ನೀರಿಗೆ ಸಾಟಿ ಬೇರಾವುದೂ ಇಲ್ಲ
ನೀರಿಗೆ ಸಾಟಿ ಬೇರಾವುದೂ ಇಲ್ಲಮೆದುಳಿನಲ್ಲಿ ನೀರು ಸಂಗ್ರಹಿಸಿ ಇಟ್ಟುಕೊಳ್ಳುವ ವ್ಯವಸ್ಥೆ ಇಲ್ಲ. ಆದರೂ ಮೆದುಳಿನಲ್ಲಿ ನೀರು ಇರುತ್ತದೆ. ಇದು ಹೇಗೆ? ವೈಜ್ಞಾನಿಕ ಪರಿಭಾಷೆಯಲ್ಲಿ ಅದನ್ನು ನೀರು ಎಂದು ಹೇಳುವುದಿಲ್ಲ. ಸೆರೆಬ್ರೊಸ್ಪೈನಲ್ ಫ್ಲೂಯಿಡ್(ಸಿಎಸ್ಎಫ್) ಎಂದು ಹೇಳಲಾಗುತ್ತದೆ. ಇದು ಪ್ರಮುಖವಾಗಿ ಮೂರು ಮುಖ್ಯ ಕಾರ್ಯಗಳನ್ನು ನಿರ್ವಹಿಸುತ್ತದೆ. ನರವ್ಯೂಹ (ವಿಶೇಷವಾಗಿ ಮೆದುಳು ಮತ್ತು ಬೆನ್ನುಹುರಿ) ಯಾವುದೇ ರೀತಿಯ ಹಾನಿಗೆ ಒಳಗಾಗುವುದನ್ನು (ಅಪಘಾತದ ಸಂದರ್ಭ ಹೊರತುಪಡಿಸಿ) ತಪ್ಪಿಸುವುದು, ಮೆದುಳಿನಲ್ಲಿರುವ ತ್ಯಾಜ್ಯಗಳನ್ನು ಹೊರಹಾಕುವುದು, ಅಗತ್ಯ ಹಾರ್ಮೋನುಗಳನ್ನು ಉತ್ಪಾದಿಸುವುದು- ಇವು ಸಿಎಸ್ಎಫ್ನ ಪ್ರಮುಖ ಹೊಣೆ. ಆರೋಗ್ಯವಂತ ವ್ಯಕ್ತಿಯ ಮೆದುಳು ಪ್ರತಿ ದಿನ ಒಂದು ಪಿಂಟ್ ಅಂದರೆ 12 ಔನ್ಸ್ನಷ್ಟು ಸಿಎಸ್ಎಫ್ ಅನ್ನು ಉತ್ಪಾದಿಸುತ್ತದೆ. ಹಳೆಯ ಸಿಎಸ್ಎಫ್ ಅನ್ನು ರಕ್ತನಾಳಗಳು ಹೀರಿಕೊಳ್ಳುತ್ತವೆ. ಒಂದೊಮ್ಮೆ ರಕ್ತನಾಳಗಳು ಹೀರಿಕೊಂಡಿಲ್ಲ ಎಂದುಕೊಳ್ಳಿ, ಆಗ ಏನಾಗುತ್ತದೆ? ಹಳೆಯ ಸಿಎಸ್ಎಫ್ ವಿಲೇವಾರಿ ನಿತ್ಯವೂ ಸರಿಯಾಗಿ ನಡೆಯದಿದ್ದರೆ ಮೆದುಳಿನಲ್ಲಿಯೇ ದಾಸ್ತಾನುಗೊಳ್ಳುತ್ತದೆ. ಅದರಿಂದ ಕೆಲವು ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಆದರೆ ಈ ಸಾಧ್ಯತೆ ತೀರಾ ಎಂದರೆ ತೀರಾ ಕಡಿಮೆ. ಎಲ್ಲೋ ಕೆಲವರಲ್ಲಿ ಅಪರೂಪಕ್ಕೆ ಇಂಥ ತೊಂದರೆ ಕಾಣಿಸಿಕೊಳ್ಳಬಹುದು. ಅದು ಬಿಡಿ, ನಾವು ಚರ್ಚಿಸುತ್ತಿರುವುದು ಮೆದುಳಿಗೆ ನೀರು ಎಷ್ಟು ಮುಖ್ಯ ಎನ್ನುವ ಕುರಿತಾಗಿ. ಮೆದುಳು ಒಂದು ರೀತಿಯಲ್ಲಿ ಫಿಲ್ಟರ್ ಥರ ಕಾರ್ಯ ನಿರ್ವಹಿಸುತ್ತದೆ ಎಂದಾಯಿತು. ನಿತ್ಯ ತನಗೆ ಅಗತ್ಯವಿರುವಷ್ಟು ಹೊಸ ನೀರು ಪಡೆದುಕೊಳ್ಳುತ್ತದೆ. ಹಳೆ ನೀರನ್ನು ತನ್ನದೇ ಆದ ವ್ಯವಸ್ಥೆ ಮೂಲಕ ಹೊರದಬ್ಬುತ್ತದೆ.
ದೈಹಿಕ ಶ್ರಮದ ಕಾರ್ಯನಿರ್ವಹಿಸುವವರಿಗಿಂತಲೂ ಮಾನಸಿಕ ಶ್ರಮದ ಕಾರ್ಯ ನಿರ್ವಹಿಸುವ ವ್ಯಕ್ತಿಗಳು ನೀರಿನ ಕುರಿತು ಗಮನ ನೀಡಬೇಕು. ಅಂತಹವರು ಗಂಟೆಗೆ ಒಮ್ಮೆಯಾದರೂ ಸ್ವಲ್ಪಸ್ವಲ್ಪವೇ ಆದರೂ ನೀರು ಕುಡಿಯುತ್ತಿರುವುದು ಒಳ್ಳೆಯದು. ಇದರಿಂದ ಮೆದುಳು ಕ್ರಿಯಾಶೀಲವಾಗಿದ್ದುಕೊಂಡು, ಮಾನಸಿಕ ಆಯಾಸ ಆಗದಂತೆ ನೋಡಿಕೊಳ್ಳುತ್ತದೆ.
'ನಾನು ನೀರು ಕುಡಿಯುವುದು ಕಡಿಮೆ. ಆದರೆ ಆಗಾಗ ಕಾಫಿ, ಟೀ, ಸೋಡಾ, ತಂಪು ಪಾನೀಯ ಕುಡಿಯುತ್ತಿರುತ್ತೇನೆ. ನೀರಾದರೇನು? ದ್ರವಾಹಾರ ಆದರೇನು? ಶರೀರದೊಳಕ್ಕೆ ಸೇರಿದ ಮೇಲೆ ಅದೆಲ್ಲವೂ ಒಂದೇ ಅಲ್ಲವೆ' ಎಂದು ಕೆಲವರು ನನ್ನನ್ನು ಕೇಳಿದ್ದುಂಟು. 'ಊಟ ಮಾಡಿದರೇನು? ಬಿಸ್ಕತ್, ಬ್ರೆಡ್-ಜಾಮ್ ತಿಂದು ಹೊಟ್ಟೆ ತುಂಬಿಸಿಕೊಂಡರೇನು? ಹಸಿವು ಇಂಗಿದರೆ ಆಯಿತು ತಾನೆ?' ಎಂದು ಅಂತಹವರಿಗೆ ಕೇಳುತ್ತೇನೆ. 'ಅದು ಹೇಗೆ ಸಾಧ್ಯ? ಊಟದಿಂದ ಸಿಗುವ ಶಕ್ತಿ ಬಿಸ್ಕತ್ನಿಂದ ಸಿಗಲು ಸಾಧ್ಯವೆ?' ಎಂದು ಪುನಃ ನನ್ನನ್ನು ಕೇಳುತ್ತಾರೆ. ನೀರಿನ ವಿಚಾರವೂ ಹಾಗೆಯೇ. ನೀರು ನೀರೇ. ಅದಕ್ಕೆ ಪರ್ಯಾಯ ಯಾವುದೂ ಅಲ್ಲ.
ಕಚೇರಿಗೆ ಬಾಟಲ್ ಕೊಂಡೊಯ್ಯುವಾಗ ನೀರಿಗೆ ಕೊಂಚ ಹಸಿರು ಎಲೆಗಳು ಅಥವಾ ಅವುಗಳ ಪೌಡರ್ ಮಿಶ್ರ ಮಾಡಿಕೊಳ್ಳಿ. ಇದು ಮೆದುಳಿನ ಮೇಲೆ ಬಹಳವೇ ಒಳ್ಳೆಯ ಪರಿಣಾಮ ಬೀರಬಲ್ಲದು.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com