ್ನುವುದು ಮೊದಲೇ ಗೊತ್ತಿತ್ತು. ಅಮೆರಿಕದ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆ ನಡೆಸಿದ ಪ್ರಯೋಗ ಸಕ್ಕರೆ, ಸಿಹಿ ಕುರಿತಾದ ಎಲ್ಲ ನಂಬಿಕೆಗಳೂ ಸುಳ್ಳೆ ಎನ್ನುವುದನ್ನು ರುಜುವಾತುಪಡಿಸಿತು.
'ಸಿಹಿ ತಿಂದಾಗ ಅತಿಯಾಗಿ ಆಡುತ್ತಾನೆ' ಎಂದು ಪಾಲಕರು ಹೇಳುತ್ತಿದ್ದ 18 ಮಕ್ಕಳು, ಸಕ್ಕರೆಗೆ ಸ್ಪಂದಿಸದ 12 ಮಕ್ಕಳನ್ನು ಆರಿಸಿಕೊಳ್ಳಲಾಯಿತು. ಅವರೆಲ್ಲ 2ರಿಂದ 12 ವರ್ಷ ವಯೋವಾನದವರಾಗಿದ್ದರು. ಎಲ್ಲರಿಗೂ ಅವರಿಗೆ ಗೊತ್ತಿಲ್ಲದಂತೆ, ಬೇರೆ ಬೇರೆ ವೇಳೆಗಳಲ್ಲಿ ಕಾರ್ಬೊನೇಟೆಡ್ ಲಿಂಬು ಪೇಯದಲ್ಲಿ ಕೃತಕ ಸಿಹಿ ಬೆರೆಸಿ ಕುಡಿಸಲಾಗುತ್ತಿತ್ತು. ನಂತರ ಎಲ್ಲರನ್ನೂ ಒಟ್ಟಾಗಿ ಆಟವಾಡಲು ಮೈದಾನಕ್ಕೆ ಕಳಿಸಲಾಗುತ್ತಿತ್ತು. ಎಲ್ಲರಿಗೂ ಅವರ ಅರಿವಿಗೆ ಬಾರದಂತೆ ವರ್ತನೆಯನ್ನು ದಾಖಲಿಸುವ ರಹಸ್ಯ ಯಂತ್ರ ಅಳವಡಿಸಲಾಗಿತ್ತು. ಪಾಲಕರು, ವಿಜ್ಞಾನಿಗಳು ಎಲ್ಲರಲ್ಲೂ ಆತಂಕ. ಯಾವ ಕ್ಷಣದಲ್ಲಿ ಏನಾಗುತ್ತದೊ? ಯಾವ ಮಕ್ಕಳು ಯಾವ ರೀತಿಯಲ್ಲಿ ವರ್ತಿಸುತ್ತಾರೊ? ಎಲ್ಲರಲ್ಲೂ ಕಳವಳ.
ಸಕ್ಕರೆಗೆ ಸೂಕ್ಷ್ಮವಾಗಿದ್ದ ಮಕ್ಕಳು ಯಾವ ರೀತಿ ವರ್ತಿಸಿದರು? ನಾಳೆ ನೋಡೋಣ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com