ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಉಳುವಾ ಕೈದಿಯ ನೋಡಲ್ಲಿ....

Vishwanath S
Updated On : 10 Jun 2014, 3:24 am

ಗುಲ್ಬರ್ಗದಲ್ಲೀಗ ಒಕ್ಕಲುತನ ಗೊತ್ತಿರುವ ಜೈಲು ಹಕ್ಕಿಗಳಿಂದ ಹೊಲ- ಗದ್ದೆ ಕೆಲಸ ಮಾಡಿಸಲಾಗುತ್ತಿದೆ. ಹೀಗಾಗಿ ಇಲ್ಲೀಗ ಗದ್ದೆ ಕೆಲಸ ಗೊತ್ತಿರುವ ಕೈದಿಗಳಿಗೆ ಕೈತುಂಬ ಕೆಲಸ. ಎತ್ತುಗಳೊಂದಿಗೆ ಹೊಲ ಹರಗುತ್ತಿರುವ ಇವರು ಇನ್ನೇನು ಮೃಗಶಿರಾ ನಕ್ಷತ್ರ ಪ್ರವೇಶಕ್ಕೂ ಮುನ್ನ ಹೊಲ ಹಸನು ಮಾಡಿ, ಹದಮಾಡಿಟ್ಟುಕೊಳ್ಳುವ ಕಾಯಕ ನಿರತರಾಗಿದ್ದಾರೆ.
1969ರಲ್ಲಿ ಸ್ಥಾಪನೆಯಾದ ಗುಲ್ಬರ್ಗ ಕೇಂದ್ರ ಕಾರಾಗೃಹದಲ್ಲಿ 43 ಎಕರೆ ಹೊಲವಿದೆ. ಇಲ್ಲಿನ ಉಳುಮೆ ಕಾಯಕ ಕೈದಿಗಳದ್ದೇ. ಅದರಲ್ಲೂ ಸಜಾ ಕೈದಿಗಳನ್ನು ಈ ಕಾಯಕಕ್ಕೆ ಬಳಸಿಕೊಂಡೇ ವಾರ್ಷಿಕ ತೊಗರಿ, ಜೋಳ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗುತ್ತದೆ. ಜೈಲು ಗೋಡೆಗಳಿಗೆ ಹೊಂದಿಕೊಂಡೇ ಇರುವ ಹೊಲಗಳಲ್ಲೀಗ ಕಳೆದೊಂದು ವಾರದಿಂದ ಮುಂಗಾರು ಹಂಗಾಮು ಪೂರ್ವಸಿದ್ಧತೆ ಕೆಲಸ ಭರದಿಂದ ಸಾಗಿವೆ. ಹರಗಲ್ಪಡುತ್ತಿದ್ದ ಹೊಲದ ಮರದ ಕೆಳಗೆ ಪೇದೆಗಳಿಬ್ಬರು ಕೈದಿಗಳ ಚಲನವಲನದ ಮೇಲೆ ನಿಗಾ ಇಟ್ಟಿದ್ದರೆ ಕೈದಿಗಳೋ ಅದ್ಯಾವುದರ ಪರಿವೆಯೇ ತಮಗಿಲ್ಲ ಎಂಬಂತೆ ಉಳುಮೆಯಲ್ಲಿ ತಲ್ಲೀನರಾಗಿದ್ದರು.
540 ಕೈದಿಗಳನ್ನು ತನ್ನೊಳಗೆ ಇಟ್ಟುಕೊಳ್ಳುವ ಸಾಮರ್ಥ್ಯವಿರುವ ಕಾರಾಗೃಹದಲ್ಲೀಗ ವಿಚಾರಣಾಧೀನ, ಸಜಾ ಸೇರಿದಂತೆ 1052 ಕೈದಿಗಳಿದ್ದಾರೆ. ಸಜಾ ಕೈದಿಗಳನ್ನು ಇಲ್ಲಿನ ಸಿಬ್ಬಂದಿ ಸದಾ ಚಟುವಟಿಕೆಯಲ್ಲಿಟ್ಟಿರುತ್ತಾರೆ. ಜೈಲಿನಲ್ಲಿರುವ ಹೊಲ ಅಷ್ಟೇನೂ ಫಲವತ್ತಾಗಿಲ್ಲದಿದ್ದರೂ ವಾರ್ಷಿಕ 50ಕ್ಕೂ ಅಧಿಕ ಕ್ವಿಂಟಾಲ್ ತೊಗರಿ, ಹತ್ತಿಪ್ಪತ್ತು ಕ್ವಿಂಟಾಲ್ ಜೋಳ ಬೆಳೆಯುತ್ತದೆ. ಕೈದಿಗಳಿಂದ ಉಳುಮೆಯಿಂದ ಆರಂಭಿಸಿ ರಾಶಿಯವರೆಗೂ ಕೆಲಸ ಮಾಡಿಸುವ ಜೈಲರ್ಗಳು ಇಲ್ಲಿನ ಉತ್ಪನ್ನದಲ್ಲಿ ಜೋಳವನ್ನು ನೇರವಾಗಿ ಜೈಲಿನ ನಿತ್ಯದ ಊಟಕ್ಕೆ ಬಳಸಿ, ತೊಗರಿಯನ್ನು ಎಪಿಎಂಸಿ ಮೂಲಕ ಮಾರುತ್ತಾರೆ.
ಗುಲ್ಬರ್ಗದ ಸಜಾ ಕೈದಿಗಳೀಗ ರೈತರು
ಶಾಮಿಯಾನ ನೇಯ್ಗೆ
ಜೈಲೊಳಗಿರುವ ವಿದ್ಯುತ್ ಮಗ್ಗಗಳಲ್ಲಿ ಕೈದಿಗಳಿಗೆ ನೇಯ್ಗೆ ಹೇಳಿಕೊಡಲಾಗುತ್ತದೆ. ಅಲ್ಲಿಯೇ ಜಮಖಾನೆ, ಗುಡಾರ, ಶಾಮಿಯಾನ ಸಿದ್ಧಪಡಿಸಲಾಗುತ್ತದೆ. ಗುಲ್ಬರ್ಗ ಜೈಲಲ್ಲಿ ಸಿದ್ಧವಾಗುವ ಬಿಳಿ ಬಟ್ಟೆಗಂತೂ ರಾಜ್ಯಾದ್ಯಂತ ಬೇಡಿಕೆ ಇದೆ. ಜೊತೆಗೇ ಇಲ್ಲಿನ ಜಮಖಾನೆ, ಗುಡಾರಗಳಿಗೂ ವ್ಯಾಪಕ ಮಾರುಕಟ್ಟೆ ಇದೆ. ಆಸ್ಪತ್ರೆ, ಇತರೆ ಸರ್ಕಾರಿ ಇಲಾಖೆಗಳಿಂದಲೂ ಸಾಕಷ್ಟು ಖರೀದಿ ಆರ್ಡರ್ಗಳಿವೆ. ಬಲ್ಲ ಮಹಿಳಾ ಸಜಾ ಕೈದಿಗಳನ್ನು ನೇಯ್ಗೆ, ಕಸೂತಿ, ಕುರ್ಚಿ ಹೆಣಿಗೆ, ಮಗ್ಗದ ಕೆಲಸಗಳಿಗೆ ಬಳಸಲಾಗುತ್ತಿದೆ. ಈ ಎಲ್ಲಾ ಕೆಲಸಗಳಿಗೂ ಕೂಲಿ ನೀಡಲಾಗುತ್ತದೆ.
ಕೈದಿಗಳಿಗೆ ಕಾಲವೂ ಕಳೆಯಬೇಕು, ಉತ್ಪಾದನೆಯೂ ಆಗಬೇಕು ಎಂಬುದಕ್ಕಾಗಿ ಕೆಲಸಗಳಲ್ಲಿ ತೊಡಗಿಸುತ್ತೇವೆ. ಇಲ್ಲಿ ಸಿದ್ಧವಾಗುವ ಬಿಳಿ ಬಟ್ಟೆಗಳಿಗಂತೂ ಎಲ್ಲಿಲ್ಲದ ಬೇಡಿಕೆ ಇದೆ. ಅನ್ಯ ಜೈಲುಗಳಿಂದಲೇ ಈ ಬಟ್ಟೆ ಖರೀದಿಸಲ್ಪಡುತ್ತದೆ. ಜೈಲು ಬಿಟ್ಟು ಹೊರಗೆ ಮಾಡುವ ಕೆಲಸಗಳಿದ್ದಾಗ ಸಜಾ ಕೈದಿಗಳಲ್ಲೇ ಸನ್ನಡತೆ ಇರುವವರಿಗೆ ಆದ್ಯತೆ ನೀಡಲಾಗುತ್ತದೆ.
ಮಲ್ಲಿಕಾರ್ಜುನ ಬಿ. ಸ್ವಾಮಿ,
ಅಧೀಕ್ಷಕರು(ಪ್ರಭಾರ), ಗುಲ್ಬರ್ಗ ಕೇಂದ್ರ ಕಾರಾಗೃಹ


-ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement