ಬಟ್ಟೆ ಚಿಟ್ಟೆ ಹಾಡು
ಯೂನಿಫಾರಂ ತೊಟ್ಟು ಅಸೆಂಬ್ಲಿಯಲ್ಲಿ ಪ್ರಾರ್ಥನೆ ಮಾಡುತ್ತಾ ನಿಂತಿರುವ ಶಾಲಾ ಮಕ್ಕಳನ್ನು ನೋಡಿದರೆ...
ಯೂನಿಫಾರಂ ತೊಟ್ಟು ಅಸೆಂಬ್ಲಿಯಲ್ಲಿ ಪ್ರಾರ್ಥನೆ ಮಾಡುತ್ತಾ ನಿಂತಿರುವ ಶಾಲಾ ಮಕ್ಕಳನ್ನು ನೋಡಿದರೆ, ಎಲ್ಲರೂ ಒಂದೇ ರೀತಿ ಕಾಣುತ್ತಾರೆ. ಇದೇ ಮಕ್ಕಳು, 10ನೇ ತರಗತಿ ಮುಗಿಸಿ ಕಾಲೇಜು ಮೆಟ್ಟಿಲೇರಿದಂತೆ, ಗರಿಗೆದರಿ ಮನಬಂದಂತೆ ಡ್ರೆಸ್ ಮಾಡಿಕೊಳ್ಳುವುದು ಸರ್ವೇಸಾಮಾನ್ಯ. ಇದು ಕಟ್ಟು ಹರಿಯುವ ಸಮಯ. ಹೀಗಿರುವಾಗ ಕಾಲೇಜಿನಲ್ಲೂ ಡ್ರೆಸ್ ಕೋಡ್, ಇಲ್ಲೂ ಯೂನಿಫಾರ್ಮ್ ಎಂದರೆ...!
ವ್ಯಕ್ತಿಯ ನಿಜ ಸ್ವರೂಪವನ್ನು ಅವನ ವರ್ತನೆ, ಬಟ್ಟೆಬರೆಯಿಂದ ತಿಳಿಯಬಹುದು. ಕಾಲೇಜಿಗೆ ಬರುವ ವೇಳೆಗೆ ವಿದ್ಯಾರ್ಥಿಗಳಿಗೆ ಸಂದರ್ಭಕ್ಕೆ ತಕ್ಕಂತೆ ಉಡುಗೆ ತೊಡುವಷ್ಟು ಪ್ರಬುದ್ಧತೆ ಬಂದಿರುತ್ತದೆ. ಕಾಲೇಜು ಸ್ವಂತಿಕೆ ವ್ಯಕ್ತಪಡಿಸಲು ಅವಕಾಶವಿರುವ ಜಾಗವೂ ಹೌದು. ಪ್ರತಿದಿನ ಒಂದೇ ರೀತಿಯ ಯೂನಿಫಾರ್ಮ್ ತೊಡುವುದು ನೀರಸ. ಆದರೆ ವಿದ್ಯಾರ್ಥಿಗಳು ತೊಡುವ ಉಡುಗೆ ಅವರ ಚಾರಿತ್ರ್ಯ, ಅಭಿರುಚಿಯನ್ನು ಪ್ರತಿಬಿಂಬಿಸುತ್ತದೆ.
ಕಾಲೇಜಿನಲ್ಲಿ ಡ್ರೆಸ್ಕೋಡ್ ಇರಬೇಕೇ ಬೇಡವೇ ಎಂಬ ವಾದ- ವಿವಾದ ಕಾಲಾಂತರದಿಂದ ನಡೆದು ಬಂದಿದೆ. ಇದೇ ಸರಿ ಇದೇ ತಪ್ಪು ಎಂದು ತೀರ್ಮಾನಿಸಲಾಗಿಲ್ಲ. ಕೆಲ ಕಾಲೇಜಿನ ಹಿರಿಯರು ಡ್ರೆಸ್ ಕೋಡ್ ಇರಬೇಕು ಅಂದರೆ, ಇನ್ನೆಲ್ಲರೂ ಫ್ರೀಡಮ್ ಇರಲಿ ಆದರೆ ಡೀಸೆನ್ಸಿ ಕಾಪಾಡಲಿ ಅಂತಾರೆ.
ಕಾಲೇಜಿನಲ್ಲಿ ಡ್ರೆಸ್ ಕೋಡ್, ಯೂನಿಫಾರ್ಮ್ ಬೇಡ ಅನ್ನುವ ವಿದ್ಯಾರ್ಥಿ, ಐಟಿ ಕಂಪನಿ ಸೇರಿದಾಗ ಅಲ್ಲಿ ಡ್ರೆಸ್ ಕೋಡ್ಗೆ ಬದ್ಧರಾಗಲೇಬೇಕು. ಇಲ್ಲಿಂದಲೇ ಅದರ ರೂಡಿಯಾಗಿದ್ದರೆ ಒಳಿತು ಅನ್ನುವುದು ಸರಿ. ಕೋ ಎಜುಕೇಷನ್ ಇರುವೆಡೆ ಹುಡುಗ- ಹುಡುಗಿಯರಿಬ್ಬರಿಗೂ ಡ್ರೆಸ್ ಕೋಡ್ ಕಡ್ಡಾಯ ಮಾಡುವುದು ಒಳಿತು.
ಡ್ರೆಸ್ ಕೋಡ್ನಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ತರಲು ಸಾಧ್ಯ. ಕ್ಯಾಂಪಸ್ನಲ್ಲಿ ಆರೋಗ್ಯಕರ ವಾತಾವರಣ ಕಲ್ಪಿಸಲು ಡ್ರೆಸ್ ಕೋಡ್ ಇರುವುದರಲ್ಲಿ ತಪ್ಪಿಲ್ಲ.
'ನಮ್ಮ ಕಾಲೇಜಿನಲ್ಲಿ ಪಿ.ಯು., ಯು.ಜಿ., ಪಿ.ಜಿ ಹೀಗೆ ವಿವಿಧ ವಿಂಗ್ಗಳಿವೆ. ಅವರಿಗೆ ವಿವಿಧ ಕಲರ್ ಡ್ರೆಸ್ ಕೋಡ್ ನಿಗದಿಸಲಾಗಿದೆ. ಇದರಿಂದ ಐಟೆಂಟಿಫಿಕೇಶನ್ ಸುಲಭ ಎಂಬ ಉದ್ದೇಶ ಅಷ್ಟೆ. ಮೊದಮೊದಲು ಪೇರೆಂಟ್ಸ್, ಮಕ್ಕಳು, ಹೇಗೆ ಇದನ್ನು ಸ್ವೀಕರಿಸುತ್ತಾರೆ ಅನ್ನೋ ಯೋಚನೆಯಿತ್ತು. ಯಾಕೇಂದ್ರೆ, ಮಕ್ಕಳು ಸ್ಕೂಲ್ ಮುಗಿಸುವವರೆಗೂ ಯಾನಿಫಾರ್ಮ್ ತೊಟ್ಟು ಬೇಸರ ಬಂದಿರುತ್ತೆ. ಕಲರ್ಫುಲ್ ಆಗಿರಕ್ಕೆ ಇಷ್ಟ ಪಡ್ತಾರೆ. ನಮ್ಮಲ್ಲಿ ಇದನ್ನು ಎಲ್ಲರೂ ಸ್ವೀಕರಿಸಿ ಸಹಕರಿಸಿದ್ದಾರೆ. ನಮ್ಮಲ್ಲಿ ಹಾಗೆ ನೋಡಿದರೆ ಎಲ್ಲಾ ಸಭ್ಯವಾಗಿ ಆಗಿ ಡ್ರೆಸ್ ಮಾಡಿಕೊಳ್ತಾರೆ. ಎಲ್ಲೋ ಒಂದಿಬ್ಬರು ಡೀಸೆಂಟಾಗಿಲ್ಲದಿದ್ದರೆ ಆಟೋ ಮಾಡಿ ಮನೆಗೆ ವಾಪಸ್ ಕಳಿಸಿರುವುದುಂಟು' ಅಂತಾರೆ ಬೆಂಗಳೂರಿನ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜಿನ ಡೈರೆಕ್ಟರ್ ಡಾ. ಟಿ.ಎಲ್. ಶಾಂತ.
'ಸ್ಕೂಲ್ ಲೆವೆಲ್ನಲ್ಲಿ ಸಮವಸ್ತ್ರ ಇರುತ್ತೆ. ಮಕ್ಕಳಲ್ಲಿ ಏಕತೆ ಬೆಳೆಸಲು ಅನುಸರಿಸ್ತಾರೆ ಅಷ್ಟೆ. ಅದೇ ಮಕ್ಕಳು, ಕಾಲೇಜಿಗೆ ಸೇರಿದಾಗ ಅವರಲ್ಲಿ ಅನೇಕ ಬದಲಾವಣೆ ಕಂಡುಬರುತ್ತವೆ. ದೈಹಿಕ, ಮಾನಸಿಕವಾಗಿ ಇಂದಿನ ಮಕ್ಕಳಿಗೆ ಎಲೆಕ್ಟ್ರಾನಿಕ್ ಮೀಡಿಯಾದಿಂದ ದುಷ್ಪರಿಣಾಮವೇ ಹೆಚ್ಚು. ಹಾಗಾಗಿ ಕಾಲೇಜಿನಲ್ಲಿ ಡ್ರೆಸ್ ಕೋಡ್ನ್ನು ಯೂನಿಫಾರ್ಮ್ ಅಂತ ವಿಧಿಸದೇ ನಮ್ಮ ಕಾಲೇಜಿನಲ್ಲಿ ಹೇಳಿರುವಂತೆ, ಸಾಮಾಜಿಕವಾಗಿ ಒಪ್ಪಬಹುದಾದ ಸಭ್ಯ ಡ್ರೆಸ್ ತೊಡಲು ತಿಳಿಸಿದರೆ ಸಾಕು' ಅಂತಾರೆ ನಗರದ ಪಿಇಎಸ್ ಫಾರ್ಮೆಸಿ ಕಾಲೇಜಿನ ಪ್ರಿನ್ಸಿಪಾಲ್ ಮತ್ತು ರಾಜೀವ್ ಗಾಂಧಿ ಯೂನಿವರ್ಸಿಟಿಯ ಡೀನ್ ಡಾ. ಮೋಹನ್.
ನಗರದ ಶೇಷಾದ್ರಿಪುರಂ ಎಜುಕೇಷನಲ್ ಸಂಸ್ಥೆಗಳ ಜನರಲ್ ಸೆಕ್ರೆಟರಿ ಡಾ. ವೂಡೇ ಐ. ಕೃಷ್ಣರವರು ಡ್ರೆಸ್ ಕೋಡ್ ಬಗ್ಗೆ ಹೀಗೆ ಹೇಳುತ್ತಾರೆ: ಡ್ರೆಸ್ಕೋಡ್ ತುಂಬಾ ಅವಶ್ಯ ಇದೆ ಇಂದು. ಯಾಕೆ ಅಂದ್ರೆ ಶಿಕ್ಷಣದ ಮುಖ್ಯ ಉದ್ದೇಶವೇ ಒಂದು ವ್ಯವಸ್ಥಿತ ಸುಸಂಸ್ಕೃತ ಸಮಾಜ ನಿರ್ಮಾಣ. ಅದಕ್ಕೆ ಸರಿಯಾದ ವಾತಾವರಣ ನಿರ್ಮಾಣ ಮಾಡಬೇಕು. ಇದು ಮನೆಯಲ್ಲಿರಬಹುದು, ವಿದ್ಯಾಸಂಸ್ಥೆಯಲ್ಲಿರಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಡ್ರೆಸ್ಕೋಡ್ಗೆ ಹೊಂದಿಕೊಳ್ಳಬೇಕು. ಹೆಣ್ಣು ಮಕ್ಕಳಿಗೆ ಮೊದಲ ಶಿಕ್ಷಕಿ ತಾಯಿ. ಮನೆಯಲ್ಲಿ ಮಕ್ಕಳಿಗೆ ಡೀಸೆಂಟಾಗಿ ಡ್ರೆಸ್ ಮಾಡಿಕೊಳ್ಳುವ ಮೊದಲ ಪಾಠ ಕಲಿಸಬೇಕು. ಹಾಗೇ ಶಿಕ್ಷಕರೂ ತಿಳಿಹೇಳಬೇಕು. ಮಕ್ಕಳಿಗೆ, ಅವರ ಡ್ರೆಸ್ ಮೂಲಕ ಅವರ ವ್ಯಕ್ತಿತ್ವದ ಪರಿಚಯವಾಗುತ್ತೆ ಎನ್ನುವ ಸಂದೇಶ ತಲುಪಿಸಬೇಕು. ಪ್ರತಿ ಕಾಲೇಜಿನಲ್ಲೂ ಅವರದೇ ಆದ ಸಂಸ್ಕೃತಿ ಇರುತ್ತೆ, ಒಂದು ಐಡೆಂಟಿಟಿ ಇರುತ್ತೆ, ಮಕ್ಕಳೂ ಅದನ್ನು ಒಪ್ಪಿಕೊಳ್ತಾರೆ. ಇದನ್ನು ನಿರಂತರವಾಗಿ ಕಾಪಾಡಿಕೊಳ್ಳಬೇಕು.
'ಕಾಲೇಜ್ ಲೆವೆಲ್ನಲ್ಲಿ ಡ್ರೆಸ್ ಕೋಡ್ ಕಡ್ಡಾಯ ಇರಬಾರದು. ಏಕತೆ ಹಾಗೂ ಸಭ್ಯತೆ ಕಾರಣಕ್ಕಾಗಿ ಡ್ರೆಸ್ ಕೋಡ್ ಪರಿಚಯ ಇರಬೇಕು. ಶಾಲಾ ಮಟ್ಟದಲ್ಲಿ ಎಲ್ಲರೂ ಒಂದು ಎನ್ನುವ ಯೂನಿಫಾರ್ಮಿಟಿ ಇರುತ್ತೆ. ಮಗು, ಶಾಲೆಯಲ್ಲಿ ತೊಡುವ ಉಡುಗೆಗಿಂತಅವನ ಶೈಕ್ಷಣಿಕ ಸಾಧನೆಯಿಂದ ಗ್ರೇಡ್ ಪಡೆಯುತ್ತದೆ. ಅಲ್ಲಿ ಮಗುವಿಗೆ ಯಾವುದೇ ರೀತಿಯ ಆಮಿಷಗಳು ಇರುವುದಿಲ್ಲ. ಕಾಲೇಜಿಗೆ ಬಂದಾಗ ನಾವು ಅವರಿಗೆ ತಮ್ಮನ್ನು ತಾವು ಅಭಿವ್ಯಕ್ತಪಡಿಸಲು ಸ್ವಾತಂತ್ರ್ಯ ಕೊಡಬೇಕು. ಇಲ್ಲಿ ಡೀಸೆನ್ಸಿ ಮತ್ತು ಆಸಕ್ತಿ ಎರಡೂ ಇರುತ್ತೆ. ತಮ್ಮ ನಿರ್ಧಾರ ತಾವೇ ತೆಗೆದುಕೊಳ್ಳುವ ಪ್ರಬುದ್ಧತೆ ಇರುತ್ತೆ' ಅಂತಾರೆ ನಗರದ ಎಂ.ಎಸ್. ರಾಮಯ್ಯ ಶಿಕ್ಷಣ ಸಂಸ್ಥೆಗಳ ಡೈರೆಕ್ಟರ್ ಕೋದಂಡ ರಾಮಯ್ಯ. ಇವರ ಕಾಲೇಜಿನಲ್ಲಿ ಡ್ರೆಸ್ಕೋಡ್ ನಿಗದಿಗೊಂಡಿಲ್ಲವಾದರೂ, ಹಾಸ್ಟೆಲ್ ಮತ್ತು ಕ್ಯಾಂಪಸ್ನಲ್ಲಿ ವಿದ್ಯಾರ್ಥಿ ಮೇಲ್ವಿಚಾರಕರಿದ್ದು, ಅವರು ಕಿರಿಯರನ್ನು ಗೈಡ್ ಮಾಡುತ್ತಾರೆ.
- ಗೀತಾ ಶ್ರೀನಿವಾಸನ್