ಪ್ರೇಮ ಪುರಾಣದಿಂದ ಪುರಾಣ ಪ್ರೇಮದತ್ತ
ದೂರದರ್ಶನದಲ್ಲಿ ರಾಮಾಯಣ ಪ್ರಸಾರವಾಗುತ್ತಿದ್ದರೆ ಎಲ್ಲರೂ ಟೀವಿ ಮುಂದೆ ಕುಳಿತು ಭಕ್ತಿಯಿಂದ ನೋಡುವ ಕಾಲವೊಂದಿತ್ತು. ಅಲ್ಲಿರುವ ರಾಮ, ಸೀತೆ ಪಾತ್ರಧಾರಿಗಳನ್ನು ದೇವರು ಎನ್ನುವಂತೆ ಪೂಜಿಸುತ್ತಿದ್ದ ಕಾಲವದು. 1988ರಲ್ಲಿ ರಾಮಾಯಣ ಮುಗಿದ ನಂತರ ಬಿ. ಆರ್ ಛೋಪ್ರಾ ನಿರ್ಮಾಣದ ಮಹಾಭಾರತ ಪ್ರಸಾರವಾದಾಗ ಅದಕ್ಕೆ ಸಿಕ್ಕಿದ ಅಭೂತಪೂರ್ವ ಯಶಸ್ಸು ಮರೆಯುವಂತಿಲ್ಲ. ಹಾಗೆ ನೋಡಿದರೆ 80-90ರ ದಶಕಗಳಲ್ಲಿ ದೂರದರ್ಶನದಲ್ಲಿ ಪೌರಾಣಿಕ ಕಥೆ ಆಧಾರಿತ ಧಾರವಾಹಿಗಳದ್ದೇ ದರ್ಬಾರು ನಡೆದಿತ್ತು.
ಇದೀಗ ಮತ್ತೆ ಆ ಕಾಲ ಮರುಕಳಿಸುತ್ತಿದೆ. ಮುಂಚೂಣಿಯಲ್ಲಿರುವ ಎಲ್ಲ ಚಾನೆಲ್ಗಳು ಪ್ರೀತಿ-ಪ್ರೇಮ, ಅತ್ತೆ- ಸೊಸೆ, ಟೀನೇಜ್ ಲವ್, ಎರಡನೇ ಮದುವೆ ಮೊದಲಾದ ಕಣ್ಣೀರ ಕಥೆಗಳ ಜತೆ ಜತೆಯಾಗಿಯೇ ಪೌರಾಣಿಕ ಕಥೆಗಳನ್ನಾಧರಿಸಿದ ಸೀರಿಯಲ್ಗಳಿಗೆ ಹೆಚ್ಚು ಒಲವುತೋರಿಸತೊಡಗಿವೆ. ಕಲರ್ಸ್ಚಾನೆಲ್ನಲ್ಲಿ ಜೈ ಶ್ರೀ ಕೃಷ್ಣಾ, ಮಹಿಮಾ ಶನಿದೇವ್ ಕೀ, ಸಾಯಿಬಾಬಾ, ಜೈ ಹನುಮಾನ್, ಜೈ ಮಾ ದುರ್ಗಾ ಹೀಗೆ ಪೈಪೋಟಿಗೆ ಬಿದ್ದಂತೆ ಚಾನೆಲ್ಗಳು ಪೌರಾಣಿಕ ಸೀರಿಯಲ್ಗಳನ್ನು ಪ್ರಸಾರ ಮಾಡುವ ಮೂಲಕ 21ನೇ ಶತಮಾನದಲ್ಲಿ ಪೌರಾಣಿಕ ಕಥೆಗಳ ಹೊಸ ಟ್ರೆಂಡ್ ಹುಟ್ಟುಹಾಕಿವೆ. ಕಥೆ ಹಳೆಯದ್ದೇ ಆಗಿದ್ದರೂ, ಅದನ್ನು ಹೊಸ ರೀತಿಯಲ್ಲಿ ಪ್ರದರ್ಶಿಸುವ ಮೂಲಕ ಈ ಧಾರಾವಾಹಿಗಳು ಮತ್ತೊಮ್ಮೆ ಜನರೆಡೆಗೆ ಬಂದಿವೆ.
ಹೊಸ ಲುಕ್, ಹೊಸ ಟೆಕ್ನಾಲಜಿಯನ್ನು ಬಳಸಿ ಬಿಗ್ ಬಜೆಟ್ನಲ್ಲಿ ನಿರ್ಮಾಣವಾಗಿರುವ ಹೊಸ ಮಹಾಭಾರತ ಧಾರಾವಾಹಿಯೇ ಇದಕ್ಕೆ ಉದಾಹರಣೆ. ಕತೆ ಅದೇ ಆಗಿದ್ದರೂ ಈಗಿನ ಕಾಲಕ್ಕೆ ಒಪ್ಪುವಂತೆ ವಿಷ್ಯುವಲ್ ಟೆಕ್ನಾಲಜಿಗಳನ್ನು ಬಳಸಿ ಅದ್ದೂರಿಯಾಗಿ ನಿರ್ಮಿಸಿರುವ ಮಹಾಭಾರತ ಧಾರಾವಾಹಿ ಸ್ಟಾರ್ಪ್ಲಸ್ನಲ್ಲಿ ಪ್ರಸಾರವಾಗುತ್ತಿದ್ದು, ಇದು ಮೊದಲ ಕಂತುಗಳಲ್ಲಿಯೇ 8.5 ಮಿಲಿಯನ್ರಷ್ಟು ನೋಡುಗರನ್ನು ಗಳಿಸಿಕೊಂಡಿತ್ತು. ಇದೇ ಧಾರಾವಾಹಿ ಮಲಯಾಳಂ, ಮರಾಠಿ, ಬಂಗಾಳಿ, ತಮಿಳು ಹಾಗು ತೆಲುಗು ಭಾಷೆಗಳಲ್ಲಿಯೂ ಪ್ರಸಾರವಾಗುತ್ತಿದ್ದು ವೀಕ್ಷಕರ ಮನ ಗೆಲ್ಲುವಲ್ಲಿ ಸಫಲವಾಗಿದೆ.
ದಶಕಗಳ ಹಿಂದೆ ದೂರದರ್ಶನದಲ್ಲಿ ಓಂ ನಮಃ ಶಿವಾಯ್ ಧಾರಾವಾಹಿ ಯಶಸ್ಸು ಕಂಡ ನಂತರ ಇದೀಗ ಲೈಫ್ ಓಕೆ ಚಾನೆಲ್ನಲ್ಲಿ ಶಿವ ಮಹಾತ್ಮೆ ಆಧಾರಿತ ದೇವೋಂಕಾ ದೇವ್ ಮಹಾದೇವ್ ಎಂಬ ಧಾರಾವಾಹಿ ಜನಮನ ಗೆಲ್ಲುತ್ತಾ ಮುಂದುವರಿದಿದೆ. ಪ್ರಸ್ತುತ ಧಾರವಾಹಿಯಲ್ಲಿ ಶಿವನ ಪಾತ್ರವಹಿಸಿದ ಮೋಹಿತ್ ರೈನಾ ಹುಡ್ಗೀರು ನನಗೆ ಲೈನ್ ಹೊಡೆಯೋ ಬದಲು ನನ್ನ ಆಶೀರ್ವಾದ ಪಡೆಯಲು ಬರ್ತಿದ್ದಾರೆ ಎಂದು ಹೇಳಿದ್ದರು. ಇದು ಈ ಧಾರಾವಾಹಿಗೆ, ಆ ಪಾತ್ರಕ್ಕೆ ಸಂದ ವಿಜಯವೇ ಸರಿ. ಇದೇ ಧಾರಾವಾಹಿ ಮಲಯಾಳಂ ಏಷ್ಯಾನೆಟ್ ಚಾನೆಲ್ನಲ್ಲಿ ಕೈಲಾಸನಾಥನ್, ತಮಿಳಿನ ವಿಜಯ್ ಟೀವಿಯಲ್ಲಿ ಶಿವಂ, ಒಡಿಯಾ ಭಾಷೆಯ ಸಾರ್ಥಕ್ ಟೀವಿಯಲ್ಲಿ ಮಹಾದೇವ್ ಮತ್ತು ತೆಲುಗಿನ ಮಾ ಟೀವಿಯಲ್ಲಿ ಹರ ಹರ ಮಹಾದೇವ್ ಎಂಬ ಹೆಸರಿನಲ್ಲಿ ಪ್ರಸಾರವಾಗುತ್ತಿವೆ. ಲೈಫ್ ಓಕೆ ಚಾನೆಲ್ನಲ್ಲಿ ಪ್ರಸಾರವಾಗುವ ಇನ್ನೊಂದು ಧಾರಾವಾಹಿ ಕಥಾ ಮಹಾದೇವ್ ಪುತ್ರ ಬಾಲ್ಗಣೇಶ್ ಕೀ ಗಣಪತಿಯ ಬಾಲ್ಯವನ್ನು ಆಧರಿಸಿದ್ದಾಗಿದೆ.
ಐತಿಹಾಸಿಕ ಧಾರಾವಾಹಿಗಳೂ ಈ ಸ್ಪರ್ಧೆಯಲ್ಲಿ ಒಂದು ಕೈ ನೋಡಲು ಹೊರಟಾಗಿದೆ. 5 ವರ್ಷಗಳ ಹಿಂದೆ ಅಶುತೋಷ್ ಗೌರೀಕರ್ ಬಾಲಿವುಡ್ನಲ್ಲಿ ಜೋಧಾ ಅಕ್ಬರ್ ಸಿನಿಮಾ ನಿರ್ಮಿಸಿ ಇತಿಹಾಸ ಸೃಷ್ಟಿಸಿದ್ದರು. ಇದೀಗ ಅದೇ ಕಥೆಯನ್ನಿಟ್ಟುಕೊಂಡು ಸೀರಿಯಲ್ ಕ್ವೀನ್ ಏಕ್ತಾ ಕಪೂರೆ ಜೋಧಾ ಅಕ್ಬರ್ ಸೀರಿಯಲ್ ನಿರ್ಮಿಸಿದ್ದಾರೆ. ಈ ಸೀರಿಯಲ್ ಝೀ ಟೀವಿಯಲ್ಲಿ ಪ್ರಸಾರವಾಗುತ್ತಿದ್ದು, ಜೋಧಾ ಹಾಗೂ ಮೊಘಲ್ ಬಾದ್ಷಾ ಅಕ್ಬರನ ರೋಮ್ಯಾನ್ಸ್ ಇಲ್ಲಿ ಹಿಟ್ ಆಗುತ್ತಿದೆ.
ಅದೇ ವೇಳೆ ಸಿದ್ಧಾರ್ಥ ಬುದ್ಧನಾಗುವ ಕಥೆಯನ್ನಾಧರಿಸಿ ಬುದ್ಧ ...ಅನ್ಸುನಿ ಕಹಾನಿ ರಾಜಾವೋಂಕೆ ರಾಜಾ ಕಿ ಎಂಬ ಧಾರಾವಾಹಿ ಕೂಡಾ ಇದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
ಏತನ್ಮಧ್ಯೆ, ಸೋನಿ ಟೀವಿಯಲ್ಲಿ ಪ್ರಸಾರವಾಗುವ ರಜಪೂತ್ ರಾಜ ಮಹಾರಾಣ ಪ್ರತಾಪ್ ಜೀವನ ಕಥೆಯಾಧಾರಿತ ಭಾರತ್ ಕಾ ವೀರಪುತ್ರ್ ಮಹಾರಾಣಾಪ್ರತಾಪ್ ಧಾರಾವಾಹಿ ಕೂಡಾ ವೀಕ್ಷಕರ ಸಂಖ್ಯೆ ಹೆಚ್ಚಿಸುವಲ್ಲಿ ಯಶಸ್ಸು ಗಳಿಸುತ್ತಿದೆ.
ಹಿಂದೀ ಚಾನೆಲ್ಗಳಲ್ಲಿ ಮಾತ್ರವಲ್ಲ ಪ್ರಾದೇಶಿಕ ಭಾಷೆಗಳಲ್ಲೂ ಪೌರಾಣಿಕ ಧಾರಾವಾಹಿಗಳು ಪ್ರಸಾರವಾಗಿ ಯಶಸ್ಸು ಗಳಿಸಿವೆ. ಕನ್ನಡವಾಹಿನಿಗಳಲ್ಲಿ ಪೌರಾಣಿಕ ಕಥೆಯನ್ನಾಧರಿತ ಧಾರಾವಾಹಿಗಳು ಪ್ರಸಾರವಾಗಿದ್ದು ಕಡಿಮೆಯೇ. ಆದರೆ ಇತ್ತೀಚೆಗೆ ಕನ್ನಡ ವಾಹಿನಿಗಳೂ ಪೌರಾಣಿಕ ಕಥೆಯತ್ತ ಒಲವು ತೋರಿಸಿರುವುದು ಉತ್ತಮ ಬೆಳವಣಿಗೆ. ಇದಕ್ಕೆ ಉದಾಹರಣೆ ಉದಯ ಟೀವಿಯಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಧಾರಾವಾಹಿ. ಇದೇ ಮೊದಲ ಬಾರಿಗೆ ಮುಂಬೈ ಮೂಲದ ಸಿನಿವಿಸ್ತಾಸ್ ಕಂಪನಿ ನಿರ್ಮಿಸಿರುವ ಮಹಾಭಾರತ ಧಾರಾವಾಹಿ ಜನಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿ ಮುಂದುವರಿಯುತ್ತಿದೆ. ಅದೇ ವೇಳೆ ಡಿಡಿ ಚಂದನದಲ್ಲಿ ಸುಮಾರು 450 ವರ್ಷಗಳ ಹಿಂದೆ ತುಳುನಾಡಿನಲ್ಲಿ ಹುಟ್ಟಿ ಬೆಳೆದ ಆ ಕಾಲದಲ್ಲಿ ಮಹಾನ್ ಪಿಡುಗಾಗಿದ್ದ ವರ್ಣಬೇಧ ನೀತಿಯ ವಿರುದ್ಧ ಹೋರಾಡಿದ ಕೋಟಿ ಮತ್ತು ಚೆನ್ನಯ್ಯ ಎಂಬ ಅವಳಿ ಸಹೋದರರೆಂದು ನಂಬಿರುವ ದೈವತ್ವ ಶಕ್ತಿಗಳ ಕಥೆಯನ್ನಾಧರಿಸಿದ ಕೋಟಿ ಚೆನ್ನಯ್ಯ ಎಂಬ ತುಳು ಧಾರಾವಾಹಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇತ್ತೀಚೆಗಷ್ಟೇ ಈಟೀವಿ ಕನ್ನಡದಲ್ಲಿ ವಿಷ್ಣು ಪುರಾಣ ಆಧಾರಿತ ಶ್ರೀನಿವಾಸ ಕಲ್ಯಾಣ ಎಂಬ ಧಾರಾವಾಹಿ ಪ್ರಸಾರ ಆರಂಭಿಸಿದೆ.
ಒಟ್ಟಿನಲ್ಲಿ ಎಂಟರ್ಟೈನ್ಮೆಂಟ್ ಚಾನೆಲ್ಗಳು ಪೌರಾಣಿಕ ಕಥೆಗಳತ್ತ ಮುಖ ಮಾಡುವ ಮೂಲಕ ಈಗಿನ ಜನರೇಶನ್ಗೆ ಭಕ್ತಿ ಪುರಾಣಗಳ ಪಾಠ ಉಣಬಡಿಸುತ್ತಿವೆ.
= ರಜನಿ.ಕೆ