ಕಿಶೋರಾವಸ್ಥೆಯಲ್ಲಿ ಮೊಬೈಲ್ ಬೇಡ
ಇತ್ತೀಚಿನ ದಿನಗಳಲ್ಲಿ ತಂದೆ-ತಾಯಿತಮ್ಮ ಕೆಲಸದ ನಿಮಿತ್ತ ಬಹುಪಾಲು ಸಮಯವನ್ನು ಮಕ್ಕಳಿಂದ ದೂರವಿರುವುದರಿಂದ ಮಕ್ಕಳಿಗೆ ಅವರ ಸಂಪರ್ಕಕ್ಕಾಗಿ ಮೊಬೈಲ್ ಅವಶ್ಯಕವಾಗಿದೆ. ಅದನ್ನು ಸಂಪರ್ಕಕ್ಕೆ ಮಾತ್ರ ಬಳಸಿಕೊಂಡರೆ ಪರವಾಗಿಲ್ಲ. ಹಾಗಿಲ್ಲದಿದ್ದರೆ ಅದರಿಂದ ಅಪಾಯವೇ ಹೆಚ್ಚು. ಕಿಶೋರಾವಸ್ಥೆಯನ್ನು ದಾಟುವ ತನಕ ಅವರಿಗೆ ಮೊಬೈಲ್ ಕೊಡಿಸಬಾರದು. ಇಂತಹ ಸೌಕರ್ಯವನ್ನು ಮಕ್ಕಳಿಗೆ ನೀಡಿದಲ್ಲಿ ಅವರ ಮೇಲೆ ನಿರಂತರ ನಿಗಾ ಇಡಬೇಕು. ಹಾಗಿಲ್ಲದಿದ್ದರೆ ಮುಂದೆ ದುಷ್ಪರಿಣಾಮಗಳನ್ನು ಎದುರಿಸಬೇಕಾಗಿ ಬಂದು ಪಶ್ಚಾತ್ತಾಪ ಪಡಬೇಕಾದೀತು. ಹಾಗಾಗಿ ಪ್ರೌಢಾವಸ್ಥೆಗೆ ಬರುವ ತನಕ ಮೊಬೈಲ್ ಬೇಡ.
- ಸಿರಿ, ಮೈಸೂರು
ಮೊಬೈಲ್ ಅವಶ್ಯಕ, ಅನಾವಶ್ಯಕವಲ್ಲ
ಮೊಬೈಲ್ ಇರಬೇಕು ಎಂದ ತಕ್ಷಣ ಫೇಸ್‌ಬುಕ್ ಇರಬೇಕು, ವಾಟ್ಸ್ಯಾಪ್ ಇರಬೇಕು ಎಂದೇನಿಲ್ಲ. ಒಂದು ಕಾಲ್ ಮಾಡಿ ಮಾತಾಡುವಷ್ಟು ಸೌಲಭ್ಯವಿರುವ ಮೊಬೈಲ್ ಸಾಕು. ಹತ್ತನೇ ತರಗತಿ ಮುಗಿಸಿದವರಲ್ಲಿ ಇಂತಹ ಮೊಬೈಲ್ ಇರುವುದು ಒಳ್ಳೆಯದು. ಮೊಬೈಲ್ ಇದ್ದರೆ ವಿದ್ಯಾರ್ಥಿಗಳು ಹಾಳಾಗುತ್ತಾರೆ ಎಂಬ ಮಾತು ಸರಿಯಲ್ಲ. ಆದರೆ ರಿಚಾರ್ಜ್, ಮೆಸೇಜ್ ಪ್ಯಾಕ್ ಹಾಗೂ ಇಂಟರ್‌ನೆಟ್ ಹಾಕಿಸಲು ಹಣ ಕೊಟ್ಟು ಪೋಷಕರು ಸಹಕರಿಸಿದರೆ ಆಗ ನಿಜವಾಗಿಯೂ ಮಕ್ಕಳು ಹಾಳಾಗುವ ಸಾಧ್ಯತೆ ಇರುತ್ತದೆ. ಎಲ್ಲರ ಬಳಿ ಆ್ಯಂಡ್ರಾಯಿಡ್, ವಿಂಡೋಸ್ ಫೋನ್ ಇರುತ್ತದೆ ತಮಗೂ ಅಂತಹುದೇ ಬೇಕು ಎಂಬ ಹಟ ಮಾಡದೇ ಓದಿನ ಕಡೆಗೆ ಗಮನ ಹರಿಸಿ ಜೀವನಕ್ಕೆ ಬೇಕಾದ ಭದ್ರ ಬುನಾದಿಯನ್ನು ಹಾಕಿಕೊಳ್ಳಲಿ.
-ಶ್ರೀ ಹರ್ಷ. ಎಸ್, ಭದ್ರಾವತಿ
ಅಪಾಯವಾಗದಂತೆ ನಿಗಾ ವಹಿಸಿ
ಮಕ್ಕಳಿಗೆ ಮೊಬೈಲ್ ಎಂದರೆ ಬಹಳ ಇಷ್ಟ. ಈ ಮೊಬೈಲ್‌ನಿಂದ ಎಷ್ಟು ಸೌಲಭ್ಯವಿದೆಯೋ ಅಷ್ಟೇ ಅಪಾಯವೂ ಇದೆ. ಮಕ್ಕಳಿಗೆ ಮೊಬೈಲ್ ಸೂಕ್ತವಲ್ಲ. ಏಕೆಂದರೆ ಮೊಬೈಲ್ ಇದ್ದರೆ ಅವರ ಶಿಕ್ಷಣ ಕುಂಠಿತಗೊಳ್ಳುತ್ತದೆ. ಮಕ್ಕಳು ಈ ಮೊಬೈಲ್‌ನಿಂದ ಆಟ-ಪಾಠ, ಊಟಗಳನ್ನೇ ಮರೆತು ಬಿಡುತ್ತಾರೆ. ಕಳೆದ ತಿಂಗಳಷ್ಟೆ ಮೊಬೈಲ್‌ನಿಂದ ವಿದ್ಯಾರ್ಥಿ ಮನನೊಂದು ಮನೆಯನ್ನೇ ತೊರೆದಿದ್ದಾನೆ. ಇಂಥ ಪ್ರಕರಣಗಳು ಬಹಳಷ್ಟು ಇವೆ. ಮಕ್ಕಳು ಪಾಠಗಳ ಜತೆಗೆ ಕಂಪ್ಯೂಟರ್, ಮೊಬೈಲ್‌ಗಳಿಂದ ಸದುಪಯೋಗ ಪಡಿಸಿಕೊಳ್ಳಬೇಕು. ಇಂತಹ ಚಟುವಟಿಕೆಗಳು ಬೇಕು. ಆದರೆ ಅದರಿಂದ ಅಪಾಯವಾಗದಂತೆ ನೋಡಿಕೊಂಡು ಓದಿನ ಕಡೆಗೆ ನಿಗಾ ವಹಿಸಬೇಕು.
-ಎ. ಎಚ್. ಪ್ರಕಾಶ್‌ಕುಮಾರ್, ಶಿಕಾರಿಪುರ