ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನಿನ್ನಂಥ ಅಪ್ಪ ಇಲ್ಲ!

Vishwanath S
Updated On : 13 Jun 2014, 2:01 am

ನನ್ನ ಪಾಲಿಗೆ ಅದೊಂದು ಸುಂದರ ಸಂಜೆಯಾಗಿತ್ತು. ಆ ದಿನ ಸಂಜೆ ಮನೆಗೆ ಬಂದ ಅಪ್ಪ ನೇರವಾಗಿ ನನ್ನ ಬಳಿಯೇ ಮಾತನಾಡಿದರು. ಹೋಮ್‌ವರ್ಕ್ ಬೇಗ ಮಾಡಿ ಮುಗಿಸು ಆಟ ಆಡೋಣ ಎಂದರು. ಈ ಮಾತನ್ನು ಕೇಳಿ ಅಡುಗೆ ಮನೆಯಿಂದ ಕುಣಿದಾಡುತ್ತಾ ಬಂದಳು ಅಮ್ಮ. ಅವಳ ಮೊಗದಲ್ಲಿದ್ದ ನಗುವನ್ನು ಈ ಮುಂಚೆ  ನಾ ಯಾವತ್ತೂ ಕಂಡಿದ್ದಿಲ್ಲ. ಆ ದಿನ ಮನೆಯಲ್ಲಿ ಹಬ್ಬದ ವಾತಾವರಣ. ಯಾವತ್ತೂ ಮೂಗಿನವರೆಗೆ ಹೆಂಡ ಕುಡಿದು ಅಕ್ಕಪಕ್ಕದ ಮನೆಯವರಿಗೂ ಕೇಳೋ ಥರ ಅಪ್ಪನ ಹಾರಾಟ ಇರುತ್ತಿತ್ತು. ಅಪ್ಪನ ಕಿರುಚಾಟದ ಜೊತೆ ಅಮ್ಮನ ನರಳಾಟವೂ ಇರುತ್ತಿತ್ತು. ಕಟುಕನಂತೆ ಆಡುತಿದ್ದ ನನ್ನ ಅಪ್ಪ ಆ ದಿನ ಕುಡಿಯದೆ ಬಂದಿದ್ದು ನಮ್ಮೆಲ್ಲರ ಖುಷಿಗೆ ಕಾರಣ. ಅದೇ ಕೊನೆಯ ದಿನವೇನೋ. ಮತ್ತದೇ ನಲಿವಿನ ವಾತಾವರಣ ಮುಂದೆಂದೂ ಕಾಣಲಿಲ್ಲ. ನನ್ನ ಸಿಹಿ ನೆನಪಿನ ಪಟ್ಟಿಯಲ್ಲಿ ಅಪ್ಪನ ಪಾಲು ಅದೊಂದೇ. ಈಗ ಅಪ್ಪ ಎನ್ನಲೂ ಅವನಿಲ್ಲ.
 ಇದು ಗೆಳೆಯನೊಬ್ಬ ಹೇಳಿದ ಜೀವನದ ಕತೆ. ಇದು ಅವನೊಬ್ಬನ ಕತೆಯಲ್ಲ. ಇಂಥ ದಾರುಣ ಕ್ಷಣ ಕಹಿ ನೆನಪುಗಳು ಅಂದಿನ ಮಕ್ಕಳ ಮನದಲ್ಲಿ ಹಾಗೇ ಇವೆ, ಇರುತ್ತವೆ. ಮಕ್ಕಳ ನೆನಪಲ್ಲಿ ಆ ಅಪ್ಪಂದಿರು ಯಾವತ್ತೂ ಹೀರೋಗಳಾಗಲಾರರು. ಕುಡಿದು ತೂರಾಡಿ ಮನೆಯ ನೆಮ್ಮದಿ ಹಾಳುಗೆಡಹುವ ತಂದೆಯರ ಮಕ್ಕಳ ಮನಸಿನಲ್ಲಿ ಏನಿದೆ? ನಿಮ್ಮಿಂದ ಅವರು ಬಯಸುವುದಾದರೂ ಏನು?
 ಜನ್ಮ ನೀಡಿದ ತಾಯಿಯ ಪ್ರೀತಿ, ವಾತ್ಸಲ್ಯದ ಜೊತೆಗೆ ಮುದ್ದು ಮಾಡುವ ತಂದೆ ಬೇಕು ಎಂದು ಬಯಸುತ್ತಾರೆ. ತನ್ನ ತಂದೆಯೇ ನನ್ನ ಬೆಸ್ಟ್ ಫ್ರೆಂಡ್ ಆಗಿರಬೇಕು ಎಂದು ಆಸೆಯನಿಟ್ಟುಕೊಂಡಿರುತ್ತಾರೆ. ತಂದೆಯ ಜೊತೆ ಹೊರಗಡೆಯ ಪ್ರಪಂಚ ನೋಡಲು, ಆತನ ಜತೆ ಕಾಲ ಕಳೆಯಲು ಹಾತೊರೆಯುತ್ತಾರೆ. ತನ್ನ ತಂದೆ ತಾಯಿಯ ಲವಲವಿಕೆಯ ಜೀವನದಿಂದ ತಾನು ಸಾಕಷ್ಟು ಕಲಿಯಲು ಇಚ್ಛಿಸುತ್ತಾರೆ. ನಮ್ಮ ಅಪ್ಪ ಎಲ್ಲರಿಗಿಂತ ವಿಭಿನ್ನ ಅನ್ನೋ ರೀತಿಯಲ್ಲಿ ನಮ್ಮ ಜೊತೆ ಬೆರೆಯಬೇಕು ಅನ್ನುವ ಆಕಾಂಕ್ಷೆ ಅವರದ್ದು ಆಗಿರುತ್ತದೆ.
ಮಕ್ಕಳ ಮನಸ್ಸು ಮಾನಸಿಕವಾಗಿ ಹದಗೆಡಬಹುದು. ತಂದೆಯ ಬಗ್ಗೆ ಮಕ್ಕಳ ಮನಸ್ಸು ಕಠೋರವಾಗಬಹುದು. ಮನೆ ಬಿಟ್ಟು ಹೋಗಬಹುದು, ಆತ್ಮಹತ್ಯೆ ಮಾಡಿಕೊಳ್ಳಬಹುದು. ಸಂಗದೋಷದಿಂದ ಕೆಟ್ಟ ಹಾದಿ ಹಿಡಿಯಬಹುದು. ಅಪ್ಪ ಥರವೇ ಮಹಾ ಕುಡುಕನಾಗಬಹುದು.
ಹೀಗಾಗದಿರಲು ನೀವು ನೆಟ್ಟಗಿರಬೇಕಾದ್ದು ಮುಖ್ಯ. ಅವರು ಬಯಸುವ ಮುದ್ದು ಅಪ್ಪನಾಗಿರಲು ನೀವು ಮಾಡಬೇಕಾದ್ದೇನು?

 ಮಕ್ಕಳ ಮನಸ್ಸಿಗೆ ನೋವುಂಟು ಮಾಡದಂತೆ ವರ್ತಿಸಿ.
 ಎದುರಿಗೆ ನೀವಿದ್ದರೂ, ನನಗೆ ಅಂಥ ಅಪ್ಪ ಬೇಕಿತ್ತು ಎಂದು ಹೇಳೋದಕ್ಕೆ ಅವಕಾಶ ನೀಡದಿರಿ. ನಮ್ಮಪ್ಪ ಅವರಿಗಿಂತ ಸೂಪರ್ ಅನ್ನೋ ರೀತಿ ಮಕ್ಕಳೊಂದಿಗಿರಿ.
 ಮಕ್ಕಳ ಅವಶ್ಯಕತೆ ಅರಿತು ಅವರು ಕೇಳುವ ಮುನ್ನವೇ ಅದನ್ನು ಅವರಿಗೆ ಒದಗಿಸಿ ಕೊಡಿ. ನಿಮ್ಮ ಮೇಲಿನ ಪ್ರೀತಿ ಗೌರವ ಮಕ್ಕಳಿಗೆ ಇನ್ನೂ ಹೆಚ್ಚಾಗುತ್ತದೆ.
 ವಾರಕ್ಕೊಂದು ಬಾರಿಯಾದರೂ ಹೆಂಡತಿ ಮಕ್ಕಳೊಡನೆ ಒಂದು ಚಿಕ್ಕ ಪಿಕ್ನಿಕ್ ಮಾಡಿ. ಅಥವಾ ಜೊತೆಗೆ ಕೂತು ಊಟ, ಹರಟೆ, ಆಟವನ್ನಾಡಿ.
 ಮನೆ, ಹೆಂಡತಿ, ಮಕ್ಕಳ ಮೇಲೆ ಕಾಳಜಿ ಮತ್ತು ಅವರಿಗೆ ಯಾವ ಅಪಾಯ ಆಗದಂತೆ ನಿಗಾ ವಹಿಸಿ.
ನಾಳೆ ಬೆಳಗಾದರೆ ಅಪ್ಪಂದಿರ ದಿನ(ಜೂ.15). ಹೀರೋ ಅನಿಸುವ ತಂದೆಯರ ಮಧ್ಯೆ ಇಂಥ ಅಪ್ಪಂದಿರೂ ಇರ್ತಾರಲ್ವೇ?
- ಸಾಗರ್ ಹೆಗ್ಡೆ ನಾರಾವಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement