ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಆಮ್ ನಮೋ!

Mainashree
Updated On : 2 Jun 2014, 1:48 am

ಇದು ರಾಜನ ಹೆಸರಿನ ಹಣ್ಣುಗಳ ರಾಜ! ಈ ಹೊಸ ತಳಿಯ ಮಾವನ್ನು ಕಂಡುಹಿಡಿದು ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿರುವುದು ಸಹ ಮಾವುಗಳ ರಾಜ.
ಹೌದು, ದೇಶದ ಪ್ರಧಾನಿಯಾಗಿ ಈಗ ಅಧಿಕಾರ ವಹಿಸಿಕೊಂಡಿರುವ ನರೇಂದ್ರ ಮೋದಿ ಹೆಸರಲ್ಲಿ ಮಾವು ತಳಿಯೊಂದು ಮಾರುಕಟ್ಟೆಗೆ ಬಿಡುಗಡೆಗೊಳ್ಳುವುದರಲ್ಲಿದೆ. ಆದರೆ ಈ ಮಾವನ್ನು ಸವಿಯಲು ನೀವು ಸ್ವಲ್ಪ ಸಮಯವಾದರೂ ಕಾಯಲೇ ಬೇಕು. ಏಕೆಂದರೆ ಉತ್ತರಪ್ರದೇಶದಲ್ಲಿನ ತಮ್ಮ ತೋಟದಲ್ಲಿ ಮಾವುಗಳ ರಾಜನೆಂದೇ ಖ್ಯಾತಿ ಪಡೆದ ಪದ್ಮಶ್ರೀ ಹಾಜಿ ಖಲಿಮುಲ್ಲಾ ಈಗಾಗಲೇ ಬೆಳೆಸಿದ್ದು, ಅದಿನ್ನೂ ಬೆಳವಣಿಗೆಯ ಹಂತದಲ್ಲಿದೆ. ಅದು ಸರಿಯಾಗಿ ಬೆಳವಣಿಗೆ ಹೊಂದಿ, ಹಣ್ಣಾಗಿ ಮಾರುಕಟ್ಟೆಗೆ ಬರುವಲ್ಲಿವರೆಗೆ ನೀವು ಕಾಯಲೇ ಬೇಕು.
ನರೇಂದ್ರ ಮೋದಿಯಂಥ ಡೈನಾಮಿಕ್ ವ್ಯಕ್ತಿತ್ವದ ರಾಜಕಾರಣಿಗಳನ್ನು ತಾನು ನೋಡೇ ಇಲ್ಲ. ಸಂಶೋಧಿಸಿದ ಹೊಸ ತಳಿಯ ಮಾವು ಮೋದಿ ವ್ಯಕ್ತಿತ್ವವನ್ನು ಸರಿಯಾಗಿ ಹೋಲುತ್ತದೆ. ಅದಕ್ಕಾಗಿ ಈ ತಳಿಗೆ ಅವರ ಹೆಸರನ್ನೇ ಇಡಲಾಗಿದೆ. ಈ ಮಾವು ಹೈಬ್ರಿಡ್ ತಳಿಯಾಗಿದ್ದು, ನೋಡುಗರನ್ನು ಸೆಳೆಯುವ ಸೌಂದರ್ಯಕ್ಕೆ ಮುರ್ಶಿದಾಬಾದ್‌ನ ಹಸನ್- ಇ- ಅರ ಮತ್ತು ಸಿಹಿಗಾಗಿ ಲಕ್ನೋವಿನ ದುಸ್ಸೇರಿ ಎಂಬ ಎರಡೂ ತಳಿ ಇದರಲ್ಲಿ ಮಿಳಿತವಾಗಿ ಮೋದಿ ಆಮ್ ಆಗಿದೆ. ಕಾಯಿ ಪಕ್ವವಾಗಿ ಬೆಳೆದ ಬಳಿಕ ದೇಶದ ನೂತನ ಪ್ರಧಾನಿಗೆ ಮೊದಲು ಗೌರವಾರ್ಪಣೆ ಮಾಡಬೇಕೆಂದು ಉದ್ದೇಶಿಸಲಾಗಿದ್ದು, ಬಳಿಕ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂಬುದು ರೈತ ಖಲಿಮುಲ್ಲಾ ಅವರ ಅಭಿಪ್ರಾಯ. ಖಲಿಮುಲ್ಲಾ ಮೋದಿಯವರಲ್ಲಿ ತುಂಬಾ ಭರವಸೆಯನ್ನಿಟ್ಟಿದ್ದು, ಅವರು ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಾರೆ ಎಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ.
ಮೋದಿ ಹೆಸರಲ್ಲಿ ಈಗಾಗಲೇ ಮೊಬೈಲ್, ಟೀಶರ್ಟ್ ಸೇರಿದಂತೆ ಹಲವಾರು ಉತ್ಪನ್ನಗಳು ಮಾರುಕಟ್ಟೆ ಪ್ರವೇಶಿಸಿವೆ. ಬುಧವಾರವಷ್ಟೇ ಮೋದಿ ಸ್ಟಾಂಪ್ ಬಿಡುಗಡೆಗೊಂಡಿದೆ. ಇನ್ನು ಹಣ್ಣುಗಳ ರಾಜನೂ ಮಾರುಕಟ್ಟೆ ಪ್ರವೇಶಿಸಲಿದೆ. ಇದರ ಉತ್ಪಾದಕರ ಪ್ರಕಾರ, ಈ ಮಾವು ಸಿಹಿ ಹಾಗೂ ಮೃದುವಾಗಿದ್ದು, ತುಂಬಾ ಸ್ವಾದಿಷ್ಟವಾಗಿರಲಿದೆ.
ಖಲಿಮುಲ್ಲಾ ಯಾರು?
ಉತ್ತರಪ್ರದೇಶದ ಲಕ್ನೋದ ಮಾಲಿಹಾಬಾದ್ ಖಲಿಮುಲ್ಲಾರಿಗೆ ಈಗ 73 ವರ್ಷ. ಈ ವರೆಗೆ ವಿವಿಧ ಮಾವು ತಳಿಗಳನ್ನು, ಹಲವು ಹಣ್ಣಿನ ತಳಿಗಳನ್ನು ಅಭಿವೃದ್ಧಿ ಪಡಿಸಿ ಬೆಳೆಸಿರುವ ಇವರು ಓದಿದ್ದು ಕೇವಲ 7ನೇ ತರಗತಿ. ಅಷ್ಟೇ ಅಲ್ಲ, ಒಂದೇ ಮರದಲ್ಲಿ 300ಕ್ಕೂ ಅಧಿಕ ಹಣ್ಣುಗಳನ್ನು ಬೆಳೆಯುವ ಮೂಲಕ ಜಾಗತಿಕ ಮನ್ನಣೆ ಪಡೆದಿದ್ದಾರೆ. ಕೇಂದ್ರ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಬೇರೆ ಬೇರೆ ಗಾತ್ರದ, ಬೇರೆ ಬೇರೆ ಸ್ವಾದದ ವಿಧ ವಿಧ ಮಾವಿನ ತಳಿಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಅದಕ್ಕೆಂದೇ ಇವರನ್ನು 'ಮಾವುಗಳ ರಾಜ' ಎಂದೇ ಗುರುತಿಸುತ್ತಾರೆ.
ಐಶ್ವರ್ಯಾ, ಸಚಿನ್ ಹೆಸರಲ್ಲೂ ಮಾವು
ಈ ಹಿಂದೆ ದೇಶದ ಪ್ರಮುಖ ಸೆಲೆಬ್ರಿಟಿಗಳ ಹೆಸರಲ್ಲಿ ಖಲಿಮುಲ್ಲಾ ಅವರು ತಮ್ಮ ನರ್ಸರಿಯಲ್ಲಿ ಮಾವು ತಳಿಯನ್ನು ಅಭಿವೃದ್ಧಿ ಪಡಿಸಿದ ಖ್ಯಾತಿ ಹೊಂದಿದ್ದಾರೆ. ಕ್ರಿಕೆಟ್‌ನಲ್ಲಿ ದಾಖಲೆವೀರ ಸಚಿನ್ ತೆಂಡೂಲ್ಕರ್ ಹಾಗೂ ಐಶ್ವರ್ಯಾ ರೈ ಅವರ ಹೆಸರಲ್ಲೂ ಸ್ವಾದಿಷ್ಟ ಮಾವು ತಳಿ ಬಿಡುಗಡೆ ಮಾಡಿದ್ದಾರೆ. ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಬಳಿಕ ಅವರ ಹೆಸರಲ್ಲೂ ಮಾವು ತಳಿ ಬಿಡುಗಡೆ ಮಾಡಲಾಗಿತ್ತಾದರೂ, ಕಾಕತಾಳೀಯವೊ ಎಂಬಂತೆ ಆ ಮಾವಿನ ಮರ ಈ ವರ್ಷ ಹೂವನ್ನೇ ಬಿಟ್ಟಿಲ್ಲ!

= ರಾಘವೇಂದ್ರ ಅಗ್ನಿಹೋತ್ರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments