ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ವಾಸನೆ ಗ್ರಹಿಸುವ ಶಕ್ತಿ ಬಳಸಿಕೊಳ್ಳಿ

ಆಹಾರದ ಅಲರ್ಜಿ ಇರುವವರು ಆ ಆಹಾರ ತಿಂದೇ ಪರೀಕ್ಷಿಸಬೇಕು ಅಂತೇನೂ ಇಲ್ಲ. ಅದಕ್ಕೊಂದು ಸುಲಭ ...

Rashmi Kasaragodu
Updated On : 29 Jul 2014, 3:57 am

ಆಹಾರದ ಅಲರ್ಜಿ ಇರುವವರು ಆ ಆಹಾರ ತಿಂದೇ ಪರೀಕ್ಷಿಸಬೇಕು ಅಂತೇನೂ ಇಲ್ಲ. ಅದಕ್ಕೊಂದು ಸುಲಭ ದಾರಿ ಇದೆ. ಅದೆಂದರೆ ವಾಸನೆ ನೋಡುವುದು!
ನಿಜ. ಬಹಳಷ್ಟು ಮಂದಿಗೆ ವಾಸನೆಯಿಂದಲೇ ಅಲರ್ಜಿ ಇರುವುದು ಗೊತ್ತಾಗಿಬಿಡುತ್ತದೆ. ಕೆಲವು ಆಹಾರಗಳ ವಾಸನೆ ನೋಡಿದಾಗ ನಿಮಗೂ ತಲೆನೋವು ಬಂದಿರಬಹುದಲ್ಲವೆ? ಆ ಘಾಟು ಥಟ್ಟಂತ ಮೆದುಳಿನ ಭಾಗದ ಮೇಲೆಯೇ ಪರಿಣಾಮ ಬೀರುತ್ತದೆ. ಹೀಗಾಗಿ ತಲೆನೋವು ತರುವ ಆಹಾರಗಳನ್ನು ಪತ್ತೆ ಮಾಡಲು ನಿಮ್ಮ ವಾಸನಾ ಗ್ರಹಣ ಶಕ್ತಿಯನ್ನು ಬಳಸಿಕೊಳ್ಳಬಹುದು. ನೀವು ಪದೇಪದೆ ತಲೆನೋವಿಗೆ ತುತ್ತಾಗುತ್ತಿದ್ದರೆ ಮತ್ತು ಕೆಲವು ಆಹಾರಗಳಿಂದಲೇ ನಿಮಗೆ ತಲೆನೋವು ಬರುತ್ತದೆ ಎನ್ನುವ ಅನುಮಾನ ಇದ್ದರೆ ಬಾಯಿಗಿಡುವ ಮುನ್ನ ಮೂಗಿನ ಬಳಿ ಹಿಡಿದು ಪರೀಕ್ಷೆ ಮಾಡಿಕೊಳ್ಳಿ. ಆ ವಾಸನೆಯಿಂದ ಯಾವುದೇ ರೀತಿಯ ಕಿರಿಕಿರಿ ಆಗಿಲ್ಲ ಅಂತಾದರೆ ನೀವು ಖಂಡಿತವಾಗಿ ಸೇವಿಸಬಹುದು.
ಇಲ್ಲೂ ಅಷ್ಟೆ. ಮನೆಯಲ್ಲಿನ ಒಬ್ಬರಿಗೆ ಚೆನ್ನಾಗಿ ಕಳಿತ ಬಾಳೆಹಣ್ಣು ಇಷ್ಟ ಆಗಬಹುದು, ಇನ್ನೊಬ್ಬರಿಗೆ ಕಳಿತ ಬಾಳೆಹಣ್ಣು ತಿಂದ ಕೂಡಲೇ ತಲೆನೋವು ಆರಂಭವಾಗಬಹುದು. ಒಬ್ಬರಿಗೆ ಚಾಕೊಲೇಟ್ ರಿಲೀಫ್ ಅನುಭವ ನೀಡಿದರೆ, ಇನ್ನೊಬ್ಬರಿಗೆ ಅದೇ ಚಾಕೊಲೇಟ್ ತಲೆ ಭಾಗದಲ್ಲಿ ಕಿರಿಕಿರಿ ಅನುಭವ ಉಂಟುಮಾಡಬಹುದು. ಇದಕ್ಕೆ ಕಾರಣ ಆಯಾ ವ್ಯಕ್ತಿಗಳಲ್ಲಿ 'ಫುಡ್ ಟಾಲರೆನ್ಸ್‌' ಗುಣ ಭಿನ್ನವಾಗಿರುವುದು. ಅದು ಅವರವರ ದೇಹಪ್ರಕೃತಿಗೆ ಸಂಬಂಧಿಸಿದ್ದು ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ ಅಲ್ಲವೆ?
ಅಮೈನೊ ಆಮ್ಲಗಳು ನಿಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರಬಲ್ಲವು? ಇದಕ್ಕೂ ನಿಖರ ಉತ್ತರ ನೀಡುವುದು ಕಷ್ಟ. ಏಕೆಂದರೆ ಅಮೈನೊ ಆಮ್ಲಗಳ ತೀವ್ರತೆ ಸಹ ನಿಮ್ಮ ಆಹಾರ ಅಲರ್ಜಿಯನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಹೇಳುವುದಿದ್ದರೆ, ಈಗಾಗಲೇ ತಿಳಿಸಿರುವಂತಹ ಕಳಿತ ಬಾಳೆಹಣ್ಣು, ಚಾಕೊಲೇಟ್. ಕೆಲವರಿಗೆ ಅರ್ಧ ಬಾಳೆಹಣ್ಣು ತಿನ್ನುತ್ತಿದ್ದಂತೆ ತಲೆನೋವಿನ ಅನುಭವ ಆರಂಭವಾಗಬಹುದು, ಕೆಲವರಿಗೆ ಇಡೀ ಹಣ್ಣು ತಿಂದ ಬಳಿಕ ಶುರುವಾಗಬಹುದು. ಅಂದರೆ ಯಾವ ಪ್ರಮಾಣದಲ್ಲಿ ಸೇವಿಸಿದ್ದೀರಿ ಎನ್ನುವುದೂ ಇಲ್ಲಿ ಗಣನೆಗೆ ತೆಗೆದುಕೊಳ್ಳಬೇಕಾದ ಅಂಶ. ಬಾಳೆಹಣ್ಣು, ಬಾದಾಮಿ, ಕಾಲಿಫ್ಲವರ್, ಬ್ರಕೊಲಿ, ಚಾಕೊಲೇಟ್ ಇತ್ಯಾದಿ ಸಹಜ ಆಹಾರ ಪದಾರ್ಥಗಳಲ್ಲಿ ಅಮೈನೊ ಆಮ್ಲಗಳಿರುತ್ತವೆ ಎನ್ನುವುದು ನಿಮ್ಮ ಗಮನಕ್ಕಷ್ಟೆ.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


(ಮುಂದುವರಿಯುವುದು)
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement