ಮೌನ ಮಾತಾಗುವಾಗ...
ನಾಟಕದ ಹೆಸರು ಮೌನ. ಆದರೆ ಇದು ಮೂಕಿ ನಾಟಕವಲ್ಲ! ನಾಟಕದ ಕಥಾವಸ್ತು ಮಾತಲ್ಲದ್ದು. ಯಾಕೇಂದ್ರೆ ಪ್ರತಿಯೊಬ್ಬರ ಜೀವನದ ಅತೀವ ಪಾಲೂ ಮಾತಿಲ್ಲದ್ದೇ. ಮಾತಿಲ್ಲದ್ದು ಅಂದ್ರೆ? ಮೌನ!!
ಮೌನ ಅಂದ್ರೆ? ಅದರದ್ದೇ ಹುಡುಕಾಟ ಇಲ್ಲಿ. ಮಾತು ಅರ್ಥಬದ್ಧ. ಮೌನ ಅದರ ತದ್ವಿರುದ್ಧ. ಮಾತಾಡಿದ್ರೆ ಕೆಲವೊಮ್ಮೆ ಅಪಾರ್ಥ. ಆದರೆ ಮೌನವಾಗಿದ್ರೆ?... ಅಪಾರ ಅರ್ಥ!! ಏನೇ ಆದರೂ ಮೌನದ ಬಗ್ಗೆಯೂ ಮಾತಲ್ಲೇ ಹೇಳಬೇಕು. ಅದೇ ವಿಪರ್ಯಾಸ. ಆದರೆ ಒಂದಂತೂ ನಿಜ. ಮಾತಲ್ಲೂ ಮೌನವಿದೆ. ಜೀವವಿಲ್ಲದ ಮಾತು ಮೌನ ಅಂತಾದ್ರೆ, ಸತ್ವ ಇರುವ ಮೌನ ಮಾತಾಗಬಹುದಲ್ವಾ?
ಇದನ್ನೇ ವಸ್ತುವನ್ನಾಗಿಸಿಕೊಂಡು ಸರ್ವಸ್ವ ತಂದ ತನ್ನ ಚೊಚ್ಚಲ ನಾಟಕವನ್ನು ಪ್ರದರ್ಶಿಸಲಿದೆ. ಇಡೀ ನಾಟಕ ಒಟ್ಟು ಐದು ಕಥೆಗಳನ್ನು ಒಳಗೊಂಡಿದೆ. ಈ ಎಲ್ಲಾ ಕಥೆಗಳೂ ನಮ್ಮ ನಮ್ಮಲ್ಲೇ, ನಮ್ಮೊಡನೆಯೇ ಇರುವವರ ಬದುಕಿನಲ್ಲಿ ನಡೆದಂಥ ನೈಜಕಥೆಗಳನ್ನು ಆಧರಿಸಿದೆ ಎಂಬುದೇ ವಿಶೇಷ. ಸಂಬಂಧಗಳ ನಡುವಿನ ಕ್ಲೀಷೆಗಳು, ಸೂಕ್ಷ್ಮಗಳನ್ನು ನಿರೂಪಿಸುತ್ತಾ ಸಾಗುವ ನಾಟಕ ಸ್ನೇಹಿತರ, ಪ್ರೇಮಿಗಳ ನಡುವಿನ ಮಾತು-ಮೌನ, ಅಪ್ಪ, ಅಮ್ಮ, ಅಜ್ಜಿ, ಮಗ ಮಗಳು ಮೊಮ್ಮಕ್ಕಳ ನಡುವಿನ ಜನರೇಶನ್ ಗ್ಯಾಪ್ ಬಗ್ಗೆ ಮಾತನಾಡುತ್ತಲೇ ಮೌನಕ್ಕೆ ಜಾರಿ ಹೋಗುತ್ತದೆ. ಒಂದೆಡೆ ಪಶ್ಚಾತ್ತಾಪ ಮತ್ತೊಂದೆಡೆ ಪ್ರಾಯಶ್ಚಿತ್ತ, ಒಂದೆಡೆ ಉದಾರತೆ ಮತ್ತೊಂದೆಡೆ ಅಸಹನೆಯ ಪರಮಾವಧಿ.. ಹೀಗೆ ಕಥಾವಸ್ತು ಮಾತುಗಳ ಹಂದರದಲ್ಲಿ ಸಿಲುಕಿ ಅದರೊಳಗಿರುವ ಮೌನವನ್ನು ಪದರ ಪದರವಾಗಿ ಬಿಡಿಸುತ್ತಾ ಹೋಗುವುದೇ ಇಡೀ ನಾಟಕದ ವೈಶಿಷ್ಟ್ಯ. 'ಮೌನ'ದ ನಿರ್ದೇಶಕ ನಾಗರಾಜ ಸೋಮಯಾಜಿ. ಹಲವಾರು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದು, ಇದೇ ಪ್ರಥಮ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ. ಬಹುತೇಕ ಹೊಸ ಕಲಾವಿದರೇ ಅಭಿನಯಿಸುತ್ತಿರುವ ಈ ನಾಟಕದಲ್ಲಿ ಮಹಾಪರ್ವ ಧಾರಾವಾಹಿಯ ಮಂದಾಕಿನಿ ಪಾತ್ರದಲ್ಲಿ ಖ್ಯಾತರಾಗಿರುವ ಜಯಲಕ್ಷ್ಮಿ ಪಾಟೀಲ್, ವಿಶಿಷ್ಟ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ.
ಸ್ಥಳ: ಕೆ.ಹೆಚ್. ಕಲಾಸೌಧ, ಹನುಮಂತನಗರ, ಬೆಂಗಳೂರು, ಸಮಯ : ಇಂದು ಸಂಜೆ 7.30. ದ್ವಿತೀಯ ಪ್ರದರ್ಶನ : ಇದೇ ವೇದಿಕೆಯಲ್ಲಿ ಜೂನ್ 14 ರಂದು. ವಿವರಗಳಿಗೆ ಸಂಪರ್ಕಿಸಿ : 9986474787
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.