ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ವಿವಾದ ಸನಿಯ

ವಿವಾದಗಳು ಕೆಲವರನ್ನು ಬೆನ್ನತ್ತಿ ಬರುತ್ತವೆ. ಕೆಲವರು ವಿವಾದಗಳನ್ನು ಬೆನ್ನತ್ತಿ ಹೋಗುತ್ತಾರೆ. ಇನ್ನೂ ಕೆಲವರಿಗೆ ವಿವಾದಗಳು...

Rashmi Kasaragodu
Updated On : 27 Jul 2014, 3:02 am

ವಿವಾದಗಳು ಕೆಲವರನ್ನು ಬೆನ್ನತ್ತಿ ಬರುತ್ತವೆ. ಕೆಲವರು ವಿವಾದಗಳನ್ನು ಬೆನ್ನತ್ತಿ ಹೋಗುತ್ತಾರೆ. ಇನ್ನೂ ಕೆಲವರಿಗೆ ವಿವಾದಗಳು ಹೊಂಚು ಹಾಕಿ ಕಾಯುತ್ತಿರುತ್ತವೆ. ಟೆನಿಸ್ ತಾರೆ ಸಾನಿಯಾ ಮಿರ್ಜಾ ಈ ಮೂರನೆಯ ಗುಂಪಿಗೆ ಸೇರುತ್ತಾರೆ. ಆಕೆ ಟೆನಿಸ್ ಹೊರತುಪಡಿಸಿದರೆ ಹೆಚ್ಚು ಪ್ರಸಿದ್ಧಿ ಗಳಿಸಿರುವುದು ವಿವಾದಗಳಿಂದಾಗಿಯೇ.
ಹೊಸ ತೆಲಂಗಾಣ ರಾಜ್ಯಕ್ಕೆ ಸಾನಿಯಾರನ್ನು  ಪ್ರಚಾರ ರಾಯಭಾರಿ ಆಗಿ ನೇಮಿಸಿರುವುದು ಇದೀಗ ವಿವಾದದ ಕೇಂದ್ರಬಿಂದು. ಸಾನಿಯಾ ಪಾಕಿಸ್ತಾನದ ಸೊಸೆ, ಆಕೆ ಇಲ್ಲಿಯವಳಲ್ಲ, ಹಾಗಾಗಿ ಸಾನಿಯಾರನ್ನು ಈ ಹುದ್ದೆಗೆ ನೇಮಿಸಿದ್ದು ಸರಿಯಲ್ಲ ಎಂಬುದು ಬಿಜೆಪಿ ನಾಯಕ ಲಕ್ಷ್ಮಣ್ ಕ್ಯಾತೆ. ತಾನು ಎಂದೆಂದಿಗೂ ಭಾರತೀಯಳು ಎಂಬುದು ಸಾನಿಯಾ ಪ್ರತಿಕ್ರಿಯೆ. ಕಾಂಗ್ರೆಸ್ ನಾಯಕ ವಿ. ಹನುಮಂತರಾವ್ ಸಹಾ ಸಾನಿಯಾ ನೇಮಕಕ್ಕೆ ಕೊಂಕು ನುಡಿದಿದ್ದಾರೆ.
ಸಾನಿಯಾ ಹುಟ್ಟಿದ್ದು ಮಹಾರಾಷ್ಟ್ರದಲ್ಲಿ. ನೆಲೆಸಿದ್ದು ಆಂಧ್ರಪ್ರದೇಶದಲ್ಲಿ. ವಿವಾಹವಾಗಿರುವುದು ಪಾಕಿಸ್ತಾನದವನನ್ನು. ಹಾಗಾಗಿ ತೆಲಂಗಾಣ ರಾಜ್ಯದ ಪ್ರಚಾರ ರಾಯಭಾರಿ ಆಗುವುದು ಹೇಗೆ ಸಾಧ್ಯ ಎಂದು ಈ ನಾಯಕರ ರಾಗ. ನಾನು ಹುಟ್ಟುವ ಸಮಯದಲ್ಲಿ ತಾಯಿಗೆ ಪ್ರಸವದಲ್ಲಿ ಸಮಸ್ಯೆ ಉಂಟಾಗಿತ್ತು. ಉತ್ತಮ ವೈದ್ಯಕೀಯ ಚಿಕಿತ್ಸೆಗಾಗಿ ಮಹಾರಾಷ್ಟ್ರಕ್ಕೆ ಹೋಗಬೇಕಾಯಿತು. ಇನ್ನು ನನ್ನ ಮನೆತನದ ಮಂದಿ, ಪೂರ್ವಜರು ನೂರು ವರ್ಷಕ್ಕೂ ಹೆಚ್ಚು ಕಾಲದಿಂದ ಆಂಧ್ರಪ್ರದೇಶದಲ್ಲಿ ನೆಲೆಸಿದ್ದಾರೆ. ನಾನು ಸದಾ ಭಾರತಕ್ಕಾಗಿ ಆಡುತ್ತೇನೆ. ಜಿ ವ ಇರುವವರೆಗೂ ಭಾರತದ ಪೌರಳಾಗಿಯೆ ಇರುತ್ತೇನೆ ಎಂದು ಸಾನಿಯಾ ಭಾವುಕಳಾಗಿದ್ದಾಳೆ.
ಸದಾ ಸಾನಿಯಾ ವಿವಾದಗಳಲ್ಲಿ ಸಿಕ್ಕಿಹಾಕಿಕೊಳ್ಳುವುದು ಏಕೆ ಎಂಬುದು ಎಲ್ಲರ ಪ್ರಶ್ನೆ. ಆಟದ ಸಮಯದಲ್ಲಿ ಸಾನಿಯಾ ಧರಿಸುವ ಉಡುಪಿನ ಬಗ್ಗೆ ವಿವಾದ ಉಂಟಾಗಿತ್ತು. ಶಾರ್ಟ್ ಸ್ಕರ್ಟ್ ಇಸ್ಲಾಂ ಧರ್ಮಕ್ಕೆ ವಿರುದ್ಧ ಎಂದು ಕೆಲವು ಮುಸ್ಲಿಂ ಧಾರ್ಮಿಕ ನಾಯಕರು ತಗಾದೆ ತೆಗೆದಿದ್ದರು. ಸಾನಿಯಾಗೆ ಆಡಲು ಬಿಡುವುದಿಲ್ಲ ಎಂದು ಕೆಲವು ಮುಸ್ಲಿಂ ಧಾರ್ಮಿಕ ಸಂಘಟನೆಗಳು ಬೆದರಿಕೆಯನ್ನೂ ಒಡ್ಡಿದ್ದವು.
2008ರ ಜನವರಿಯಲ್ಲಿ ಭಾರತದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದರು ಎಂದು ಸಾನಿಯಾ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು. ಸಮಾರಂಭವೊಂದರಲ್ಲಿ, ಸಾನಿಯಾ ಮೇಜಿನ ಮೇಲೆ ಕಾಲು ಮೇಲೆ ಕಾಲು ಹಾಕಿ ಕುಳಿತದ್ದೂ, ಆಕೆಯ ಮುಂದೆ ರಾಷ್ಟ್ರಧ್ವಜವಿದ್ದುದೂ ಸ್ಪಷ್ಟವಾಗಿಯೇ ಇತ್ತು. ಆಗ ಸಾನಿಯಾಗೆ ಒದಗಿಸಿದ್ದ ಭದ್ರತೆಗೆ ಆಕೆ ಶುಲ್ಕ ಪಾವತಿ ಮಾಡಿಲ್ಲ, ಹಾಗಾಗಿ ಈ ಸೌಲಭ್ಯ ವಾಪಸ್ ಪಡೆಯಲಾಗುವುದು ಎಂದು ಹೈದರಾಬಾದಿನ ಪೊಲೀಸ್ ಆಯುಕ್ತರು ಪತ್ರ ಬರೆದದ್ದೂ ವಿವಾದವಾಗಿತ್ತು.
ಸಾನಿಯಾ ಬಿಪಿಎಲ್ ಕುಟುಂಬಕ್ಕೆ ಸೇರಿದವಳು ಎಂಬ ವಿವಾದ ಕಾಡಿತ್ತು. ಕೋಟ್ಯಧಿಪತಿಯಾಗಿರುವ ಸಾನಿಯಾ ಭಾವಚಿತ್ರವಿದ್ದ ಈ ಕಾರ್ಡ್ ಅನ್ನು ವಿಜಯನಗರದ ಲಕ್ಷ್ಮಿ ಎಂಬವರು ವಿತರಿಸಿದ್ದರು. 2008ರ ಜುಲೈನಲ್ಲಿ ಸಾನಿಯಾಗೆ ಬೆದರಿಕೆ ಕರೆ ಹಾಕಿದ ಆರೋಪದ ಮೇಲೆ ಸಿವಿಲ್ ಇಂಜಿನಿಯರ್ ಆಗಿದ್ದ ಮೊಹಮ್ಮದ್ ಆಶ್ರಫ್(28) ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದರು. ಸಾನಿಯಾ ತನ್ನನ್ನು ಪ್ರೀತಿಸಿದ್ದಾಳೆ, ತನ್ನನ್ನೇ ಮದುವೆಯಾಗಬೇಕು ಎಂಬುದು ಅವನ ತಕರಾರು. ಆತ  ಆಕೆಯ ಮನೆಗೂ ತೆರಳಿ ಜಗಳ ಮಾಡಿದ್ದ. ನಂತರ ಬಾಲ್ಯದ ಗೆಳೆಯ ಸೊಹ್ರಾಬ್ ಮಿರ್ಜಾ ಜತೆ ಮಾಡಿಕೊಂಡಿದ್ದ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ನಾವು ಸರಿಯಾದ ಜೋಡಿಯಲ್ಲ ಎಂದು ಆಕೆಯೇ ಹೇಳಿದ್ದಳು. ಅದು ಸುದ್ದಿಯಾಯಿತು. 2012ರಲ್ಲಿ ಮಹೇಶ್ ಭೂಪತಿ ಮತ್ತು ಲಿಯಾಂಡರ್ ಪೇಸ್ ಮಧ್ಯೆ ಕಿತ್ತಾಟವಾಯ್ತು. ಪೇಸ್ ತಾನು ಸಾನಿಯಾ ಜತೆ ಆಡುವುದಾಗಿ ಹೇಳಿದ. ಆದರೆ ಸಾನಿಯಾಗೆ ಭೂಪತಿ ಜತೆ ಆಡುವುದು ಇಷ್ಟವಿತ್ತೇ ಹೊರತು ಪೇಸ್ ಜತೆಗಲ್ಲ.  

- ಪ್ರೇಮರಾಜ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments