ಸಮುದಾಯದ ದನಿ
ಇಲ್ಲಿ ಜಾಹೀರಾತು ಹಾವಳಿ ಇಲ್ಲ. ಅಬ್ಬರಿಸುವ ಸಿನೆಮಾ ಸಂಗೀತವಿಲ್ಲ. ಆದರೆ ನಮ್ಮತನ, ಆತ್ಮೀಯತೆ, ದಿನದ 24 ಗಂಟೆ ಜನರ ಆಶಯಗಳಿಗೆ ಸ್ಪಂದಿಸುವ ತುಡಿತವಿದೆ. ಅಭಿವೃದ್ಧಿ ಪತ್ರಿಕೋದ್ಯಮದ ಸಾಧ್ಯತೆಗಳ ವಿಸ್ತಾರವನ್ನು ಪ್ರತ್ಯಕ್ಷವಾಗಿ ಕಾಣಿಸುವ ಪ್ರಯತ್ನವಿದೆ. ಆ ನಿಟ್ಟಿನಲ್ಲಿ ಆರಂಭವಾದ ಸಾರಥಿ ಝಲಕ್ 90.4 ಸಮುದಾಯ ರೇಡಿಯೋ, 12 ಕಿ.ಮೀ ವ್ಯಾಪ್ತಿಯಲ್ಲಿ 10 ಹಳ್ಳಿಗಳನ್ನು ತಲುಪುವ ಎಫ್ಎಂ ವಾಹಿನಿ.
ಮನರಂಜನೆಯ ಏಕೈಕ ಉದ್ದೇಶದೊಂದಿಗೆ ಟಿವಿ ಎದುರು ನಮ್ಮನ್ನು ದಿನದ 24 ಗಂಟೆ ಕುಳ್ಳಿರಿಸಲು ಚಾನೆಲ್ಗಳು ಶರವೇಗದಲ್ಲಿ ಸ್ಪರ್ಧೆಗಿಳಿದಿವೆ. ಹೀಗಿರುವಾಗ, ಒಂದು ಸಮುದಾಯ ರೇಡಿಯೋದಿಂದ ಏನು ಸಾಧ್ಯ? ಮಹತ್ವದ ಕಾರ್ಯ ಸಾಧ್ಯವಿದೆ ಎಂದು ಮಾಧ್ಯಮ ಸಂಪನ್ಮೂಲ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಸಾರಥಿ ಟ್ರಸ್ಟ್ನ ರೂವಾರಿಗಳಾದ ಶಮಂತಾ, ಉಶಾ ಎಂ.ವಿ., ನಿರ್ಮಲಾ ನಂದಕುಮಾರ್ ತೋರಿಸಿಕೊಟ್ಟಿದ್ದಾರೆ. ಇದರ ಅಂಗಸಂಸ್ಥೆಯೇ ಸಾರಥಿ ಝಲಕ್ 90.4 ಎಫ್ಎಂ.
ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿಯಲ್ಲಿ ಒಂದು ವರ್ಷದ ಹಿಂದೆ ಸಾರಥಿ ಝಲಕ್ ಆರಂಭವಾಯ್ತು. ಶಾಲೆ, ಕಾಲೇಜು ವಿದ್ಯಾರ್ಥಿಗಳು, ಕಾಯಂ ಸಿಬ್ಬಂದಿ, ತರಬೇತಿ ಪಡೆಯುತ್ತಿರುವ ಆರ್ಜೆಗಳು ಅಲ್ಲಿನ ಉತ್ಸಾಹಿ ಕಾರ್ಯಕರ್ತರು. ಸಾಮಾಜಿಕ, ಗ್ರಾಮೀಣಾಭಿವೃದ್ಧಿ, ಸ್ವಚ್ಛತೆ ಸೇರಿದಂತೆ ಮಾಹಿತಿ, ಚರ್ಚಾ ಕಾರ್ಯಕ್ರಮಗಳು ಇಲ್ಲಿ ಪ್ರಧಾನ. ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ, ಮಾಲಿನ್ಯ ನಿಯಂತ್ರಣ ಮಂಡಳಿ ಮುಂತಾದ ಸರ್ಕಾರಿ ಇಲಾಖೆಗಳೂ ಸಾರಥಿ ಜತೆ ಕೈ ಜೋಡಿಸಿವೆ. ಎಸ್ಸೆಮ್ಮೆಸ್ಗಳು, ಕರೆಗಳ ಅವಿರತ ಪ್ರತಿಕ್ರಿಯೆ ಇವರ ಉತ್ಸಾಹ ಇಮ್ಮಡಿಗೊಳಿಸಿದೆ.
ಪ್ರಸ್ತುತ ಶೈಕ್ಷಣಿಕ ಉದ್ದೇಶಗಳಿಗಾಗಿ ಹಲವು ವಿವಿಗಳಲ್ಲಿ ಸಮುದಾಯ ರೇಡಿಯೋ ತೆರೆಯಲಾಗಿದೆ. ಆದರೆ ಎನ್ಜಿಒ ಆಧರಿತ ಪ್ರತ್ಯೇಕ ಸಮುದಾಯ ರೇಡಿಯೋ ಸಾರಥಿಯ ಪ್ರಯತ್ನ ರಾಜ್ಯದಲ್ಲೇ ಪ್ರಥಮ. ಸಾಮಾಜಿಕ ಉದ್ಯಮಶೀಲತೆಯಲ್ಲಿ ರಾಜ್ಯದ ಮೊದಲ ಸಮುದಾಯ ರೇಡಿಯೋ ಎಂಬ ಹೆಗ್ಗಳಿಕೆಯೂ ಸಾರಥಿಯದ್ದು.
ಸಾಮಾಜಿಕ ಉದ್ಯಮಶೀಲತೆಯ ಭಾಗವಾಗಿ ಆರಂಭವಾದ ಸಾರಥಿ ಝಲಕ್ ಅರಿವು ಮೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ನಮ್ಮ ಕಾರ್ಯಕ್ರಮಗಳ ಬಗೆಗಿನ ಅನಿಸಿಕೆ, ಅಭಿಪ್ರಾಯ ಹಂಚಿಕೊಳ್ಳಲು ಜನಸಾಮಾನ್ಯರಿಗೆ ಅವಕಾಶ ಕಲ್ಪಿಸಿರುವುದರಿಂದ ಆ ಒಳಗೊಳ್ಳುವಿಕೆಯ ಪರಿಕಲ್ಪನೆಯೇ ಸ್ಥಳೀಯರನ್ನು ಬಹುಬೇಗ ಆಕರ್ಷಿಸಿತು.
- ಶಮಂತಾ ಡಿ.ಎಸ್. ನಿರ್ದೇಶಕಿ, ಸಾರಥಿ ಮಾಧ್ಯಮ ಸಂಪನ್ಮೂಲ ಸಂಸ್ಥೆ
= ನಯನಾ ಬಿ.ಜೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.