ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಅರಿಭಯಂಕರ ನೋವುಗಳು!

Mainashree
Updated On : 21 Jul 2014, 12:35 pm

ದೈಹಿಕ ನೋವುಗಳಲ್ಲಿ ನರಕ ದರ್ಶನ ಮಾಡಿಸುವಂಥವು ಎರಡೇ ನೋವುಗಳು. ತಲೆ ನೋವು ಮತ್ತು ಹಲ್ಲು ನೋವು. ಇವೆರಡೂ ನಮ್ಮನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತವೆ. ಬೇರೆ ನೋವುಗಳು ಇವುಗಳಿಗಿಂತ ತೀವ್ರವಾಗಿದ್ದಿರಬಹುದು, ಆದರೆ ಇವುಗಳಂತೆ ದೀರ್ಘಕಾಲ ಕಾಡಿಸುವಂಥ ನೋವುಗಳಲ್ಲ. ಈ ನೋವುಗಳಿಂದ ಬಳಲುವವರು 'ತಲೆ ನೋವು, ಹಲ್ಲು ನೋವು ಮಾತ್ರ ಬರಬಾರದಪ್ಪ' ಎಂದು ಗೊಣಗಿಕೊಳ್ಳುವುದನ್ನು ಕೇಳಿಯೇ ಇರುತ್ತೀರಿ. ನಾವೇನೋ ತಮಾಷೆಗೆ 'ತಲೆ ಇದ್ದವರಿಗಷ್ಟೇ ತಲೆ ನೋವು ಬರುತ್ತಪ್ಪ' ಎಂದೋ, 'ಕ್ರಿಮಿಗಳು ಕೃತಘ್ನರಪ್ಪಾ, ಹಲ್ಲಿನಲ್ಲಿ ಆಶ್ರಯ ಕೊಟ್ಟರೂ ಪೀಡಿಸುತ್ತವೆ' ಎಂದೋ ರೇಗಿಸಬಹುದು. ಆದರೆ ನೋವಿನ ತೀವ್ರತೆ ಅನುಭವಿಸಿದವರಿಗಷ್ಟೇ ಗೊತ್ತು.
ತಲೆ ನೋವು ಎಂದರೆ ತಲೆ ಭಾಗದಲ್ಲಿನ ನೋವು. ತಲೆಯ ಯಾವುದೇ ಭಾಗದಲ್ಲಿ, ಕತ್ತಿನ ಬಳಿ ನೋವು ಕಾಣಿಸಿಕೊಳ್ಳಬಹುದು. ಇಡೀ ತಲೆಯನ್ನು ವ್ಯಾಪಿಸಿಕೊಂಡಿರಲೂಬಹುದು. ಯಾವುದೇ ಒಂದು ನಿರ್ದಿಷ್ಟ ಭಾಗದಲ್ಲಿ ಕಾಣಿಸಿಕೊಳ್ಳಲೂಬಹುದು. ಎಲ್ಲೇ ನೋವು ಕಾಣಿಸಿಕೊಂಡರೂ ಕತ್ತಿನ ಭಾಗದಲ್ಲಿಯೂ ನೋವಿನ ಅನುಭವ ಇದ್ದೇ ಇರುತ್ತದೆ. ಆದರೆ ಮೆದುಳಿಗೆ ಮಾತ್ರ ನೋವಿನ ಅನುಭವ ಆಗುವುದಿಲ್ಲ. ಏಕೆಂದರೆ ಮೆದುಳಿನಲ್ಲಿ ನೋವು ಸ್ವೀಕರಿಸುವ ನರತಂತುಗಳು ಇರುವುದಿಲ್ಲ. ಆದರೆ ಮೆದುಳಿನ ಸುತ್ತ ಇರುವ ನೋವು ಸಂವೇದಿ ರಚನೆಗಳಲ್ಲಿ ಆಗುವ ವ್ಯತ್ಯಾಸವೇ ತಲೆನೋವಿಗೆ ಕಾರಣ ಎನ್ನುವುದು ಮಾತ್ರ ಅಚ್ಚರಿ.
ಅಮೆರಿಕನ್ ಅಕಾಡೆಮಿ ಆಫ್ ನ್ಯೂರಾಲಜಿ ಪ್ರಮುಖವಾಗಿ ನಾಲ್ಕು ಬಗೆಯ ತಲೆನೋವುಗಳನ್ನು ಗುರುತಿಸಿದೆ. ರಕ್ತನಾಳಗಳಿಂದ ಉಂಟಾಗುವ ತಲೆನೋವು, ಮಾಂಸಖಂಡಗಳಿಂದ ಆಗುವ ತಲೆನೋವು (ಇದನ್ನು ಒತ್ತಡದ ಅಥವಾ ಟೆನ್ಷನ್ ತಲೆನೋವು ಎಂದೂ ಹೇಳುವುದುಂಟು), ಟ್ರ್ಯಾಕ್ಷನ್ (ಹಿಗ್ಗುವ) ತಲೆನೋವು, ಉರಿಯೂತದ ತಲೆನೋವು. ರಕ್ತನಾಳ ತಲೆನೋವು ಕಾಣಿಸಿಕೊಳ್ಳುವುದು ರಕ್ತನಾಳಗಳು ಬಾತುಕೊಂಡಾಗ ಅಥವಾ ರಕ್ತದ ಪೂರೈಕೆ ಜಾಸ್ತಿ ಆದಾಗ. ಮೈಗ್ರೇನ್ ಇದೇ ಸ್ವರೂಪದ್ದು. ತಲೆಯ ಒಂದು ಅಥವಾ ಎರಡೂ ಕಡೆ ನೋವು ಕಾಣಿಸಿಕೊಳ್ಳುತ್ತದೆ. ದೃಷ್ಟಿ ತೊಂದರೆ, ಹೊಟ್ಟೆಯಲ್ಲಿ ತಳಮಳ ಕೂಡ ಆಗಬಹುದು. ಹಿಗ್ಗುವ ತಲೆನೋವು ಎಂದರೆ ತಲೆಯಲ್ಲಿರುವ ನೋವು ಸಂವೇದಿ ರಚನೆಗಳು ಎಳೆದಾಗ, ಹಿಗ್ಗಿದಾಗ ಆಗುವಂತಹದ್ದು. ಒಮ್ಮೊಮ್ಮೆ ಪಾರ್ಶ್ವವಾಯುವಿನಂತಹ ಅತಿರೇಕಕ್ಕೂ ಇದು ದಾರಿ ಮಾಡಿಕೊಡಬಲ್ಲದು. ಹೀಗಾಗಿ ಉರಿಯೂತದ ತಲೆನೋವನ್ನು ಅನಾರೋಗ್ಯದ ಮುನ್ಸೂಚನೆ ಎಂದೂ ವೈದ್ಯಲೋಕ ಭಾವಿಸುವುದುಂಟು.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement