ಪ್ರವೀಣ ಪ್ರಸಂಗ
ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು... ಈ ಗೀತೆಯ ಆಶಯ ಪಡಿಮೂಡಿದ ವ್ಯಕ್ತಿತ್ವದ ಪ್ರತಿರೂಪವೇ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ.
ಕುಂದಾಪುರದಲ್ಲಿ ಪದವಿ ಮುಗಿಸಿ ದುಬೈಗೆ ಉದ್ಯೋಗ ಅರಸಿ, ಅಲ್ಲಿ ಹೊಟೇಲ್ನಲ್ಲಿ ಸೂಪರ್ವೈಸರ್ ಕೆಲಸಕ್ಕಿದ್ದ ಹುಡುಗ, ಇಂದು ಸಾಲು ಸಾಲು ಸ್ಟಾರ್ ಹೊಟೇಲ್ಗಳ ಸಾಮ್ರಾಜ್ಯದ ಒಡೆಯ. ಅನಿವಾಸಿ ಕನ್ನಡಿಗರ ಅಭಿಮಾನದ ಹೃದಯ ಸಾಮ್ರಾಜ್ಯದ ಅನಭಿಷಿಕ್ತ ರಾಜಕುಮಾರ.
ಕಂದಿದ ಕೆಂಬಣ್ಣದ ಮರಳುಗಾಡು ಕೊಲ್ಲಿ ರಾಷ್ಟ್ರ. ಮಾನವ ಪ್ರಯತ್ನದಿಂದಾಗಿ ಹಸಿರು ಬಣ್ಣಕ್ಕೆ ತಿರುಗಿರುವ ದುಬೈ ಎಂಬದು ಸ್ವರ್ಗ ಲೋಕವೇ ಧರೆಗೆ ಇಳಿದಂತಿದೆ. ಇಲ್ಲಿ ಪ್ರವೀಣ್ ಶೆಟ್ಟರ ಫಾರ್ಚೂನ್ ಗ್ರೂಪ್ ಹೊಟೇಲ್ಗಳಿರುವ ಗಗನಚುಂಬಿ ಕಟ್ಟಡಗಳು ಅರಬ್ ಸಂಸ್ಥಾನಕ್ಕೇ ಆಕರ್ಷಕ ಮೆರಗು ನೀಡಿವೆ, ಅರಬ್ಬರ ಪ್ರವಾಸೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದೆ.
ದೇಶದ ಅಭಿಮಾನ, ಸಂಸ್ಕೃತಿ ಕಳಕಳಿ ದೇಶಿಯರಿಗಿಂತ ವಿದೇಶದಲ್ಲಿರುವ ಭಾರತೀಯರಲ್ಲಿ ಒಂದಂಶ ಹೆಚ್ಚು. ಪ್ರವೀಣ್ ಶೆಟ್ಟರಲ್ಲಿ ಇದು ಮತ್ತೂ ಹೆಚ್ಚು. ಕೊಲ್ಲಿ ರಾಷ್ಟ್ರದಲ್ಲಿ ಸತ್ಯನಾರಾಯಣ ಪೂಜೆಯೇ ನಡೆಯಲಿ, ತುಳು ಪರ್ಬವೇ ಆಗಲಿ, ಯಕ್ಷಗಾನವೇ ಪ್ರದರ್ಶನವಾಗಲಿ, ವಿಶ್ವ ಕನ್ನಡ ಸಮ್ಮೇಳನವೇ ಆಯೋಜಿಸಲಿ, ಪ್ರವೀಣ ಶೆಟ್ಟರ ಸಂಘಟನಾತ್ಮಕ ಪ್ರಾಯೋಜಕತ್ವ, ಸ್ವಯಂ ಸೇವೆ ಖಚಿತ, ನೆರವು ಉಚಿತ.
ಇವರ ಗಗನಚುಂಬಿ ಕಟ್ಟಡಗಳು ಬಾಹ್ಯ ಸೌಂದರ್ಯ ಪ್ರಜ್ಞೆಗೆ ಸಾಕ್ಷಿಯಾದರೆ, ಆಂತರಿಕ ಸೌಂದರ್ಯ ಕಾಣಬೇಕಾದರೆ ಇವರ ಸೇವಾ ಕಾರ್ಯಗಳತ್ತ ಗಮನ ಹರಿಸಬೇಕು. ಬಂಟರಲ್ಲಿ ಎಂಥಾ ಸಿರಿವಂತ ತಂದೆಯಾದರೂ ಮಗಳ ಮದುವೆ ಬಳಿಕ ಬಡವನಾಗುತ್ತಾನೆ. ಈ ಸಮಸ್ಯೆ ಅರಿವು ಇರುವ ಪ್ರವೀಣ್ ಶೆಟ್ಟರು ಬಡ ಹೆಣ್ಣುಮಕ್ಕಳ ಮದುವೆಗೆ ಚಿನ್ನದ ತಾಳಿ, ಕರಿಮಣಿ ಉಚಿತವಾಗಿ ನೀಡುತ್ತಾರೆ.
ಗುಡಿ ಗೋಪುರಗಳಿಗೆ, ಸಂಘ ಸಂಸ್ಥೆಗಳಿಗೆ ದೇಣಿಗೆ ಜತೆಯಲ್ಲಿ ತಮ್ಮೂರಿನ ಅನಾಥಾಶ್ರಮದ ಐವರು ಮಕ್ಕಳ ದತ್ತು ಪಡೆದು ಶಿಕ್ಷಣ ಖರ್ಚುವೆಚ್ಚ ನೋಡಿಕೊಳ್ಳುತ್ತಾರೆ. ಬಡವರು ಸ್ವಂತ ಸೂರು ಕಟ್ಟಿಕೊಳ್ಳಲು ನೆರವಾಗುತ್ತಾರೆ. ಊರಿಗೆ ಬಂದಾಗ ಪ್ರತಿ ವರ್ಷ ಖುದ್ದು ರಕ್ತದಾನ ಮಾಡಿ, ಶಿಬಿರ ನಡೆಸಿ ಯುವಜನರಿಗೆ ಪ್ರೇರಣೆಯಾಗಿದ್ದಾರೆ. ದುಬೈಯ ಮುಖ್ಯ ಆಕರ್ಷಣೆ ಪ್ರವಾಸೋದ್ಯಮ. ಹೊಟೇಲ್ ಉದ್ಯಮದ ರೈಸಿಂಗ್ ಸ್ಟಾರ್ ಪ್ರವೀಣ್ ಶೆಟ್ಟರನ್ನು ದುಬೈ ಸರ್ಕಾರ ಗುರುತಿಸಿದೆ. ಭಾರತೀಯರಲ್ಲಿ ಅದರಲ್ಲಿಯೂ ಕನ್ನಡಿಗರಾಗಿ ಗುರುತಿಸಿಕೊಂಡಿದ್ದಾರೆ.
'4-5 ವರ್ಷದ ಹಿಂದೆ ಆರ್ಥಿಕ ಕುಸಿತ ಕಂಡಿತ್ತು, ಆಗ ಭಾರತೀಯರು ಉದ್ಯೋಗ ಕಳೆದುಕೊಂಡರು. ಎಲ್ಲರಲ್ಲಿಯೂ ಭರವಸೆ ಮೂಡಿಸುತ್ತಾ ಪ್ರವೀಣ್ ಯಂಗ್ ಇಂಡಿಯನ್ ಸ್ಟಾರ್ ಆಗಿ ಬೆಳೆದರು' ಇದು ದುಬೈಯಲ್ಲಿ 20 ವರ್ಷದಿಂದ ಕೆಲಸ ಮಾಡುತ್ತಿರುವ 'ಗಲ್ಫ್ ಕನ್ನಡಿಗ' ಬಿ.ಜಿ.ಮೋಹನದಾಸ್ರ ಮೆಚ್ಚುಗೆ ನುಡಿ.
ಕನ್ನಡಿಗರ ಕಲರವ
ಫಾರ್ಚೂನ್ ಸಂಸ್ಥೆಯಲ್ಲಿರುವ 1,500 ಉದ್ಯೋಗಿಗಳಲ್ಲಿ ಶೇ.60 ಕನ್ನಡಿಗರು. ಅಲ್ಲಿನ ನಿಯಮದಂತೆ ಸ್ಥಳೀಯರಿಗೆ ಮೀಸಲು ಇದೆ. ಇಲ್ಲವಾದರೆ ಶೇ.100 ಕನ್ನಡಿಗರೇ ಆಗುತ್ತಿತ್ತೋ ಏನೋ. ಕುಂದಾಪುರದ 'ಮೂರು ಮುತ್ತು' ನಾಟಕ ದುಬೈಗೆ ಪರಿಚಯಿಸಿದ್ದೇ ಶೆಟ್ಟರು, ಸಾಂಸ್ಕೃತಿಕ ರಾಯಭಾರಿ ಎನ್ನಬಹುದು. ಎಷ್ಟೇ ಸಣ್ಣ ನೆರವು ಕೇಳಿದರೂ ಸ್ಪಂದಿಸುತ್ತಾರೆ. ದುಬೈಯಲ್ಲಿ ಅನೇಕ ಶ್ರೀಮಂತ ಕನ್ನಡಿಗರನ್ನು ನೋಡಿದ್ದೇನೆ, ಅವರಲ್ಲಿ ಅತ್ಯಂತ ಸರಳ, ಸಜ್ಜನಿಕೆ ಈಗಲೂ ಉಳಿಸಿಕೊಂಡಿರುವ ವ್ಯಕ್ತಿ ಪ್ರವೀಣ್ ಶೆಟ್ಟಿ. ಅವರದು ತೋರಿಕೆಯ ಕರುಣೆ ಅಲ್ಲ, ಪ್ರಚಾರದ ನೆರವಲ್ಲ. ಬಹುತೇಕ ಶ್ರೀಮಂತರು ಒಂದಷ್ಟು ಹಣ ಒಟ್ಟುಗೂಡಿಸಿದ ಬಳಿಕ ವ್ಯಕ್ತಿತ್ವ ಹೆಚ್ಚಿಸಲು ಸಮಾಜಸೇವೆ ಕ್ಷೇತ್ರಕ್ಕೆ ಬರುತ್ತಾರೆ. ಆದರೆ ಪ್ರವೀಣ್ ಶೆಟ್ಟರಿಗೆ ತಮ್ಮೂರಿಗೆ, ಜನರಿಗೆ ಎನಾದರೂ ನೆರವು ಮಾಡಬೇಕು ಎಂಬ ಕಾಳಜಿ ಇದೆ. ಇದು ಬರೀ ಮೋಹನ್ದಾಸ್ ಮಾತಲ್ಲ, ಗಲ್ಫ್ಕನ್ನಡಿಗರ ಅಭಿಪ್ರಾಯವೂ ಹೌದು.
ದೈವ, ದೇಶ ಭಕ್ತಿ
'ಬೆಳೆವ ಸಿರಿ ಮೊಳಕೆಯಲ್ಲೇ ಎಂಬಂತೆ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿರುವಾಗಲೇ ವಿದ್ಯಾರ್ಥಿ ನಾಯಕರಾದರು. ವಾಲಿಬಾಲ್, ಕ್ರಿಕೆಟ್ ಆಡುತ್ತಿದ್ದ ಪ್ರವೀಣ್ ಸ್ಫುರದ್ರೂಪಿ. ವಕ್ವಾಡಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಂದೆಯ ಕಾಲದಿಂದಲೂ ಸೇವೆ ಮಾಡುತ್ತಿದ್ದರು. 2007ರಲ್ಲಿ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಜೀರ್ಣೋದ್ಧಾರ ಮಾಡಿಸಿದರು. ಊರು ಅಂದರೆ ಗೌರವ, ಅಭಿಮಾನ' ಇದು ಅವರ ಗೆಳೆಯ ವೇಣುಗೋಪಾಲ ಹೆಗ್ಡೆ ಮನದಾಳದ ಮಾತು.
ಹುಟ್ಟುವಾಗ ಉಸಿರು, ಸಾಯುವಾಗ ಹೆಸರು
ಪ್ರವೀಣ್ ಶೆಟ್ಟರ ಮುತ್ತಿನಂಥಾ ಮಾತು...
ದುಬೈಗೆ ಕೆಲಸ ಅರಸಿ ಹೋಗುವಾಗ ಹೋಟೇಲ್ ನಿರ್ಮಾಣ ಕನಸು ಇತ್ತಾ ?
ನಾನು ಕಲಿತದ್ದು ವಿಜ್ಞಾನ ಪದವಿ, ಸಂಬಂಧಿಕ ರಾಜ್ ಶೆಟ್ಟರ ಜತೆ ದುಬೈಗೆ ಹೋಗಿ ಅವರ ಹೊಟೇಲಲ್ಲಿ ಸ್ವಲ್ಪ ದಿನ ಕೆಲಸ ಮಾಡಿದೆ. ದಿನಕ್ಕೆ 16 ಗಂಟೆ ಕೆಲಸ ಮಾಡುತ್ತಿದ್ದೆ. ಇದೇ ವೇಳೆಗೆ ಅರಬ್ಬಿ ಕಲಿತೆ. ಅಲ್ಲಿಂದಲೇ ಮೆಡಿಕಲ್ ಕಂಪನಿಯಲ್ಲಿ ಕೆಲಸಕ್ಕೆ ಅಪ್ಲೈ ಮಾಡಿದೆ. ಆ ಕೆಲಸ ಸಿಗಲಿಲ್ಲ. ಬೇರೊಂದು ಹೊಟೆಲ್ನಲ್ಲಿ ಆಫರ್ ಬಂತು. ಬಳಿಕ ಅವರೇ ರೆಸ್ಟೋರೆಂಟ್ಗಳ ಉಸ್ತುವಾರಿ ಕೊಟ್ಟರು. 1998ರಲ್ಲಿ ಮದುವೆಯಾದಾಗ ನಾಲ್ಕು ಎಮಿರೆಟ್ಸ್ನಲ್ಲಿ 4 ರೆಸ್ಟೋರೆಂಟ್ ನಡೆಸುತ್ತಿದ್ದೆ. ಪ್ರತಿ ಎಮಿರೆಟ್ಸ್ಗೂ 100 ಕಿ.ಮೀ. ಅಂತರ, ಸತತ ಪ್ರಯಾಣ ದಿನದ 18 ಗಂಟೆ ಕೆಲಸ. ಕಾರಿಗೆ ನಾನೇ ಚಾಲಕ, ಮ್ಯಾನೇಜರ್, ಗುಮಾಸ್ತ ಎಲ್ಲ. ಮದುವೆ ಮರುವರ್ಷ ಪಾಲುದಾರಿಕೆಯಲ್ಲಿ ಹೊಟೇಲ್ ಮಾಡಿದೆ. 2008ರ ಬಳಿಕ ಸ್ವತಂತ್ರವಾಗಿ ಹೋಟೆಲ್ ಶುರಮಾಡಿದೆ.
ನೀವು ಕೂಡಿಟ್ಟ ಹಣ ಬೇರೆಯವರಿಗಾಗಿ ಖರ್ಚು ಮಾಡುವಾಗ ಏನೂ ಅನಿಸಲ್ವಾ ?
ನಾವು ದೇಹ ಬಿಟ್ಟು ಹೋಗುವಾಗ ಏನೂ ಸಂಪತ್ತು ಒಯ್ಯುವುದಿಲ್ಲ. ಕೋಟಿ ಮೌಲ್ಯದ ಕಾರಲ್ಲಿ ತಿರುಗುತ್ತಿರಬಹುದು, ಆದರೆ ನಾನು ಕೂಡಿಟ್ಟ ಹಣ ಝೀರೋ. ಕಷ್ಟದಲ್ಲಿ ಇರುವವರಿಗೆ ಹಣ ನೀಡುವಾಗ ಏನೋ ನೆಮ್ಮದಿ. ಒಳ್ಳೆ ಕೆಲಸ ಮಾಡಿದರೆ ಉದ್ಯಮದಲ್ಲಿ ದೇವರು ಒಳ್ಳೆಯದೇ ಮಾಡುತ್ತಾನೆ. ಈಗಲೂ ಬೆಳಗ್ಗೆ 11ರಿಂದ ರಾತ್ರಿ 11 ಗಂಟೆವರೆಗೂ ಕೆಲಸ ಮಾಡುತ್ತೇನೆ. ಯಾರಿಗೂ ಅನ್ಯಾಯ ಮಾಡಿಲ್ಲ, ಮೋಸದಿಂದ ಹಣ ಮಾಡಿಲ್ಲ.
ಸಿರಿವಂತರಿಗೆ ನಿಮ್ಮ ಸಂದೇಶ, ಕಿವಿ ಮಾತು?
ಹುಟ್ಟುವಾಗ ಉಸಿರು, ಸಾಯುವಾಗ ಹೆಸರು. ದುಡ್ಡು ಮಾಡಿಟ್ಟು ಯಾರಿಗೂ ಒಳ್ಳೆಯದು ಮಾಡದೆ ಹೋದ ಎಂದು ಹಂಗಿಸುವುದಕ್ಕಿಂತ ನೆರವು ನೀಡಿದ್ದನ್ನು ಸ್ಮರಣೆ ಮಾಡಿದರೆ ಖುಷಿ. ಇದ್ದವರು ನೆರವು ನೀಡಲೇ ಬೇಕು. ದೇಣಿಗೆ ಒಟ್ಟಾರೆ ಕೊಡುವುದಿಲ್ಲ. ಯಾರಿಗೂ ಏನೇ ಕೊಟ್ಟರೂ ಲೆಕ್ಕಾಚಾರ ಕೇಳುತ್ತೇನೆ.
ಅನಿವಾಸಿ ಕನ್ನಡಿಗರು ಕರ್ತವ್ಯ ?
ಹೆಸರಿಗಾಗಿ, ಪ್ರಚಾರಕ್ಕಾಗಿ ಕೆಲಸ ಮಾಡಬೇಡಿ, ಕನ್ನಡಿಗರು ಬಂದಾಗ ಅತಿಥಿಗಳಂತೆ ಸತ್ಕರಿಸಿ, ಊರಿಂದ ಕಲಾವಿದರು ಬಂದಾಗ ಮೆಚ್ಚಿ ಗೌರವಿಸಿ.
ಕನ್ನಡ ಎನೆ...
ಮಧ್ಯಮ ಮರ್ಗದ ಕೃಷಿ ಕುಟುಂಬದ ಕಾವಡಿ ಮೇಲ್ಮನೆ ನಾರಾಯಣ ಶೆಟ್ಟಿ, ವಾಕ್ವಾಡಿ ಸಾರ್ಕಲ್ಲು ಮನೆ ಸರೋಜಿನಿ ಶೆಟ್ಟಿ ಹಿರಿ ಮಗ. ಪತ್ನಿ ರೂಪಾಲಿ ಶೆಟ್ಟಿ. ಮಕ್ಕಳು ಪ್ರಾಚಿ, ಪರಮ್ ದುಬೈಯಲ್ಲಿ ವಿದ್ಯಾಭ್ಯಾಸ. ಮಕ್ಕಳು ಚೆನ್ನಾಗಿ ಕನ್ನಡ ಮಾತನಾಡುತ್ತಾರೆ.
ವಿಶ್ವಮಾನವ ಪ್ರಶಸ್ತಿ
ಹೊರನಾಡಿನಲ್ಲಿದ್ದು ಕನ್ನಡಿಗರಿಗೆ ಸೇವೆ ಸಲ್ಲಿಸಿದ್ದಕ್ಕಾಗಿ ಹಿರಿಯ ಸಾಹಿತಿ ಜವರೇಗೌಡರ ಅಧ್ಯಕ್ಷತೆಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ 'ಕುವೆಂಪು ವಿಶ್ವಮಾನವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
= ಜಿತೇಂದ್ರ ಕುಂದೇಶ್ವರ