ನೂರು ಗೆರೆ
ಲೋಕದ ಡೊಂಕನ್ನು ತಿದ್ದುವ ವ್ಯಂಗ್ಯಚಿತ್ರಗಳಿಗೆ ಈ ಮೊದಲು ವ್ಯವಸ್ಥಿತ ಗ್ಯಾಲರಿಯಿರಲಿಲ್ಲ. ಉದ್ಯಮಿ ಅಶೋಕ್ ಖೇಣಿ ಭಾರತೀಯ ವ್ಯಂಗ್ಯಚಿತ್ರಗಾರರ ಸಂಸ್ಥೆ (ಐಐಸಿ) ಯನ್ನು 2001ರಲ್ಲಿ ಪ್ರಾರಂಭಿಸಿದ್ದಲ್ಲದೆ ತಮ್ಮ ಮಿಡ್ಫೋರ್ಡ್ ಹೌಸ್ನಲ್ಲಿ ಅದಕ್ಕೆ ಸುಸಜ್ಜಿತ ಗ್ಯಾಲರಿ ಕೊಟ್ಟರು. ವ್ಯಂಗ್ಯಚಿತ್ರಗಾರ ಬಿ. ವಿ. ರಾಮಮೂರ್ತಿ ಆಗ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಅವರ ಕಾಲಾನಂತರ ಅಶೋಕ್ ಖೇಣಿ ಆ ಸ್ಥಾನ ತುಂಬಿದ್ದಾರೆ. ವ್ಯವಸ್ಥಾಪಕ ಟ್ರಸ್ಟಿ, ಹಿರಿಯ ವ್ಯಂಗ್ಯಚಿತ್ರಗಾರ ವಿ. ಜಿ. ನರೇಂದ್ರ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಸಂಸ್ಥೆ ವ್ಯಂಗ್ಯಚಿತ್ರಗಳನ್ನಷ್ಟೇ ಪ್ರದರ್ಶಿಸದೆ, 15 ಹಿರಿಯರನ್ನು ಗುರ್ತಿಸಿ 'ಜೀವಮಾನದ ಪ್ರಶಸ್ತಿ' ನೀಡಿದೆ.
ವ್ಯಂಗ್ಯಚಿತ್ರ ಪುಸ್ತಕಗಳನ್ನು ಹೊರತಂದಿದ್ದಾರೆ. ಕಾರ್ಯಾಗಾರಗಳನ್ನು ಕೂಡ ನಡೆಸುತ್ತಿದ್ದಾರೆ.
ನರೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರೊಂದಿಗೆ ಸೇರಿ ದೇಶ-ವಿದೇಶದ ಖ್ಯಾತ ವ್ಯಂಗ್ಯಚಿತ್ರಗಾರರ 99 ವ್ಯಂಗ್ಯಚಿತ್ರಗಳ ಪ್ರದರ್ಶನ ನಡೆಸಿದ್ದಾರೆ. ಈ ಸಂಸ್ಥೆ ದೇಶದಲ್ಲೇ ಪ್ರಥಮ, 2008ರಲ್ಲಿ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸೇರಿದೆ. ಈ ಗ್ಯಾಲರಿಯಲ್ಲಿ ಹಿರಿಯ ವ್ಯಂಗ್ಯಚಿತ್ರಗಾರರಾದ ಶಂಕರ್ ಪಿಳ್ಳೆ, ಆರ್. ಕೆ. ಲಕ್ಮಣ್, ಮಾರಿಯೋ ಮಿರಾಂಡ, ರಾವ್ಬೈಲ್, ರಂಗ, ಬಾಪು, ಯೇಸುದಾಸನ್, ಉನ್ನಿ, ವಸಂತ್ ಸಾವಟೆ, ಪ್ರಾಣ್, ಎಸ್. ಡಿ. ಫಡ್ನೀಸ್ ಅವರ ವ್ಯಂಗ್ಯಚಿತ್ರ ಪ್ರದರ್ಶಿಸಿದ್ದರು.
ಇಂದು (ಜೂನ್ 14) ಸಂಜೆ 4.30ಕ್ಕೆ 100ನೇ ವ್ಯಂಗ್ಯಚಿತ್ರ ಪ್ರದರ್ಶನ ಏರ್ಪಡಿಸಿದ್ದಾರೆ. ಉದ್ಘಾಟನೆಯನ್ನು ಏಷ್ಯನ್ನೆಟ್ ನ್ಯೂಸ್ ನೆಟ್ವರ್ಕ್ನ ನಿರ್ದೇಶಕರಾದ ಎಚ್. ಎಸ್. ಬಲರಾಮ್ ಮಾಡಲಿದ್ದಾರೆ.101 ವ್ಯಂಗ್ಯಚಿತ್ರಗಾರರ 112 ವ್ಯಂಗ್ಯಚಿತ್ರಗಳು ಒಂದೇ ಜಾಗದಲ್ಲಿ ಸಿಗಲಿವೆ. ಮಾಯಾಕಾಮತ್ ಸ್ಮಾರಕ ವ್ಯಂಗ್ಯಚಿತ್ರ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿಗಳನ್ನೂ ಕೂಡ ಇಂದೇ ವಿತರಿಸುತ್ತಾರೆ. ಪ್ರದರ್ಶನ ಆಗಸ್ಟ್ 25ರವರೆಗೆ ಸಾರ್ವಜನಿಕರಿಗೆ ಮುಕ್ತ.
ಸ್ಥಳ: ಟ್ರಿನಿಟಿ ಸರ್ಕಲ್, ಎಂಜಿ ರಸ್ತೆ, ಬೆಂಗಳೂರು.
- ಸಂಕೇತ್ ಗುರುದತ್ತ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.