ಖಾನ್ ಮೆಚ್ಚಿದ ಸೀನ್
ದೊಡ್ಡ ಬಜೆಟ್ಟಿನ ಚಿತ್ರಗಳ ಹೊರತಾಗಿ ಕಡಿಮೆ ವೆಚ್ಚದ ಚಿತ್ರಗಳು ಕನ್ನಡ ನೆಲ ಬಿಟ್ಟು ಆಚೆ ಸದ್ದು ಮಾಡುವುದು ತೀರಾ ಕಡಿಮೆ. ಆದರೆ, ಸಾಮಾಜಿಕ ಕಳಕಳಿಯೊಂದಿಗೆ ಮಾಡಿರುವ ಚಿತ್ರ ಬಾಲಿವುಡ್ನ ಖಾನ್ದಾನ್ ವರೆಗೂ ಹೋಗಿದೆ. ಅಂದಹಾಗೆ ಆ ಖಾನ್ ಬೇರ್ಯೂರು ಅಲ್ಲ, ಸಲ್ಮಾನ್ ಖಾನ್. ಹಾಗೆ ಈ ಖಾನ್ ಬಳಿ ಹೊಗಳಿಸಿಕೊಂಡ ಚಿತ್ರ 'ಜಾಸ್ಮಿನ್ 5'. ಇಡೀ ದೇಶದಲ್ಲಿ ಸಂಚಲನ ಉಂಟು ಮಾಡಿದ, ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯ ಸುತ್ತ ಈ ಚಿತ್ರದ ಕಥೆ ತಿರುಗುತ್ತದೆ.
ದೆಹಲಿಯ ಸಾಮೂಹಿಕ ಅತ್ಯಾಚಾರದ ನಂತರ ದೇಶಾದ್ಯಂತ ನಿರ್ಭಯ ಹೆಸರಿನಲ್ಲಿ ಪ್ರತಿಭಟನೆಗಳು ಸದ್ದು ಮಾಡಿದವು. ಆರೋಪಿಗಳ ವಿರುದ್ಧ ದೊಡ್ಡ ಮಟ್ಟದಲ್ಲಿ ಅಕ್ರೋಶ ವ್ಯಕ್ತವಾಯಿತು. ಇಂಥ ಅಮಾನುಷ ಕ್ರೌರ್ಯಕ್ಕೆ ಕಾರಣಗಳೇನು ಎಂದು ಹುಡುಕುವ ನಿಟ್ಟಿನಲ್ಲಿ 'ಜಾಸ್ಮಿನ್ 5' ಹೆಸರಿನಲ್ಲಿ ವಿ. ಕೃಷ್ಣ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ವಿನೋದ್ಕುಮಾರ್ ಡಿ. ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿಮೋಹನ್ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರದ ಕೇಂದ್ರ ವಸ್ತು ದೆಹಲಿ ರೇಪ್ ಪ್ರಕರಣವಾದರೂ, ಎಲ್ಲ ಕಡೆಯೂ ಅನ್ವಯಿಸುವಂಥ ಕಥೆ ಇಲ್ಲಿದೆ. ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಚಿತ್ರ ಮಾಡಿರುವುದಾಗಿ ನಿರ್ದೇಶಕರು ಹೇಳಿಕೊಳ್ಳುತ್ತಾರೆ.
ಹೀಗೆ ಸಾಮಾಜಿಕ ಜವಾಬ್ದಾರಿಯಿಂದ ಮೂಡಿಬಂದಿರುವ 'ಜಾಸ್ಮಿನ್ 5' ಚಿತ್ರವನ್ನು ಇತ್ತೀಚೆಗಷ್ಟೆ ನಟ ಸಲ್ಮಾನ್ಖಾನ್ ನೋಡಿದ್ದಾರೆ. ಈ ಖಾನ್ ಚಿತ್ರದ ನಾಯಕನಿಗೆ ಆಪ್ತರಾಗಿರುವ ಕಾರಣ ಮೊದಲಿಗೆ ಚಿತ್ರವನ್ನು ಖಾನ್ಗೆ ತೋರಿಸಿದ್ದಾರೆ. ಸಿನಿಮಾ ವೀಕ್ಷಿಸಿದ ಮೇಲೆ ಕಾಲು ಗಂಟೆಗೂ ಹೆಚ್ಚು ಕಾಲ ಚಿತ್ರದ ಬಗ್ಗೆ ಸಲ್ಮಾನ್ ಖಾನ್ ಮಾತನಾಡಿದ್ದಾರೆ. 'ಎಲ್ಲ ರೀತಿಯ ಚಿತ್ರಗಳ ಜೊತೆಗೆ ಇಂಥ ಸಾಮಾಜಿಕ ಕಳಕಳಿಯುಳ್ಳ ಚಿತ್ರಗಳ ಅವಶ್ಯಕತೆ' ಎಂದಿರುವ ಸಲ್ಮಾನ್ ಖಾನ್ರ ಮಾತುಗಳನ್ನು ಒಳಗೊಂಡಿರುವ ವಿಡಿಯೋ ಅನ್ನು ಸದ್ಯದಲ್ಲೇ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. 'ಸಲ್ಮಾನ್ ಖಾನ್ ಚಿತ್ರ ನೋಡಿ ಖುಷಿಯಾಗಿದ್ದಾರೆ. ಈ ಚಿತ್ರ ಎಲ್ಲರಿಗೂ ತಲುಪಲಿ ಎನ್ನುವ ಕಾರಣಕ್ಕೆ ಅವರೇ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಅದನ್ನ ಸದ್ಯದಲ್ಲೇ ಮಾಧ್ಯಮಗಳಿಗೆ ನೀಡಲಾಗುವುದು' ಎಂದು ಚಿತ್ರದ ನಾಯಕ ಮೋಹನ್ ತಿಳಿಸಿದ್ದಾರೆ. ಇದೇ ತಿಂಗಳು 27ಕ್ಕೆ ತೆರೆ ಕಾಣುವ ಸಾಧ್ಯತೆಗಳಿರುವ 'ಜಾಸ್ಮಿನ್ 5' 'ದೆಹಲಿ ದೇವತೆಯ ದುರಂತ ಕಥೆ' ಎನ್ನುವ ಟ್ಯಾಗ್ಲೈನ್ನೊಂದಿಗೆ ಸಿನಿ ಪ್ರಿಯರ ಗಮನ ಸೆಳೆಯುತ್ತಿದೆ.
- ಕೇಶು