ಅಧ್ಯಯನದ ಕಡೆಗೆ ವಾಲುವಂತಾಗಲಿ
ಸಮಯದ ಮಹತ್ವವನ್ನು ಮಕ್ಕಳಿಗೆ ತಿಳಿಸಿ. ಕಳೆದು ಹೋದ ಸಮಯ ಮತ್ತೆ ಬರಲಾರದು ಎಂದು ಸಹ ತಿಳುವಳಿಕೆ ಕೊಡಿ. ಅಧ್ಯಯನದಲ್ಲೆ ಕಾಲ ಕಳೆಯುವಂತೆ ಮಕ್ಕಳನ್ನು ಪ್ರೇರೇಪಿಸಿ. ರಜೆಯಲ್ಲಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವುದಲ್ಲದೇ ಮುಂದಿನ ತರಗತಿಯ ಪಾಠಗಳ ಬಗ್ಗೆ ಕೂಡ ತಿಳಿಸಬೇಕು. ಇದರಿಂದ ಮಕ್ಕಳು ಪ್ರತಿಭಾವಂತರಾಗಿ ಹೊರ ಹೊಮ್ಮಲು ಸಾಧ್ಯವಾದೀತು. ವಿದ್ಯಾರ್ಥಿಗಳು ಆಟೋಟದೊಂದಿಗೆ ಪಾಠಕ್ಕೂ ಮಹತ್ವ ಕೊಟ್ಟು ಬದುಕನ್ನು ಕಟ್ಟಿಕೊಳ್ಳಬೇಕಾಗಿದ್ದು ಇದಕ್ಕೆ ಸತತ ಪ್ರಯತ್ನ ಅವಶ್ಯಕ ಟಿ
= ಮಹಾಂತೇಶ ರಾಜಗೋಳಿ, ಯರಡಾಲ
ಮಕ್ಕಳೊಂದಿಗೆ ಸಮಯೋಚಿತವಾಗಿ ವರ್ತಿಸಿ
ಮಕ್ಕಳು ಆಟೋಟಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಅಲ್ಲದೇ ಅದರಲ್ಲೇ ಹೆಚ್ಚು ಕಾಲ ಕಳೆಯುತ್ತಾರೆ. ಅವರು ಸೂಕ್ಷ್ಮಮತಿಗಳಾಗಿರುವುದರಿಂದ ಅವರನ್ನು ಬೆದರಿಸಬಾರದು. ಸಾವಧಾನವಾಗಿಯೇ ಅವರಲ್ಲಿ ಅರಿವು ಹಾಗೂ ಜವಾಬ್ದಾರಿ ಮೂಡುವಂತೆ ಮಾಡಬೇಕು. ನಾವು ಸಹ ಒಂದು ಕಾಲದಲ್ಲಿ ಮಕ್ಕಳಾಗಿದ್ದೆವೆಂಬುದನ್ನು ಮರೆಯಬಾರದು. ಅವರ ಮೇಲೆ ಒತ್ತಡವನ್ನು ಹೇರದೆ ಹಾಗೆಯೇ ಹೆಚ್ಚು ಸಲುಗೆಯನ್ನೂ ನೀಡದೆ ಅವರ ಮನಸ್ಸು ಪರಿಪಕ್ವಗೊಳ್ಳಲು ಪೋಷಕರು ಸಮಯೋಚಿತವಾಗಿ ವರ್ತಿಸಬೇಕು. ಮಕ್ಕಳು ತಾವೇ ಓದಬೇಕೆಂದು ನಿರ್ಧರಿಸಿಕೊಂಡು ಹಿರಿಯರ ಆಣತಿ ಇಲ್ಲದೆ ಆಸಕ್ತಿ ವಹಿಸಿ ಓದಿನಲ್ಲಿ ತೊಡಗುವಷ್ಟು ಅವರನ್ನು ಮಾನಸಿಕವಾಗಿ ತಯಾರು ಮಾಡಬೇಕು. ಟಿ
= ಪಲ್ಲವಿ ಬಿ. ಎನ್, ಯಡೆಯೂರು
ಪಠ್ಯೇತರದಷ್ಟೆ ಪಠ್ಯವೂ ಮುಖ್ಯ
ಕಲಿಕೆ ನಿರಂತರವಾಗಿ ಸಾಗುವಂತಹದು, ಕಲಿಕೆಗೆ ಕೊನೆಯೇ ಇಲ್ಲ, ಮನುಷ್ಯ ಹುಟ್ಟಿನಿಂದ ಸಾಯುವವರಿಗೂ ಒಂದಲ್ಲಾ ಒಂದು ವಿಷಯವನ್ನು ಕಲಿಯುತ್ತಲೇ ಇರುತ್ತಾನೆ. ಅದರಲ್ಲೂ ಶೈಕ್ಷಣಿಕವಾಗಿ ಮಕ್ಕಳ ಪ್ರಾಥಮಿಕ ಹಂತದ ಕಲಿಕೆಯನ್ನು ಅವಲೋಕಿಸಿದಾಗ, ತರಗತಿ ಪ್ರಾರಂಭವಾದಾಗಿನಿಂದ ಮುಗಿಯುವವರೆಗೂ ಓದು, ಬರಹಗಳಲ್ಲೇ ಕಾಲ ಕಳೆಯುವರು. ಆದ್ದರಿಂದ ರಜೆ ದಿನಗಳಲ್ಲಿ ಅವರೊಂದಿಗೆ ಪ್ರಮುಖ ಸ್ಥಳಗಳಿಗೆ ಹೋಗಬೇಕಲ್ಲದೇ ಅವರಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ನೀಡಬೇಕು. ಅಗತ್ಯ ಬಿದ್ದರೆ ಮುಂದಿನ ತರಗತಿಗೆ ಬೇಕಾದ ವಿಷಯ ಗಳ ಕುರಿತು ಮನದಟ್ಟು ಮಾಡಬೇಕು. ಹಾಗೆ ಮಾಡಿದಾಗ ಮಾತ್ರ ಓದಿನಲ್ಲಿ ಆಸಕ್ತಿ ಬೆಳೆಯುತ್ತದೆ. ಟಿ
= ಶಿವಶರಣ ವಾಡೆಕರ್, ಹುಮನಾಬಾದ್
'ಜಗುಲಿ'ಯಲ್ಲಿ ಈ ಸಲದ ವಿಷಯ 'ಮಕ್ಕಳಿಗೆ ಯಾವ ವಯಸ್ಸಿನಿಂದ ಮೊಬೈಲ್ ಕೊಡಿಸುವುದು ಸೂಕ್ತ.' ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್:anekaby2@gmail.com