ನಮ್ಮ ಮನಸ್ಥಿತಿಯನ್ನು ಆಹಾರ ನಿರ್ಧರಿಸುತ್ತಾ?
ಮಾನಸಿಕವಾಗಿ ದಣಿವಾದಾಗ ನಾವು ಏನು ಮಾಡುತ್ತೇವೆ? ಆರ್ಧ ಕಪ್ ಕಾಫಿ ಅಥವಾ ಚಹಾ ಕುಡಿಯುತ್ತೇವೆ ತಾನೆ? ಏಕೆ ಹೇಳಿ? ಇವುಗಳ ಸೇವನೆ ನಂತರ ಮಾನಸಿಕವಾಗಿ ಶಕ್ತಿ ಸಿಗುತ್ತದೆ, ದೇಹಕ್ಕೆ ಚೈತನ್ಯ ಸಿಗುತ್ತದೆ, ಕೆಲಸ ಮಾಡುವ ಹುರುಪು ಬರುತ್ತದೆ ಎಂದು ತಾನೆ? ಈಗೀಗ ಮಾನಸಿಕ ಆಯಾಸವಾದಾಗ ಚಾಕೊಲೆಟ್ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಲು ವೈದ್ಯರೇ ಸಲಹೆ ಮಾಡುತ್ತಾರೆ. ಕಾಫಿ, ಟೀ, ಚಾಕೊಲೆಟ್, ಕೆಲವು ಕೋಲಾ ಪಾನೀಯಗಳಲ್ಲಿ ಇರುವುದು ಕೆಫೀನ್. ಇದುವೇ ದಣಿದ ಮನಸ್ಸಿಗೆ ಮುದ ನೀಡುವ, ಏಕಾಗ್ರತೆ ಹೆಚ್ಚಿಸುವ ಶಕ್ತಿ ಮದ್ದು. ಆಹಾರಕ್ಕೂ, ಮೆದುಳಿನ ಕಾರ್ಯ ನಿರ್ವಹಣೆಗೂ ಯಾವ ರೀತಿಯ ಸಂಬಂಧವಿದೆ ಎನ್ನುವುದನ್ನು ಚರ್ಚಿಸಿದ್ದೇವೆ. ಆದರೆ ನಮ್ಮ ಮನಸ್ಥಿತಿ ಅಥವಾ ಮೂಡ್ಗೂ, ಆಹಾರಕ್ಕೂ ಸಂಬಂಧವಿದೆ ಎಂದರೆ ನಂಬುತ್ತೀರಾ? ಆಹಾರ ಎನ್ನುವುದು ವ್ಯಕ್ತಿಯ ಅಭಿರುಚಿಯನ್ನು ಅವಲಂಬಿಸಿರುತ್ತದೆ ಮತ್ತು ಅದು ಪ್ರಜ್ಞಾ ಪೂರ್ವಕ ಆಯ್ಕೆ ಎನ್ನುವುದು ನಿಜ. ಆದರೆ ಆಹಾರದಲ್ಲಿನ ರಾಸಾಯನಿಕಗಳು ಖಂಡಿತವಾಗಿಯೂ ನಮ್ಮ ಮೂಡ್ ಅನ್ನು ನಿಯಂತ್ರಿಸಬಲ್ಲವು. ಆಹಾರ-ಮೂಡ್ ಕುರಿತಾಗಿ ಮಾನಸಿಕ ತಜ್ಞರಲ್ಲಿಯೂ ಗೊಂದಲವಿತ್ತು. ಕೆಲವರು ಸಂಬಂಧವಿಲ್ಲ ಎಂದರೆ, ಕೆಲವರು ಸಂಬಂಧ ಇದೆ ಎಂದರು. ಇಬ್ಬರೂ ತಮ್ಮದೇ ಆದ ವಾದ-ವಿವಾದಗಳನ್ನು
ಮುಂದಿಟ್ಟರು. ಕೊನೆಗೆ ಸಂಶೋಧಕರು ಈ ಗೊಂದಲ ಬಗೆಹರಿಸಲು ಮುಂದಾದರು. ಅಂತಿಮ ಒಪ್ಪಿತ ತೀರ್ಮಾನ ಎಂದರೆ ನಮ್ಮ ಮೂಡ್ ನಾವು ಸೇವಿಸುವ ಆಹಾರವನ್ನು ಅವಲಂಬಿಸಿದೆ ಎನ್ನುವುದು. ವೈಜ್ಞಾನಿಕ ವಾಗಿ ಈ ಚರ್ಚೆ ಮುಗಿದ ಅಧ್ಯಾಯ. ಆಹಾರದಿಂದ ಮೂಡ್ ಬದಲಾಗುತ್ತದೆ ಎನ್ನುವುದಕ್ಕೆ ಕೆಫೀನ್ಗಿಂತ ಉತ್ತಮ ಉದಾಹರಣೆ ಬೇಕಾಗಿಲ್ಲ ಅಲ್ಲವೆ? ಆಹಾರ, ಮೂಡ್ನ ನಂಟು ಸ್ಥಿರೀಕರಿಸುವ ಇನ್ನೊಂದು ಸರಳ ಸಿದ್ಧಾಂತ ಎಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣದ ಏರಿಳಿತ ನಮ್ಮ ಮಾನಸಿಕ ಸಾಮರ್ಥ್ಯ ಮತ್ತು ಮೂಡ್ ಅನ್ನು ನಿರ್ಧರಿಸುತ್ತದೆ ಎನ್ನುವುದು. ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿರ್ಧರಿತವಾಗುವುದು ನಾವು ಸೇವಿಸುವ ಆಹಾರದಿಂದ. ಕೆಲವು ಸಂಶೋಧನೆಗಳ ಪ್ರಕಾರ, ಆಹಾರದಲ್ಲಿನ ರಾಸಾಯನಿಕಗಳು, ಫ್ಲೇವರ್ಗಳು, ಬಣ್ಣಗಳು ಕೂಡ ನಮ್ಮ ಮನಸ್ಥಿತಿಯನ್ನು ಬದಲಿಸಬಲ್ಲವು. ಜೀರ್ಣಕದಜ್ಯೆಯಲ್ಲಿ ಮುಖ್ಯಪಾತ್ರ ವಹಿಸುವ ಕಿಣ್ವಗಳಿಗೆ ಅಗತ್ಯವಿರುವ ರಾಸಾಯನಿಕಗಳ ಕೊರತೆ ಉಂಟಾದಾಗಲೂ ಮಾನಸಿಕ ಸ್ಥಿತಿಯಲ್ಲಿ ಏರುಪೇರಾಗುತ್ತದೆ. ಇನ್ನು ಕೆಲವರಿಗೆ ಆಹಾರದ ಅಲರ್ಜಿ ಇರುತ್ತದೆ. ಆದರೆ ಅಲರ್ಜಿ ಇರುವುದು ಅವರಿಗೇ ಗೊತ್ತಿರುವುದಿಲ್ಲ. ಅಂಥ ಆಹಾರಗಳನ್ನು ಸೇವಿಸಿದಾಗಲೂ ಮೂಡ್ ಬದಲಾಗುತ್ತದೆ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com