ಸಂಪರ್ಕದ ಮ್ಯಾಜಿಕ್
ಯಶಸ್ವಿ ವ್ಯಕ್ತಿಗಳ ಮೊಟ್ಟ ಮೊದಲ ಅರ್ಹತೆಯೇ ಸಂಪರ್ಕ. ಅತ್ಯುತ್ತಮ ನೆಟ್ವರ್ಕ್ ಹೊಂದಿದ್ದವರು ಮಾತ್ರ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ. ನಿಮಗೆ ಹಣ, ಅಧಿಕಾರ, ವಿದ್ಯೆ, ಪ್ರತಿಭೆ ಎಲ್ಲವೂ ಇರುತ್ತದೆ ಎಂದಿಟ್ಟುಕೊಳ್ಳಿ. ಅದನ್ನು ಬಳಸಿಕೊಳ್ಳುವ ಬುದ್ಧಿವಂತಿಕೆಯೂ ನಿಮಗಿದೆ. ಇಷ್ಟಿದ್ದರೂ ನೀವು ಯಶಸ್ವಿಯಾಗಲು ಸಾಧ್ಯವಿಲ್ಲ. ಏಕೆಂದರೆ ಯಾವುದೇ ಒಂದು ಕೆಲಸ ಒಬ್ಬ ವ್ಯಕ್ತಿಯಿಂದ ಆಗಲು ಸಾಧ್ಯವೇ ಇಲ್ಲ. ಜಯವೆನ್ನುವುದು ಸಂಘಟಿತ ಶಕ್ತಿಗೆ ಒಲಿಯುವ ಆಭರಣ. ಒಂದು ಸೇನೆಯೆಂದರೆ ಅಲ್ಲಿ ಕಾಲಾಳುಗಳೂ ಬೇಕು. ಕುದುರೆ ಸವಾರರು, ಗಜಪಡೆಯ ಯೋಧರು, ರಥಿಕರು, ಮಲ್ಲಯುದ್ಧ ಪ್ರವೀಣರು, ಮುಷ್ಟಿ ಕಾಳಗ ನಿಪುಣರು, ಬಿಲ್ಲುಗಾರರು ಹೀಗೆ ಎಲ್ಲ ವಿಧದ ವೀರರೂ ಅಗತ್ಯ. ಅಂತಿಮವಾಗಿ ಸೇನೆಯನ್ನು ಮುನ್ನೆಡೆಸುವುದು ಸೇನಾಧಿಪತಿಯ ತಂತ್ರಗಾರಿಕೆ, ಅವನ ಕೆಚ್ಚು. ಆದರೆ ಒಬ್ಬನೇ ವೈರಿಯೆದುರು ಸೆಣಸಾಡಲು ಸಾಧ್ಯವೇ ಇಲ್ಲ. ಅಥವಾ ಸೇನೆಯಲ್ಲಿರುವವರೆಲ್ಲರೂ ಸೇನಾಧಿಪತಿಗಳೇ ಆಗಿದ್ದರೂ ಜಯ ಹುಸಿಯಾಗುತ್ತದೆ. ಹೀಗಾಗಿ ಅತ್ಯಂತ ಸಣ್ಣ ಕೆಲಸ ಮಾಡುವವನಿಂದ ಹಿಡಿದು ಜತೆಯಲ್ಲಿ ನಿಂತು ಸಲಹೆ ಕೊಡುವ ಕಾರ್ಯದರ್ಶಿಯವರೆಗೆ ಎಲ್ಲರನ್ನೂ ವಿಶ್ವಾಸದಲ್ಲಿಯೇ ಇಟ್ಟುಕೊಳ್ಳಬೇಕಾಗುತ್ತದೆ. ಅಂದರೆ ಇತರರೊಡನೆ ನಮಗಿರುವ ಹಿತವಾದ ಬಾಂಧವ್ಯ, ಸಂಬಂಧ. ಎಲ್ಲರೊಡನೆ ನಗುನಗುತ್ತಾ ಮಾತನಾಡಿ, ಅವರ ಸುಖ ದುಃಖಗಳನ್ನು ಹಂಚಿಕೊಳ್ಳುವ ಮನೋವೈಶಾಲ್ಯ ಹೊಂದಿರುವ ವ್ಯಕ್ತಿಗೆ ತಮ್ಮ ಸಮಯ ಶ್ರಮವನ್ನು ಮೀಸಲಿಡಲು ಎಲ್ಲರೂ ಸಿದ್ಧರಿರುತ್ತಾರೆ. ಮಾನವೀಯವಾಗಿ ವರ್ತಿಸಿ, ಸ್ನೇಹಪೂರ್ವಕ, ನಿರ್ಮಲ ಮಾತು ಹಂಚಿಕೊಳ್ಳಲು ನೀವು ಸಿದ್ಧರಿದ್ದರೆ ನಿಮ್ಮ ಎಲ್ಲ ಕೆಲಸಗಳೂ ಹೂವು ಎತ್ತಿದಷ್ಟು ಹಗುರ.