ರಾಜಗುರು
ಬಾಗಲಕೋಟೆಯಲ್ಲೊಂದು ಮದುವೆ. ಆ ಮದುವೆಗೆ ವರನ ಸಂಬಂಧಿಯಾಗಿದ್ದ ಕರಜಗಿಯವರು ಹೋಗಿದ್ದರು. ಆ ಮದುವೆಗೆ ವರನ ತಂದೆಯ ಕಚೇರಿಯ ನಿರ್ದೇಶಕರು ಬಂದರು. ಅವರ ಹಿಂದೆ 8-10 ಜನ ಹಿಂಬಾಲಕರು. ನೇರ ವೇದಿಕೆಗೆ ತೆರಳಿದ ಮೇಲಧಿಕಾರಿ ನವ ವಧುವರರಿಗೆ ಹೂಗುಚ್ಛ ನೀಡಿ, ಫೋಟೋ ತೆಗೆಸಿಕೊಂಡು ಹೊರಡುವುದರಲ್ಲಿದ್ದರು. ಅಕಸ್ಮಾತ್ತಾಗಿ ಅವರು ಎರಡನೇ ಸಾಲಿನಲ್ಲಿ ಕುಳಿತ ಕರಜಗಿಯವರನ್ನು ನೋಡಿದರು. ದಡದಡನೇ ವೇದಿಕೆಯಿಂದ ಇಳಿದು ಬಂದು, ಕರಜಗಿಯವರಿಗೆ ನಮಸ್ಕರಿಸಿದರು. ಅಲ್ಲಿದ್ದ ಜನರಿಗೆ ಎಲ್ಲಿಲ್ಲದ ಆಶ್ಚರ್ಯ. ಕರಜಗಿಯವರು ನಮಸ್ಕರಿಸಿದ ಅಧಿಕಾರಿಗೆ ಆಶೀರ್ವದಿಸಿ 'ಹೇಗಿದ್ದೀರಿ?' ಎಂದು ವಿಚಾರಿಸಿದರು. ಅಧಿಕಾರಿ 'ನನ್ನ ನೆನಪಿದೆಯಾ?' ಎಂದು ಕೇಳಿದಾಗ, 'ನೀನು ರತ್ನಮ್ಮನಲ್ಲವೆ? 35 ವರ್ಷದ ಹಿಂದೆ ನಿನಗೆ ಕೆಮೆಸ್ಟ್ರಿ ಹೇಳಿದ್ದೇನೆ ನಾನು' ಎಂದರು. 'ಸರ್, ನಿಮ್ಮ ನೆನಪಿನ ಶಕ್ತಿ ಮತ್ತು ವಿದ್ಯಾರ್ಥಿ ಪ್ರೀತಿ ಅಪಾರ' ಎಂದು ಮತ್ತೊಮ್ಮೆ ನಮಸ್ಕರಿಸಿದರು ಅಧಿಕಾರಿ.
ಗುರುರಾಜ ಕರಜಗಿಯವರ ಜೀವನದಲ್ಲಿ ಇಂತಹ ಪ್ರಸಂಗಗಳು ಹಲವಾರು. 35 ವರ್ಷಗಳ ಹಿಂದಿನ ವಿದ್ಯಾರ್ಥಿಯ ಹೆಸರನ್ನ ನೆನಪಿಡುವುದು ಸಾಮಾನ್ಯ ವಿಷಯವಲ್ಲ, ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಗುರುರಾಜ ಕರಜಗಿಯವರ ಶಿಕ್ಷಣ ಪ್ರೀತಿ ಅಂತಿಂಥದಲ್ಲ. ಚಿಕ್ಕಂದಿನಿಂದಲೆ ಶಿಕ್ಷಕ ವೃತ್ತಿಯನ್ನು ಪ್ರೀತಿಸಿದ ಇವರು ತಮ್ಮ ಓದು ಮುಗಿದ ತಕ್ಷಣ ವಿದ್ಯಾದಾನದ ಪವಿತ್ರ ಕೈಂಕರ್ಯಕ್ಕಿಳಿದರು. ಕರಜಗಿಯವರ ವಿದ್ಯಾರ್ಥಿವೃಂದ ಜಗತ್ತಿನಾದ್ಯಂತ ವಿವಿಧ ಉನ್ನತ ಹುದ್ದೆಗಳಲ್ಲಿದ್ದಾರೆ. ಇಂದಿಗೂ ಕರಜಗಿಯವರ ಬೋಧನೆಯನ್ನು ಸ್ಮರಿಸುತ್ತಾರೆ.
ಬಾಲ್ಯದಲ್ಲಿಯೇ ಜ್ಞಾನದಾಹ ಬೆಳೆಸಿಕೊಂಡವರು ಕರಜಗಿ. ಹಿಂದಿನ ಅಖಂಡ ವಿಜಾಪುರ ಜಿಲ್ಲೆಯ ಬಿಳಿಗಿಯಲ್ಲಿ ಬಾಲ್ಯ ಕಳೆದವರು. ತಂದೆ ಸರ್ಕಾರಿ ಕೆಲಸದಲ್ಲಿ ಇದ್ದುದರಿಂದ ವರ್ಗಾವಣೆಯ ಓಡಾಟ. ಆಗ ಅಜ್ಜ ಗೋಪಾಲಾಚಾರ್ಯರ ನೆರಳಿನಲ್ಲೆ ಅಧ್ಯಯನ. ಆರು ವರ್ಷ ಕಾಲ ಗುರುಕುಲಕ್ಕೆ ಅಡ್ಮಿಷನ್ ಮಾಡಿಸಿದ ಅಜ್ಜ ಪ್ರತಿ ಹೆಜ್ಜೆಗೂ ನನ್ನ ತಿದ್ದುತ್ತ ಬಂದರು. ಅವರ ಒಡನಾಟವೇ ನನಗೊಂದು ಭಾಗ್ಯ ಎಂದು ಧನ್ಯತಾ ಭಾವದಿಂದ ಹೇಳುವ ಕರಜಗಿ, ಸೋದರಮಾವ ಕೆ.ಟಿ. ದೇಶಪಾಂಡೆ (ಖ್ಯಾತ ಶಿಕ್ಷಣ ತಜ್ಞ)ಯವರ ಸಹಾಯ-ಉಪಕಾರ ನೆನೆಯುತ್ತಾರೆ. 'ನನ್ನ ಸೋದರ ಮಾವ ಬಹಳ ಜಾಣರು. ತಮ್ಮ ಮಗಳಿಗೆ ಪರಿಮಳಾ ಎಂದು ಹೆಸರಿಟ್ಟಿರುವ ಕಾರಣ ನಾನು ಗುರುರಾಜನಲ್ಲವೆ?' ಎಂದು ಹಾಸ್ಯ ಮಾಡುವ ಕರಜಗಿಯವರು ವಿನಯ ಮತ್ತು ನಚಿಕೇತ ಎಂಬ ಎರಡು ಪುತ್ರರನ್ನ ಹೊಂದಿದ್ದಾರೆ. ಇವರಿಬ್ಬರು ಯಶಸ್ವಿ ಐ.ಟಿ. ವೃತ್ತಿಪರರು.
ಸಾಂಸ್ಕೃತಿಕ ನಗರಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ, ಮುಂದೆ ಡಾಕ್ಟರೇಟು ಓದಿದ ಇವಾರು ಇಪ್ಪತ್ತೆರಡಕ್ಕೂ ಹೆಚ್ಚು ರಿಸರ್ಚ್ ಪೇಪರ್ ಪ್ರಕಟಿಸಿದ್ದಾರೆ. ಎನ್ಸಿಇಆರ್ಟಿಯಿಂದ ಹಾಗೂ ಐಐಎಂನಿಂದ ಶಿಕ್ಷಣ ಕುರಿತು ವಿಶೇಷ ತರಬೇತಿಗಳನ್ನು ಹೊಂದಿದ್ದಾರೆ. ಮತ್ತು ಈ ತಮ್ಮ ಓದು-ತರಬೇತಿಗಳನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆದಿದ್ದಾರೆ.
ಕಾಲೇಜು ಪ್ರಾಂಶುಪಾಲರಾಗಿ ಹದಿನಾರು ವರ್ಷ ನಂತರ ಜೈನ ಶಾಲೆಯ ಪ್ರಾಂಶುಪಾಲರಾಗಿದ್ದು ವಿಶೇಷ. ಎಷ್ಟೋ ಜನ ಬಡ್ತಿ ಬಯಸಿ ಶಾಲೆಯಿಂದ ಕಾಲೇಜಿಗೆ ನಡೆದರೆ ಕರಜಗಿಯವರದು ವಿಚಿತ್ರ ನಿರ್ಧಾರ. ಈ ನಿರ್ಧಾರವನ್ನು ಕೆಲವು ಗೆಳೆಯರು, ಹಿತೈಷಿಗಳು ಸೂಕ್ಷ್ಮವಾಗಿ ವಿರೋಧಿಸಿದರು. ಆದರೆ 'ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗಬೇಕು. ಅದಕ್ಕಾಗಿ ನಾನು ದುಡಿಯಬೇಕು ಎಂದು ನಾನು ಶಾಲೆಗೆ ಮುಖ್ಯಸ್ಥನಾದೆ' ಎನ್ನುತ್ತಾರೆ ಕರಜಗಿ. 'ಈ ನಿರ್ಧಾರ ತಗೆದುಕೊಳ್ಳಲು ಸಾತ್ ನೀಡಿದವಳು ನನ್ನ ಅಕ್ಕ ಶಾರದಾ ಜೋಶಿ. ನನಗಿಂತ ಆರುವರೆ ವರ್ಷ ಹಿರಿಯಳಾದ ಅವಳು ನನಗೆ ತಾಯಿಯಾಗಿ, ಗೆಳತಿಯಾಗಿ, ಸೋದರಿಯಾಗಿ ನನ್ನ ಹಿತೈಷಿಯಾಗಿ ನನ್ನನ್ನು ನೋಡಿಕೊಂಡವಳು. ಮೂರು ವರ್ಷದ ಹಿಂದೆ ಅವಳನ್ನು ಕಳೆದುಕೊಂಡೆ' ಎಂದು ಹೇಳುವಾಗ ಕರಜಗಿಯವರ ಕಣ್ಣುಗಳಲ್ಲಿ ನೀರು. 'ನನ್ನಕ್ಕ ಭಾಳ ನಿಗರ್ವಿ ಮತ್ತು ಎಂ.ಎಸ್ಸಿವರೆಗೂ ಫಸ್ಟ್ ರ್ಯಾಂಕ್' ಎಂದು ಅಭಿಮಾನದಿಂದ ಹೇಳಿದರು; ನಾನು ನನ್ನ ಎಲ್ಲ ವಿದ್ಯಾರ್ಥಿಗಳಲ್ಲಿ ನನ್ನ ಅಕ್ಕನ ಜೀವನ ಪ್ರೀತಿಯನ್ನು ಕಾಣಿಸ್ತೇನೆ. ಅಧ್ಯಯನಶೀಲತೆಯ ಕಡೆಗೆ ಅವರನ್ನ ಎಳದೊಯ್ದರೆ ಸಾಕು ಸರಿಯಾಗುತ್ತದೆ' ಎನ್ನುತ್ತಾರವರು.
ಉತ್ತಮ ಶಿಕ್ಷಕನಿಗೆ ಮೊದಲನೆಯದಾಗಿ ಬೇಕಾದದ್ದು 'ವಿಷಯ'. ಬೋಧಿಸುವ ವಿಷಯ ಪರಿಪೂರ್ಣ ಗೊತ್ತಿರಬೇಕು. ಎರಡನೆಯದ್ದು 'ವೃತ್ತಿ ಗೌರವ', ತಮ್ಮ ಶಿಕ್ಷಕ ವೃತ್ತಿ ಕುರಿತು ಅತ್ಯುನ್ನತ ಗೌರವ ಹೊಂದಿರಬೇಕು. ಮತ್ತು ಮೂರನೆಯದ್ದು 'ಮಕ್ಕಳಲ್ಲಿ ಪ್ರೀತಿ' ಅಂದರೆ ಮಕ್ಕಳನ್ನು ಪ್ರೀತಿ ಆದರದಿಂದ ಕಾಣಬೇಕು. ಈ ಮೂರು ಆದರ್ಶಗಳಿದ್ದವನು ಉತ್ತಮ ಬೋಧಕನಾಗುತ್ತಾನೆ ಎನ್ನುತ್ತಾರೆ ಕರಜಗಿ. ಪ್ರಾಂಶುಪಾಲರಾಗಿ ನಿವೃತ್ತರಾದರೂ ಬೋಧನೆಯಿಂದ ನಿವೃತ್ತರಾಗಿಲ್ಲ. ಅಕಾಡೆಮಿ ಆಫ್ ಕ್ರಿಯೇಟಿವ್ ಟೀಚಿಂಗ್ ಆರಂಭಿಸಿ ನಿಜವಾದ ಗುರು ಹೇಗಿರಬೇಕು ಎಂದು ಬೋಧಿಸುತ್ತಿದ್ದಾರೆ.
ಅವರು ಬರವಣಿಗೆಯಲ್ಲೂ ಸಿದ್ಧಹಸ್ತರು, ಉತ್ತಮ ವಾಗ್ಮಿ. ಕನ್ನಡದ ಪ್ರಮುಖ ದೈನಿಕದಲ್ಲಿ ಸತತ 1350ಕ್ಕೂ ಹೆಚ್ಚು ಅಂಕಣ ಬರಹ ಪ್ರಕಟಿಸಿದ್ದಾರೆ. 60 ಕಥೆ, ರೇಡಿಯೋ ನಾಟಕ, ಲೇಖನ ಬರೆದಿದ್ದಾರೆ. ದಾಸಸಾಹಿತ್ಯ, ವಚನಗಳಿಗೆ ವ್ಯಾಖ್ಯಾನ ನೀಡುತ್ತ ದೇಶಗಳನ್ನು ಸುತ್ತುತ್ತಿರುವ ಇವರ ಅಭಿಮಾನಿ ಬಳಗ ಹೆಚ್ಚಿರುವುದು ಅಮೆರಿಕ, ಇಂಗ್ಲೆಂಡ್ಗಳಲ್ಲಿ. ಕರ್ನಾಟಕದ ಎರಡು ಸಾವಿರ ಶಾಲೆಗಳಲ್ಲಿ ಕರಜಗಿಯವರ ಅಕಾಡೆಮಿಯಿಂದ ಶಿಕ್ಷಣ ಪಡೆದ ಶಿಕ್ಷಕರಿದ್ದಾರೆ. 'ಇವರಿಂದ ತರಬೇತಿ ಪಡೆದವರು ಕೆಲವೇ ವರ್ಷಗಳಲ್ಲಿ ಪ್ರಿನ್ಸಿಪಾಲ್ ಅಗಿಬಿಡ್ತಾರೆ' ಅಂತ ವಾಗ್ದೇವಿ ವಿಲಾಸ ಶಾಲಾ ಸಮೂಹ ಮುಖ್ಯಸ್ಥ ಹರೀಶ್ ಹೇಳುತ್ತಾರೆ.
'ಬಾಲ್ಯದಲ್ಲಿ ಗುರುಕುಲ ಶಿಕ್ಷಣ, ಅಜ್ಜ, ಅಕ್ಕ. ಸೋದರ ಮಾವರ ಮಾರ್ಗದರ್ಶನ ನನ್ನನ್ನು ಗಟ್ಟಿಯಾಗಿಸಿತು. ಧಾರವಾಡಕ್ಕೆ ಓದಲು ಬಂದಾಗ ದೊಡ್ಡ ದೊಡ್ಡ ವಿದ್ವಾಂಸರು ಕವಿಗಳ ಒಡನಾಟ ಸಿಕ್ಕಿತು. ದ.ರಾ.ಬೇಂದ್ರೆ, ಮಲ್ಲಿಕಾರ್ಜು ಮನ್ಸೂರ್, ಬಸವರಾಜ ರಾಜಗುರು ಮುಂತಾದವರೊಡನೆ ಬೆರೆತೆ. ಮುಂದೆ ಬೆಂಗಳೂರಿನಲ್ಲಿ ರಾಜಾರಾಮಣ್ಣ, ಡಿವಿಜಿ, ಮಾಸ್ತಿಯವರ ಸಂಪರ್ಕವಾಯಿತು. ಹಾಗೇ ಬೀಚಿ ಮತ್ತು ಗೋಕಾಕ ಸಂಪರ್ಕವಿತ್ತು. ಗಂಧದ ಕೊರಡಿನ ಸಂಸರ್ಗದಿಂದ ಬಟ್ಟೆ ಪರಿಮಳಿತವಾಗುವಂತೆ ನಾನಾದೆ' ಅನ್ನುತ್ತಾರೆ ಕರಜಗಿ.
60ರ ಹರೆಯದಲ್ಲೂ ಅದಮ್ಯ ಕಾಯಕಪ್ರೀತಿ, ಉತ್ಸಾಹ, ಶ್ರದ್ಧೆ, ಕಾಳಜಿಗಳನ್ನು ಹೊಂದಿರುವ ಕರಜಗಿಯವರ ಸಂಪರ್ಕ ಕೊರಡನ್ನೂ ಕೊನರಿಸಬಲ್ಲುದು. ಅದಕ್ಕಾಗಿಯೇ ಇವರು ಗುರುರಾಜ ಮಾತ್ರವಲ್ಲ, ರಾಜಗುರು ಕೂಡ.
= ಯಶಸ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.