ವಿಶ್ವ ಮಾನ್ಯತೆ
ನೋಡಲು ಚಾಕೊಲೇಟ್ ಬಾಯ್ನಂತೆ ಕಾಣುವ ಈ ಯುವಕನ ಹೆಸರು ವಿಶ್ವಜಿತ್ ಹರೀಶ್. ಪ್ರತಿಷ್ಠಿತ ವಾಗ್ದೇವಿ ಶಿಕ್ಷಣ ...
ನೋಡಲು ಚಾಕೊಲೇಟ್ ಬಾಯ್ನಂತೆ ಕಾಣುವ ಈ ಯುವಕನ ಹೆಸರು ವಿಶ್ವಜಿತ್ ಹರೀಶ್. ಪ್ರತಿಷ್ಠಿತ ವಾಗ್ದೇವಿ ಶಿಕ್ಷಣ ಸಂಸ್ಥೆಯ ಹರೀಶ್ರ ಪುತ್ರ. ಓದಿದ್ದು ಇಂಟರ್ ನ್ಯಾಷನಲ್ ಹಾಸ್ಪಿಟಾಲಿಟಿ ಆಂಡ್ ಟೂರಿಸಂ ಮ್ಯಾನೇಜ್ಮೆಂಟ್. ಆದರೆ, ಈತ ಕನಸು ಕಾಣುತ್ತಿರುವುದು ಮಾತ್ರ ಕ್ಯಾಮೆರಾ ಮುಂದೆ ನಿಂತು ನಟಿಸಬೇಕೆಂಬುದು. ಹೌದು, ರಿಯಲ್ ಎಸ್ಟೇಟ್ ಹಾಗೂ ರೆಸಾರ್ಟ್ ಉದ್ಯಮದಲ್ಲಿ ತೊಡಗಿಸಿಕೊಂಡು ಯಸ್ಸಿನ ಉತ್ತುಂಗದಲ್ಲಿರುವ ವಿಶ್ವಜಿತ್ ಹರೀಶ್ಗೆ ನಟನೆ ಎಂಬುದು ತೀರಾ ಚಿಕ್ಕ ವಯಸ್ಸಿನಲ್ಲೇ ಆಕರ್ಷಿಸಿರುವ ಕ್ಷೇತ್ರ. ಅಲ್ಲದೆ ಕಾಲೇಜು ದಿನಗಳಲ್ಲೇ ನಾಟಕಗಳಲ್ಲಿ ಪಾತ್ರ ಮಾಡುತ್ತ, ಕಾಲೇಜು ಮುಗಿದ ಮೇಲೆ ಸಾಕ್ಷ್ಯಚಿತ್ರಗಳನ್ನೂ ನಿರ್ಮಿಸಿ, ಕೆಲವು ಸಾಕ್ಷ್ಯಚಿತ್ರಗಳಲ್ಲಿ ತಾನೇ ಬಣ್ಣ ಹಚ್ಚಿದ್ದು ಕೂಡ ಸಿನಿಮಾಗಳಲ್ಲಿ ಅಭಿನಯಿಸಬೇಕೆಂಬ ಆಸೆಯನ್ನು ಮತ್ತಷ್ಟು ಗಟ್ಟಿಯಾಗಿಸಿದೆ.
ಅಂದಹಾಗೆ, ವಿಶ್ವಜಿತ್ ಹರೀಶ್ ಸದ್ಯದಲ್ಲೇ ಒಂದು ದೊಡ್ಡ ಚಿತ್ರದ ಮೂಲಕ ಗಾಂಧಿನಗರಕ್ಕೆ ಕಾಲಿಡುತ್ತಿದ್ದಾರೆ. ಈ ಚಿತ್ರದ ಹಿಂದಿರುವುದು ನಾಟಕಕಾರ, ನಟ, ನಿರ್ದೇಶಕ 'ಆಲ್ ದಿ ಬೆಸ್ಟ್' ಖ್ಯಾತಿಯ ಯಶವಂತ ಸರದೇಶಪಾಂಡೆ. ಚಿತ್ರರಂಗದಲ್ಲಿ ಯಶವಂತ್ರ ಹೆಸರನ್ನು ಕೇಳದವರು ಕಡಿಮೆ. ತಮ್ಮದೇ ಆದ ವಿಶಿಷ್ಟ ಅಭಿನಯ, ಭಿನ್ನ ಮ್ಯಾನರಿಸಂನ ಡೈಲಾಗ್ ಡೆಲೆವರಿಯಿಂದಲೇ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಸರದೇಶ್ ಪಾಂಡೆ, 'ಐಡಿಯಾ ಮಾಡ್ಯಾರ' ಚಿತ್ರದ ನಂತರ ಮತ್ತೊಮ್ಮೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಈ ಬಾರಿ ಅದ್ಧೂರಿಯಾಗಿ ಚಿತ್ರ ಆರಂಭಿಸಲು ಹೊರಟಿರುವ ಯಶವಂತ್, ಹೊಸ ಪ್ರತಿಭೆ ವಿಶ್ವಜಿತ್ ಹರೀಶ್ರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.
'ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ ಇದ್ದರೂ ನಾನು ಬ್ಯುಸಿನೆಸ್ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದೆ. ಸ್ವತಃ ನಾನೇ ಎರಡು ಕಂಪನಿಗಳನ್ನು ಆರಂಭಿಸಿರುವುದರಿಂದ ನಟನೆಯ ಕನಸು ಪದೇಪದೆ ಮುಂದೂಡುತ್ತ ಬಂದೆ. ಆದರೆ, ಸಾಕ್ಷ್ಯಚಿತ್ರಗಳನ್ನು ಮಾಡುವಾಗ ನನ್ನ ಸ್ನೇಹಿತರೇ ಚಿತ್ರಗಳಲ್ಲಿ ನಟಿಸುವಂತೆ ಒತ್ತಾಯಿಸಿದರು. ಅಲ್ಲದೆ ಸಾಮಾಜಿಕ ಜಾಗೃತಿ ಮೂಡಿಸುವ ಬೀದಿ ನಾಟಕಗಳಲ್ಲಿ ಹತ್ತಾರು ಪಾತ್ರಗಳನ್ನು ಮಾಡಿದ್ದೆ. ಇನ್ನು ಯಶವಂತ್ ಸರದೇಶಪಾಂಡೆ, ಗುರುರಾಜ್ ಹೊಸಕೋಟೆ ಅವರ ಒಡನಾಟದಿಂದ ಬಣ್ಣದ ಜಗತ್ತಿನ ಮೋಹ ಮತ್ತಷ್ಟು ಹೆಚ್ಚಾಯಿತು. ಹೀಗಾಗಿ ದೊಡ್ಡ ಮಟ್ಟದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಡುವ ತಯಾರಿ ನಡೆಸಿಕೊಳ್ಳುತ್ತಿದ್ದೇನೆ' ಎನ್ನುತ್ತಾರೆ ವಿಶ್ವಜಿತ್. ಹೋಂವರ್ಕ್, ಬೀದಿ ನಾಟಕಗಳು ನಟನೆಯ ವಿಶ್ವಾಸವನ್ನು ಹೆಚ್ಚಿಸಿವೆ ಎನ್ನುವ ವಿಶ್ವಜಿತ್ಗೆ ಡಾ. ರಾಜ್ಕುಮಾರ್, ಸುದೀಪ್, ರವಿಚಂದ್ರನ್ ಹಾಗೂ ಗಣೇಶ್ ಅಂದ್ರೆ ತುಂಬಾ ಇಷ್ಟ. ಸಾಮಾನ್ಯವಾಗಿ ಇವರು ಮಾಡುವ ಪಾತ್ರಗಳನ್ನು ಹೆಚ್ಚು ಇಷ್ಟಪಡುವ ಜೊತೆಗೆ ಅಂಬರೀಷ್ರಂತೆ ರೆಬೆಲ್ ಆಗಿಯೂ ತೆರೆ ಮೇಲೆ ಕಾಣಿಸಿಕೊಳ್ಳಬೇಕೆಂಬ ಆಸೆ ಇದೆ.
ಮಾಡೆಲಿಂಗ್ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ, ನೋಡಲು ಮುದ್ದಾಗಿರುವ, 5.7 ಎತ್ತರದ ವಿಶ್ವಜಿತ್ರಲ್ಲಿ ಒಳ್ಳೆಯ ನಟನಾಗುವ ಲಕ್ಷಣಗಳಿವೆ. ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವ ವಿಶ್ವಾಸವಿದೆ. ಪೇಂಟಿಂಗ್, ಕವನ ರಚನೆ, ಫೋಟೋಗ್ರಫಿ, ಪ್ರಾಣಿಗಳ ಆರೈಕೆಯಂಥ ಒಳ್ಳೆಯ ಹವ್ಯಾಸ ರೂಢಿಸಿಕೊಂಡವರು ವಿಶ್ವಜಿತ್. ಭಾಷೆಯ ತಾರತಮ್ಯವಿಲ್ಲದೆ, ದಕ್ಷಿಣ ಭಾರತದ ಎಲ್ಲ ಚಿತ್ರಗಳನ್ನು ನೋಡುವ ವಿಶ್ವಜಿತ್ ಹರೀಶ್ ಕನ್ನಡ ಚಿತ್ರರಂಗದ ಪರದೆ ಮೇಲೆ ಮಿನುಗಲಿ.
-ಕೇಶವ