ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸೋಮWAR

Mainashree
Updated On : 9 Jun 2014, 6:47 am

ಸೋಮವಾರ ಅಂದ್ರೆ ಅದೊಂಥರ ಸೋಮಾರಿವಾರ. ಇಂಗ್ಲೀಷಲ್ಲಿ 'ಮಂಡೆ'ಬಿಸಿ ಡೇ. ಪ್ರಪಂಚ ಇರೋದೇ ಹೀಗೆ. ಇದು ಪ್ರತಿ ವಾರವೂ ವೀಕೆಂಡೇ ಆಗಿರಲಿ ಅಂತ ಆಸೆ ಪಡುತ್ತದೆ. ಅದಕ್ಕೇ ಇಂಗ್ಲೀಷಲ್ಲಿ 'ಎವ್ರಿ ಡೇ ಈಸ್ ನಾಟ್ ಸಂಡೇ' ಅಂತ ಜಾಣ್ಣುಡಿ ಮಾಡಿಟ್ಟಿರೋದು.
ನಮಗೆಲ್ಲರಿಗೂ ಬೇರೆಲ್ಲಾ ವಾರಗಳ ಮೇಲೂ ಒಂಚೂರಾದ್ರೂ ಪ್ರೀತಿ ಇರೋಕೆ ಸಾಧ್ಯ. ಆದರೆ ಸೋಮವಾರದ ಬಗ್ಗೆ ಮಾತ್ರ ಕಿಂಚಿತ್ತೂ ಪ್ರೀತಿ ಇಲ್ಲ. ಯಾಕಾದ್ರೂ ಬರತ್ತೋ ಈ ಸೋಮವಾರ ಅಂತಾನೇ ಸ್ಟೂಡೆಂಟ್ಸಿಂದ ಹೌಸ್ ವೈಫಿನ ತನಕ, ಬಾಸ್‌ನಿಂದ ನೌಕರನ ತನಕ ಪ್ರತಿಯೊಬ್ಬರೂ ಗೊಣಗಿಕೊಳ್ತಾರೆ. ಅರೆ.. ಮಂಡೇ ಬರದೇ ಇನ್ನೊಂದ್ ಸಂಡೇ ಬರೋದಾದ್ರೂ ಹೇಗೆ ಸ್ವಾಮಿ? ಅದಕ್ಕಿಂತ ಹೆಚ್ಚಾಗಿ, ನಮ್ಮ ವೀಕೆಂಡನ್ನ ಚೆನ್ನಾಗಿ ಆಚರಿಸಬೇಕು ಅಂದ್ರೆ ವಾರದ ಇತರೇ ದಿನಗಳಲ್ಲಿ ದುಡಿಯಲೇಬೇಕು ಅಲ್ವೇ? ಇಲ್ಲಾಂದ್ರೆ ವೀಕೆಂಡಲ್ಲಿ ಮಜಾ ಉಡಾಯಿಸೋಕೆ ದುಡ್ಡೆಲ್ಲಿಂದ ಬರುತ್ತೆ. ಕೆಲಸಕಾರ್ಯ ಇಲ್ಲದವರಿಗೆ ಮಾತ್ರ ವೀಕೆಂಡು ಥ್ರಿಲ್ಲು ತರುವುದಿಲ್ಲ. ಅವರಿಗೆ ಎಲ್ಲ ದಿನಗಳೂ 'ವೀಕ್‌' ಎಂಡುಗಳೇ. ವೀಕೆಂಡ್ ಹ್ಯಾಂಗೋವರಿನಿಂದ ಹೊರಬಂದು ಸೋಮವಾರವೆಂಬ ವಾಸ್ತವಕ್ಕೆ ಬರೋಕೆ ನಾನಾ ಕಸರತ್ತುಗಳು ಇವೆ. ಆದರೆ ಇಲ್ಲೊಂದಿಷ್ಟು ಅಂಶಗಳಿವೆ ಗಮನಿಸಿ. ಇವು ನಿಮ್ಮನ್ನು ಸೋಮವಾರದ ಸೋಂಬೇರಿತನದಿಂದ ಆಚೆ ತರುವ ಐಡಿಯಾಗಳಲ್ಲ. ಯಶಸ್ವೀ ವ್ಯಕ್ತಿಗಳು ವಾರವನ್ನು ಹೇಗೆ ಪ್ರಾರಂಭಿಸುತ್ತಾರೆ. ಅವರ ಸೋಮವಾರಗಳು ಹೇಗಿರುತ್ತವೆ. ನೀವು ಕೂಡ ಯಶಸ್ವಿ ಅನಿಸಿಕೊಳ್ಳಲು ನಿಮ್ಮ ಸೋಮವಾರವನ್ನು ಹೇಗೆ ಪ್ಲಾನ್ ಮಾಡಿಕೊಳ್ಳಬಹುದು ಎಂಬ ಬಗ್ಗೆ ಈ ಕೆಳಗಿನ ಅಂಶಗಳು ತಿಳಿಸುತ್ತವೆ. ಇವೆಲ್ಲ ಸಾಧ್ಯಾನಾ? ಎಂಬ ಪ್ರಶ್ನೆ ಸೈಡಲ್ಲಿಡಿ. ತುಂಬಾ ಸಿಂಪಲ್ಲಾಗಿವೆ. ಪ್ರಾಕ್ಟಿಕಲ್ಲಾಗಿವೆ. ಒಮ್ಮೆ ಓದಿಕೊಳ್ಳಿ. ಸಾಧ್ಯ ಆದ್ರೆ ಟ್ರೈ ಮಾಡಿ.

ಬೆಳಿಗ್ಗೆ ಬೇಗ ಎದ್ದು, ಮೈಬೆವರಿ, ಮೂಳೆ ಜಾಯಿಂಟ್‌ಗಳೆಲ್ಲ ಫ್ರೀ ಅನಿಸೋ ಥರ ವ್ಯಾಯಾಮ ಮಾಡಿ ಸ್ನಾನ ಮಾಡಿ ನೋಡಿ. ಫ್ರೆಶ್‌ನೆಸ್ ನಿಮ್ಮ ಮುಖದಲ್ಲಿ ತುಂಬಿ ತುಳುಕ್ತಾ ಇರತ್ತೆ. ಬೆಳಗಿನ ತಿಂಡಿ ಸೂಪರ್ರಾಗಿ ತಿನ್ನಬೇಕು. ಹೊಟ್ಟೆ ತುಂಬುವಷ್ಟು ತಿಂಡಿ ತಿಂದು ಕೆಲಸಕ್ಕೆ ಹೊರಟರೆ, ಊಟದ ಸಮಯದ ತನಕ ಕೆಲಸ ಬಿಟ್ಟು ಬೇರೇನೂ ಗಮನಕ್ಕೆ ಬಾರದು. ಕೆಲಸ ಶುರು ಮಾಡುವ ಮೊದಲು ಒಮ್ಮೆ ಇಡೀ ವಾರದ ಕೆಲಸಗಳ ಪಟ್ಟಿ ಮಾಡಿಕೊಂಡು ಬಿಡಿ. ಕಳೆದವಾರ ಪೆಂಡಿಂಗ್ ಕೆಲಸ ಇದ್ದರೆ ಅದನ್ನೂ ಈ ವಾರದ ಶುರುವಿನಲ್ಲೇ ಮಾಡಿ ಮುಗಿಸಿಕೊಳ್ಳೋ ಸಂಕಲ್ಪ ಮಾಡಿ.

ಆಫೀಸಿಗೆ ಕಾಲೇಜಿಗೆ ನಿಗದಿತ ಸಮಯಕ್ಕಿಂತ ಸ್ವಲ್ಪ ಬೇಗನೇ ತಲುಪಿಕೊಳ್ಳಿ. ಸೋಮವಾರ ನಿಮ್ಮ ವಾಚನ್ನು ಎತ್ತಿಟ್ಟರೂ ಪರವಾಗಿಲ್ಲ. ಟೈಂ ನೋಡಿದಷ್ಟೂ ಹೊತ್ತೇ ಹೋಗ್ತಾ ಇಲ್ಲ ಅನಿಸುತ್ತದೆ. ಅದರಲ್ಲೂ ಮಧ್ಯಾಹ್ನದ ನಂತರದ ಮೂರ್ನಾಲ್ಕು ಗಂಟೆ. ಹಾಗಾಗಿ ಮಧ್ಯಾಹ್ನದ ಹೊತ್ತಿನಲ್ಲಿ ಇರೋದ್ರಲ್ಲೇ ಇಂಟರೆಸ್ಟಿಂಗ್ ಅನಿಸೋ ಕೆಲಸ ಮಾಡಿ. ಡಿಸ್ಕಷನ್, ಮೀಟಿಂಗುಗಳನ್ನು ಮಧ್ಯಾಹ್ನಕ್ಕೆ ಇಟ್ಟುಕೊಳ್ಳೋದು ಒಳ್ಳೆಯದು.!

ನಿಮ್ಮ ಟೇಬಲ್ಲು, ಡ್ರಾಯರ್ರು, ಟೇಬಲ್ ಮೇಲಿನ ಫೈಲುಗಳು, ಕಂಪ್ಯೂಟರಿನ ಫೈಲುಗಳು ಎಲ್ಲವನ್ನೂ ಒಮ್ಮೆ ಜಾಲಾಡಿ, ಬೇಕಾದ್ದನ್ನ ಶಿಸ್ತು ಮಾಡಿಟ್ಟುಕೊಂಡು, ಬೇಡದ್ದನ್ನು ಕಸದ ಬುಟ್ಟಿಗೆ ಕಳಿಸಿ. ನಿಮ್ಮ ಟೇಬಲ್ ಮತ್ತು ಕಂಪ್ಯೂಟರ್‌ಸ್ವಚ್ಛವಾಗಿ ಕಂಡಿತೆಂದರೆ ಕೆಲಸ ಮಾಡೋಕೆ ಹುಟ್ಟುವ ಮೂಡ್ ಅದ್ಭುತವಾಗಿರುತ್ತೆ.

ನಿಮ್ಮ ಸಹೋದ್ಯೋಗಿಗಳನ್ನು, ಸಹಪಾಠಿಗಳನ್ನು, ಬಾಸ್‌ಗಳನ್ನು ಸೋಮವಾರ ಬೆಳಿಗ್ಗೆ ಕಂಡೊಡನೆಯೇ ಮುಗುಳ್ನಗೆಯ ವಿನಿಮಯದೊಂದಿಗೆ ಕಿರುಮಾತಿಗೆ ಎಳೆದು, ನಂತರ ಕೆಲಸ ಶುರುವಿಡಿ.

ಈ ವಾರದ ಟಾರ್ಗೆಟ್ಟುಗಳು ಎಂದು ನೀವೇ ಒಂದಷ್ಟು ಕನಸುಗಳನ್ನು, ಗುರಿಗಳನ್ನು ಬರೆದಿಟ್ಟುಕೊಂಡುಬಿಡಿ. ನಿಮ್ಮ ಗುರಿಯನ್ನು ಬೇರೆ ಯಾರೋ ಫಿಕ್ಸ್ ಮಾಡುವ ಮೊದಲು ನೀವೇ ಮಾಡಿಕೊಂಡುಬಿಟ್ಟರೆ, ಆ ವಾರವೆಲ್ಲಾ ನೀವೊಂದು ಛಾಲೆಂಜ್‌ನೊಂದಿಗೆ ಕೆಲಸ ಮಾಡುವ ಹುರುಪು ಹುಟ್ಟುತ್ತದೆ. ವೀಕೆಂಡಿನಲ್ಲಿ ಆ ಕೆಲಸ ಮುಗಿಸಿದ್ದೇ ಆದರೆ ನಿಮ್ಮ ವೀಕೆಂಡು ವಿಜಯೋತ್ಸವ ಎಂಬಂತಿರುತ್ತದೆ.

ಅದೆಷ್ಟೇ ಕೆಲಸವಿರಲಿ. ನಗೋಕೆ ಅಂತ ನಡುನಡುವೆ ಒಂಚೂರು ಟೈಮ್ ಮಾಡಿಕೊಳ್ಳಿ. ನಗೋಕೆ ಯಾವುದೇ ಅವಕಾಶ ಸಿಕ್ಕರೂ ಮಿಸ್ ಮಾಡಿಕೊಳ್ಳಬೇಡಿ. ಒಂದು ನಿಮಿಷದ ನಗು, ನಿಮಗೆ ಒಂದು ಗಂಟೆಯಷ್ಟು ಹೆಚ್ಚು ಕೆಲಸ ಮಾಡುವ  ಚೈತನ್ಯ ತುಂಬುತ್ತದೆ.

ಸಾಮಾಜಿಕ ಜಾಲತಾಣಗಳಿಂದ ವೀಕೆಂಡಿನಲ್ಲಿ ದೂರ ಇರಬಲ್ಲಿರಾದರೆ, ಸೋಮವಾರವೂ ದೂರ ಇರಲು ಸಾಧ್ಯ. ಫೇಸ್‌ಬುಕ್, ಟ್ವಿಟರ್ ಇವುಗಳು ಕಳೆದೆರಡು ದಿನಗಳಲ್ಲಿ ನೋಟಿಫಿಕೇಷನ್‌ಗಳಿಂದ ತುಂಬಿ ಹೋಗಿರುತ್ತೆ. ಅದನ್ನು ನೋಡ್ತಾ ಕೂರೋದು ಟೈಮ್‌ವೇಸ್ಟ್. ಹಾಗಾಗಿ, ಅದನ್ನು ನಿಮ್ಮ ಊಟದ ಸಮಯದ ನಂತರ ಹದಿನೈದು ನಿಮಿಷದಲ್ಲಿ ಮುಗಿಸಿಕೊಳ್ಳಿ. ಮಿಕ್ಕಂತೆ ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಈಮೇಲ್‌ಗಳು ಇತರೆ ವಿಷಯಗಳು ಕಂಪ್ಯೂಟರಿನಲ್ಲಿ ಕಾದುಕೂತಿರುತ್ತವೆ. ಅದರ ಬಗ್ಗೆ ಆದ್ಯತೆಯ ಮೇರೆಗೆ ಗಮನಹರಿಸಿ.
ಮಂಗಳವಾರಕ್ಕೆ ಒಂದಷ್ಟು ಕೆಲಸಗಳನ್ನು ಪಟ್ಟಿಮಾಡಿಟ್ಟುಕೊಂಡೇ ನಿಮ್ಮ ಸೋಮವಾರವನ್ನು ಮುಗಿಸಿ. ಆ ಲಿಸ್ಟಿನ ಪ್ರಕಾರ ಮಂಗಳವಾರ ನಿಮಗೆ ಸೋಮವಾರಕ್ಕಿಂತ ಸುಲಭ, ಹಿತಕರ ಅನಿಸಬೇಕು. ಅದೇ ಮಾದರಿಯಲ್ಲಿ ಪ್ರತಿದಿನವೂ ಪ್ಲಾನ್ ಆಗುತ್ತಿದ್ದರೆ, ವೀಕೆಂಡ್ ಹತ್ತಿರ ಬಂದದ್ದೇ ತಿಳಿಯೋದಿಲ್ಲ.

= ನವೀನ್ ಸಾಗರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments